ಎನ್‌ಟಿಆರ್ ಎಂಟ್ರಿ ಸೀನ್‌ಗಾಗಿ ಹೆಬ್ಬುಲಿಯಾದ ರಾಜಮೌಳಿ!: ವಿಡಿಯೋ ವೈರಲ್
ಎಸ್. ಎಸ್ ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇಯಿದೆ. 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿತ್ತು. ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಪಾತ್ರಗಳನ್ನು ಬಳಸಿಕೊಂಡು ಕಾಲ್ಪನಿಕ ಕಥೆ ಹೇಳಿ ನಿರ್ದೇಶಕ ಮೌಳಿ ಗೆದ್ದಿದ್ದರು. ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ರಾಮ್‌ಚರಣ್ ತೇಜಾ ಹಾಗೂ ಕೊಮುರಂ ಭೀಮ್ ಪಾತ್ರದಲ್ಲಿ ಜ್ಯೂ. ಎನ್‌ಟಿಆರ್ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದರು. ಚಿತ್ರದ ಎಲಿವೇಷನ್ ಸೀನ್ಸ್ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸಿತ್ತು. ಅದರಲ್ಲೂ ಭೀಮ್ ಎಂಟ್ರಿ ಸೀನ್ ಎಲ್ಲರ ಹುಬ್ಬೇರಿಸಿತ್ತು.
'RRR' ಚಿತ್ರದಲ್ಲಿ ಜ್ಯೂ. ಎನ್‌ಟಿಆರ್‌ಗೆ ಹೆಬ್ಬುಲಿ ಸನ್ನಿವೇಶ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಟ್ಟಿತ್ತು. ತೋಳ ಹಿಡಿಯಲು ಹೋಗಿ ಹೆಬ್ಬುಲಿ ಹಿಂದೆ ಬೀಳುವುದು ತಪ್ಪಿಕೊಂಡು ಓಡುವ ಭೀಮ್, ಅದೃಷ್ಟವಶಾತ್ ತಪ್ಪಿಸಿಕೊಳ್ಳುವ ಸೀನ್ ಸಖತ್ ಆಗಿತ್ತು. ಹೀಗೆ ತಪ್ಪಿಸಿಕೊಳ್ಳುವ ವೇಳೆ ಹೆಬ್ಬುಲಿ ಹಾಗೂ ಭೀಮ್ ಮುಖಾಮುಖಿ ಸಖತ್ ರೋಚಕವಾಗಿತ್ತು. ಹುಲಿಯನ್ನು ಸಿಜಿಯಲ್ಲಿ ಮಾಡಿದ್ದಾರೆ ಅನ್ನುವುದು ಟೀಸರ್ ನೋಡಿದಾಗಲೇ ಗೊತ್ತಾಗಿತ್ತು. ಆದರೆ ಅದರ ಡಿಟೈಲಿಂಗ್ ಬಹಳ ಪರ್ಫೆಕ್ಟ್ ಆಗಿತ್ತು. ಟಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ರಾಜಮೌಳಿ ಆ ಸನ್ನಿವೇಶವನ್ನು ಸೆರೆಹಿಡಿಯಲು ಹಾಗೂ ಸಿಜಿ ಮಾಡಿಸಲು ಪಟ್ಟಿರುವ ಶ್ರಮ ಅಷ್ಟಿಸ್ಟಲ್ಲ.
