'ಸಲಾರ್' 'ಉಗ್ರಂ' ರಿಮೇಕ್? ಟೀಸರ್‌ನ ಈ 2 ದೃಶ್ಯಗಳಿಂದ ಮತ್ತಷ್ಟು ಹೆಚ್ಚಾಯ್ತು ಅನುಮಾನ!
ಇಂದು ( ಜುಲೈ 6 ) ಬೆಳಗ್ಗೆ 5.12ಕ್ಕೆ ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಶನ್‌ನ ಬಹು ನಿರೀಕ್ಷಿತ ಸಲಾರ್ ಚಿತ್ರದ ಟೀಸರ್ ಬಿಡುಗಡೆಗೊಂಡಿದೆ. ಕೆಜಿಎಫ್ ಚಿತ್ರ ಸರಣಿ ಮೂಲಕ ದೇಶದಾದ್ಯಂತ ಹೆಸರು ಮಾಡಿದ ಹೊಂಬಾಳೆ ಫಿಲ್ಮ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಚಿತ್ರ ಸೆಪ್ಟೆಂಬರ್ 28ರಂದು ಬಿಡುಗಡೆಗೊಳ್ಳಲಿದೆ.
ಹೀಗೆ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ಸಲಾರ್ ಚಿತ್ರತಂಡ ಟೀಸರ್ ಬಿಡುಗಡೆ ಮಾಡುವ ಮೂಲಕ ಸಿನಿ ರಸಿಕರಲ್ಲಿ ಚಿತ್ರದ ಮೇಲಿರುವ ನಿರೀಕ್ಷೆಯನ್ನು ಹೆಚ್ಚಿಸುವ ಕೆಲಸಕ್ಕೆ ಕೈ ಹಾಕಿದೆ. ಬೆಳ್ಳಂಬೆಳಗ್ಗೆ ಬಿಡುಗಡೆಯಾಗಲಿರುವ ಟೀಸರ್ ವೀಕ್ಷಿಸಲು ಪ್ರಭಾಸ್ ಅಭಿಮಾನಿಗಳು ರಾತ್ರಿಯಿಡೀ ನಿದ್ರೆ ಮಾಡದೇ ಕಾಯುತ್ತಾ ಕುಳಿತಿದ್ದರು.

ಕೆಲವರು ಸಲಾರ್ ಚಿತ್ರಕ್ಕೂ ಹಾಗೂ ಕೆಜಿಎಫ್ ಚಿತ್ರ ಸರಣಿಗೂ ಲಿಂಕ್ ಇದೆಯಾ, ರಾಕಿ ಭಾಯ್ ಹಾಗೂ ಸಲಾರ್ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂದು ಊಹಿಸುತ್ತಿದ್ದರೆ, ಮತ್ತೊಂದೆಡೆ ಈ ಹಿಂದೆ ಹರಿದಾಡಿದ್ದ ಸುದ್ದಿಗಳ ಪ್ರಕಾರ ಸಲಾರ್ ಚಿತ್ರವೇನಾದ್ರೂ ಉಗ್ರಂ ಸಿನಿಮಾದ ರಿಮೇಕ್ ಆಗಿರಬಹುದಾ ಎಂದು ಕಾಯುತ್ತಾ ಕುಳಿತಿದ್ದರು.
ಹೀಗೆ ಪಾಸಿಟಿವ್ ಹಾಗೂ ನೆಗೆಟಿವ್ ಅಂಶಗಳನ್ನು ತಲೆಯಲ್ಲಿ ಇಟ್ಟುಕೊಂಡು ಟೀಸರ್ ವೀಕ್ಷಿಸಿದ ಸಿನಿ ರಸಿಕರು ತಮ್ಮ ಊಹೆ ಸರಿ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೆಲವೆಡೆ ಸಲಾರ್ ಟೀಸರ್ ಈ ಚಿತ್ರಕ್ಕೂ ಕೆಜಿಎಫ್ ಚಿತ್ರಕ್ಕೂ ನಂಟಿದೆ ಎಂಬಂತೆ ಸುಳಿವು ನೀಡಿದ್ರೆ, ಇನ್ನೂ ಕೆಲವೆಡೆ ಸಲಾರ್ ಟೀಸರ್‌ಗೂ ಉಗ್ರಂ ಸಿನಿಮಾಗೂ ಲಿಂಕ್ ಇದೆ, ಸಲಾರ್ ಉಗ್ರಂನ ರಿಮೇಕ್ ಇರಬಹುದು ಎನ್ನುವ ಅನುಮಾನವನ್ನು ಮೂಡಿಸಿವೆ.
