Salaar Teaser: ಸಲಾರ್ ಟೀಸರ್ ಕಂಡು ಇವೆಲ್ಲಾ ಕೆಜಿಎಫ್ ಡಿಲೀಟೆಡ್ ಸೀನ್ಸ್ ಎಂದ ನೆಟ್ಟಿಗರು!
ಇಂದು ( ಜುಲೈ 6 ) ಸೂರ್ಯೋದಯವಾಗುವ ಮುನ್ನವೇ ಸಲಾರ್ ಚಿತ್ರದ ಟೀಸರ್‌ನ ದರ್ಶನವಾಗಿದೆ. ಕೆಜಿಎಫ್ ಚಿತ್ರ ಸರಣಿಯ ದಿಗ್ವಿಜಯದ ನಂತರ ಪ್ರಶಾಂತ್ ನೀಲ್ ಸಾಲು ಸಾಲಾಗಿ ಮೂರು ಚಿತ್ರಗಳಲ್ಲಿ ಸೋಲು ಕಂಡಿರುವ ರೆಬೆಲ್ ಸ್ಟಾರ್ ಪ್ರಭಾಸ್‌ಗೆ ಈ ಚಿತ್ರದಲ್ಲಿ ಆಕ್ಷನ್ ಕಟ್ ಹೇಳಿದ್ದಾರೆ.
ಹೀಗೆ ಸತತವಾಗಿ ಸೋಲುಂಡಿರುವ ಪ್ರಭಾಸ್‌ಗೆ ಪ್ರಶಾಂತ್ ನೀಲ್ ಹಿಟ್ ಕೊಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬ ಅಭಿಪ್ರಾಯವನ್ನು ಹೊಂದಿದ್ದ ಸಿನಿ ರಸಿಕರು ಸಲಾರ್ ದೊಡ್ಡ ಹಿಟ್ ಆಗಲಿದೆ, ಪ್ರಭಾಸ್ ಬಾಹುಬಲಿ ಚಿತ್ರ ಸರಣಿಯ ಬಳಿಕ ಸಂಪೂರ್ಣ ಗೆಲುವನ್ನು ಅನುಭವಿಸುತ್ತಾರೆ ಎಂದು ಊಹಿಸಿದ್ದರು.

ಮಾಸ್ ದೃಶ್ಯಗಳನ್ನು ಪ್ರೇಕ್ಷಕರಿಗೆ ಗೂಸ್‌ಬಂಪ್ಸ್ ಬರುವ ಹಾಗೆ ನಿರ್ದೇಶಿಸುವುದರಲ್ಲಿ ನಿಸ್ಸೀಮನಾಗಿರುವ ಪ್ರಶಾಂತ್ ನೀಲ್‌ಗೆ ಪ್ರಭಾಸ್ ರೀತಿಯ ಮಾಸ್ ಹೀರೊ ದೊರಕಿದ್ದು, ಸಲಾರ್ ಚಿತ್ರದಲ್ಲಿ ಮಾಸ್ ಅಂಶ ಇನ್ನೆಷ್ಟು ಗಟ್ಟಿ ಇರಬೇಡ ಎಂದು ನೆಟ್ಟಿಗರು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದರು.
