ಖ್ಯಾತ ನಟಿಯ ಮುಖಕ್ಕೆ ಏನಾಯ್ತು? ಜ್ವರಕ್ಕೆ ಮಾತ್ರೆ ತೆಗೆದುಕೊಳ್ಳುವ ಮುನ್ನ ಎಚ್ಚರ.. ಎಚ್ಚರ
ವೈದ್ಯರ ಸಲಹೆ ಮೇರೆಗೆ ಮಾತ್ರೆ, ಔಷಧಿ ತೆಗೆದುಕೊಳ್ಳಬೇಕು. ಸುಖಾ ಸುಮ್ಮನೆ ತಮ್ಮನ್ನು ತಾವೇ ವೈದ್ಯರು ಎಂದುಕೊಂಡು ಯಾವುದೋ ಆರೋಗ್ಯ ಸಮಸ್ಯೆಗೆ ಮೆಡಿಕಲ್ ಶಾಪ್‌ಗೆ ಹೋಗಿ ಯಾವುದೋ ಮಾತ್ರೆ ಖರೀದಿಸಿ ಸೇವಿಸಬಾರದು. ಈ ಬಗ್ಗೆ ಸಾಕಷ್ಟು ಬಾರಿ ವೈದ್ಯರು ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿರುತ್ತಾರೆ.
ಸಣ್ಣ ಜ್ವರಕ್ಕೆ ಯಾರು ಆಸ್ಪತ್ರೆಗೆ ಹೋಗುತ್ತಾರೆ? ಕ್ಲಿನಿಕ್ ಹುಡುಕುತ್ತಾರೆ? ಎಂದು ಕೆಲವರು ಹೆಚ್ಚು ತಲೆಕೆಡಿಸಿಕೊಳ್ಳಲ್ಲ. ಮನೆಮದ್ದು ಅಥವಾ ಮೆಡಿಕಲ್ ಶಾಪ್‌ನಲ್ಲಿ ಜ್ವರಕ್ಕೆ ಮಾತ್ರೆ ಕೊಡಿ ಎಂದು ಕೇಳಿ ಪಡೆಯುತ್ತಾರೆ. ಕೆಲವರಿಗೆ ಇದು ಅಭ್ಯಾಸವಾಗಿಬಿಟ್ಟಿರುತ್ತದೆ. ಮೆಡಿಕಲ್ ಶಾಪ್‌ಗಳಲ್ಲಿ ಕೂಡ ವೈದ್ಯರ ರಸೀದಿ ಇಲ್ಲದೇ ಜನ ಕೇಳಿದ್ದನ್ನೆಲ್ಲಾ ಮಾರುತ್ತಾರೆ. ಇದೀಗ ನಟಿ ಮಂಚು ಲಕ್ಷ್ಮಿ ಇದೇ ರೀತಿ ಜ್ವರಕ್ಕೆ ಮಾತ್ರೆ ಸೇವಿಸಿ ಏನಾಯ್ತು ಎಂದು ಹೇಳಿದ್ದಾರೆ.

ತೆಲುಗು ನಟಿ ಮಂಚು ಲಕ್ಷ್ಮಿ ತಮ್ಮ ತುಟಿಯ ಸುತ್ತಾ ಬ್ಯಾಂಡೇಜ್ ಸುತ್ತಿಕೊಂಡು ಒಂದು ಫೋಟೊ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿ ಕೆಲವರು ಶಾಕ್ ಆಗಿದ್ದಾರೆ. ಅರೇ ಆಕೆಗೆ ಏನಾಯ್ತು ಎಂದು ಅಭಿಮಾನಿಗಳುಯ ಹುಬ್ಬೇರಿಸಿದ್ದಾರೆ. ಈ ಫೋಟೊ ಜೊತೆಗೆ ಮಂಚು ಲಕ್ಷ್ಮಿ ಒಂದು ಮಾಹಿತಿ ಹಂಚಿಕೊಂಡಿದ್ದಾರೆ. ಮಂಚು ಲಕ್ಷ್ಮಿ ಅಮೆರಿಕಾಗೆ ತೆರಳಿದ್ದರಂತೆ. ಈ ವೇಳೆ ಜ್ವರ ಎಂದು ಮಾತ್ರೆ ಸೇವಿಸಿದ್ದಾರೆ. ಬಳಿಕ ಹೀಗಾಯ್ತು ಎಂದಿದ್ದಾರೆ.
ನಾನು ಜ್ವರಕ್ಕೆ ಮಾತ್ರೆ ಸೇವಿಸಿದ ಬಳಿಕ ನನ್ನ ತುಟಿಗಳು ಊದಿಕೊಂಡವು. ಅಲರ್ಜಿಯಿಂದ ಕೆಳ ತುಟಿಯ ಚರ್ಮ ಊದಿ ದದ್ದು ಬಂತು. ಆದರೆ ಈಗ ಅದು ಕಮ್ಮಿ ಆಗಿದೆ. ಈಗ ಪರವಾಗಿಲ್ಲ. ನಾನು ಚೇತರಿಸಿಕೊಂಡಿದ್ದೇನೆ. ತಕ್ಷಣಕ್ಕೆ ನನ್ನ ವೈದ್ಯ ಸ್ನೇಹಿತರ ಸಲಹೆ ಮೇರೆಗೆ ಚಿಕಿತ್ಸೆ ಪಡೆದು ಸುಧಾರಿಸಿಕೊಳ್ಳುತ್ತಿದ್ದೇನೆ. ಇಲ್ಲದಿದ್ದರೆ ಈ ಅಲರ್ಜಿ ಮತ್ತಷ್ಟು ಹೆಚ್ಚಾಗುತ್ತಿತ್ತು ಎಂದು ಮಂಚು ಲಕ್ಷ್ಮಿ ವಿವರಿಸಿದ್ದಾರೆ.
"ನಿಮ್ಮ ದೇಹದ ಮಿತಿಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಮಾತ್ರೆ, ಔಷಧಿಗಳಿಂದ ಆಗುವ ಅಲರ್ಜಿಯ ಸಂಭಾವ್ಯ ತೀವ್ರತೆಯ ಬಗ್ಗೆ ಮಂಚು ಲಕ್ಷ್ಮಿ ತಿಳಿಸಿದ್ದಾರೆ. ಸಣ್ಣಪುಟ್ಟ ಮಾತ್ರೆ ಕೂಡ ಕೆಲವೊಮ್ಮೆ ಅನಿರೀಕ್ಷಿತ ಪರಿಣಾಮಗಳನ್ನು ಉಂಟುಮಾಡಬಹುದು. ನಾನು ಜ್ವರಕ್ಕೆ 2 ಸಾಮಾನ್ಯ ಮಾತ್ರೆಗಳನ್ನು ತೆಗೆದುಕೊಂಡೆ. ಬಳಿಕ ಕೆಲವೇ ನಿಮಿಷಗಳಲ್ಲಿ ಏನಾಯ್ತು ನೋಡಿ" ಎಂದಿದ್ದಾರೆ.

