ಪುಷ್ಪ 2 ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದರೆ ಹುಷಾರ್, ಖಡಕ್ ಎಚ್ಚರಿಕೆ ನೀಡಿದ ಚಿತ್ರತಂಡ..!
ಪುಷ್ಪ 2 ಚಿತ್ರದ ಬಗ್ಗೆ ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಅಭಿಪ್ರಾಯ ಇದೆ. ಕೆಲವರ ಪ್ರಕಾರ ಚಿತ್ರ ಅದ್ಭುತವಾದರೆ ಇನ್ನೂ ಹಲವರ ಪ್ರಕಾರ ಪುಷ್ಪ 2 ಈ ವರ್ಷದ ಘನಘೋರ ದುರಂತ. ಹಾಗಂಥ ಈ ಪರ-ವಿರೋಧ ಚಿತ್ರದ ಮೇಲೆ ಪರಿಣಾಮ ಬೀರಿದೆ ಎಂದಲ್ಲ. ಯಾಕೆಂದರೆ ಹೊಗಳಿಕೆ-ತೆಗಳಿಕೆಯ ನಡುವೆ ರಕ್ತಚಂದನ ಕಳ್ಳ ಸಾಗಣೆಯ ಸಿಂಡಿಕೇಟ್‌ನ ಮುಖ್ಯಸ್ಥ ಪುಷ್ಪರಾಜ್‌ಗೆ ಕುಬೇರ ವರ ಸಿಕ್ಕಿದೆ. ಗಲ್ಲಾಪೆಟ್ಟಿಗೆಯಲ್ಲಿ ಝಣಝಣ ಕಾಂಚಾಣದ ಸದ್ದು ಕೇಳಿ ಬರುತ್ತಿದೆ.
ಇನ್ನೂ ಪುಷ್ಪ ಅಬ್ಬರಕ್ಕೆ ಈ ಹಿಂದಿನ ದಾಖಲೆ ಎಲ್ಲ ಧೂಳಿಪಟವಾಗಿವೆ. ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸವನ್ನು ಪುಷ್ಪ-02 ಬರೆಯುತ್ತಿದೆ. ಇದರ ನಡುವೆ ಈಗ ಪುಷ್ಪರಾಜ್ ಮತ್ತು ಸಹಚರರು ಸೋಶಿಯಲ್ ಮೀಡಿಯಾದಲ್ಲಿ ಪುಷ್ಪ 2 ಚಿತ್ರದ ಕುರಿತು ನೆಗೆಟಿವ್ ಮಾತುಗಳನ್ನಾಡುವ ಮೊದಲು ಎಚ್ಚರ ಎಂದು ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.

ಹೌದು, ಅಸಲಿಗೆ ಪುಷ್ಪರಾಜ್ ಹೆಗಲ ಮೇಲೆ ಬಂದೂಕಿಟ್ಟು ಕೆಲವರು ತಮ್ಮ ರಾಜಕೀಯದ ಬೆಳೆ ಬೇಯಿಸಿಕೊಳ್ಳುತ್ತಿದ್ದಾರೆ. ಮೆಗಾ ಫ್ಯಾಮಿಲಿಯಲ್ಲಿ ಕಾಣಿಸಿಕೊಂಡ ಭಿನ್ನಾಭಿಪ್ರಾಯವನ್ನೇ ಬಳಸಿಕೊಂಡು ಅಲ್ಲು ಅರ್ಜುನ್ ಮತ್ತು ಚಿರಂಜೀವಿ ಹಾಗೂ ಪವನ್ ಕಲ್ಯಾಣ್ ನಡುವೆ ತಂದಿಡುವ ಪ್ರಯತ್ನ ಮಾಡುತ್ತಿದ್ದಾರೆ.
ನಿಮಗೆ ಗೊತ್ತಿರಲಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷದ ಅಭ್ಯರ್ಥಿ ಎದುರು ನಿಂತಿದ್ದ ಜಗನ್ ಮೋಹನ್ ರೆಡ್ಡಿ ವೈಎಸ್‌ಆರ್‌ಸಿಪಿ ಪಕ್ಷದ ರವಿಚಂದ್ರ ಕಿಶೋರ್ ರೆಡ್ಡಿ ಪರ ಅಲ್ಲು ಅರ್ಜುನ್ ಪ್ರಚಾರ ಮಾಡಿದ್ದರು. ಇದು ಮೆಗಾ ಫ್ಯಾಮಿಲಿಯಲ್ಲಿ ಬಿರುಕಿಗೆ ಕಾರಣವಾಗಿತ್ತು. ಅಸಮಾಧಾನದ ಹೊಗೆ ಕಂಡು ಬಂದಿತ್ತು. ಇದಕ್ಕೆ ಪೂರಕವಾಗಿ ಮೊನ್ನೆ ಮೊನ್ನೆ ಪುಷ್ಪ 2 ಚಿತ್ರದ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ಸಂಪೂರ್ಣ ಮೆಗಾ ಸ್ಟಾರ್ ಕುಟುಂಬದ ಅಭಿಮಾನಿಗಳನ್ನು ಕಡೆಗಣಿಸಿ ನನ್ನ ಫ್ಯಾನ್ಸ್ ನನ್ನ ಆರ್ಮಿ ಎಂದೆಲ್ಲ ಮಾತನಾಡಿದ್ದರು. ಈ ಮೂಲಕ ಅನೇಕರನ್ನು ಕೆರಳಿಸಿದ್ದರು.

