ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭ; ಏರ್‌ಪೋರ್ಟ್‌ಗೆ ಕರೆಸಿ ಅವಮಾನ? ಗರಂ ಆಗಿ ನಟಿ ಅಂಜಲಿ ಕೂಗಾಟ
70ನೇ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ ಪ್ರದಾನ ಸಮಾರಂಭ ಫೆಬ್ರವರಿ 21ರಂದು ಸಂಜೆ ಕೇರಳದ ಕೊಚ್ಚಿಯಲ್ಲಿ ಅದ್ಧೂರಿಯಾಗಿ ನಡೆಯಿತು. ದಕ್ಷಿಣ ಭಾರತದ 4 ಭಾಷೆಯ ಚಿತ್ರರಂಗದ ತಾರೆಯರು ಕಲರ್‌ಫುಲ್ ಕಾರ್ಯಕ್ರಮದಲ್ಲಿ ಭಾಗಿ ಆಗಿ ಸಂಭ್ರಮಿಸಿದರು. 2024ನೇ ಸಾಲಿನಲ್ಲಿ ಬಿಡುಗಡೆಯಾಗಿದ್ದ ಸಿನಿಮಾಗಳಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆದರೆ ಕಾರ್ಯಕ್ರಮಕ್ಕೆ ಕರೆಸಿ ಅವಮಾನ ಮಾಡಿದ್ದಾರೆ ಎಂದು ನಟಿ ಅಂಜಲಿ ಗರಂ ಆಗಿದ್ದ ವಿಡಿಯೋ ವೈರಲ್ ಆಗ್ತಿದೆ.
ಅಲ್ಲು ಅರ್ಜುನ್, ಮಮ್ಮುಟ್ಟಿ, ಸಾಯಿ ಪಲ್ಲವಿ ಸೇರಿದಂತೆ ಖ್ಯಾತನಾಮರು ಸಮಾರಂಭಕ್ಕೆ ಹಾಜರಾಗಿದ್ದರು. ಕನ್ನಡ ಚಿತ್ರರಂಗದಿಂದ ಅರ್ಜುನ್ ಜನ್ಯಾ, ಅಂಕಿತಾ ಅಮರ್ ಸೇರಿ ಹಲವರು ಪ್ರಶಸ್ತಿ ಸ್ವೀಕರಿಸಿದ್ದರು. ತೆಲುಗಿನ 'ಗ್ಯಾಂಗ್ಸ್ ಆಫ್ ಗೋದಾವರಿ' ಚಿತ್ರದ ನಟನೆಗಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಅಂಜಲಿ ಭಾಜನರಾಗಿದ್ದರು. ಕಾರ್ಯಕ್ರಮದಲ್ಲಿ ಭಾಗಿ ಆಗಲು ಅಂಜಲಿ ಕೊಚ್ಚಿ ವಿಮಾನದ ನಿಲ್ದಾಣಕ್ಕೆ ಹೋಗಿ ಇಳಿದಿದ್ದರು. ಆದರೆ ಆಕೆಯನ್ನು ಬರಮಾಡಿಕೊಳ್ಳಲು ಫಿಲ್ಮ್‌ಫೇರ್ ಆಯೋಜಕರು ಯಾರೊಬ್ಬರು ಬಹಳ ಹೊತ್ತು ಹೋಗಿರಲಿಲ್ಲ. ಇದು ಆಕೆಯ ಬೇಸರಕ್ಕೆ ಕಾರಣವಾಗಿತ್ತು.

ಮುಕ್ಕಾಲು ಗಂಟೆಯಿಂದ ಯಾರೂ ನಮ್ಮನ್ನು ಗಮನಿಸುವವರು ಇಲ್ಲ ಎಂದು ಅಂಜಲಿ ಜೊತೆಗಿರುವ ವ್ಯಕ್ತಿ ಮಾತನಾಡುತ್ತಿರುವುದು, ಅಂಜಲಿ ಕೂಡ ಅಸಮಾಧಾನ ವ್ಯಕ್ತಪಡಿಸುತ್ತಿರುವ ವೀಡಿಯೋ ವೈರಲ್ ಆಗುತ್ತಿದೆ. ಫಿಲ್ಮ್ ಫೇರ್ ಆಯೋಜಕರಲ್ಲಿ ಸಮನ್ವಯದ ಕೊರತೆಯಿಂದ ಇಂತಹ ತಪ್ಪು ಆಗಿರುವ ಬಗ್ಗೆ ನಟಿ ಅಂಜಲಿ ಆಕ್ರೋಶ ವ್ಯಕ್ತಪಡಿಸಿದಂತೆ ಕಾಣ್ತಿದೆ. ಸದ್ಯ ಈ ಬಗ್ಗೆ ನೆಟ್ಟಿಗರು ಪರ, ವಿರೋಧ ಚರ್ಚೆ ಆರಂಭಿಸಿದ್ದಾರೆ.
