'ಪುಷ್ಪ' ಚಿತ್ರದಲ್ಲಿ ಬನ್ನಿ, ರಶ್ಮಿಕಾ, ಫಹಾದ್, ಸ್ಯಾಮ್ ಪಾತ್ರಗಳಲ್ಲಿ ಅಸಲಿಗೆ ಯಾರ‍್ಯಾರು ನಟಿಸಬೇಕಿತ್ತು ಗೊತ್ತಾ?
ಸುಕುಮಾರ್ ನಿರ್ದೇಶನದ 'ಪುಷ್ಪ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆದ್ದಿದ್ದು ಗೊತ್ತೇಯಿದೆ. ಆಗಸ್ಟ್ 15ಕ್ಕೆ ಸೀಕ್ವೆಲ್ ತೆರೆಗೆ ಬರಲಿದೆ. ವೆಬ್ ಸೀರಿಸ್ ಮಾಡಬೇಕೆಂದುಕೊಂಡಿದ್ದ ಸ್ಕ್ರಿಪ್ಟ್ ಕೊನೆಗೆ ಸಿನಿಮಾ ಆಗಿ ಪ್ರೇಕ್ಷಕರ ಮುಂದೆ ಬಂದಿತ್ತು. ಸದ್ಯ ಈ ಸರಣಿಯನ್ನು ಹಲವು ಭಾಗಗಳಲ್ಲಿ ಮುಂದುವರೆಸಲು ಚಿತ್ರತಂಡ ಮುಂದಾಗಿದೆ.
'ಪುಷ್ಪ' ಚಿತ್ರದಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಟೈಟಲ್ ರೋಲ್ ಪ್ಲೇ ಮಾಡಿದ್ದರು. ಬನ್ನಿ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಸಿಕ್ಕಿತ್ತು. ಇನ್ನು ಆತನ ಪ್ರೇಯಸಿ ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ, ವಿಲನ್ ಭನ್ವರ್ ಸಿಂಗ್ ಶೇಖಾವತ್ ಆಗಿ ಫಹಾದ್ ಫಾಸಿಲ್ ನಟಿಸಿ ಗೆದ್ದರು. ಪ್ರತಿಯೊಂದು ಪಾತ್ರವೂ ಸಿನಿರಸಿಕರ ಮನದಲ್ಲಿ ಉಳಿದುಬಿಟ್ಟಿದೆ. ಅಷ್ಟರಮಟ್ಟಿಗೆ ಸಿನಿಮಾ ಪರಿಣಾಮ ಬೀರಿತ್ತು.

ಈ ಸಿನಿಮಾ ಕಥೆಯ ಬಗ್ಗೆ ಕೆಲವರು ಟೀಕೆ ಮಾಡಿದ್ದರು. ಇದು ಸಮಾಜಕ್ಕೆ ಎಂತಹ ಸಂದೇಶ ಕೊಡುತ್ತದೆ ಎಂದು ಚಕಾರ ಎತ್ತಿದ್ದರು. ಅದೆಲ್ಲವನ್ನು ಪಕ್ಕಕ್ಕಿಟ್ಟರೆ ಅಲ್ಲು ಅರ್ಜುನ್ ಮಾತ್ರವಲ್ಲ ಚಿತ್ರದಲ್ಲಿ ನಟಿಸಿದ ಪ್ರತಿಯೊಬ್ಬರ ಅಭಿನಯದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ರಶ್ಮಿಕಾ, ಫಹಾದ್ ಪರ್ಫಾರ್ಮನ್ಸ್‌ಗೂ ಒಳ್ಳೆ ಅಂಕ ಸಿಕ್ಕಿತ್ತು. ಇನ್ನು ಸ್ಪೆಷಲ್ ಸಾಂಗ್‌ನಲ್ಲಿ ಹೆಜ್ಜೆ ಹಾಕಿ ಸಮಂತಾ ಕಮಾಲ್ ಮಾಡಿದ್ದರು. ಒಟ್ಟಾರೆ 'ಪುಷ್ಪ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಸೀಕ್ವೆಲ್ ಬಗ್ಗೆಯೂ ಕುತೂಹಲ ಮೂಡುವಂತೆ ಆಗಿತ್ತು.