ಸುರಕ್ಷತೆಯ ದೃಷ್ಟಿಯಿಂದ ಯಾರೇ ಆದರೂ ಮಾತ್ರೆಗಳನ್ನು ತೆಗೆದುಕೊಳ್ಳುವ ಮುನ್ನ ಅಲರ್ಜಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಯಾಕಂದರೆ ಸಣ್ಣ ಮಾತ್ರೆ ಕೂಡ ಗಂಭೀರ ಅಡ್ಡ ಪರಿಣಾಮ ಬೀರಬಹುದು ಎಂದು ನಟಿ ಲಕ್ಷ್ಮಿ ಸಲಹೆ ನೀಡಿದ್ದಾರೆ.
"ನಾನು ಈ ವೀಡಿಯೋ ಹಾಕಲು ಕಾರಣ ಏನೆಂದರೆ, ನಾವು ಯಾವುದೋ ಸಣ್ಣ ಸಮಸ್ಯೆಗೆ ಸೇವಿಸುವ ಟ್ಯಾಬ್ಲೆಟ್ ನಮ್ಮ ದೇಹಕ್ಕೆ ಒಗ್ಗದೇ ಇದ್ದರೆ ಅಲರ್ಜಿಯಿಂದ ಏನು ಬೇಕಾದರೂ ಆಗಬಹುದು. ಹಾಗಾಗಿ ಎಲ್ಲರೂ ತುಂಬಾ ಹುಷಾರಾಗಿರಿ.ಅಲರ್ಜಿ ಟೆಸ್ಟ್ ಮಾಡಿಸಿ ನಿಮ್ಮ ದೇಹವು ಯಾವುದನ್ನು ಸ್ವೀಕರಿಸುತ್ತದೆ ಮತ್ತು ಯಾವುದನ್ನು ಸ್ವೀಕರಿಸುವುದಿಲ್ಲ ಎಂದು ತಿಳಿಯಿರಿ" ಎಂದು ನಟಿ ಮಂಚು ಲಕ್ಷ್ಮಿ ಸಲಹೆ ನೀಡಿದ್ದಾರೆ.
ಖ್ಯಾತ ತೆಲುಗು ನಟಿ ಮೋಹನ್ ಬಾಬು ಪುತ್ರಿ ಮಂಚು ಲಕ್ಷ್ಮಿ ತಂದೆ ಹಾದಿಯಲ್ಲೇ ಚಿತ್ರರಂಗಕ್ಕೆ ಬಂದವರು. ಒಂದಷ್ಟು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ದೊಡ್ಡ ಬ್ರೇಕ್ ಮಾತ್ರ ಸಿಗಲಿಲ್ಲ. ಆದರೂ ಪ್ರಯತ್ನ ಮುಂದುವರೆಸಿದ್ದಾರೆ. ನಿರ್ಮಾಪಕಿಯಾಗಿಯೂ ಅದೃಷ್ಟಪರೀಕ್ಷೆ ಮಾಡಿಕೊಂಡಿದ್ದಾರೆ. ಇನ್ನು ತಮ್ಮ ಬೋಲ್ಡ್ ಕಾಮೆಂಟ್‌ಗಳ ಮೂಲಕವೂ ಲಕ್ಷ್ಮಿ ಆಗಾಗ್ಗೆ ಸದ್ದು ಮಾಡುತ್ತಿರುತ್ತಾರೆ.


Click it and Unblock the Notifications











