ಬಿಡುಗಡೆ ಮುನ್ನವೇ ಜಾಕ್‌ಪಾಟ್ ; ಹಾಕಿದ ಬಂಡವಾಳದ ಮೇಲೆ ಆಗಲೇ ಲಾಭ ಕಂಡ 'ಮಾ ಇಂಟಿ ಬಂಗಾರಂ' , ಸಮಂತಾ ಮೊಗದಲ್ಲಿ ಸಂಭ್ರಮ
ಪುರುಷ ಪ್ರಧಾನ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಬರುವುದು ತುಂಬಾನೇ ಕಡಿಮೆ. ಇಲ್ಲಿ ನಾಯಕಿಯರಲ್ಲಿ ಎಷ್ಟೇ ಪ್ರತಿಭೆ ಇದ್ದರೂ ಕೂಡ ಅನಾದಿಕಾಲದಿಂದ ಹೀರೋಯಿಸಂ ವಿಜೃಂಭಿಸುತ್ತಲೇ ಬಂದಿದೆ. ನಾಯಕನ ನಂತರವಷ್ಟೇ ನಾಯಕಿ ಎನ್ನುವ ಮನೋಭಾವ ಹಲವರಲ್ಲಿದೆ. ಇದು ಮಾತ್ರವಲ್ಲದೇ ನಾಯಕಿಯರು ಅಂದರೆ ಕೇವಲ ಮರ ಸುತ್ತಲು, ಚಿತ್ರದ ಗ್ಲ್ಯಾಮರ್ ಹೆಚ್ಚಿಸಲು ಅಷ್ಟೇ ಲಾಯಕ್ಕು ಮನಃಸ್ಥಿತಿ ಕೂಡ ಚಿತ್ರರಂಗದಲ್ಲಿ ಹಲವರಲ್ಲಿದೆ.
ಆದರೆ .. ಈ ಧೋರಣೆಯನ್ನು ಬದಲಿಸುವ ಪ್ರಯತ್ನವನ್ನು ಆಗಾಗ ಹಲವರು ನಾಯಕಿಯರು ಮಾಡುತ್ತಾರೆ. ಪುರುಷ ಪಾರುಪಥ್ಯದ ಕುರಿತು ಕಿಡಿ ಕಾರುತ್ತಾರೆ. ಮತ್ತೂ ಕೆಲ ಒಮ್ಮೆ ಅವಕಾಶ ಸಿಕ್ಕಾಗ ಒಳ್ಳೆಯ ಕಥೆ ಮತ್ತು ತಂಡ ಇದ್ದರೆ ಮಹಿಳಾ ಪ್ರಧಾನ ಚಿತ್ರಗಳು ಕೂಡ ಬಾಕ್ಸಾಫೀಸ್‌ನಲ್ಲಿ ವಂಡರ್ ಸೃಷ್ಟಿಸಬಹುದು ಎನ್ನುವುದನ್ನು ಸಾಬೀತು ಮಾಡುತ್ತಾರೆ. ಉದಾಹರಣೆಗೆ ಸಮಂತಾ ಮತ್ತು ಅವರ ''ಮಾ ಇಂಟಿ ಬಂಗಾರಂ''.

ಹೌದು, ಹೈದರಾಬಾದ್‌ಗಿಂತ ಇತ್ತೀಚೆಗೆ ಮುಂಬೈನಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುವ ಸಮಂತಾ, ಬಹಳ ವರ್ಷಗಳ ನಂತರ ನಾಯಕಿಯಾಗಿ ಮತ್ತೆ ತೆಲುಗು ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಬೇರೆ ಯಾರು ಹಣ ಹೂಡಲು ಮುಂದಾಗದ ಕಾರಣ.. ಅವಕಾಶವನ್ನು ನೀಡದ ಕಾರಣ.. ತಾವೇ ಖುದ್ದು ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಹೀಗೆ ಇವರು ಬಂಡವಾಳ ಹಾಕಿ ಅಭಿನಯಿಸಿರುವ ಚಿತ್ರ ''ಮಾ ಇಂಟಿ ಬಂಗಾರಂ''. ಇದೇ ಜೂನ್ 19ರಂದು ಈ ಚಿತ್ರ ತೆರೆಗೆ ಬರುತ್ತಿದೆ.
