₹150 ಕೋಟಿಯಲ್ಲ ; ₹400 ಕೋಟಿಯ 'ದಿ ರಾಜಾ ಸಾಬ್'ಗೆ ಪ್ರಭಾಸ್ ಪಡೆದ ಸಂಭಾವನೆ ಎಷ್ಟು ?
ಕೇವಲ ದಕ್ಷಿಣದಲ್ಲಿ ಮಾತ್ರವಲ್ಲ ಉತ್ತರದಲ್ಲಿ ಕೂಡ ತಮ್ಮ ಚಾಪು ಮೂಡಿಸುವಲ್ಲಿ ಯಶಸ್ವಿಯಾದವರು ಪ್ರಭಾಸ್. ಸೌತ್ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಪ್ರಸಿದ್ಧಿಯನ್ನು ಪಡೆದು ದೇಶವ್ಯಾಪಿ ಅಸಂಖ್ಯಾತ ಅಗಣಿತ ಅಭಿಮಾನಿಗಳನ್ನು ಸಂಪಾದಿಸಿದ ಪ್ರಭಾಸ್ ತಾವು ಬಾಕ್ಸಾಫೀಸ್ ಕಿಂಗ್ ಕೂಡ ಹೌದು ಎನ್ನುವುದನ್ನು ಮೇಲಿಂದ ಮೇಲೆ ರುಜುವಾತು ಮಾಡುತ್ತಾನೇ ಬಂದವರು. ಹಲವು ದಾಖಲೆಗಳನ್ನು ಕೂಡ ಸೃಷ್ಟಿಸಿದವರು. ಇನ್ನೂ ''ಬಾಹುಬಲಿ'' ನಂತರ..
ಪ್ರಭಾಸ್ ಕೇವಲ ಸೌತ್ ಸ್ಟಾರ್ ಮಾತ್ರವಲ್ಲ ಬದಲಿಗೆ ನ್ಯಾಷನಲ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಕನ್ನಡದ ಸೂಪರ್ ಸ್ಟಾರ್‌ಗಳಂತೆಯೇ ಸಿನಿಮಾ ಮಾಡಿದರೆ ಅದು ಕೇವಲ ಪ್ಯಾನ್ ಇಂಡಿಯಾಗೆ ಮಾತ್ರ ಎಂದುಕೊಂಡು ಚಿತ್ರಗಳನ್ನು ಒಪ್ಪಿಕೊಳ್ತಿದ್ದಾರೆ. ಇಂಥಾ ಪ್ರಭಾಸ್ ಸಾಮಾನ್ಯವಾಗಿ ಒಂದು ಚಿತ್ರಕ್ಕೆ ₹150 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನುವ ಮಾತು ಇದೆ.

ಈ ಮಾತು ನಿಜಾನಾ..? ಸುಳ್ಳಾ..? ಖುದ್ದು ಪ್ರಭಾಸ್ ಅವರೇ ಲೆಕ್ಕ ಕೊಡಬೇಕಾದರು ಹಲವು ಮಾಧ್ಯಮಗಳಲ್ಲಿ ಚಿತ್ರವೊಂದಕ್ಕೆ ಪ್ರಭಾಸ್ ₹150 ಕೋಟಿ ಸಂಭಾವನೆ ಪಡೆಯುತ್ತಾರೆ ಎಂದೇ ವರದಿಯಾಗಿದೆ. ಹೀಗಾಗಿ ''ದಿ ರಾಜಾ ಸಾಬ್'' ಚಿತ್ರಕ್ಕೂ ಪ್ರಭಾಸ್ 150ಕೋಟಿಯನ್ನೇ ಸಂಭಾವನೆ ಪಡೆದಿರಬಹುದು ಎಂದು ಇವರ ಅಭಿಮಾನಿಗಳು ಅಂದುಕೊಂಡಿದ್ದರು.
ಆದರೆ.. ಈ ಬಾರಿ ಪ್ರಭಾಸ್‌ಗೆ ನಿರ್ಮಾಪಕರ ಕಷ್ಟದ ಅರಿವು ಆದಂತೆ ಇದೆ. ಇದಕ್ಕೆ ಪೂರಕವಾಗಿ '' ದಿ ರಾಜಾ ಸಾಬ್'' ಚಿತ್ರಕ್ಕಾಗಿ ಪ್ರಭಾಸ್ 33% ಸಂಭಾವನೆಯನ್ನು ಇಳಿಸಿಕೊಂಡಿದ್ದರು ಎನ್ನುವ ಮಾತು ಸದ್ಯ ಹೈದರಾಬಾದ್‌ನಲ್ಲಿ ಕೇಳಿ ಬರುತ್ತಿದೆ. ಮಾಧ್ಯಮಗಳಲ್ಲಿ ಕೂಡ ಪ್ರಭಾಸ್ ಸಂಭಾವನೆ ವಿಚಾರ ಚರ್ಚೆಗೀಡಾಗುತ್ತಿದೆ.
ಹೌದು, ಮೊನ್ನೆ (ಜನವರಿ 9) ಬಿಡುಗಡೆಯಾದ ''ದಿ ರಾಜಾ ಸಾಬ್'' ಚಿತ್ರಕ್ಕೆ ಪ್ರಭಾಸ್ ₹150 ಕೋಟಿ ಅಲ್ಲ ಬದಲಿಗೆ ₹100 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ''ನ್ಯೂಸ್ 18'' ವರದಿ ಮಾಡಿದೆ. ನಿರ್ಮಾಪಕರ ಹಿತದೃಷ್ಟಿಯಿಂದ ಮತ್ತು ಚಿತ್ರದ ಅದ್ದೂರಿತನಕ್ಕೆ ತಮ್ಮಿಂದ ಧಕ್ಕೆಯಾಗದಿರಲಿ ಎಂದು ಪ್ರಭಾಸ್ ಈ ನಿರ್ಧಾರವನ್ನು ಮಾಡಿದ್ದರು ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಇನ್ನು ಪ್ರಭಾಸ್ ಅವರನ್ನು ಹೊರತು ಪಡಿಸಿದರೆ ಅತೀ ಹೆಚ್ಚಿನ ಹಣ ಚಿತ್ರದ ನಿರ್ದೇಶಕ ಮಾರುತಿ ಅವರ ಪಾಲಾಗಿದೆ. ಚಿತ್ರಕ್ಕೆ ಹೆಚ್ಚು ಕಡಿಮೆ ಮೂರು ವರ್ಷ ಬೆವರು ಸುರಿಸಿರುವ ಮಾರುತಿ ಒಂದೆರಡು ಕೋಟಿಯಲ್ಲ ಬದಲಿಗೆ ₹18 ಕೋಟಿ ಸಂಭಾವನೆಯನ್ನು ಪಡೆದಿದ್ದಾರೆ. ಖುದ್ದು ''ಗ್ರೇಟ್ ಆಂಧ್ರ''ಗೆ ನೀಡಿದ ಸಂದರ್ಶನದಲ್ಲಿ ಮಾರುತಿ ಈ ಮಾತನ್ನು ಒಪ್ಪಿಕೊಂಡಿದ್ದಾರೆ ಕೂಡ.

