ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಹತ್ಯೆಗೆ ಸ್ಕೆಚ್, ಗುಪ್ತಚರ ಇಲಾಖೆಯಿಂದ ಎಚ್ಚರಿಕೆ ಸಂದೇಶ..?
ಪವನ್ ಕಲ್ಯಾಣ್ ಈಗ ಕೇವಲ ಸೂಪರ್ ಸ್ಟಾರ್ ಮಾತ್ರ ಅಲ್ಲ ಆಂಧ್ರದ ಉಪ ಮುಖ್ಯಮಂತ್ರಿ ಕೂಡ ಹೌದು. ತೆರೆಯ ಮೇಲೆ ನಾಯಕನಾಗಿ ಮಿಂಚಿದ್ದ ಪವನ್ ಕಲ್ಯಾಣ್‌ಗೆ ಈಗ ಜನರ ಕಷ್ಟ-ನಷ್ಟಗಳನ್ನೂ ಪರಿಹರಿಸುವ ಮೂಲಕ ನಿಜ ಜೀವನದಲ್ಲಿ ಕೂಡ ನಾಯಕನಾಗುವ ಯೋಗ ಕೂಡಿ ಬಂದಿದೆ.
ಆ ದಿಸೆಯಲ್ಲಿ ಪೀಠಪುರಂ ವಿಧಾನಸಭಾ ಕ್ಷೇತ್ರದಿಂದ ಜನಸೇನಾ ಪಾರ್ಟಿಯಿಂದ ಗೆದ್ದು ಈಗ ಡಿಸಿಎಂ ಹುದ್ದೆ ಅಲಂಕರಿಸಿರುವ ಪವನ್ ಕಲ್ಯಾಣ್ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಮಾತು ಆಂಧ್ರಪ್ರದೇಶದೆಲ್ಲೆಡೆ ಕೇಳಿ ಬರುತ್ತಿದೆ ಕೂಡ. ಹೀಗಿರುವಾಗ ಪವನ್ ಕಲ್ಯಾಣ್ ಮೈಯೆಲ್ಲ ಕಣ್ಣಾಗಿರಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ ತುಂಬಾನೇ ಎಚ್ಚರಿಕೆಯಿಂದ ಇರಬೇಕೆಂದು ಕೇಂದ್ರ ಗುಪ್ತಚರ ಇಲಾಖೆಯ ಅಧಿಕಾರಿಗಳು ಪವನ್ ಕಲ್ಯಾಣ್‌ಗೆ ಹೇಳಿದ್ದಾರೆ ಎಂಬ ಸುದ್ದಿ ಸದ್ಯಕ್ಕೆ ಹಬ್ಬಿದೆ.