ವಿಶೇಷ ಅಂದರೆ ಚಿತ್ರದ ಬಿಡುಗಡೆಗೆ ಮುನ್ನವೇ ಹಾಕಿದ ಬಂಡವಾಳ ನಿರ್ಮಾಪಕರಿಗೆ ಮರಳಿ ಬಂದಿದೆ. ಇಷ್ಟೇ ಅಲ್ಲ 7 ಕೋಟಿ ಲಾಭವೂ ಆಗಿದೆ. ಖುದ್ದು ಚಿತ್ರದ ಸಹ ನಿರ್ಮಾಪಕರೇ ಈ ಮಾತನ್ನು ಹೇಳಿದ್ಧಾರೆ. ಸೇಫ್ ಝೋನ್‌ನಲ್ಲಿರುವುದಕ್ಕೆ ತುಂಬಾನೇ ಸಂತಸವಾಗುತ್ತಿದೆ ಎಂದಿದ್ಧಾರೆ.
''ಹಿಂದೂಸ್ತಾನ್ ಟೈಮ್ಸ್'' ಈ ಕುರಿತು ವರದಿಯನ್ನು ಮಾಡಿದ್ದು ಆ ಪ್ರಕಾರ, ವ್ಯಾಪಾರ-ವ್ಯವಹಾರದ ಕುರಿತು ಮಾತನಾಡಿರುವ ಚಿತ್ರದ ಸಹ ನಿರ್ಮಾಪಕ ಹಿಮಾಂಕ್ ದುವ್ವುರು, ನಮ್ಮ ಚಿತ್ರ ಬಿಡುಗಡೆಯಾಗುವ ಮುನ್ನವೇ ನಾವು ಹೂಡಿದ ಬಂಡವಾಳ ಮರಳಿ ನಮ್ಮ ಕೈಸೇರಿದೆ ಎಂದಿದ್ದಾರೆ.
ನಮ್ಮ ಚಿತ್ರದ ಮೇಲೆ ವಿತರಕರನ್ನು ಒಳಗೊಂಡಂತೆ ಇಡೀ ಚಿತ್ರಸಂತೆ ಇಟ್ಟಿರುವ ನಂಬಿಕೆಗೆ ಇದೇ ಸಾಕ್ಷಿ ಎಂದು ಹೇಳಿರುವ ಹಿಮಾಂಕ್, ಮಹಿಳಾ ಪ್ರಧಾನ ತೆಲುಗು ಸಿನಿಮಾಗೆ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಹಾಗೂ ವಿವಿಧ ಪ್ರಾಂತ್ಯಗಳ ವಿತರಕರಿಂದ ಇಷ್ಟೊಂದು ಅದ್ಭುತ ಪ್ರತಿಕ್ರಿಯೆ ಸಿಕ್ಕಿರುವುದು ನಿಜಕ್ಕೂ ಹೆಮ್ಮೆಯ ವಿಚಾರ ಎಂದಿದ್ದಾರೆ.

