ಟಾಲಿವುಡ್‌ನಲ್ಲಿ ಮತ್ತೆ ತಲೆಎತ್ತಿದ ಡ್ರಗ್ಸ್ ಪ್ರಕರಣ, ನಟಿಯ ಪತಿ ಬಂಧನ
ಕೆಲ ವರ್ಷಗಳಿಂದಲೂ ತೆಲುಗು ಚಿತ್ರರಂಗದಲ್ಲಿ ಡ್ರಗ್ಸ್ ಪ್ರಕರಣ ಆಗೊಮ್ಮೆ-ಈಗೊಮ್ಮೆ ಸದ್ದು ಮಾಡುತ್ತಲೇ ಇದೆ. ಪುರಿ ಜಗನ್ನಾಥ್, ನಟ ರವಿತೇಜ ಸಹೋದರ, ನಟಿ ಚಾರ್ಮಿ, ಮುಮೈಥ್ ಖಾನ್ ಸೇರಿದಂತೆ ಹಲವು ಖ್ಯಾತನಾಮರು ಹಿಂದೊಮ್ಮೆ ಡ್ರಗ್ಸ್ ಪ್ರಕರಣದಲ್ಲಿ ಆರೋಪಿಗಳಾಗಿದ್ದರು.
ಇದೀಗ ಮತ್ತೊಮ್ಮೆ ತೆಲುಗು ಚಿತ್ರರಂಗದಲ್ಲಿ ಡ್ರಗ್ಸ್ ಪ್ರಕರಣದ ಸುದ್ದಿ ಕೇಳಿಬಂದಿದ್ದು, ಈ ಬಾರಿ ಖ್ಯಾತ ನಟಿಯ ಪತಿಯನ್ನು ಹೈದರಾಬಾದ್ ಮಾದಕ ವಸ್ತು ವಿರೋಧಿ ಪಡೆ ಬಂಧಿಸಿದೆ.
ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ನಟಿ ನೇಹಾ ದೇಶ್‌ಪಾಂಡೆಯ ಪತಿ ಮಿರೋನ್ ಮೋಹಿತ್ ಎಂಬಾತನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಆತನೊಂದಿಗೆ ಆಂಧ್ರದ ಉದ್ಯಮಿ ಕಿಶೋರ್ ರೆಡ್ಡಿಯನ್ನು ಸಹ ಪೊಲೀಸರು ಬಂಧಿಸಿದ್ದಾರೆ.

ಮಿರೋನ್ ಮೋಹಿತ್ ಹಾಗೂ ಕಿಶೋರ್ ರೆಡ್ಡಿಯವರ ಬಳಿ 3 ಗ್ರಾಂ ಕೊಕೇನ್ ದೊರೆತಿದೆ ಎಂದು ಪೊಲೀಸರು ಹೇಳಿದ್ದಾರೆ. ಮಿರೋನ್ ಮೋಹಿತ್ ರಾಷ್ಟ್ರೀಯ ಮಟ್ಟದ ಡಿಜೆ ಆರ್ಗನೈಸರ್ ಆಗಿದ್ದು ದೆಹಲಿ, ಗೋವಾ, ಬೆಂಗಳೂರು, ಹೈದರಾಬಾದ್ ಮುಂತಾದ ಕಡೆಗಳಲ್ಲಿ ಡಿಜೆ ನೈಟ್‌ಗಳನ್ನು ಆಯೋಜಿಸುತ್ತಾರಂತೆ. ಈ ಹಿಂದಿನ ಒಂದು ಡ್ರಗ್ಸ್ ಪ್ರಕರಣದಲ್ಲಿಯೂ ಮಿರೋನ್ ಪೊಲೀಸರಿಗೆ ಬೇಕಾಗಿದ್ದವನಂತೆ.
ಜಗತ್ತಿನ ನಂಬರ್ 1 ಡ್ರಗ್ಸ್ ದೊರೆಯಾಗಿದ್ದ ಪಾಬ್ಲೊ ಎಸ್ಕೊಬಾರ್‌ನ ಅಪ್ರತಿಮ ಭಕ್ತನಾಗಿದ್ದ ಮಿರೋನ್, ತಮ್ಮ ಪ್ರೀತಿಯ ನಾಯಿಗೆ ಪಾಬ್ಲೊ ಎಂದೇ ಹೆಸರಿಟ್ಟಿದ್ದನಂತೆ. ಮಿರೋನ್‌ಗೆ ದೇಶದಾದ್ಯಂತ ಸುಮಾರು 50 ಡ್ರಗ್ಸ್ ಪೆಡ್ಲರ್‌ಗಳ ಸಂಪರ್ಕ ಇದೆ ಎಂದು ಪೊಲೀಸರು ಹೇಳಿದ್ದಾರೆ. ಮಿರೋನ್ ಬಂಧನದಿಂದ ಗೋವಾದ ಕುಖ್ಯಾತ ಡ್ರಗ್ಸ್ ಕಿಂಗ್‌ಪಿನ್ ಎಡ್ವಿನ್ ನ್ಯುನಾನ್ಸ್ ಮಾಹಿತಿಯೂ ಲಭಿಸಿದೆ ಎಂದಿದ್ದಾರೆ ಹೈದರಾಬಾದ್ ಪೊಲೀಸರು. ಎಡ್ವಿನ್ ಜೊತೆಗೆ ಮಿರೋನ್‌ಗೆ ಉತ್ತಮ ಸಂಪರ್ಕವಿದೆಯೆಂದು ಪೊಲೀಸರು ಹೇಳಿದ್ದಾರೆ.
ಮಿರೋನ್‌ನ ಪತ್ನಿ ನಟಿ ನೇಹಾ ದೇಶ್‌ಪಾಂಡೆ ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಬಿಚ್ಚಗಾಡ ಮಜಾಕ', 'ದಿಲ್ ದೀವಾನಾ', ''ವಜ್ರಾಲು ಕಾವಾಲ ನಾಯ್ನ', 'ತಿಪ್ಪರಾ ಮೀಸಂ', 'ದಡ ಪುಟ್ಟಿಸ್ತಾ' ಇನ್ನೂ ಹಲವು ಸಿನಿಮಾಗಳಲ್ಲಿ ನೇಹಾ ನಟಿಸಿದ್ದಾರೆ.


Click it and Unblock the Notifications