ಈ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಲು ಸಲಾರ್ ಚಿತ್ರತಂಡ ಈ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಟೀಸರ್ ವೀಕ್ಷಿಸಿದ ಬಳಿಕ ಟೀಸರ್ ಹೇಗಿತ್ತು ಎಂಬುದನ್ನು ಸಿನಿ ರಸಿಕರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿದ್ದಾರೆ. ಕೆಲವರು ಟೀಸರ್‌ನಲ್ಲಿ ಬರುವ 'ಸಿಂಪಲ್ ಇಂಗ್ಲಿಷ್.. ನೋ ಕನ್‌ಫ್ಯೂಷನ್.. ಲಯನ್, ಚೀತಾ, ಟೈಗರ್, ಎಲಿಫೆಂಟ್ ವೆರಿ ಡೇಂಜರಸ್.. ಬಟ್.. ನಾಟ್ ಇನ್ ಜುರಾಸಿಕ್ ಪಾರ್ಕ್.. ಬಿಕಾಸ್ ಇನ್ ದಟ್ ಪಾರ್ಕ್, ದೇರ್ ಈಸ್ ಎ.." ಎಂಬ ಡೈಲಾಗ್ ಹೇಳಿ ಟಿನ್ನು ಆನಂದ್ ನಾಯಕ ಪ್ರಭಾಸ್‌ಗೆ ಬಿಲ್ಡಪ್ ಕೊಡುವ ದೃಶ್ಯವನ್ನು ಮೆಚ್ಚಿಕೊಂಡಿದ್ದರೆ, ಇನ್ನೂ ಕೆಲವರು ಟೀಸರ್‌ನಲ್ಲಿರುವ ಕೆಲವೊಂದು ಪ್ರಭಾಸ್ ಆಕ್ಷನ್ ಸೀನ್ಸ್‌ಗೆ ಮಾರು ಹೋಗಿದ್ದಾರೆ.
ಹೀಗೆ ಟೀಸರ್ ಬಗ್ಗೆ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಮತ್ತೊಂದಷ್ಟು ಸಿನಿ ರಸಿಕರು ಟೀಸರ್ ಬಗ್ಗೆ ತಮ್ಮಲ್ಲಿನ ಬೇಸರವನ್ನು ಹೊರಹಾಕಿದ್ದಾರೆ. ಟೀಸರ್ ಅನ್ನು ಮೊದಲ ಬಾರಿ ನೋಡಿದ ಕೂಡಲೇ ತಮಗೆ ಯಾವ ರೀತಿಯ ಅನುಭವವಾಯಿತೋ ಅದನ್ನು ಬಿಚ್ಚಿಟ್ಟಿದ್ದಾರೆ.
ಈ ಪೈಕಿ ಅನೇಕರು ಬೇಸರ ಹೊರಹಾಕಿರುವುದು ಸಲಾರ್ ಟೀಸರ್‌ನಲ್ಲಿನ ಗಣಿ ದೃಶ್ಯಗಳ ಬಗ್ಗೆ. ಈ ದೃಶ್ಯಗಳ ಬಗ್ಗೆ ಕಾಮೆಂಟ್ ಬರೆದುಕೊಂಡಿರುವ ಕೆಲ ಸಿನಿ ರಸಿಕರು ಈ ದೃಶ್ಯಗಳು ಕೆಜಿಎಫ್ ಚಿತ್ರದ ಡಿಲೀಟೆಡ್ ಸೀನ್‌ಗಳ ಹಾಗೆ ಇವೆ, ಪ್ರಶಾಂತ್ ನೀಲ್ ಅಲ್ಲಿ ಬಳಸದ ದೃಶ್ಯಗಳನ್ನು ಇಲ್ಲಿ ಬಳಸಿದ್ದಾರೆ ಎಂದು ಕಾಲೆಳೆಯುತ್ತಿದ್ದಾರೆ.
ಇನ್ನೂ ಕೆಲವರು ಇದೇ ಅಂಶದ ಬಗ್ಗೆ ಸಂತಸ ವ್ಯಕ್ತಪಡಿಸುತ್ತಿದ್ದು, ಸಲಾರ್ ಸಹ ಕೆಜಿಎಫ್ ಅನುಭವವನ್ನೇ ಕೊಡ್ತಿದೆ, ಪ್ರಶಾಂತ್ ನೀಲ್ ತಮ್ಮದೇ ಸಿನಿಮಾ ಯೂನಿವರ್ಸ್ ಮಾಡಿ ಪ್ರಭಾಸ್ ಹಾಗೂ ಯಶ್ ಒಂದೇ ಚಿತ್ರದಲ್ಲಿ ನಟಿಸುವ ಹಾಗೆ ಮಾಡಲಿ ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











