ನಟಿ ಸೌಂದರ್ಯ ಕೊನೆಯುಸಿರೆಳೆದ ಅದೇ ದಿನ ಆ ವ್ಯಕ್ತಿ ನನಗೆ ಚಪ್ಪಲಿಯಲ್ಲಿ ಹೊಡೆದಿದ್ದ; ನಿರ್ಮಾಪಕನ ಹೇಳಿಕೆ ವೈರಲ್
ತೆಲುಗು ಹಾಸ್ಯನಟ ಹಾಗೂ ನಿರ್ಮಾಪಕ ಬಂಡ್ಲ ಗಣೇಶ್ ತಮ್ಮ ಜೀವನದ ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಅವತ್ತು ಆ ವ್ಯಕ್ತಿ ನನಗೆ ಚಪ್ಪಲಿಯಲ್ಲಿ ಹೊಡೆದು ಬಿಟ್ಟ. ಆಗ ನನ್ನ ಬಳಿ ಹಣ ಇರಲಿಲ್ಲ. ಉಳ್ಳವರು ಏನು ಇಲ್ಲದವರನ್ನು ನಡೆಸಿಕೊಳ್ಳುವ ರೀತಿ ಅದು. ನನ್ನದಲ್ಲದ ತಪ್ಪಿಗೆ ಆ ವ್ಯಕ್ತಿ ಅವಮಾನ ಮಾಡಿಬಿಟ್ಟ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
1996ರಲ್ಲಿ ಬಂದ 'ವಿನೋದಂ' ಎಂಬ ಸಿನಿಮಾ ಮೂಲಕ ಬಂಡ್ಲ ಗಣೇಶ್ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ಹಲವು ಸಿನಿಮಾಗಳಲ್ಲಿ ಹಾಸ್ಯನಟರಾಗಿ ಮಿಂಚಿದರು. ಮುಖ್ಯವಾಗಿ ಪುರಿ ಜಗನ್ನಾಥ್ ನಿರ್ದೇಶನದ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಮುಂದೆ ನಿರ್ಮಾಪಕರು ಆಗಿಬಿಟ್ಟರು. 'ಗಬ್ಬರ್ ಸಿಂಗ್' ರೀತಿಯ ಬ್ಲಾಕ್‌ಬಸ್ಟರ್ ಸಿನಿಮಾ ನಿರ್ಮಿಸಿ ಯಶಸ್ಸು ಕಂಡರು.

ಇತ್ತೀಚಿನ ವರ್ಷಗಳಲ್ಲಿ ಬಂಡ್ಲ ಗಣೇಶ್ ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಆದರೆ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಗೂ ವೇದಿಕೆಗಳಲ್ಲಿ ಮಾಡುವ ಕಾಮೆಂಟ್ಸ್‌ಗಳಿಂದ ಪದೇ ಪದೆ ಸುದ್ದಿ ಆಗುತ್ತಾರೆ. Raja Raveendar Talks ಯೂಟ್ಯೂಬ್ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ. ಆ ದಿನ ನಡೆದ ಘಟನೆಯನ್ನು ವಿವರಿಸಿದ್ದಾರೆ. ಅದೇ ಘಟನೆ ನನಗೆ ಜೀವನದಲ್ಲಿ ಸಾಧಿಸುವ ಹಠ ಬರುವಂತೆ ಮಾಡ್ತು ಎಂದಿದ್ದಾರೆ.
"ತೆಲುಗು ಚಿತ್ರರಂಗದಲ್ಲಿ ಒಬ್ಬ ದೊಡ್ಡ ವ್ಯಕ್ತಿ ಇದ್ರು. ಆತ ಬಹಳ ಒಳ್ಳೆ ವ್ಯಕ್ತಿ. ನನಗೂ ಸಹಾಯ ಮಾಡಿದ್ದರು. ಆದರೆ ಆ ದಿನ ಅದ್ಯಾವ ಮೂಡ್‌ನಲ್ಲಿ ಇದ್ದರೋ ಗೊತ್ತಿಲ್ಲ. ಅವತ್ತು ಅವರ ಪಕ್ಕ ಕೂತಿದ್ದೆ. ನನಗೆ ಇನ್ನು ನೆನಪಿದೆ. ಅದು ನಟಿ ಸೌಂದರ್ಯ ಏರ್‌ಕ್ರಾಪ್ಟ್ ದುರಂತದಲ್ಲಿ ನಿಧನರಾಗಿದ್ದ ದಿನ. ನಾನು ಹಾಗೂ ಮತ್ತಿಬ್ಬರು ಹೋಗಿ ಆ ವ್ಯಕ್ತಿ ಜೊತೆ ಕೂತಿದ್ದೆವು. ಸಾರ್, ಸಾರ್ ಎಂದು ಮಾತನಾಡುತ್ತಿದ್ದೆ. ನಮಗೆ ಅದು ಅಭ್ಯಾಸವಾಗಿತ್ತಲ್ಲ. ಇದ್ದಕ್ಕಿದ್ದಂತೆ ಆ ವ್ಯಕ್ತಿ ಚಪ್ಪಲಿಯಿಲ್ಲಿ ಹೊಡೆದುಬಿಟ್ಟ" ಎಂದು ಬಂಡ್ಲ ಗಣೇಶ್ ಹೇಳಿದ್ದಾರೆ.