ಅಂದಹಾಗೆ ನಿರ್ದೇಶಕ ಸುಕುಮಾರ್ 'ಪುಷ್ಪ' ಕಥೆ ಬರೆದಾಗ ಅಂದುಕೊಂಡಿದ್ದ ಕಲಾವಿದರು ಬೇರೆಯವರೇ ಆಗಿದ್ದರು. ಆದರೆ ಕೊನೆಗೆ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾಸ್ ಫಾಸಿಲ್ ನಟಿಸುವಂತಾಯಿತು. ಇದೇ ವಿಚಾರ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಅಂದ ಹಾಗೆ ಅಲ್ಲು ಅರ್ಜುನ್‌ಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಪುಷ್ಪರಾಜ್ ಪಾತ್ರದಲ್ಲಿ ಮಹೇಶ್ ಬಾಬು ನಟಿಸಿಬೇಕಿತ್ತಂತೆ. ಹೌದು ಈ ವಿಚಾರವನ್ನು ನಿರ್ದೇಶಕ ಸುಕುಮಾರ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಮಹೇಶ್ ಬಾಬು ಜೊತೆ ಸಿನಿಮಾ ಮಾಡಲು ಸುಕುಮಾರ್ ಕಥೆ ಬರೆದುಕೊಂಡಿದ್ದರು. ಕಾರಣಾಂತರಗಳಿಂದ ಮಹೇಶ್ ಒಪ್ಪಲಿಲ್ಲ. ಆಗ ಅದೇ ಕಥೆಯನ್ನು ಅಲ್ಲು ಅರ್ಜುನ್‌ಗೆ ಹೇಳಿ ಸಿನಿಮಾ ಮಾಡಿ ನಿರ್ದೇಶಕರು ಗೆದ್ದಿದ್ದರು. ಇದೀಗ ಚಿತ್ರದ 2ನೇ ಭಾಗವೂ ಪ್ರೇಕ್ಷಕರ ಮುಂದೆ ಬರ್ತಿದೆ. ಇನ್ನು ಶ್ರೀವಲ್ಲಿಯಾಗಿ ಮೊದಲು ಸುಕುಮಾರ್ ಅಂದುಕೊಂಡಿದ್ದು ಸಮಂರಾ ಅಂತೆ. ಅದಾಗಲೇ ಸುಕುಮಾರ್ ನಿರ್ದೇಶನದ 'ರಂಗಸ್ಥಳಂ' ಚಿತ್ರದಲ್ಲಿ ಸ್ಯಾಮ್ ನಟಿಸಿದ್ದರು, ಲಂಗಾ ದಾವಣಿಯಾಗಿ ಕಾಣಿಸಿಕೊಂಡು ಮೋಡಿ ಮಾಡಿದ್ದರು. ಹಾಗಾಗಿ ಶ್ರೀವಲ್ಲಿ ಪಾತ್ರವನ್ನು ಆಕೆಗಾಗಿ ಡಿಸೈನ್ ಮಾಡಿದ್ದರಂತೆ. ಬಳಿಕ ಅದು ರಶ್ಮಿಕಾ ಮಂದಣ್ಣ ಪಾಲಾಗಿತ್ತು.

ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ಪ್ರೇಕ್ಷಕರ ಮನಗೆದ್ದರು. ಈ ಸಿನಿಮಾ ಆಕೆಯ ಕರಿಯರ್‌ಗೆ ದೊಡ್ಡ ಬ್ರೇಕ್ ಕೊಟ್ಟಿತ್ತು. ಲಂಗಾ ದಾವಣಿಯಲ್ಲಿ ರಾರಾ ಸಾಮಿ, ಶ್ರೀವಲ್ಲಿ ಹಾಡುಗಳಲ್ಲಿ ರೋಶ್ ಗಮನ ಸೆಳೆದರು. ಇನ್ನು ಸಮಂತಾ ಹೆಜ್ಜೆ ಹಾಕಿದ್ದ 'ಊ ಅಂಟಾವಾ ಮಾವ' ಸಾಂಗ್ ಸೂಪರ್ ಹಿಟ್ ಆಗಿತ್ತು. ಚಿತ್ರದ ಸಕ್ಸಸ್‌ಗೆ ಪ್ಲಸ್ ಪಾಯಿಂಟ್ ಆಗಿದ್ದು ಗೊತ್ತೇಯಿದೆ. ಅಸಲಿಗೆ ಬಾಲಿವುಡ್ ಬ್ಯೂಟಿ ನೋರಾ ಫತೇಹಿ ಈ ಬಿಂದಾಸ್ ಸಾಂಗ್‌ಗೆ ಡ್ಯಾನ್ಸ್ ಮಾಡಬೇಕಿತ್ತು. ಆಗಷ್ಟೇ ಡಿವೋರ್ಸ್ ಪಡೆದು ನಾಗಚೈತನ್ಯರಿಂದ ದೂರಾಗಿದ್ದ ಸ್ಯಾಮ್ ಹಾಡಿಗೆ ಕುಣಿಯಲು ಒಪ್ಪಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು.
ಇನ್ನು ನಾಯಕನ ಪಾತ್ರದಷ್ಟೇ ಪ್ರತಿನಾಯಕ ಪಾತ್ರವೂ ಸ್ಟ್ರಾಂಗ್ ಆಗಿ ಇರಬೇಕು. ಆಗ ಮಾತ್ರ ಫೈಟ್ ಪ್ರೇಕ್ಷಕರಿಗೆ ಕಿಕ್ ಕೊಡುತ್ತದೆ. ಸ್ಮಗ್ಲರ್ ಪುಷ್ಪರಾಜ್ ಎದುರಿಗೆ ಪೊಲೀಸ್ ಅಧಿಕಾರಿ ಭನ್ವರ್ ಸಿಂಗ್ ಶೇಖಾವತ್ ನಿಲ್ಲುತ್ತಾನೆ. ಆದರೆ ಆತನೂ ಕಳ್ಳ ಪೊಲೀಸ್ ಎನ್ನುವಂತೆ ಕಾಣುತ್ತಾನೆ. ಈ ಪಾತ್ರದಲ್ಲಿ ಮಾಲಿವುಡ್ ನಟ ಫಹಾದ್ ಫಾಸಿಲ್ ನಟನೆ ಹುಬ್ಬೇರಿಸುವಂತಿದೆ. ಪುಷ್ಪ- ಭನ್ವರ್ ಫೈಟ್ ಸಿನಿರಸಿಕರಿಗೆ ಸಖತ್ ಮಜಾ ಕೊಟ್ಟಿತ್ತು. ಸೀಕ್ವೆಲ್‌ನಲ್ಲಿ ಅದು ಮತ್ತೊಂದು ಹಂತಕ್ಕೆ ಹೋಗಲಿದೆ.
ಭನ್ವರ್ ಸಿಂಗ್ ಶೇಖಾವತ್ ಪಾತ್ರದಲ್ಲಿ ತಮಿಳು ನಟ ವಿಜಯ್ ಸೇತುಪತಿ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಆ ಅವಕಾಶ ಫಹಾದ್ ಪಾಲಾಗಿತ್ತು. ಒಟ್ಟಾರೆ 'ಪುಷ್ಪ' ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ, ಫಹಾದ್ ಬದಲು ಮಹೇಶ್ ಬಾಬು, ಸಮಂತಾ, ವಿಜಯ್ ಸೇತುಪತಿ ನಟಿಸಬೇಕಿತ್ತಾ? ಎಂದು ಕೇಳಿ ಕೆಲವರು ಅಚ್ಚರಿ ಮೂಡಿಸಿದ್ದಾರೆ.


Click it and Unblock the Notifications










