ಬಾಕ್ಸಾಫೀಸ್‌ನಲ್ಲಿ ಗ್ರಾಸ್ ಕಲೆಕ್ಷನ್, ನೆಟ್ ಕಲೆಕ್ಷನ್, ಪ್ರೊಡ್ಯೂಸರ್ ಶೇರ್ ಅಂದ್ರೆ ಏನು?
ಇತ್ತೀಚಿನ ವರ್ಷಗಳಲ್ಲಿ ಯಾವುದೇ ಸಿನಿಮಾ ಸೋಲು ಗೆಲುವನ್ನು ಬಾಕ್ಸಾಫೀಸ್ ಗಳಿಕೆಯನ್ನು ಆಧರಿಸಿ ನಿರ್ಧರಿಸುವಂತಾಗಿದೆ. ಸಿನಿಮಾ ಎಷ್ಟೇ ಚೆನ್ನಾಗಿ ಇದ್ದರೂ ಎಷ್ಟು ಕಲೆಕ್ಷನ್ ಮಾಡ್ತು? ನಿರ್ಮಾಪಕರು ಹಾಕಿದ ಬಜೆಟ್ ಎಷ್ಟು? ಅದಕ್ಕಿಂತ ಹೆಚ್ಚು ಲಾಭ ಬಂತಾ? ಇಲ್ವಾ? ಎನ್ನುವ ಚರ್ಚೆ ನಡೆಯುತ್ತದೆ.
ಹೇಳಿಕೇಳಿ ಸಿನಿಮಾ ಎನ್ನುವುದು ಬ್ಯುಸಿನೆಸ್. ಸಿನಿಮಾ ಚೆನ್ನಾಗಿದ್ಯಾ? ಇಲ್ವಾ? ಒಟ್ಟಾರೆ ಕಲೆಕ್ಷನ್ ಎಷ್ಟು ಆಯ್ತು? ನಿರ್ಮಾಪಕರು ದಡ ಸೇರಿದ್ರಾ? ಎನ್ನುವ ಪ್ರಶ್ನೆ ಹುಟ್ಟುತ್ತದೆ. ಅದರಲ್ಲೂ ಇತ್ತೀಚೆಗೆ ಅಭಿಮಾನಿಗಳು ಈ ಬಾಕ್ಸಾಫೀಸ್ ಕಲೆಕ್ಷನ್ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡುಬಿಟ್ಟಿದ್ದಾರೆ. ತಮ್ಮ ನೆಚ್ಚಿನ ನಟನ ಸಿನಿಮಾ ಎಷ್ಟು ಗಳಿಕೆ ಮಾಡಿದೆ? ಯಾವ ದಾಖಲೆ ಮುರಿದಿದೆ? ಎನ್ನುವ ಬಗ್ಗೆ ಬಹಳ ತಲೆ ಕೆಡಿಸಿಕೊಳ್ಳುತ್ತಾರೆ. ತೆಲುಗು, ತಮಿಳು ಸ್ಟಾರ್‌ಗಳ ಅಭಿಮಾನಿಗಳಲ್ಲಿ ಈ ಲೆಕ್ಕಾಚಾರ ಜಾಸ್ತಿ ಇರುತ್ತಿತ್ತು. ಈಗ ಇದು ಸ್ಯಾಂಡಲ್‌ವುಡ್‌ಗೂ ಬಂದಿದೆ.

ಒಂದು ಚಿತ್ರವನ್ನು ಎಷ್ಟು ಜನ ನೋಡುತ್ತಾರೆ. ಎಷ್ಟು ಟಿಕೆಟ್ ಬುಕ್ ಆಗುತ್ತದೆ. ಅದರಲ್ಲಿ ತೆರಿಗೆ ಎಷ್ಟು? ಥಿಯೇಟರ್ ಅಥವಾ ಮಲ್ಟಿಪ್ಲೆಕ್ಸ್ ಮಾಲೀಕರ ಪಾಲು ಎಷ್ಟು? ಕೊನೆಗೆ ನಿರ್ಮಾಪಕರಿಗೆ ಎಷ್ಟು ತಲುಪುತ್ತದೆ ಎನ್ನುವುದು ಅಷ್ಟು ಸುಲಭಕ್ಕೆ ಅರ್ಥವಾಗುವುದಿಲ್ಲ. ಅದು ಪ್ರತಿ ಸಿನಿಮಾ ವಿಚಾರದಲ್ಲಿ ಬದಲಾಗುತ್ತಿರುತ್ತದೆ. ಇದೆಲ್ಲದರ ನಡುವೆ ವಿತರಕರು ಸಿನಿಮಾ ರೈಟ್ಸ್ ಖರೀದಿಸಿ ಸೋಲು ಗೆಲುವು ನೋಡುತ್ತಾರೆ.