ಚಿತ್ರದ ನಾಯಕಿಯರ ವಿಚಾರಕ್ಕೆ ಬಂದರೆ ಈ ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ. ಆ ಪೈಕಿ ಮಾಳವಿಕಾ ಮೋಹನನ್ ಅವರಿಗೆ ₹2 ಕೋಟಿ ಸಂಭಾವನೆ ನೀಡಲಾಗಿದ್ದರೆ, ನಿಧಿ ಅಗರ್‌ವಾಲ್ ಅವರಿಗೆ ₹1.5 ಕೋಟಿ ಮತ್ತು ರಿದ್ದಿ ಕುಮಾರ್ ಅವರಿಗೆ ₹3 ಕೋಟಿ ಸಂಭಾವನೆ ನೀಡಲಾಗಿದೆ ಎಂದು ''ಸಿಯಾಸತ್.ಕಾಮ್'' ವರದಿ ಮಾಡಿದೆ.
ಇನ್ನು ''ದಿ ರಾಜಾ ಸಾಬ್''ನಲ್ಲಿ ಬಾಲಿವುಡ್‌ನ ಸ್ಟಾರ್ ಕೂಡ ಇದ್ದಾರೆ. ಕನಕರಾಜು ಪಾತ್ರವನ್ನು ನಿರ್ವಹಿಸಿರುವ ಸಂಜಯ್ ದತ್ ಅವರಿಗೆ ₹5 ಕೋಟಿ ಸಂಭಾವನೆ ನೀಡಲಾಗಿದ್ದರೆ ಹಿರಿಯ ನಟ ಬೊಮನ್ ಇರಾನಿ ಅವರಿಗೆ ₹1 ಕೋಟಿ ಪೇಚೆಕ್ ನೀಡಲಾಗಿದೆ.
ಅಂದ್ಹಾಗೇ ''ದಿ ರಾಜಾ ಸಾಬ್'' ಚಿತ್ರವನ್ನು 41,256 ಚದರ ಅಡಿಯಲ್ಲಿ ಸೆಟ್ ನಿರ್ಮಾಣ ಮಾಡಲಾಗಿತ್ತು. 1200ಕ್ಕೂ ಅಧಿಕ ಕೆಲಸಗಾರರು ನಾಲ್ಕು ತಿಂಗಳಿಗೂ ಹೆಚ್ಚು ಶ್ರಮ ಹಾಕಿ ಈ ಸೆಟ್ ನಿರ್ಮಾಣ ಮಾಡಿದ್ದರು. ಇನ್ನು ವಿಎಫ್‌ಎಕ್ಸ್ ಕೆಲಸಗಳಿಗಾಗಿಯೇ ಹೆಚ್ಚು ಕಡಿಮೆ ಒಂದು ವರ್ಷ ಚಿತ್ರತಂಡ ಮೀಸಲಿಟ್ಟಿತ್ತು. ನಿರ್ಮಾಣದ ಈ ಖರ್ಚು ವೆಚ್ಚದ ಜೊತೆ ತಾರೆಯರ ಈ ಸಂಭಾವನೆ ಸೇರಿ ಚಿತ್ರದ ಬಜೆಟ್ ₹400 ಕೋಟಿಯ ಗಡಿಯನ್ನು ದಾಟಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.


Click it and Unblock the Notifications