ಇಡೀ ಚಿತ್ರದ ಗ್ರಾಫಿಕ್ಸ್ ಜವಾಬ್ದಾರಿಯನ್ನು ಶ್ರೀನಿವಾಸ ಮೋಹನ್ ವಹಿಸಿಕೊಂಡಿದ್ದರು. ಶ್ರೀನಿವಾಸ್ ಚಿತ್ರದ ಒಂದೊಂದೇ ಮೇಕಿಂಗ್ ವಿಡಿಯೋ ರಿಲೀಸ್ ಮಾಡ್ತಾ ಬರ್ತಿದ್ದಾರೆ. ಸದ್ಯ ಎನ್‌ಟಿಆರ್ ವರ್ಸಸ್ ಹೆಬ್ಬುಲಿಯ ರೋಚಕ ದೃಶ್ಯದ ಬ್ರೇಕ್‌ಡೌನ್ ವಿಡಿಯೋ ಸಖತ್ ವೈರಲ್ ಆಗಿದೆ. ಆ ದೃಶ್ಯ ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡುವಂತೆ ಮಾಡಲು ಮೌಳಿ ಅಂಡ್ ಟೀಂ ಏನೆಲ್ಲಾ ಸರ್ಕಸ್ ಮಾಡಿದೆ, ಎಷ್ಟೆಲ್ಲಾ ಕಸರತ್ತು ನಡೆಸಿದೆ ಅನ್ನುವುದನ್ನು ವಿಡಿಯೋದಲ್ಲಿ ನೋಡಬಹುದು. ಬಲೆಯಿಂದ ಹೊರ ಬರಲು ಹಾಗೂ ಭೀಮ್ ಮೇಲೆ ದಾಳಿ ಮಾಡಲು ಹುಲಿ ಹೇಗೆ ಅತ್ತ ಇತ್ತ ಹೆಣಗಾಡುತ್ತದೆ ಅನ್ನುವುದನ್ನು ಗ್ರಾಫಿಕ್ಸ್ ತಂಡಕ್ಕೆ ವಿವರಿಸಿದ್ದಾರೆ. ಅದಕ್ಕಾಗಿ ತಾವೇ ಹುಲಿಯ ಜಾಗದಲ್ಲಿ ನಿಂತು ಅದು ತಪ್ಪಿಸಿಕೊಳ್ಳಲು ಹೇಗೆಲ್ಲಾ ಪ್ರಯತ್ನ ಪಡುತ್ತದೆ ಅನ್ನುವುದನ್ನು ಮಾಡಿ ತೋರಿಸಿದ್ದಾರೆ.

ಸದ್ಯ ಮೇಕಿಂಗ್ ವಿಡಿಯೋ ನೋಡಿದವರು ರಾಜಮೌಳಿ ವಿಷನ್ ಹಾಗೂ ಮೇಕಿಂಗ್ ನೋಡಿ ಬೆರಗಾಗಿದ್ದಾರೆ. ಅವರ ಪ್ರತಿಭೆಗೆ ಬಹುಪರಾಕ್ ಹೇಳುತ್ತಿದ್ದಾರೆ. ಜಕ್ಕಣ್ಣ ಇಷ್ಟೆಲ್ಲಾ ಶ್ರಮವಹಿಸಿ ಸಿನಿಮಾ ಮಾಡುವುದಕ್ಕೆ ಅವರು ಸೋಲಿಲ್ಲದ ಸರದಾರ ಅನ್ನಿಸಿಕೊಂಡಿರೋದು ಎಂದು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಡಿವಿವಿ ದಾನಯ್ಯ ಬ್ಯಾನರ್‌ನಲ್ಲಿ ನಿರ್ಮಾಣವಾಗಿದ್ದ 'RRR' ಮಾರ್ಚ್ 25ಕ್ಕೆ ವಿಶ್ವದಾದ್ಯಂತ ತೆರೆಗಪ್ಪಳಿಸಿತ್ತು. ಅಜಯ್ ದೇವಗನ್, ಆಲಿಯಾ ಭಟ್ ಸಹ ಚಿತ್ರದ ತಾರಾಗಣದಲ್ಲಿದ್ದರು. ಸಿನಿಮಾ ಓಟಿಟಿಗೆ ಬಂದ ಮೇಲೂ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಹಾಲಿವುಡ್ ಪ್ರೇಕ್ಷಕರು ಕೂಡ ಮೌಳಿ ಪ್ರತಿಭೆಯನ್ನು ಕೊಂಡಾಡಿದ್ದರು.


Click it and Unblock the Notifications