ಕೆಲವೊಮ್ಮೆ ಇಂತಹ ಸಮಸ್ಯೆ ಎದುರಾಗಬಹುದು. ಓಲಾ, ಊಬರ್ ಬುಕ್ ಮಾಡಿ ಕಾರ್ ಏರಿ ಅಂಜಲಿ ಹೋಗಬಹುದಿತ್ತು. ಅದಕ್ಕೆ ಇಷ್ಟೆಲ್ಲಾ ರಾದ್ಧಾಂತ ಯಾಕೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಕೋಟಿ ಕೋಟಿ ಖರ್ಚು ಮಾಡಿ ಅವಾರ್ಡ್ಸ್ ಕಾರ್ಯಕ್ರಮ ನಡೆಸುವವರು ಹೀಗೆ ಬೇಜವಾಬ್ದಾರಿ ವಹಿಸುವುದು ಸರಿಯಲ್ಲ. ಫಿಲ್ಮ್‌ಫೇರ್ ರೀತಿಯ ಇಷ್ಟು ದೊಡ್ಡ ಕಾರ್ಯಕ್ರಮದ ನಿರ್ವಹಣೆಯಲ್ಲೇ ಹೀಗೆ ಸಮಸ್ಯೆ ಅಂದರೆ ಹೇಗೆ? ಎಂದು ಮತ್ತೆ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಫಿಲ್ಮ್‌ಫೇರ್ ಸೌತ್ ಅವಾರ್ಡ್ಸ್ ಈವೆಂಟ್ ಬಗ್ಗೆ ತೆಲುಗು ನಟಿ, ನಿರ್ಮಾಪಕಿ ನಿಹಾರಿಕಾ ಕೊನಿದೇಲ ಕೂಡ ಬೇಸರ ವ್ಯಕ್ತಪಡಿಸಿದ್ದರು. ಆಕೆ ನಿರ್ಮಿಸಿದ
'ಕಮಿಟಿ ಕುರ್ರಾಳ್ಲು' ಚಿತ್ರಕ್ಕೆ 2 ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಫಿಲ್ಮ್ ಫೇರ್ ಬೆಸ್ಟ್ ಡೆಬ್ಯು ಡೈರೆಕ್ಟರ್ (ಯದು ವಂಶಿ) ಹಾಗೂ ಡೆಬ್ಯು ಆಕ್ಟರ್(ಸಂದೀಪ್ ಸರೋಜ್) ವಿಭಾಗಗಳಲ್ಲಿ ಪ್ರಶಸ್ತಿ ಸಿಕ್ಕಿತ್ತು. ವೇದಿಕೆಗೆ ಕರೆದು ಪ್ರಶಸ್ತಿ ಕೊಟ್ಟು ಕಳುಹಿಸಿಬಿಟ್ಟರು. ಅವರಿಗೆ ಒಂದು ನಿಮಿಷ ಮಾತನಾಡಲು ಅವಕಾಶ ಕೊಡಲಿಲ್ಲ ಎಂದು ನಿಹಾರಿಕಾ ಬೇಸರ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದರು.
ಹೊಸ ಪ್ರತಿಭೆಗಳಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವುದು ಸರಿ. ಆದರೆ ಇಂತಹ ದೊಡ್ಡ ವೇದಿಕೆಗಳಲ್ಲಿ ಅವರಿಗೆ ಕೊನೆ ಪಕ್ಷ ಒಂದು ನಿಮಿಷ ಮಾತನಾಡಲು ಅವಕಾಶ ಕೊಡಬೇಕಿತ್ತು. ಮೊದಲ ಬಾರಿ ಇಂತಹ ವೇದಿಕೆ ಏರುವವರಿಗೆ ಒಂದು ನಿಮಿಷ ಮಾತನಾಡಲು ಅವಕಾಶ ಸಿಕ್ಕಿದ್ದರೆ ಚೆನ್ನಾಗಿರುತ್ತಿತ್ತು ಎಂದು ನಿಹಾರಿಕಾ ಬರೆದುಕೊಂಡಿದ್ದರು.
ಕೊಚ್ಚಿ ಅಡ್ಲಕ್ಸ್ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಕೇರಳ ಪ್ರವಾಸೋದ್ಯಮದ ಸಹಯೋಗದೊಂದಿಗೆ ಫಿಲ್ಮ್‌ಫೇರ್ ಸೌತ್ ಅವಾರ್ಡ್ಸ್ ಕಾರ್ಯಕ್ರಮ ನಡೀತು. 'ರಣವಿಕ್ರಮ' ಸೇರಿ ಕೆಲ ಕನ್ನಡ ಸಿನಿಮಾಗಳಲ್ಲಿ ಅಂಜಲಿ ನಟಿಸಿದ್ದಾರೆ. ಆಂಧ್ರದಲ್ಲಿ ಹುಟ್ಟಿ ಬೆಳೆದ ಆಕೆ 'ಹೊಂಗನಸು' ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು.


Click it and Unblock the Notifications











