"ಪುನೀತ್ ಜೊತೆ 2 ದಿನ ಶೂಟಿಂಗ್ ಬಳಿಕ ಆ ಚಿತ್ರದಿಂದ ನನ್ನ ಕೈಬಿಟ್ಟಿದ್ರು"; ತೆಲುಗು ನಟಿ ಬೇಸರ
ಚಿತ್ರರಂಗದಲ್ಲಿ ಅವಕಾಶಗಳು ಅಷ್ಟು ಸುಲಭವಾಗಿ ಸಿಗುವುದಿಲ್ಲ. ಕೆಲವೊಮ್ಮೆ ಅವಕಾಶ ಸಿಕ್ಕರೂ ದಿಢೀರನೆ ಅದನ್ನು ಕಳೆದುಕೊಳ್ಳಬೇಕಾಗುತ್ತದೆ. ಸಿನಿಮಾ ಶುರುವಾದ ಬಳಿಕ ನಾಯಕ, ನಾಯಕಿ ಬದಲಾಗಿರುವ ಸಾಕಷ್ಟು ಉದಾಹರಣೆಗಳಿವೆ. ನಟಿಯರಿಗೆ ಇಂತಹ ಸಾಕಷ್ಟು ಕಹಿ ಅನುಭವ ಆಗಿರುತ್ತದೆ.
ಪುನೀತ್ ರಾಜ್‌ಕುಮಾರ್ ಜೊತೆ ನಾಯಕಿಯಾಗಿ ನಟಿಸೋಕೆ ಆಯ್ಕೆ ಆಗಿ ಒಂದೆರಡು ದಿನ ಚಿತ್ರೀಕರಣ ನಡೆದು ಬಳಿಕ ಚಿತ್ರದಿಂದ ರಿಜೆಕ್ಟ್ ಆಗಿದ್ದಾಗಿ ತೆಲುಗು ನಟಿ ಹೇಳಿಕೊಂಡಿದ್ದಾರೆ. ಆದರೆ ಈ ಬಗ್ಗೆ ಬೇಸರ ಇಲ್ಲ, ಏನು ಮಾಡೋಕೆ ಆಗುವುದಿಲ್ಲ. ಇದು ಬಣ್ಣದಲೋಕ. ಅಂತಿಮವಾಗಿ ಇದು ಬ್ಯುಸಿನೆಸ್. ಕಥೆಗೆ, ಪಾತ್ರಕ್ಕೆ ಬೇಕಾದರವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಅದನ್ನು ಹೇಳುವುದಕ್ಕೂ ಹಿಂಜರಿಯುತ್ತಾರೆ ಎಂದು ಆಕೆ ತಿಳಿಸಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರೊಟ್ಟಿಗೆ ನಟಿಸಿದ ನಟಿಯರು ಸಿನಿರಸಿಕರ ಮನಸ್ಸಿನಲ್ಲಿ ಉಳಿದುಬಿಟ್ಟಿದ್ದಾರೆ. ಅಪ್ಪು ಜೊತೆ ನಟಿಸಿದ ರಕ್ಷಿತಾ, ರಮ್ಯಾ ಮುಂದೆ ಟಾಪ್ ನಟಿಯರಾಗಿ ಮಿಂಚಿದ್ದರು. ಪರಭಾಷೆಯ ಪಾರ್ವತಿ, ಭಾವನಾ ಮೆನನ್ ಕೂಡ ಪುನೀತ್ ರಾಜ್‌ಕುಮಾರ್ ಜೊತೆ ನಟಿಸಿ ಕನ್ನಡದಲ್ಲಿ ಗೆದ್ದರು. ಬಳಿಕ ಕೆಲ ಕನ್ನಡ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು.
ತೆಲುಗು ನಟಿ ಪ್ರಿಯಾಂಕಾ ಜಾವಾಲ್ಕರ್ ಕೂಡ ಪುನೀತ್ ರಾಜ್‌ಕುಮಾರ್ ಜೋಡಿಯಾಗುವ ಅವಕಾಶ ಪಡೆದಿದ್ದರು. ಚಿತ್ರರಂಗಕ್ಕೆ ಬಂದ ಆರಂಭದಲ್ಲೇ ಕನ್ನಡದ ಸ್ಟಾರ್ ನಟನಿಗೆ ನಾಯಕಿಯಾಗಿದ್ದರು. ಕೆಲ ದಿನಗಳ ಕಾಲ ಚಿತ್ರೀಕರಣ ಬಳಿಕ ಆಕೆಯನ್ನು ಚಿತ್ರದಿಂದ ಕೈ ಬಿಡಲಾಗಿತ್ತು. ಇತ್ತೀಚೆಗೆ ತೆಲುಗು ಸಂದರ್ಶನದಲ್ಲಿ ಈ ಬಗ್ಗೆ ಪ್ರಿಯಾಂಕ ನೆನಪು ಮಾಡಿಕೊಂಡಿದ್ದಾರೆ. ತೆಲುಗಿನ 'ಟ್ಯಾಕ್ಸಿವಾಲ', 'ತಿಮ್ಮರಸು', 'ಗಮನಂ' ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ.