ಬಿಡುಗಡೆಯ ಮುನ್ನವೇ ಲಾಭದ ಹಾದಿ ಹಿಡಿಯಲು, ಆರಂಭದಲ್ಲಿಯೇ ನಾವು ಮಾಡಿಕೊಂಡ ಒಪ್ಪಂದ ಕಾರಣ ಎಂದು ಹೇಳಿರುವ ಹಿಮಾಂಕ್, ಚಿತ್ರದ ಹಕ್ಕುಗಳನ್ನು ಮಾರಲು ಆರಂಭದಲ್ಲೇ ಪ್ಯಾಕೇಜ್ ಮಾಡಲಾಗಿತ್ತು, ಖರೀದಿದಾರರನ್ನು ಮುಂಚಿತವಾಗಿಯೇ ಸಂಪರ್ಕಿಸಲಾಗಿತ್ತು ಎಂದು ಹೇಳಿದ್ಧಾರೆ. ನಮ್ಮ ಸಿನಿಮಾ ಮೇಲಿರುವ ಈ ನಂಬಿಕೆಯನ್ನು ನಾವು ಉಳಿಸಿಕೊಳ್ಳುತ್ತೇವೆ ಎಂಬ ಭರವಸೆ ನನಗೆ ಇದೆ ಎಂದಿದ್ಧಾರೆ.
ಚಿತ್ರದ ಬಜೆಟ್ ಮತ್ತು ಗಳಿಕೆಯ ವಿವರ
''ಮಾ ಇಂಟಿ ಬಂಗಾರಂ'' ಚಿತ್ರಕ್ಕೆ ₹28 ಕೋಟಿಯನ್ನು ಖರ್ಚು ಮಾಡಲಾಗಿದೆ ಎನ್ನುವ ಮಾತು ಸದ್ಯ ತೆಲುಗು ಚಿತ್ರರಂಗದಲ್ಲಿ ಕೇಳಿ ಬರುತ್ತಿದೆ. ಇನ್ನು ಡಿಜಿಟಲ್, ಸ್ಯಾಟ್‌ಲೈಟ್ ಮತ್ತು ಥಿಯೇಟ್ರಿಕಲ್ ಹಕ್ಕುಗಳಿಂದ ಚಿತ್ರ ₹35 ಕೋಟಿಯನ್ನು ದೋಚಿದ್ದು ₹7 ಕೋಟಿ ಲಾಭ ನಿರ್ಮಾಪಕರಿಗೆ ಆಗಿದೆ ''ತೆಲುಗು 360'' ವರದಿ ಮಾಡಿದೆ.
''ಮಾ ಇಂಟಿ ಬಂಗಾರಂ''ನಲ್ಲಿ ಕನ್ನಡ ಕಲಾವಿದರು
ಅಂದ್ಹಾಗೇ ''ಮಾ ಇಂಟಿ ಬಂಗಾರಂ'' ಚಿತ್ರಕ್ಕೆ ಈ ಹಿಂದೆ ಸಮಂತಾಗೆ ''ಓಹ್ ಬೇಬಿ'' ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕಿ ನಂದಿನಿ ರೆಡ್ಡಿ ನಿರ್ದೇಶನ ಇದೆ. ''ಕಾಂತಾರ''ದ ಕುಲಶೇಖರ ಗುಲ್ಶನ್ ದೇವಯ್ಯ ಕೂಡ ಈ ಚಿತ್ರದಲ್ಲಿದ್ಧಾರೆ. ಇಷ್ಟೇ ಅಲ್ಲ ನಮ್ಮ ಕನ್ನಡದ ದಿಗಂತ್ ಕೂಡ ''ಮಾ ಇಂಟಿ ಬಂಗಾರಂ''ನಲ್ಲಿ ಪ್ರಮುಖವಾದ ಪಾತ್ರವನ್ನು ನಿರ್ವಹಿಸಿದ್ಧಾರೆ.
ಇನ್ನು ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿರುವುದು ವಿಶೇಷ. ಸದ್ಯ ''ಮಾ ಇಂಟಿ ಬಂಗಾರಂ'' ಇದೇ ಜೂನ್ 19ರಂದು ತೆರೆಗೆ ಬರಲಿದ್ದು ಬಾಕ್ಸಾಫೀಸ್‌ನಲ್ಲಿ ಹೇಗೆಲ್ಲಾ ಸದ್ದು ಮಾಡುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications