"ಥ್ಯಾಂಕ್ಯೂ ಮಗಾ" ಎಂದ ಯಶ್; 'ಟಾಕ್ಸಿಕ್' ಬಳಿಕ ಸಂದೀಪ್ ರೆಡ್ಡಿ ವಂಗಾ ಜೊತೆ ಸಿನಿಮಾ ನಿಜಾನಾ?
ನಟ ಯಶ್ ಇತ್ತೀಚೆಗೆ 40ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅದೇ ಸಂಭ್ರಮದಲ್ಲಿ 'ಟಾಕ್ಸಿಕ್' ಚಿತ್ರದ ಟೀಸರ್ ಬಂದು ಹಿಟ್ ಆಗಿದೆ. ಅಭಿಮಾನಿಗಳು, ಸೆಲೆಬ್ರೆಟಿಗಳು, ಆಪ್ತರು ರಾಕಿಂಗ್ ಸ್ಟಾರ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. 3 ದಿನಗಳ ಬಳಿಕ ಯಶ್ ಎಲ್ಲರಿಗೂ ರಿಪ್ಲೇ ಮಾಡಿ ಧನ್ಯವಾದ ತಿಳಿಸಿದ್ದಾರೆ.
ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಕೂಡ 'ಟಾಕ್ಸಿಕ್' ಟೀಸರ್ ನೋಡಿ ಮೆಚ್ಚಿಕೊಂಡಿದ್ದರು. ಟ್ವೀಟ್ ಮಾಡಿ ಯಶ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಅದಕ್ಕೆ ಯಶ್ ರಿಪ್ಲೇ ಮಾಡಿದ್ದಾರೆ. ವಿಶೇಷ ಅಂದ್ರೆ "ಥ್ಯಾಂಕ್ಯೂ ಮಗಾ" ಎಂದು ಬರೆದುಕೊಂಡಿದ್ದಾರೆ. ಇದು ನೆಟ್ಟಿಗರಿಗೆ ಅಚ್ಚರಿ ತಂದಿದೆ. ತೆಲುಗು ನಿರ್ದೇಶಕನನ್ನು ಮಗಾ ಎಂದು ಪ್ರೀತಿಯಿಂದ ಯಾಕೆ ಕರೆದರು. ಇಬ್ಬರ ನಡುವೆ ಅಷ್ಟು ಆತ್ಮೀಯ ಒಡನಾಟ ಇದ್ಯಾ? ಇಬ್ಬರು ಒಟ್ಟಿಗೆ ಸಿನಿಮಾ ಮಾಡ್ತಾರಾ? ಎಂದು ಚರ್ಚೆ ಶುರುವಾಗಿದೆ.

'ಅನಿಮಲ್' ಬಳಿಕ ಪ್ರಭಾಸ್ ನಟನೆಯ 'ಸ್ಪಿರಿಟ್' ಚಿತ್ರಕ್ಕೆ ಸಂದೀಪ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಸಿನಿಮಾ ಹೈಪ್ ಕ್ರಿಯೇಟ್ ಮಾಡಿದೆ. ಸಂದೀಪ್ ಸಿನಿಮಾ ಸ್ಟೈಲ್ ಬಹಳ ನಿರೀಕ್ಷೆ ಹುಟ್ಟು ಹಾಕುತ್ತದೆ. 'ಅರ್ಜುನ್ ರೆಡ್ಡಿ' ಚಿತ್ರದಲ್ಲಿ ಸಂಚಲನ ಸೃಷ್ಟಿಸಿದ್ದ ವಂಗಾ ಬಳಿಕ 'ಅನಿಮಲ್' ಸಿನಿಮಾ ಮೂಲಕ ಬಾಕ್ಸಾಫೀಸ್ ಶೇಕ್ ಮಾಡಿದ್ದರು. ಹಾಗಾಗಿ ಸಹಜವಾಗಿಯೇ 'ಸ್ಪಿರಿಟ್' ಚಿತ್ರ ಹೈಪ್ ಕ್ರಿಯೇಟ್ ಮಾಡಿದೆ.