ಸದ್ಯ ಬಿಡುಗಡೆಗೆ ಆಗಿರುವ ತೆಲುಗಿನ 'ಮ್ಯಾಡ್ ಸ್ಕೇರ್' ಚಿತ್ರದಲ್ಲಿ ಪ್ರಿಯಾಂಕಾ ಜಾವಾಲ್ಕರ್ ಕಾಣಿಸಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ ಜೊತೆ ನಟಿಸುವ ಅವಕಾಶ ಮಿಸ್ ಆಗಿದ್ದರ ಬಗ್ಗೆ ಆಕೆ ಮಾತನಾಡಿದ್ದಾರೆ. "ಟ್ಯಾಕ್ಸಿವಾಲ ಚಿತ್ರಕ್ಕೂ ಮುನ್ನ ಆ ಕನ್ನಡ ಸಿನಿಮಾ ಅವಕಾಶ ಸಿಕ್ಕಿತ್ತು. ಒಂದು ದಿನ ಚಿತ್ರೀಕರಣ ಸಹ ನಡೆದಿತ್ತು. ಪುನೀತ್ ರಾಜ್‌ಕುಮಾರ್ ಜೋಡಿಯಾಗಿ ನಟಿಸಬೇಕಿದ್ದ ಸಿನಿಮಾ. ಚಿತ್ರೀಕರಣದ ಬಳಿಕ ಶೆಡ್ಯೂಲ್ ಕೊಂಚ ಬ್ರೇಕ್ ತೆಗೆದುಕೊಳ್ಳೋಣ ಅಂದ್ರು. ಬಳಿಕ ಫೋನ್ ಮಾಡ್ತೀವಿ ಎಂದು ಹೇಳಿದ್ರು. ಫೋನ್ ಮಾಡಲಿಲ್ಲ, ಬಳಿಕ ಬೇರೆಯವರನ್ನು ಆಯ್ಕೆ ಮಾಡಿಕೊಂಡಿದ್ದರು" ಎಂದು ನೆನಪಿಸಿಕೊಂಡಿದ್ದಾರೆ.

ಮಾತು ಮುಂದುವರೆಸಿರುವ ಪ್ರಿಯಾಂಕಾ ಜಾವಾಲ್ಕರ್ "ಯಾಕೆ ಸಿನಿಮಾದಿಂದ ಕೈಬಿಟ್ಟರು ಎಂದು ಕೆಲವೊಮ್ಮೆ ಹೇಳುವುದಿಲ್ಲ. ಹೊಸ ನಾಯಕಿ ಆಯ್ಕೆ ಆಗಿ ಚಿತ್ರೀಕರಣ ಆಗುವವರೆಗೂ ನಮಗೆ ಅದು ಗೊತ್ತಾಗಲ್ಲ, ಬಳಿಕ ಆ ಸಿನಿಮಾಗೆ ಸಂಬಂಧಿಸಿ ಯಾವುದಾದರೂ ಪೋಸ್ಟರ್ ಅಥವಾ ಸುದ್ದಿ ನೋಡಿದಾಗಲೇ ನಮ್ಮನ್ನು ಕೈಬಿಟ್ಟು ಬೇರೆಯವರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಗೊತ್ತಾಗೋದು. ಅವರಿಗೂ ಅದನ್ನು ಹೇಗೆ ಹೇಳಬೇಕು ಎಂದು ಹೇಳುವುದಕ್ಕೆ ಸಾಧ್ಯವಾಗಲ್ಲ, ಅದು ಯಾರ ನಿರ್ಧಾರ ಅಂತ ಗೊತ್ತಿರಲ್ಲ, ನಿರ್ದೇಶಕ, ನಟ, ನಿರ್ಮಾಪಕರದ್ದೂ ಆಗಿರಬಹುದು. ಹಾಗಾಗಿ ಹೇಳಲು ಕಷ್ಟವಾಗಬಹುದು" ಎಂದು ವಿವರಿಸಿದ್ದಾರೆ.
ಅಂದಹಾಗೆ ನಟಿ ಪ್ರಿಯಾಂಕಾ ಜಾವಾಲ್ಕರ್ ಹೇಳಿದ ಆ ಕನ್ನಡ ಸಿನಿಮಾ 'ನಟಸಾರ್ವಭೌಮ'. ಆಕೆ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದ ಬಗ್ಗೆ ಆಗ ಸುದ್ದಿ ಆಗಿತ್ತು. ಬಳಿಕ ವಿಚಾರ ತಣ್ಣಗಾಗಿತ್ತು. ಪವನ್ ಒಡೆಯರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಚಿತ್ರದ ಇಬ್ಬರು ನಾಯಕಿಯರಲ್ಲಿ ಆಕೆ ಒಬ್ಬರಾಗಿ ಆಯ್ಕೆ ಆಗಿದ್ದರು. ಬಳಿಕ ಆಕೆಯ ಸ್ಥಾನಕ್ಕೆ ರಚಿತಾ ರಾಮ್ ಬಂದಿದ್ದರು ಎನಿಸುತ್ತದೆ. ಮತ್ತೊಬ್ಬ ನಾಯಕಿಯಾಗಿ ಅನುಪಮಾ ಪರಮೇಶ್ವರನ್ ನಟಿಸಿದ್ದರು. 2019ರಲ್ಲಿ ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ತೆರೆಗೆ ಬಂದು ಸದ್ದು ಮಾಡಿತ್ತು.


Click it and Unblock the Notifications











