46 ವರ್ಷದ ಸ್ಟಾರ್ 'ಡೈರೆಕ್ಟರ್'ನ ಮದ್ವೆಯಾದ ಈ 'ಡಾಕ್ಟರ್'ಗೆ ಇದ್ದಾನೆ 11 ವರ್ಷದ ಮಗ...!
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಪ್ರೇಮಕ್ಕೆ ಒಂದು ಅರ್ಥ ಇತ್ತು. ಎದುರಾದ ಎಲ್ಲ ಅಡೆ ತಡೆಯನ್ನು ದಾಟಿಕೊಂಡು ಎರಡು ಹೃದಯಗಳ ಮಿಲನವಾಗುತ್ತಿತ್ತು. ಅರಳಿದ ಪ್ರೇಮಾಂಕುರ ಎರಡು ಜೀವಗಳನ್ನು ಉಸಿರಿಗೆ ಉಸಿರು ತಾಕುವಷ್ಟು ಹತ್ತಿರವನ್ನಾಗಿಸುತ್ತಿತ್ತು. ಹೀಗೆ ಕುದುರಿದ ಪ್ರೀತಿ ಜೀವಮಾನವಡೀ ಜೊತೆಯಾಗೇ ಬಾಳಿಸುತ್ತಿತ್ತು.ಆದರೆ ಈಗ ಕಾಲ ಬದಲಾಗಿದೆ. ಸಂಬಂಧ ಶುರುವಾದಷ್ಟೇ ಬೇಗ ಅಂತ್ಯ ಕಾಣುತ್ತೆ. ಇನ್ಯಾರದ್ದೋ ಮೇಲೆ ಅಷ್ಟೇ ಬೇಗ ಮತ್ತೆ ಪ್ರೇಮಾಂಕುರವಾಗುತ್ತೆ. ಇದಕ್ಕೆ ಕ್ರಿಶ್ ಜಗರ್ಲಮುಡಿ ಸದ್ಯದ ಉದಾಹರಣೆ.
ಹೌದು, ಕ್ರಿಶ್ ಜಗರ್ಲಮುಡಿ.. ಟಾಲಿವುಡ್‌ನ ಸ್ಟಾರ್ ಡೈರೆಕ್ಟರ್. 'ಗಮ್ಯಂ', 'ವೇದಂ', 'ಕೃಷ್ಣಂ ವಂದೇ ಜಗದ್ಗುರುಂ' ಚಿತ್ರದ ನಿರ್ದೇಶಕ. ಕೇವಲ ತೆಲುಗು ಮಾತ್ರ ಅಲ್ಲ ಹಿಂದಿಯಲ್ಲಿ ಅಕ್ಷಯ್ ಕುಮಾರ್ ಅಭಿನಯದ ಗಬ್ಬರ್ ಇಸ್ ಬ್ಯಾಕ್ ಚಿತ್ರವನ್ನು ನಿರ್ದೇಶಕರು ಹೌದು ಕ್ರಿಶ್ ಜಗರ್ಲಮುಡಿ. ಇನ್ನೂ ಬಾಲಯ್ಯ ಅಭಿನಯದ 'ಗೌತಮಿಪುತ್ರ ಶಾತಕರ್ಣಿ', 'ಎನ್‌ಟಿಆರ್: ಕಥಾನಾಯಕುಡು', 'ಎನ್‌ಟಿಆರ್: ಮಹಾನಾಯಕುಡು' ಚಿತ್ರಗಳ ಸೂತ್ರಧಾರ ಕೂಡ ಇದೇ ಕ್ರಿಶ್ ಜಗರ್ಲಮುಡಿ ಅನ್ನುವುದು ವಿಶೇಷ.

ಇಂಥಾ ಕ್ರಿಶ್ ಜಗರ್ಲಮುಡಿ ಈಗ ತಮ್ಮ 46ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಿದ್ದಾರೆ. ಹೈದ್ರಾಬಾದ್‌ನ ಚಲ್ಲಾ ಆಸ್ಪತ್ರೆಯಲ್ಲಿ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆಯಾಗಿರುವ ಡಾ. ಪ್ರೀತಿ ಚಲ್ಲಾ ಜೊತೆ ಸಪ್ತಪದಿಯನ್ನು ತುಳಿದು ಹೊಸ ಬದುಕಿಗೆ ಮುನ್ನುಡಿ ಬರೆದಿದ್ದಾರೆ. ಕ್ರಿಶ್ ಜಗರ್ಲಮುಡಿ ಅವರ ಕೈ ಹಿಡಿದ ಡಾ. ಪ್ರೀತಿ ಚಲ್ಲಾ ಅವರಿಗೆ ನಲವತ್ತೊಂದು ವರ್ಷ ವಯಸ್ಸು ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ.
