ರಶ್ಮಿಕಾ ಬಳಿಕ ಮಹೇಶ್ ಬಾಬು ಜೊತೆ ಶ್ರೀಲೀಲಾ ಟಪ್ಪಾಂಗುಚಿ ಸ್ಟೆಪ್ಸ್
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ನಟನೆಯ 'ಗುಂಟೂರು ಖಾರಂ' ಸಿನಿಮಾ ಒಂದೊಲ್ಲೊಂದು ಕಾರಣಕ್ಕೆ ಸುದ್ದು ಮಾಡುತ್ತಲೇ ಇದೆ. ಇತ್ತೀಚೆಗೆ ಚಿತ್ರದ ಮೆಲೋಡಿ ಸಾಂಗ್‌ವೊಂದು ರಿಲೀಸ್ ಆಗಿತ್ತು. ಆದರೆ ಅಷ್ಟಾಗಿ ಸದ್ದು ಮಾಡಲಿಲ್ಲ. ಚಿತ್ರದಲ್ಲಿ ಮಹೇಶ್ ಬಾಬು ಜೋಡಿಯಾಗಿ ಶ್ರೀಲೀಲಾ ಮಿಂಚಿದ್ದಾರೆ.
ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ 'ಗುಂಟೂರು ಖಾರಂ' ಸಿನಿಮಾ ಕಾರಣಾಂತರಗಳಿಂದ ತಡವಾಗುತ್ತಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಚಿತ್ರಕ್ಕೆ ಮೊದಲು ಪೂಜಾ ಹೆಗ್ಡೆ ಹಾಗೂ ಶ್ರೀಲೀಲಾ ನಾಯಕಿಯಾಗಿ ಆಯ್ಕೆ ಆಗಿದ್ದರು. ಪೂಜಾ ಹೊರ ಬಂದ ಬಳಿಕ ಮೀನಾಕ್ಷಿ ಚೌಧರಿ ತಂಡವನ್ನು ಸೇರಿಕೊಂಡಿದ್ದರು. ಹಾಗಾಗಿ ಎರಡನೇ ನಾಯಕಿಯಾಗಿದ್ದ ಶ್ರೀಲೀಲಾ ಮೊದಲ ನಾಯಕಿ ಆಗುವಂತಾಯಿತು.

ತೆಲುಗು ಸಿನಿಮಾಗಳಲ್ಲಿ ಐಟಂ ಸಾಂಗ್ಸ್, ಟಪಾಂಗುಚ್ಚಿ ಸಾಂಗ್ಸ್ ಕಾಮನ್. ಆದರೆ ಮಹೇಶ್ ಬಾಬು ಟಪ್ಪಾಂಗುಚ್ಚಿ ಸಾಂಗ್ಸ್‌ಗೆ ಹೆಜ್ಜೆ ಹಾಕುವುದು ಕಮ್ಮಿ. ಆ ನಿಮಯವನ್ನು 'ಸರಿಲೇರು ನೀಕೆವ್ವರು' ಚಿತ್ರದಲ್ಲಿ ಮುರಿದಿದ್ದರು. ರಶ್ಮಿಕಾ ಮಂದಣ್ಣ ಜೊತೆ 'ಮೈಂಡ್‌ಬ್ಲಾಕ್' ಎಂದು ಬಿಂದಾಸ್ ಸ್ಟೆಪ್ಸ್ ಹಾಕಿ ರಂಗೇರಿಸಿದ್ದರು. ಇದೀಗ 'ಗುಂಟೂರು ಖಾರಂ' ಚಿತ್ರದಲ್ಲೂ ಅಂತದ್ದೇ ಡ್ಯಾನ್ಸಿಂಗ್ ನಂಬರ್ ಇದೆ. ಈ ಬಾರಿ ಮಹೇಶ್ ಬಾಬು ಜೊತೆ ಶ್ರೀಲೀಲಾ ಹೆಜ್ಜೆ ಹಾಕಲಿದ್ದಾರೆ.
ಹೈವೋಲ್ಟೇಜ್ ಸ್ಪೈಸಿ ಮಾಸ್ ಸಾಂಗ್ ಬಿಡುಗಡೆ ಮಾಡುವುದಾಗಿ ಫೋಟೊ ಸಮೇತ ಚಿತ್ರತಂಡ ಘೋಷಿಸಿದೆ. ಫೋಟೊದಲ್ಲಿ ಮಹೇಶ್ ಬಾಬು ಜೊತೆ ಶ್ರೀಲೀಲಾ ಸೀರೆ ಉಟ್ಟು ಬಿಂದಾಸ್ ಹೆಜ್ಜೆ ಹಾಕಿರುವುದು ಗೊತ್ತಾಗುತ್ತಿದೆ. ಸೆಟ್‌ನಲ್ಲಿ ಸಾಂಗ್ಸ್ ಶೂಟ್ ಮಾಡಿದ್ದು ಒಂದಷ್ಟು ಡ್ಯಾನ್ಸರ್ಸ್ ಸಾಥ್ ಕೊಟ್ಟಿದ್ದಾರೆ. ಎಸ್. ತಮನ ಸಂಗೀತ ಚಿತ್ರಕ್ಕಿದೆ.