ಹೌದು, ಟೀಸರ್‌ನಲ್ಲಿನ ಎರಡು ದೃಶ್ಯಗಳಿಂದಾಗಿ ಸಲಾರ್ ಚಿತ್ರ ಉಗ್ರಂನ ರಿಮೇಕ್ ಇರಬಹುದು ಎಂಬ ಅನುಮಾನವನ್ನು ಹುಟ್ಟುಹಾಕಿವೆ. ಪ್ರಭಾಸ್ ಎರಡು ಗನ್ ನಡೆದು ಬರುತ್ತಿರುವ ದೃಶ್ಯ ಉಗ್ರಂ ಚಿತ್ರದಲ್ಲಿಯೂ ಇದೆ. ಉಗ್ರಂ ಚಿತ್ರದಲ್ಲಿ ಅಗಸ್ತ್ಯ ಹೇಗೆ ತನ್ನ ಕೈನಲ್ಲಿನ ಟ್ಯಾಟ್ಯೂವನ್ನು ಬಟ್ಟೆಯಿಂದ ಮರೆ ಮಾಚಿ ಗನ್ ಹಿಡಿದು ಹೋರಾಡುತ್ತಾನೋ ಅದೇ ರೀತಿ ಇಲ್ಲಿ ಸಲಾರ್ ಕೈಗೆ ಬಟ್ಟೆ ಕಟ್ಟಿಕೊಂಡು ಟ್ಯಾಟ್ಯೂವನ್ನು ಮರೆಮಾಚಿದ್ದಾನೆ.
ಇದು ಅನುಮಾನ ಹುಟ್ಟುಹಾಕಿದ ಮೊದಲ ದೃಶ್ಯವಾದರೆ ಮತ್ತೊಂದು ಸಲಾರ್ ಟೀಸರ್‌ನಲ್ಲಿ ನಾಯಕ ನಟನ ಕೈನಲ್ಲಿ ಟ್ಯಾಟ್ಯೂ ಇರುವುದು. ಇಷ್ಟು ದಿನಗಳ ಕಾಲ ಪ್ರಭಾಸ್ ಲುಕ್‌ನಲ್ಲಿ ಕೈಗೆ ಬಟ್ಟೆ ಕಟ್ಟಿದ್ದನ್ನು ಮಾತ್ರ ಕಂಡಿದ್ದೆವು. ಆದರೆ ಟೀಸರ್‌ನ ಒಂದು ದೃಶ್ಯದಲ್ಲಿ ಪ್ರಭಾಸ್ ಕೈಗೆ ಬಟ್ಟೆ ಕಟ್ಟಿಲ್ಲ. ಈ ದೃಶ್ಯದಲ್ಲಿ ಪ್ರಭಾಸ್ ಎಡಗೈ ಗಮನಿದರೆ ಅಲ್ಲಿ ಉಗ್ರಂ ಸಿನಿಮಾದಲ್ಲಿ ಅಗಸ್ತ್ಯ ತನ್ನ ಕೈಗೆ ಹಾಕಿಸಿದ್ದ ಟ್ಯಾಟ್ಯೂವನ್ನೇ ಹೋಲುವ ಟ್ಯಾಟ್ಯೂ ಇದೆ.
ಈ ಎರಡೂ ಅಂಶಗಳಿಂದ ಸಲಾರ್ ಚಿತ್ರ ಉಗ್ರಂ ಚಿತ್ರದ ರಿಮೇಕ್ ಎನ್ನಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಸಹ ಈ ಕುರಿತು ಟ್ವೀಟ್‌ಗಳು ಹರಿದಾಡುತ್ತಿದ್ದು, ಕನ್ನಡ ಸಿನಿ ರಸಿಕರು ಇದು ಉಗ್ರಂ ರಿಮೇಕ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಕೆಜಿಎಫ್ ಜತೆಗೂ ಲಿಂಕ್: ಕೆಜಿಎಫ್ ಚಾಪ್ಟರ್ 2ನ ಕ್ಲೈಮ್ಯಾಕ್ಸ್ ಬಳಿಕ ಬರುವ ಪೋಸ್ಟ್ ಕ್ರೆಡಿಟ್ ಸೀನ್‌ನಲ್ಲಿ ಗಣಿ ಪ್ರದೇಶದಲ್ಲಿ 516 ಬಿಗ್ ಬ್ಯಾರೆಲ್ ನಿಲ್ಲಿಸಿರುವ ದೃಶ್ಯವಿದೆ. ಅದೇ ಸಂಖ್ಯೆಯ ಬಿಗ್ ಬ್ಯಾರೆಲ್ ಇರುವ ಇದೀಗ ಸಲಾರ್ ಟೀಸರ್‌ನಲ್ಲಿಯೂ ಸಹ ಇದೆ. ಈ ದೃಶ್ಯವನ್ನು ಹೋಲಿಸುತ್ತಿರುವ ಸಿನಿ ರಸಿಕರು ಎರಡೂ ಚಿತ್ರಗಳನ್ನೂ ಹೋಲಿಸುತ್ತಿದ್ದಾರೆ. ಈ ಮೂಲಕ ಪ್ರಶಾಂತ್ ನೀಲ್ ತಮ್ಮದೇ ಆದ ಸಿನಿಮ್ಯಾಟಿಕ್ ಯೂನಿವರ್ಸ್ ತಯಾರಿಸುತ್ತಿದ್ದು ಒಂದೇ ಚಿತ್ರದಲ್ಲಿ ಪ್ರಭಾಸ್ ಹಾಗೂ ಯಶ್ ಇಬ್ಬರನ್ನೂ ನೋಡಬಹುದು ಎಂದು ಊಹಿಸಿ ಸಂತಸ ವ್ಯಕ್ತಪಡಿಸಿದ್ದಾರೆ.


Click it and Unblock the Notifications