ಇದೀಗ ಇದನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ಕೆಲವರು ಅದರಲ್ಲಿಯೂ ವಿಶೇಷವಾಗಿ ಜಗನ್ ರೆಡ್ಡಿಯ ಹಿಂಬಾಲಕರು ಪುಷ್ಪ 2 ದಲ್ಲಿ ಇರದ ಯಾರೋ ಬಾಸ್ ..? ಯಾರಿಗೋ ಬಾಸ್..? ಆತನಿಗೆ, ಆತನ ಮಗನಿಗೆ, ಆತನ ತಮ್ಮನಿಗೆ ಕೂಡ ನಾನೇ ಬಾಸ್ ಎನ್ನುವ ಸಂಭಾಷಣೆಯನ್ನು ಬರೆಯುತ್ತಿದ್ದಾರೆ. ಈ ಸಂಭಾಷಣೆ ಪುಷ್ಪ 2 ಚಿತ್ರದ್ದೇ ಎನ್ನುವಂತೆ ಬಿಂಬಿಸಿ ತಮ್ಮ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ಧಾರೆ. ಈ ಮೂಲಕ ಮೆಗಾ ಕುಟುಂಬದಲ್ಲಿನ ಕಂದಕ ಹೆಚ್ಚಿಸುವ ಕೆಲಸ ಮಾಡುತ್ತಿದ್ಧಾರೆ.
ಇವರೆಲ್ಲರಿಗೆ ಈಗ ಪುಷ್ಪ 2 ಚಿತ್ರದ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀಸ್ ಎಚ್ಚರಿಕೆಯನ್ನು ನೀಡಿದೆ. ಪುಷ್ಪ 2 ಚಿತ್ರದ ಹೆಸರಿನಲ್ಲಿ ಕೆಲವರು ಕಾಲ್ಫನಿಕ ಸಂಭಾಷಣೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಚಿತ್ರದ ಕುರಿತು ನೆಗೆಟಿವ್ ಪ್ರಚಾರವನ್ನು ಕೂಡ ಮಾಡುತ್ತಿದ್ದಾರೆ. ಈ ಕೂಡಲೇ ಇದೆಲ್ಲವನ್ನು ನಿಲ್ಲಿಸದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಹೇಳಿದೆ. ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಈ ಕುರಿತು ಮಾಹಿತಿಯನ್ನು ಕೂಡ ಹಂಚಿಕೊಂಡಿದೆ.

ಇನ್ನುಳಿದಂತೆ ಬಾಕ್ಸಾಫೀಸ್‌ನಲ್ಲಿ Sacnilk.com ವರದಿ ಪ್ರಕಾರ ಚಿತ್ರ ಮೊದಲ ದಿನ ಭಾರತದಲ್ಲಿ 175 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. ಆ ಪೈಕಿ ತೆಲುಗು ವರ್ಷನ್ 85 ಕೋಟಿ, ಹಿಂದಿ ವರ್ಷನ್ 67 ಕೋಟಿ ರೂ. ಕೊಳ್ಳೆ ಹೊಡೆದಿದೆ ಎಂದು ವರದಿಯಾಗಿದೆ. ಒಂದು ಸಾವಿರ ಕೋಟಿಯ ಗಡಿಯನ್ನ ಪುಷ್ಪ 2 ಆರಾಮಾಗಿ ಪಾರು ಮಾಡುತ್ತೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.


Click it and Unblock the Notifications