ಹಾರಿಕಾ & ಹಾಸಿನಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ 'ಗುಂಟೂರು ಖಾರಂ' ಸಿನಿಮಾ ನಿರ್ಮಾಣವಾಗಿದೆ. ಜಗಪತಿ ಬಾಬು, ರಮ್ಯಾಕೃಷ್ಣ, ಪ್ರಕಾಶ್ ರಾಜ್, ಸುನಿಲ್, ಬ್ರಹ್ಮಾನಂದಂ ಚಿತ್ರದ ತಾರಾಗಣದಲ್ಲಿದ್ದಾರೆ. 2021 ಮೇನಲ್ಲಿ ಸಿನಿಮಾ ಘೋಷಣೆ ಆಗಿತ್ತು. ಕಳೆದ ವರ್ಷ ಫೆಬ್ರವರಿಯಲ್ಲಿ ಸಿನಿಮಾ ಮುಹೂರ್ತ ನಡೆದಿತ್ತು. ಕಾರಣಾಂತರಗಳಿಂದ ಚಿತ್ರೀಕರಣ ತಡವಾಗಿತ್ತು. ಈ ವರ್ಷ ಏಪ್ರಿಲ್ ಕೊನೆಗೆ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿತ್ತು. ಆದರೆ ಕೊನೆಗೆ ಮುಂದಿನ ವರ್ಷಕ್ಕೆ ಮುಂದೂಡಲಾಗಿತ್ತು.
ಇತ್ತೀಚೆಗೆ ಶ್ರೀಲೀಲಾ ನಟನೆಯ ಯಾವುದೇ ಸಿನಿಮಾ ಗೆಲ್ಲುತ್ತಿಲ್ಲ. ಮೊನ್ನೆ ಮೊನ್ನೆ ಬಂದ 'ಎಕ್ಸ್‌ಸ್ಟ್ರಾಡಿನರಿಮ್ಯಾನ್' ಸಿನಿಮಾ ಹೀನಾಯವಾಗಿ ಸೋಲುಂಡಿದೆ. ಶ್ರೀಲೀಲಾ ಈಗ 'ಗುಂಟೂರು ಖಾರಂ' ಸಿನಿಮಾ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಒಮ್ಮೆಲೆ ಏಳೆಂಟು ಸಿನಿಮಾಗಳಿಗೆ ಕಿಸ್ ಬೆಡಗಿ ಸಹಿ ಮಾಡಿದ್ದರು. ಮಹೇಶ್ ಬಾಬು, ಬಾಲಕೃಷ್ಣ, ಪವನ್ ಕಲ್ಯಾಣ್, ನಿತಿನ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಸಕ್ಸಸ್ ಮಾತ್ರ ಸಿಗುತ್ತಿಲ್ಲ. ಪವನ್ ಜೊತೆ ನಟಿಸಿರುವ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ತೆರೆಗೆ ಬರೋದೇ ಅನುಮಾನ ಎನ್ನುವಂತಾಗಿದೆ.
ತೆಲುಗಿನಲ್ಲಿ ಒಂದೆರಡು ಸಿನಿಮಾಗಳಲ್ಲಿ ನಟಿಸಿ ಬೆಂಗಳೂರು ಬೆಡಗಿ ಭಾರೀ ಕ್ರೇಜ್ ಸಂಪಾದಿಸಿದ್ದರು. ಸ್ಟಾರ್ ನಟರೆಲ್ಲಾ ತಮ್ಮ ಚಿತ್ರಕ್ಕೆ ಈಕೆಯನ್ನೇ ನಾಯಕಿಯಾಗಿ ಆಯ್ಕೆ ಮಾಡುವಂತೆ ಪಟ್ಟು ಹಿಡಿಯಲು ಆರಂಭಿಸಿದ್ದರು. ಆಕೆಯ ಕ್ರೇಜ್ ನೋಡಿದವರು ರಶ್ಮಿಕಾಗೆ ಟಫ್ ಕಾಂಪಿಟೇಟರ್ ಎಂದಿದ್ದರು. ಆದರೆ ಒಂದೆರಡು ಸಿನಿಮಾಗಳ ಸೋಲು ಎಲ್ಲರ ಲೆಕ್ಕಾಚಾರ ಬದಲಿಸಿಬಿಡ್ಡಿದೆ. ಒಟ್ನಲ್ಲಿ ಶ್ರೀಲೀಲಾ ಈಗ 'ಗುಂಟೂರು ಖಾರಂ' ಸಿನಿಮಾವನ್ನೇ ನೆಚ್ಚಿಕೊಂಡಿದ್ದಾರೆ. ಈ ಸಿನಿಮಾ ಸೋಲು ಗೆಲುವಿನ ಮೇಲೆ ಆಕೆಯ ಟಾಲಿವುಡ್ ಭವಿಷ್ಯ ನಿರ್ಧಾರವಾಗಲಿದೆ. ಸದ್ಯಕ್ಕೆ ಕನ್ನಡದಲ್ಲೂ ಯಾವುದೇ ಚಿತ್ರಕ್ಕೆ ಆಕೆ ಸಹಿ ಮಾಡಿಲ್ಲ.


Click it and Unblock the Notifications