ಆ ವ್ಯಕ್ತಿ ತನ್ನ ವೈಯಕ್ತಿಕ ಜೀವನದ ಯಾವುದೋ ಗೊಂದಲ, ಒತ್ತಡದಲ್ಲಿ ಇದ್ರು. ಎರಡು ದಿನಗಳ ಬಳಿಕ ಕ್ಷಮೆ ಕೇಳಿದ್ರು. ಯಾವುದೋ ಟೆನ್ಷನ್‌ನಲ್ಲಿ ಹೊಡೆದುಬಿಟ್ಟೆ ಅಂದ್ರು ಎಂದು ಬಂಡ್ಲ ಗಣೇಶ್ ತಿಳಿಸಿದ್ದಾರೆ. "ನಮಗೆ ಹೆಚ್ಚು ಕೋಪ ಬಂದಾಗ ಕೆಲಸಕ್ಕೆ ಬಾರದ ವಸ್ತುಗಳನ್ನು ಹೊಡೆದು ಹಾಕ್ತೀವಿ. ದುಬಾರಿ ವಸ್ತುಗಳನ್ನು ಅಲ್ಲ. ಅಗ್ಗದ ವಸ್ತುಗಳ ಮೇಲೆ ಪ್ರತಾಪ ತೋರಿಸ್ತೀವಿ. ಅದೇ ರೀತಿ ನಮಗಿಂತ ಬಲಹೀನರಾಗಿರುವರ ಮೇಲೆ ದರ್ಪ ತೋರಿಸ್ತೀವಿ. ನಿನಗೆ ಧಮ್ ಇದ್ರೆ, ನಿನಗಿಂತ ದೊಡ್ಡವರನ್ನು ಮುಟ್ಟು ನೋಡೋಣ. ಬಳಿಕ ಅಲ್ಲಿಂದ ಹೊರಬಂದೆ. ಕಾರ್ ಏರಿದಾಗ ಪಕ್ಕದಲ್ಲಿ ಮತ್ತೊಬ್ಬರು ಇದ್ರು. ಅವ್ರ ಬಳಿ ಹೇಳ್ದೆ, ನೆನಪಿಟ್ಟುಕೊಳ್ಳಿ, ನನ್ನತ್ರ ಹಣ ಇಲ್ಲ ಅಂತ ಹೊಡ್ದಿದ್ದಾರೆ. ಅವರಿಗಿಂತ ಹೆಚ್ಚು ಸಂಪಾದಿಸ್ತೀನಿ. ಇಲ್ಲದಿದ್ದರೆ ನನ್ನ ಹೆಸ್ರು ಗಣೇಶ್ ಅಲ್ಲ, ಇದು ನನ್ನ ಸಾಧನೆ" ಎಂದಿದ್ದಾರೆ.
ರವಿತೇಜಾ ನಟಿಸಿದ 'ಆಂಜನೇಯುಲು' ಸಿನಿಮಾ ಮೂಲಕ ಬಂಡ್ಲ ಗಣೇಶ್ ನಿರ್ಮಾಪಕರಾಗಿದ್ದರು. ಮುಂದೆ ಪವನ್ ಕಲ್ಯಾಣ್ ನಟನೆಯ ತೀನ್‌ಮಾರ್, ಗಬ್ಬರ್ ಸಿಂಗ್ ಚಿತ್ರಗಳನ್ನು ನಿರ್ಮಿಸಿದರು. ಜ್ಯೂ. ಎನ್‌ಟಿಆರ್ ನಟನೆಯ 'ಬಾದ್ಶಾ' ಹಾಗೂ 'ಟೆಂಪರ್', ಅಲ್ಲು ಅರ್ಜುನ್ ಅಭಿನಯದ 'ಇದ್ದರಮ್ಮಾಯಿಲತೋ', ರಾಮ್‌ಚರಣ್ ನಟನೆಯ 'ಗೋವಿಂದುಡು ಅಂದರಿವಾಡೆಲೇ' ರೀತಿ ಭಾರೀ ಬಜೆಟ್ ಸಿನಿಮಾಗಳನ್ನು ತೆರೆಗೆ ತಂದರು.
ಪವನ್ ಕಲ್ಯಾಣ್ ಅಭಿಮಾನಿ ಎಂದು ಬಂಡ್ಲ ಗಣೇಶ್ ಗುರ್ತಿಸಿಕೊಂಡಿದ್ದಾರೆ. 'ಪೋಕಿರಿ', 'ಯೋಗಿ', 'ಚಿರುತ', 'ಬ್ಯುಸಿನೆಸ್‌ಮ್ಯಾನ್', 'ಸರಿಲೇರು ನೀಕೆವ್ವರು', 'ಮಲ್ಲೇಶ್ವರಿ' ಸೇರಿ ಒಂದಷ್ಟು ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ.


Click it and Unblock the Notifications