1300 ಕೋಟಿ ಬಜೆಟ್ ; ರಾಜಮೌಳಿ–ಮಹೇಶ್ ಬಾಬು ‘ವಾರಣಾಸಿ’ ಬಿಡುಗಡೆ ದಿನಾಂಕ ಫಿಕ್ಸ್? ಈ ದಿನದಂದು ರಿಲೀಸ್?
ರಾಜಮೌಳಿ ಚಿತ್ರ ಎಂದರೆ ಅಲ್ಲಿ ದುಬಾರಿ, ರಾಯಲ್ಲು, ವೈಭವ ಎಲ್ಲವೂ ನಿರೀಕ್ಷೆಗೂ ಮೀರಿ ಹೆಚ್ಚಾಗಿರುತ್ತೆ. ಇದು ''ಬಾಹುಬಲಿ''.. ''ಮಗಧೀರ''.. ಮತ್ತು ''ಆರ್.ಆರ್.ಆರ್'' ಚಿತ್ರಗಳ ಮೂಲಕ ಈಗಾಗಲೇ ರುಜುವಾತಾಗಿದೆ. ಈ ಸಾಲಿಗೆ ಈಗ ರಾಜಮೌಳಿ ನಿರ್ದೇಶನದಲ್ಲಿ ಸಿದ್ಧವಾಗಲಿರುವ ,ಮಹೇಶ್ ಬಾಬು ನಾಯಕನಾಗಿ ಅಭಿನಯಿಸಲಿರುವ ಮುಂದಿನ ಚಿತ್ರ ಕೂಡ ಸೇರಿಕೊಳ್ಳುವ ಎಲ್ಲ ಲಕ್ಷಣ ಕಂಡು ಬರುತ್ತಿವೆ.
ಹೌದು, ಆರಂಭಕ್ಕೂ ಮುನ್ನವೇ ನಾನಾ ಕಾರಣಗಳಿಂದ ಸುದ್ದಿಯಾಗುತ್ತಲೇ ಬಂದ ಮಹೇಶ್ ಬಾಬು ಅಭಿನಯದ ಈ 29ನೇ ಚಿತ್ರ ನೂರಲ್ಲ, ಇನ್ನೂರಲ್ಲ.. ಬರೋಬ್ಬರಿ ಒಂದು ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎನ್ನುವ ಸುದ್ದಿ ಹಿಂದೆ ಗುಲ್ಲಾಗಿತ್ತು. ಈ ಸುದ್ದಿಯನ್ನು ಕೇಳಿಯೇ ಚಿತ್ರರಂಗದ ಅನೇಕರು ಬೆಚ್ಚಿ ಬಿದ್ದಿದ್ದರು.

ಹೀಗಿರುವಾಗಲೇ ವಾರಣಾಸಿಯ ಚಿಕ್ಕ ಸ್ಯಾಂಪಲ್‌ನ ಅದ್ಧೂರಿಯಾದ ವೇದಿಕೆಯಲ್ಲಿ ತೋರಿಸಿ ಎಲ್ಲರನ್ನು ರಾಜಮೌಳಿ ಬೆಕ್ಕಸ ಬೆರಗಾಗಿಸಿದ್ದರು. ಟೀಸರ್ ಮೂಲಕ ಎಲ್ಲರನ್ನು ಅಚ್ಚರಿಗೆ ದೂಡಿದ್ದರು.
ಇನ್ನೂ ಎಲ್ಲರಿಗೆ ಗೊತ್ತಿರುವಂತೆ ರಾಜಮೌಳಿ ಗ್ಲೋಬಲ್ ಲೆವಲ್‌ನಲ್ಲಿ ಹೆಸರು ಮಾಡಿರುವ ನಿರ್ದೇಶಕ. ಹಾಲಿವುಡ್‌ನ ದೈತ್ಯ ಜೇಮ್ಸ್ ಕ್ಯಾಮರೂನ್ ಅವರೇ ಜಕ್ಕಣ್ಣ ಜಾದೂ ಕಂಡು ಅಚ್ಚರಿಗೊಂಡಿದ್ದಾರೆ. ಹೀಗಿರುವಾಗ ತಮ್ಮ ವಾರಣಾಸಿ ಚಿತ್ರವನ್ನು ರಾಜಮೌಳಿ ಜಾಗತಿಕ ಹಂತದಲ್ಲಿ ಪ್ರಚಾರ ಮಾಡದಿರಲು ಹೇಗೆ ಸಾಧ್ಯ..?
ಇದಕ್ಕೆ ಪೂರಕವಾಗಿ ಇಂದು ಪ್ಯಾರಿಸ್‌ನ ಅತ್ಯಂತ ಪ್ರಸಿದ್ಧ ಚಿತ್ರಮಂದಿರದಲ್ಲಿ ಒಂದಾದ ''ಲೆ ಗ್ರ್ಯಾಂಡ್ ರೆಕ್ಸ್''ನಲ್ಲಿ ಇಂದು (ಜನವರಿ 5) ಮೊನ್ನೆ ಭಾರತೀಯರು ಕಣ್ತುಂಬಿಕೊಂಡಿದ್ದ ಟೀಸರ್ ಸರಿಯಾಗಿ ರಾತ್ರಿ 9ಕ್ಕೆ ಪ್ರದರ್ಶನವಾಗಲಿದೆ ಎಂದು ''123 ತೆಲುಗು'' ವರದಿ ಮಾಡಿದೆ. ಯುರೋಪ್‌ನೆಲ್ಲೆಡೆ ಭಾರತದ ಚಿತ್ರಗಳನ್ನು ವಿತರಣೆ ಮಾಡುವ ''ಅಣ್ಣಾ ಫಿಲ್ಮ್ಸ್'' ಕೂಡ ಈ ಬೆಳವಣಿಗೆ ಖಚಿತ ಪಡಿಸಿದೆ ಎಂದು ಈ ವರದಿಯಲ್ಲಿ ಉಲ್ಲೇಖವಾಗಿದೆ. ಬಿಡುಗಡೆಯ ಮುನ್ನವೇ ಯುರೋಪ್‌ನ ಪ್ರೇಕ್ಷಕರಲ್ಲಿ ತಮ್ಮ ಚಿತ್ರದ ಕುತೂಹಲ ಕೆರಳಿಸಲು ರಾಜಮೌಳಿ ಈ ಹೆಜ್ಜೆ ಇಟ್ಟಿದ್ದಾರೆ ಎಂದು ಕೂಡ ವರದಿಯಾಗಿದೆ.
ಹಾಗೊಂದು ವೇಳೆ ಈ ಸುದ್ದಿ ನಿಜಾ ಆಗಿದ್ದೇ ಆದಲ್ಲಿ ಯುರೋಪಿನ ಜಗತಪ್ರಸಿದ್ದ ಚಿತ್ರಮಂದಿರದಲ್ಲಿ ಪ್ರದರ್ಶನವಾದ ಭಾರತದ ಮೊದಲ ಟೀಸರ್ ಎನ್ನುವ ಹೆಗ್ಗಳಿಕೆಗೆ ''ವಾರಣಾಸಿ'' ಪಾತ್ರವಾಗಲಿದೆ.