ಇನ್ನೂ.. ವೈದ್ಯರಾಗಿರುವ ಪ್ರೀತಿ ಅವರನ್ನು ಮದುವೆಯಾದ ಕ್ರಿಶ್ ಜಗರ್ಲಮುಡಿ ಈ ಹಿಂದೆ 2016ರಲ್ಲಿ ರಮ್ಯಾ ಅವರನ್ನು ಮದುವೆಯಾಗಿದ್ದರು. ಆದರೆ ಈ ದಾಂಪತ್ಯ ಜೀವನ ಕೇವಲ ಎರಡೇ ವರ್ಷಕ್ಕೆ ಮುರಿದು ಬಿತ್ತು. ವಿಶೇಷ ಅಂದರೆ ರಮ್ಯಾ ಕೂಡ ವೃತ್ತಿಯಲ್ಲಿ ವೈದ್ಯರಾಗಿದ್ದರು. ರಮ್ಯಾ ಅವರಿಂದ 2018ರಲ್ಲಿ ದೂರವಾದ ಕ್ರಿಶ್ ಜಗರ್ಲಮುಡಿ ಆ ನಂತರ ಏಕಾಂಗಿಯಾಗಿದ್ದರು. ಆದರೆ ಈಗ ಹೊಸ ಜೀವನ ಆರಂಭ ಮಾಡಿದ್ದಾರೆ.
ಕ್ರಿಶ್ ಜಗರ್ಲಮುಡಿ ಅವರಂತೆ ಡಾ.ಪ್ರೀತಿ ಅವರಿಗೂ ಕೂಡ ಇದು ಎರಡನೇ ಮದುವೆ. ಇವರಿಗೆ ಹನ್ನೊಂದು ವರ್ಷದ ಮಗ ಕೂಡ ಇದ್ದಾನೆ. ಇನ್ನೂ.. ಆಂಧ್ರದ ಹೆಸರಾಂತ ಚೆಲ್ಲಾ ಕುಟುಂಬದಿಂದ ಬಂದ ಪ್ರೀತಿ, ಕ್ರಿಶ್ ಅವರ ಹುಟ್ಟೂರು ಗುಂಟೂರ್‌ಗೆ ಸೇರಿದವರು. ಕೆಲ ವರ್ಷಗಳಿಂದ ಸ್ನೇಹಿತರಾಗಿದ್ದ ಪ್ರೀತಿ ಮತ್ತು ಕ್ರಿಶ್ ನಡುವೆ ಸಮಯ ಉರುಳಿದಂತೆ ಪ್ರೇಮಾಂಕುರವಾಗಿದೆ. 2007ರಿಂದ ವೈದ್ಯಕೀಯ ಕ್ಷೇತ್ರದಲ್ಲಿ ಪ್ರೀತಿ ಸೇವೆ ಸಲ್ಲಿಸುತ್ತಿದ್ದಾರೆ. ಚೆನ್ನೈನ ಶ್ರೀ ರಾಮಚಂದ್ರ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿರುವ ಡಾ.ಪ್ರೀತಿ ಚೆಲ್ಲಾ ಬಡವರಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ನೀಡಬೇಕೆಂಬ ನಿಟ್ಟಿನಲ್ಲಿ ಹೆಜ್ಜೆಯನ್ನು ಇಟ್ಟಿದ್ದಾರೆ.
ಅಂದ್ಹಾಗೇ ಕ್ರಿಶ್ ಜಗರ್ಲಮುಡಿ ಕಂಗನಾ ರಣಾವತ್ ಅಭಿನಯದ ಮಣಿಕರ್ಣಿಕಾ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಆದರೆ ಕಂಗನಾ ರಣಾವತ್ ಜೊತೆ ಉಂಟಾದ ಭಿನ್ನಾಭಿಪ್ರಾಯದಿಂದ ಕ್ರಿಶ್ ಆ ಚಿತ್ರದಿಂದ ಹೊರ ಬಂದರು. ಆ ನಂತರ ಖುದ್ದು ಕಂಗನಾ ರಣಾವತ್, ಮಣಿಕರ್ಣಿಕಾ ಚಿತ್ರವನ್ನು ನಿರ್ದೇಶಿಸಿದರು. ಇನ್ನುಳಿದಂತೆ ಸದ್ಯ ಅನುಷ್ಕಾ ಶೆಟ್ಟಿ ಅಭಿನಯದ 'ಘಾಟಿ' ಚಿತ್ರವನ್ನು ಕ್ರಿಶ್ ನಿರ್ದೇಶಿಸಿದ್ದಾರೆ. ಈ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು ಚಿತ್ರದ ಮೇಲೆ ನಿರೀಕ್ಷೆಗಳಿವೆ. ಇನ್ನೂ ಪವನ್ ಕಲ್ಯಾಣ್ ಉಪಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸುವ ಮೊದಲು 'ಹರಿ ಹರ ವೀರ ಮಲ್ಲು' ಚಿತ್ರವನ್ನು ಕ್ರಿಶ್ ಆರಂಭ ಮಾಡಿದ್ದರು. ಆದರೆ ಆ ನಂತರ ಚಿತ್ರ ತಡವಾಗುತ್ತಲೇ ಬಂದಿದೆ.


Click it and Unblock the Notifications