ಅತಿರೇಕದ ಸನ್ನಿವೇಶಗಳನ್ನು ತೆರೆಗೆ ತಂದು ಸಂದೀಪ್ ರೆಡ್ಡಿ ವಂಗಾ ಸದ್ದು ಮಾಡುತ್ತಾರೆ. ಹಸಿಬಿಸಿ ದೃಶ್ಯಗಳನ್ನು ತೆರೆಗೆ ತರಲು ಹಿಂದು ಮುಂದು ನೋಡಲ್ಲ. ಅದೇ ಕಾರಣಕ್ಕೆ ಅವರ ಸಿನಿಮಾಗಳ ಬಗ್ಗೆ ನಿರೀಕ್ಷೆ ಮೂಡುತ್ತದೆ. ಆದರೆ 'ಟಾಕ್ಸಿಕ್' ಟೀಸರ್ ನೋಡಿ ವಂಗಾ ಅವರನ್ನು ಗೀತು ಮೋಹನ್ ದಾಸ್ ಮೀರಿಸಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
"ಟಾಕ್ಸಿಕ್ ಟೀಸರ್ ನನ್ನ ಮನಮುಟ್ಟಿತು. ಆ ಸ್ಟೈಲ್, ಆಟಿಟ್ಯೂಡ್, ಆರ್ಭಟ ಎಲ್ಲವೂ ಇಷ್ಟವಾಯಿತು. ಹುಟ್ಟುಹಬ್ಬದ ಶುಭಾಶಯಗಳು ಯಶ್" ಎಂದು ಸಂದೀಪ್ ರೆಡ್ಡಿ ವಂಗಾ ಟ್ವೀಟ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಯಶ್ "ಥ್ಯಾಂಕ್ಯೂ ಮಗಾ, ಸಂದೀಪ್. ಸಿನಿಮಾ 'ಸ್ಪಿರಿಟ್' ಅನ್ನು ದೊಡ್ಡಮಟ್ಟಕ್ಕೇರಿಸೋಣ, ಮಿತಿಗಳನ್ನು ಮೀರಿ ಕಥೆ ಹೇಳೋಣ" ಎಂದು ರಿಪ್ಲೇ ಮಾಡಿದ್ದಾರೆ. ಇದನ್ನು ನೋಡಿ ಅತ್ತ ತೆಲುಗು ಪ್ರೇಕ್ಷಕರು, ಇತ್ತ ಯಶ್ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.
ಯಶ್ ಯಾರಿಗೂ ಮಗಾ ಎಂದು ಹೇಳಲಿಲ್ಲ. ಕೆಲವೇ ಆತ್ಮೀಯ ಸ್ನೇಹಿತರನ್ನು ಆ ರೀತಿ ಕರೆಯುತ್ತಾರೆ. ಸಂದೀಪ್ ಜೊತೆ ಅಷ್ಟು ಆತ್ಮೀಯ ಒಡನಾಟ ಇದ್ಯಾ? ಅಂತ ಕೆಲವರು ತಲೆ ಕೆಡಿಸಿಕೊಂಡಿದ್ದಾರೆ. ಅಷ್ಟಕ್ಕೂ ಕನ್ನಡದಲ್ಲಿ ಮಗಾ ಎಂದು ಯಾಕೆ ಹೇಳಿದ್ರು ಎನ್ನುವುದು ಮತ್ತೆ ಕೆಲವರಿಗೆ ಕೂತೂಹಲ ಮೂಡಿಸಿದೆ. ತೆಲುಗು ನೆಟ್ಟಿಗರು ಈ ಪದದ ಅರ್ಥ ಏನು ಎಂದು ಹುಡುಕಾಡುತ್ತಿದ್ದಾರೆ.
ತೆಲಂಗಾಣದ ವಾರಂಗಲ್‌ನಲ್ಲಿ ಹುಟ್ಟಿ, ಹೈದರಾಬಾದ್‌ನಲ್ಲಿ ಶಾಲಾ ಶಿಕ್ಷಣ ಮುಗಿಸಿದ್ದರು. ಕರ್ನಾಟಕದ ಧಾರವಾಡದಲ್ಲಿರುವ SDM ಕಾಲೇಜಿನಲ್ಲಿ ಪದವಿ ಪಡೆದಿದ್ದರು. ಬಳಿಕ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಫಿಲ್ಮ್ ಮೇಕಿಂಗ್ ತರಬೇತಿ ಪಡೆದು ಬಂದಿದ್ದಾರೆ. ಧಾರಾವಾಡದಲ್ಲಿ ಓದಿದ್ದರಿಂದ ಸಂದೀಪ್ ಕನ್ನಡ ಕಲಿತಿದ್ದಾರೆ. ಹಾಗಾಗಿ ಯಶ್ ಜೊತೆ ಕನ್ನಡದಲ್ಲೇ ಮಾತನಾಡುತ್ತಾರೆ ಎನಿಸುತ್ತದೆ. ಅದೇ ಕಾರಣಕ್ಕೆ 'ಥ್ಯಾಂಕ್ಯೂ ಮಗಾ' ಎಂದು ಯಶ್ ಹೇಳಿರುವ ಸಾಧ್ಯತೆಯಿದೆ.
ಯಶ್ ಹಾಗೂ ಸಂದೀಪ್ ರೆಡ್ಡಿ ವಂಗಾ ಒಟ್ಟಿಗೆ ಸಿನಿಮಾ ಮಾಡುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಸದ್ಯ ಪ್ಯಾನ್ ಇಂಡಿಯಾ ಟ್ರೆಂಡ್ ನಡೀತಿದೆ. ಕಲಾವಿದರು, ಫಿಲ್ಮ್ ಮೇಕರ್ಸ್ ಭಾಷೆಗ ಗಡಿ ಮೀರಿ ಸಿನಿಮಾ ತೊಡಗಿಸಿಕೊಳ್ಳುತ್ತಿದ್ದಾರೆ. ಮುಂದೆ ಯಶ್ ಹಾಗೂ ವಂಗಾ ಒಟ್ಟಿಗೆ ಸಿನಿಮಾ ಮಾಡಿದರೂ ಅಚ್ಚರಿಪಡಬೇಕಿಲ್ಲ.


Click it and Unblock the Notifications











