ಪೈರಸಿ ಮಾಡಿದ್ರು, ಡೌನ್‌ಲೋಡ್ ಮಾಡಿ ಸಿನಿಮಾ ನೋಡಿದ್ರು ಶಿಕ್ಷೆ!
ಚಿತ್ರರಂಗಕ್ಕೆ ಪೈರಸಿ ಭೂತ ಕಾಡುತ್ತಿದೆ. ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆ ದಿನವೇ ಆನ್‌ಲೈನ್‌ನಲ್ಲಿ ಲೀಕ್ ಆಗುತ್ತಿದೆ. ಕೋಟಿ ಕೋಟಿ ಸುರಿದು ಸಿನಿಮಾ ನಿರ್ಮಿಸುವ ನಿರ್ಮಾಪಕರಿಗೆ ಇದರಿಂದ ಬಹಳ ನಷ್ಟವಾಗುತ್ತಿದೆ. ಸಂಕ್ರಾಂತಿಗೆ ಬಂದ ತೆಲುಗಿನ 'ಗೇಮ್ ಚೇಂಜರ್' ಹಾಗೂ ಇತ್ತೀಚೆಗೆ ಬಂದಿರುವ 'ತಂಡೇಲ್' ಚಿತ್ರಗಳಿಗೆ ಇದೇ ಸಮಸ್ಯೆ ಎದುರಾಗಿದೆ.
ಪೈರಸಿಗೆ ಬ್ರೇಕ್ ಹಾಕುವುದು ನಿಜಕ್ಕೂ ಸವಾಲಿನ ಕೆಲಸ. ಆದರೂ ಕೆಲ ನಿರ್ಮಾಪಕರು ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ. ಸದ್ಯ ತೆಲುಗಿನ 'ತಂಡೇಲ್' ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ನಟನೆಯ ಸಿನಿಮಾ ಪ್ರೇಕ್ಷಕರ ಮನಸೂರೆಗೊಂಡಿದೆ. ಆದರೆ ಇದೀಗ ಚಿತ್ರ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ. ಈ ಬಗ್ಗೆ ನಿರ್ಮಾಪಕರಾದ ಅಲ್ಲು ಅರವಿಂದ್ ಬೇಸರ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಲ್ಲು ಅರವಿಂದ್ ಪೈರಸಿಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಪೈರಸಿ ಮಾಡುವವರು ಮಾತ್ರವಲ್ಲ ಲಿಂಕ್ ಶೇರ್ ಮಾಡುವವರು, ಡೌನ್‌ಲೋಡ್ ಮಾಡಿ ಸಿನಿಮಾ ನೋಡುವವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ. ಈ ಹಿಂದೆ 'ಗೀತಾಗೋವಿಂದಂ' ಸಿನಿಮಾ ಪೈರಸಿ ಮಾಡಿದವರ ವಿರುದ್ಧವೂ ಕ್ರಮ ಕೈಗೊಂಡಿದ್ದರು. ಅದೇ ರೀತಿ ಇದೀಗ 'ತಂಡೇಲ್' ಸಿನಿಮಾ ಪೈರಸಿ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.
ಸಾಕಷ್ಟು ಪ್ರಯತ್ನ ಮಾಡಿ 'ತಂಡೇಲ್' ಪೈರಸಿ ಲಿಂಕ್‌ಗಳನ್ನು ತೆಗೆದುಹಾಕಿದ್ದೇವೆ. ಪೈರಸಿ ವಿರುದ್ಧ ಹೋರಾಡಲು ಫಿಲ್ಮ್ ಚೇಂಬರ್‌ನಲ್ಲಿ ಒಂದು ಸೆಲ್ ಮಾಡಿದ್ದೇವೆ. ಪೈರಸಿ ನಿಯಂತ್ರಿಸಲು ಹಗಲಿರುಳು ಶ್ರಮಿಸುತ್ತಿದ್ದೇವೆ. ಕ್ವಾಲಿಟಿ ಪ್ರಿಂಟ್‌ಗಳು ಬಹಳ ಬೇಗ ಹೊರ ಬರುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಆ ಲಿಂಕ್‌ಗಳನ್ನು ವಾಟ್ಸಪ್ ಗ್ರೂಪ್‌ಗಳಲ್ಲಿ ಶೇರ್ ಮಾಡುತ್ತಿದ್ದಾರೆ. ಹೀಗೆ ಮಾಡುತ್ತಿರುವ ವಾಟ್ಸಪ್, ಟೆಲಿಗ್ರಾಂ ಗ್ರೂಪ್ ಅಡ್ಮಿನ್‌ಗಳನ್ನು ಗುರ್ತಿಸಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದೇವೆ ಎಂದು ಅಲ್ಲು ಅರವಿಂದ್ ಹೇಳಿದ್ದಾರೆ.
