ತೆಲುಗು ನಟ, ನಿರ್ಮಾಪಕ ಬಂಡ್ಲ ಗಣೇಶ್‌ಗೆ ಕೊರೊನಾ ವೈರಸ್ ಸೋಂಕು
'ಗಬ್ಬರ್ ಸಿಂಗ್', 'ಬಾದ್‌ಶಾ'ದಂತಹಾ ಹಿಟ್ ಸಿನಿಮಾಗಳನ್ನು ನೀಡಿರುವ ತೆಲುಗು ನಿರ್ಮಾಪಕ, ನಟ ಬಂಡ್ಲ ಗಣೇಶ್ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ.
ಹೈದರಾಬಾದ್‌ನ ಪ್ರತಿಷ್ಠಿತ ರಸ್ತೆ ಜ್ಯೂಬಿಲಿ ಹಿಲ್ಸ್‌ನಲ್ಲಿ ನಿವಾಸವಿರುವ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿರುವುದು ಅದೇ ರಸ್ತೆಯಲ್ಲಿರುವ ಬಹುತೇಕ ಸ್ಟಾರ್ ನಟ-ನಟಿಯರಿಗೆ ಆತಂಕ ತಂದಿದೆ.
ಪ್ರತಿಷ್ಠಿತ ಆಸ್ಪತ್ರೆಗೆ ಬಂಡ್ಲ ಗಣೇಶ್ ದಾಖಲಾಗಿದ್ದು, ಗಣೇಶ್ ಅವರ ಕುಟುಂಬ ಸದಸ್ಯರನ್ನು ಸಹ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

ಬಂಡ್ಲ ಗಣೇಶ್ ಯಾರು-ಯಾರನ್ನು ಭೇಟಿಯಾಗಿದ್ದರು, ಅವರ ಪ್ರಾಥಮಿಕ ಸಂಪರ್ಕ ಯಾರೊಂದಿಗೆ ಇತ್ತು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಕೆಲವು ನಟ-ನಟಿಯರನ್ನು ಬಂಡ್ಲ ಭೇಟಿ ಮಾಡಿದ್ದರು ಎನ್ನಲಾಗುತ್ತಿದೆ.
ಹೈದಬಾರಾದ್‌ನಲ್ಲಿ ಕೊರೊನಾ ವೈರಸ್ ಕೆಲವು ದಿನಗಳಿಂದ ತೀವ್ರ ಏರುಗತಿಯಲ್ಲಿದೆ. ಹೈದರಾಬಾದ್ ನಗರವೊಂದರಲ್ಲೇ ಈ ವರೆಗೆ 4395 ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 305 ಮಂದಿ ಮಾತ್ರವೇ ಗುಣಮುಖರಾಗಿದ್ದಾರೆ. 23 ಮಂದಿ ಸಾವನ್ನಪ್ಪಿದ್ದಾರೆ.
ತೆಲಂಗಾಣ ರಾಜ್ಯದಾದ್ಯಂತ ಅಂಕಿ-ಅಂಶ ಗಮನಿಸುವುದಾದರೆ, ಒಟ್ಟು ಪ್ರಕರಣಗಳು 6526 ಆಗಿದ್ದು, ಈವರೆಗೆ 198 ಮಂದಿ ಸಾವನ್ನಪ್ಪಿದ್ದಾರೆ.


Click it and Unblock the Notifications