ಹೌದು, ಪವನ್ ಕಲ್ಯಾಣ್ ಪ್ರಾಣಕ್ಕೆ ಅಪಾಯ ಇದೆ ಎಂದು ಗುಪ್ತಚರ ಇಲಾಖೆ ಹೇಳಿದೆ ಎನ್ನುವ ವಿಚಾರ ಸದ್ಯಕ್ಕೆ ಸದ್ದು ಮಾಡುತ್ತಿದೆ. ಕಿಡಿಗೇಡಿಗಳು ಪವನ್ ಕಲ್ಯಾಣ್ ಅವರ ಹತ್ಯೆಗೆ ಸಂಚು ರೂಪಿಸುತ್ತಿರುವ ಕಾರಣದಿಂದ ಪೊಲೀಸರು ಭದ್ರತೆ ಹೆಚ್ಚಿಸಬೇಕು ಎಂದು ಗುಪ್ತಚರ ಇಲಾಖೆಯ ಅಧಿಕಾರಿಗಳು ಸಂದೇಶ ನೀಡಿದ್ದಾರೆ ಎಂಬ ವರದಿಯನ್ನೂ ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದೆ. ಇನ್ನೂ ಈ ಮಾಹಿತಿಯನ್ನು ಜನಸೇನಾ ಪಕ್ಷದ ಮೂಲಗಳು ಖಚಿತಪಡಿಸಿವೆ ಎಂದು ಕೂಡ ಮಾಧ್ಯಮಗಳಲ್ಲಿ ವರದಿ ಆಗಿದೆ.
ಇನ್ನೂ ತಮ್ಮ ಪ್ರಾಣಕ್ಕೆ ಅಪಾಯ ಇರುವ ಬಗ್ಗೆ ಈ ಮೊದಲು ಸ್ವತಃ ಪವನ್ ಕಲ್ಯಾಣ್ ಅವರು ಹೇಳಿದ್ದರು. ಈಗ ಗುಪ್ತಚರ ಇಲಾಖೆಗೂ ಈ ಬಗ್ಗೆ ಮಾಹಿತಿ ಸಿಕ್ಕಿರುವುದರಿಂದ ಪವನ್ ಕಲ್ಯಾಣ್ ಅವರಿಗೆ ಝಡ್ ಪ್ಲಸ್ ಸೆಕ್ಯೂರಿಟಿ ನೀಡಬೇಕು ಎಂದು ಜನಸೇನಾ ಪಕ್ಷದವರು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಪವನ್ ಕಲ್ಯಾಣ್ ಅವರ ಏಳಿಗೆಯನ್ನು ಸಹಿಸದವರು ಈ ರೀತಿ ಸಂಚು ರೂಪಿಸಿರಬಹುದು ಎಂಬ ಶಂಕೆ ಕೂಡ ಅನೇಕರಲ್ಲಿದೆ. ಇನ್ನೂ ನರೇಂದ್ರ ಮೋದಿ ಅವರ ಜೊತೆಗಿನ ಪವನ್ ಕಲ್ಯಾಣ್ ಆತ್ಮೀಯತೆ ಕೆಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ, ಹೀಗಾಗಿಯೇ ಪವನ್ ಕಲ್ಯಾಣ್ ವಿರುದ್ಧ ಮಸಲತ್ತು ನಡೆಸುತ್ತಿದ್ದಾರೆ ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ.

ಈ ಬಗ್ಗೆ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಕೇಂದ್ರ ಗುಪ್ತಚರ ದಳದ ಟ್ರ್ಯಾಕಿಂಗ್ ವೇಳೆ ಪವನ್ ಜೀವಕ್ಕೆ ಅಪಾಯ ಇರುವುದು ಕಂಡು ಬಂದಿದೆ. ಹಾಗಾಗಿ ಪವನ್ ಕಲ್ಯಾಣ್ ಎಚ್ಚರಿಕೆಯಿಂದ ಇರಬೇಕು ಎಂದು ಕೇಂದ್ರ ಗುಪ್ತಚರ ಮೂಲಗಳು ಸೂಚಿಸಿವೆ ಎನ್ನುವ ಮಾತು ಕೇಳಿ ಬರುತ್ತಿದೆ.
ಸಹಜವಾಗಿ ಈ ಸುದ್ದಿ ಕೇಳಿ ಸ್ಟಾರ್, ಉಪ ಮುಖ್ಯಮಂತ್ರಿ ಹಾಗೂ ಜನಸೇನಾ ಮುಖ್ಯಸ್ಥರಾಗಿರುವ ಪವನ್ ಕಲ್ಯಾಣ್ ಅವರ ಅಸಂಖ್ಯಾತ.. ಅಗಣಿತ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಪವನ್ ಕಲ್ಯಾಣ್ ಹತ್ಯೆಗೆ ಸಂಚು ರೂಪಿಸುತ್ತಿರುವುದು ಯಾರು ಎನ್ನುವ ಪ್ರಶ್ನೆ ಕೂಡ ಅಭಿಮಾನಿಗಳನ್ನು ಕಾಡುತ್ತಿದೆ. ಇದರ ನಡುವೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಪವನ್ ಕಲ್ಯಾಣ್ ಈಗ ಹೆಚ್ಚು ಎಚ್ಚರಿಕೆಯನ್ನೂ ವಹಿಸಬೇಕಿದೆ.


Click it and Unblock the Notifications