ದೊಡ್ಡ ಸಿನಿಮಾಗಳು ಬಂದಾಗ ಗ್ರಾಸ್ ಕಲೆಕ್ಷನ್, ನೆಟ್ ಕಲೆಕ್ಷನ್ ಹಾಗೂ ಶೇರ್ ಬಗ್ಗೆ ಭಾರೀ ಚರ್ಚೆ ನಡೆಯುತ್ತದೆ. ಗ್ರಾಸ್ ಕಲೆಕ್ಷನ್ ಜಾಸ್ತಿ ಎಂದು ಹೇಳುತ್ತಾರೆ. ಶೇರ್ ಕಮ್ಮಿ ಎನ್ನುತ್ತಾರೆ. ಕೆಲವೊಮ್ಮೆ ಗ್ರಾಸ್ ಕಲೆಕ್ಷನ್ ಚೆನ್ನಾಗಿ ಆಗಿದೆ ಅನ್ನಿಸಿದರೂ ನಿರ್ಮಾಪಕ ನಷ್ಟವಾಯಿತು ಎನ್ನುತ್ತಾನೆ. ಹಾಗಿದ್ದರೆ ಬಾಕಿ ಹಣ ಏನಾಯಿತು? ಎಂದು ಕೆಲವರು ಹುಬ್ಬೇರಿಸುತ್ತಾರೆ. ಬಜೆಟ್‌ಗಿಂತ ಜಾಸ್ತಿ ಕಲೆಕ್ಷನ್ ಆಗಿದ್ದರೂ ನಷ್ಟ ಎನ್ನುವುದು ಎಷ್ಟು ಸರಿ ಎಂದು ಕೇಳುವವರು ಇದ್ದಾರೆ.
ತೆಲುಗು ಸಿನಿಮಾ ನಿರ್ಮಾಪಕ ನಾಗವಂಶಿ ಈ ಬಾಕ್ಸಾಫೀಸ್ ಲೆಕ್ಕಾಚಾರದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಒಬ್ಬ ಪ್ರೇಕ್ಷಕರ 250 ರೂ. ಕೊಟ್ಟು ಒಂದು ಟಿಕೆಟ್ ಖರೀದಿಸಿದರೆ ನಿರ್ಮಾಪಕನಿಗೆ ಸಿಗುವುದು 100 ರೂ. ಮಾತ್ರ ಎಂದು ವಿವರಿಸಿದ್ದಾರೆ.
ಚಿತ್ರರಂಗದಲ್ಲಿ ಸಿನಿಮಾವನ್ನು ವಿತರಕರಿಗೆ ಮಾರಾಟ ಮಾಡುತ್ತೇವೆ. ದೊಡ್ಡ ಸಿನಿಮಾಗಳನ್ನು ಆಯಾ ಏರಿಯಾಗೆ ವಿತರಕರಿಗೆ ಕೊಟ್ಟು ಬಿಡುತ್ತೇವೆ. ದೊಡ್ಡ ಮೊತ್ತಕ್ಕೆ ಮಾರಿಬಿಡುತ್ತೇವೆ. ಅಲ್ಲಿಗೆ ಮುಗೀತು, ಅವರಿಗೆ ಹೆಚ್ಚು ಲಾಭ ಬಂದರೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಸಣ್ಣ ಅಥವಾ ಮೀಡಿಯಂ ಬಜೆಟ್ ಸಿನಿಮಾ ಆಗಿದ್ದರೆ ಮಾತ್ರ ಒಂದಷ್ಟು ಚರ್ಚೆ ನಡೆಯುತ್ತದೆ, ಶೇರ್ ಮಾಡಿಕೊಳ್ಳುತ್ತೇವೆ ಎಂದು ನಾಗವಂಶಿ ಹೇಳಿದ್ದಾರೆ.
ನೆಟ್ ಕಲೆಕ್ಷನ್ ಹಾಗೂ ಗ್ರಾಸ್ ಕಲೆಕ್ಷನ್ ನಡುವಿನ ವ್ಯತ್ಯಾಸದ ಬಗ್ಗೆ ನಾಗವಂಶಿ ಮಾತನಾಡಿದ್ದಾರೆ. "250 ರೂ. ಕೊಟ್ಟು ಒಂದು ಟಿಕೆಟ್ ಖರೀದಿಸಿದೆ ಆ 250 ರೂ. ಗ್ರಾಸ್. ಅದರಿಂದ ಸರ್ಕಾರದ ತೆರಿಗೆ ಕಳೆದರೆ ನೆಟ್ ಉಳಿಯುವುದು. ಅದರಲ್ಲಿ ಚಿತ್ರಮಂದಿರಗಳ ಬಾಡಿಗೆ ಕಳೆದು ಉಳಿಯುವುದು ಶೇರ್. ಒಬ್ಬ ಪ್ರೇಕ್ಷಕ 250 ರೂ. ಕೊಟ್ಟು ಟಿಕೆಟ್ ಖರೀದಿಸಿದರೆ ಎಲ್ಲಾ ಕಳೆದು ನಿರ್ಮಾಪಕನಿಗೆ 100 ರೂ. ಉಳಿಯುತ್ತದೆ" ಎಂದು ಲೆಕ್ಕ ಕೊಟ್ಟಿದ್ದಾರೆ.
ತೆಲುಗು, ತಮಿಳು ಸಿನಿಮಾ ನಿರ್ಮಾಪಕರು ಸಿನಿಮಾ ಗ್ರಾಸ್ ಕಲೆಕ್ಷನ್ ಲೆಕ್ಕ ಕೊಡುತ್ತಾರೆ. ಕೆಲವೊಮ್ಮೆ ಪ್ರೇಕ್ಷಕರನ್ನು ಸೆಳೆಯಲು ಸುಖಾಸುಮ್ಮನೆ ವಿಜೃಂಭಿಸಿ ಕಲೆಕ್ಷನ್ ಲೆಕ್ಕ ಕೊಟ್ಟು ಪೋಸ್ಟರ್ ರಿಲೀಸ್ ಮಾಡುವುದು ಇದೆ. ಆದರೆ ಕನ್ನಡದಲ್ಲಿ ಇನ್ನು ಈ ಬಗ್ಗೆ ಹೇಳಲು ನಿರ್ಮಾಪಕರು ಹಿಂದೇಟು ಹಾಕುತ್ತಾರೆ.


Click it and Unblock the Notifications