ಇನ್ನು ''ವಾರಣಾಸಿ'' ಬಿಡುಗಡೆ ಯಾವಾಗ..? ಎನ್ನುವ ಪ್ರಶ್ನೆ ಹಲವರಲ್ಲಿದೆ. ಈ ಪ್ರಶ್ನೆಗೆ ಚಿತ್ರತಂಡ ಇನ್ನೂ ಅಧಿಕೃತ ಉತ್ತರ ನೀಡಿಲ್ಲವಾದರೂ ಮುಂದಿನ ವರ್ಷ ಮಾರ್ಚ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎನ್ನುವ ಸುದ್ದಿ ಈ ಹಿಂದೆ ಕೇಳಿ ಬಂದಿತ್ತು. ಆದರೆ ಈಗ ಬಿಡುಗಡೆಯ ಕಾರ್ಯಕ್ರಮದಲ್ಲಿ ಬದಲಾವಣೆಯಾಗಿದೆ. ಮಾರ್ಚ್‌ನಲ್ಲಿ ಅಲ್ಲ ಬದಲಿಗೆ ಮುಂದಿನ ವರ್ಷ ಶ್ರೀರಾಮ ನವಮಿಯ ಪ್ರಯುಕ್ತ ಏಪ್ರಿಲ್ 9ರಂದು ''ವಾರಣಾಸಿ'' ಬೆಳ್ಳಿತೆರೆಯಲ್ಲಿ ಧಗಧಗಿಸಲಿದೆ ಎನ್ನುವ ಸುದ್ದಿ ಸದ್ಯ ಗುಲ್ಲಾಗಿದೆ. ''123 ತೆಲುಗು'' ಕೂಡ ಏಪ್ರಿಲ್ 9-2027ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.
ತಮ್ಮ ಈ ದೃಶ್ಯಕಾವ್ಯದ ರಾಜಮೌಳಿ ಇನ್ನೂ ಮಾಡಬೇಕಿದೆ. ಸದ್ಯ ಕೇಳಿ ಬರುತ್ತಿರುವ ಮಾತುಗಳ ಪ್ರಕಾರ ಇನ್ನು 8 ತಿಂಗಳ ಚಿತ್ರೀಕರಣ ಬಾಕಿ ಇದೆ. ಈ ವರ್ಷಾಂತ್ಯದೊಳಗೆ ಚಿತ್ರದ ಚಿತ್ರೀಕರಣ ಮುಕ್ತಾಯ ಮಾಡಿ ಪ್ರಚಾರಕ್ಕೆಂದೆ ಹಲವು ತಿಂಗಳು ರಾಜಮೌಳಿ ಮೀಸಲಿಡಲಿದ್ದಾರೆ ಎನ್ನುವ ಮಾತು ಕೂಡ ಸದ್ಯ ಹೈದರಾಬಾದ್‌ನಲ್ಲಿ ಕೇಳಿ ಬರುತ್ತಿದೆ.
ಇನ್ನುಳಿದಂತೆ ಈ ಚಿತ್ರಕ್ಕೆ ನೂರು, ಇನ್ನೂರು ಅಲ್ಲ ಬದಲಿಗೆ 1300 ಕೋಟಿ ಬಂಡವಾಳವನ್ನು ಶ್ರೀ ದುರ್ಗಾ ಆರ್ಟ್ಸ್ ಮತ್ತು ಶೋಯಿಂಗ್ ಬಿಸಿನೆಸ್ ನಿರ್ಮಾಣ ಸಂಸ್ಥೆಗಳು ಹೂಡುತ್ತಿವೆ. 1.43:1 IMAX ಫಾರ್ಮ್ಯಾಟ್‌ನಡಿ ತೆರೆಗೆ ಬರುತ್ತಿರುವ ಮೊದಲ ಚಿತ್ರ ''ವಾರಣಾಸಿ'' ಎನ್ನುವುದು ಈ ಚಿತ್ರದ ವಿಶೇಷತೆಗಳಲ್ಲೊಂದು.


Click it and Unblock the Notifications