ಬಸ್‌ಗಳಲ್ಲಿ ಕೂಡ ಪೈರಸಿ ಆಗಿರುವ ಸಿನಿಮಾಗಳನ್ನು ಪ್ರದರ್ಶನ ಮಾಡಲಾಗುತ್ತಿದೆ. ಪ್ರಯಾಣಿಕರನ್ನು ಸೆಳೆಯಲು ಹೀಗೆ ಮಾಡುತ್ತಿದ್ದಾರೆ. ಕೆಲವು ಕೇಬಲ್ ನೆಟ್‌ವರ್ಕ್‌ನವರು ಪೈರಸಿ ಸಿನಿಮಾಗಳಲ್ಲು ಪ್ರಸಾರ ಮಾಡುತ್ತಿದ್ದಾರೆ. ವಾಟ್ಸಪ್, ಟೆಲಿಗ್ರಾಮ್ ಗ್ರೂಪ್ ಅಡ್ಮಿನ್‌ಗಳಿಗೆ ಇದು ನನ್ನ ಎಚ್ಚರಿಕೆ, ನೀವು ಜೈಲಿಗೆ ಹೋಗುವ ಸಾಧ್ಯತೆ ಇದೆ. ನಿಮ್ಮನ್ನು ಹಿಡಿಯುವುದು ಈಗ ಸುಲಭ ಎಂದು ಅಲ್ಲು ಅರವಿಂದ್ ವಿವರಿಸಿದ್ದಾರೆ.
ನಿರ್ಮಾಪಕ ಬನ್ನಿ ವಾಸು ಕೂಡ ಪೈರಸಿ ಮಾಡುವವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಯಾರಾದರೂ ಪೈರಸಿ ಕಾಪಿ ಪ್ರದರ್ಶನ ಮಾಡುತ್ತಿದ್ದರೆ ಅದರ ವೀಡಿಯೋ ಮಾಡಿ ನಮ್ಮ ವಾಟ್ಸಪ್ ನಂಬರ್ ಕಳುಹಿಸಿ ನಾವು ಕ್ರಮ ಕೈಗೊಳ್ಳುತ್ತವೆ. ಅಕ್ಕಿನೇನಿ ಅಭಿಮಾನಿಗಳು ಈ ಸಹಾಯ ಮಾಡಿ. ಒಂದೊಳ್ಳೆ ಸಿನಿಮಾ ಬಂದಿರುವಾಗ ಜನ ಬಂದು ಚಿತ್ರಮಂದಿರದಲ್ಲಿ ನೋಡುತ್ತಿದ್ದಾರೆ. ಯಾಕೆ ಪೈರಸಿ ಮಾಡಿ ಹಾಳು ಮಾಡ್ತೀರಾ ಎಂದು ಬೇಸರ ಹೊರ ಹಾಕಿದ್ದಾರೆ.
'ತಂಡೇಲ್' ಹಾಗೂ 'ಗೇಮ್ ಚೇಂಜರ್' ಮಾತ್ರವಲ್ಲ, ಇತ್ತೀಚೆಗೆ ಬರುತ್ತಿರುವ ಎಲ್ಲಾ ದೊಡ್ಡ ಸಿನಿಮಾಗಳಿಗೆ ಇದೇ ಸಂಕಷ್ಟ ಎದುರಾಗಿದೆ. ಕ್ರಿಸ್‌ಮಸ್ ಸಂಭ್ರಮದಲ್ಲಿ ಬಂದಿದ್ದ ಕನ್ನಡದ 'ಯುಐ' ಹಾಗೂ 'ಮ್ಯಾಕ್ಸ್' ಚಿತ್ರದ ಒಳ್ಳೆ ಕ್ವಾಲಿಟಿ ಕಾಪಿ ವೈರಲ್ ಆಗುತ್ತಿದೆ. ಓಟಿಟಿಗೆ ಬರುವ ಮುನ್ನವೇ ಸಿನಿಮಾ ಆನ್‌ಲೈನ್‌ನಲ್ಲಿ ಹರಿದಾಡ್ತಿದೆ. ವಿದೇಶಗಳಲ್ಲಿ ಸಿನಿಮಾ ಬಿಡುಗಡೆ ಆದಾಗ ಅಲ್ಲಿಂದ ಪೈರಸಿ ಆಗುತ್ತದೆ ಎನ್ನಲಾಗ್ತಿದೆ. 'ತಂಡೇಲ್' ಚಿತ್ರವನ್ನು ಆಫ್ರಿಕಾದಿಂದ ಪೈರಸಿ ಮಾಡಲಾಗಿದೆ ಎನ್ನುವ ಚರ್ಚೆ ನಡೀತಿದೆ.


Click it and Unblock the Notifications











