ತಿಮ್ಮಪ್ಪನ ಪ್ರಸಾದವನ್ನು ಗೇಲಿ ಮಾಡಿದ್ದ ಬಿಗ್‌ಬಾಸ್ ಮಾಜಿ ಸ್ಪರ್ಧಿಗೆ ಟಿಟಿಡಿ ಬಿಗ್ ಶಾಕ್
ಸಾರ್ವಜನಿಕ ಜೀವನದಲ್ಲಿರುವವರು ಬಹಳ ಎಚ್ಚರಿಕೆ ವಹಿಸಬೇಕು. ಏನಾದರೂ ಮಾತನಾಡುವಾಗ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಏನಾದರೂ ಪೋಸ್ಟ್ ಮಾಡುವಾಗ ನೂರು ಬಾರಿ ಯೋಚಿಸಬೇಕು. ಯಾಮಾರಿದರೆ ಸಂಕಷ್ಟ ತಪ್ಪಿದ್ದಲ್ಲ. ಆಂಕರ್, ಬಿಗ್‌ಬಾಸ್ ಮಾಜಿ ಸ್ಪರ್ಧಿ ತಿರುಪತಿ ತಿಮ್ಮಪ್ಪನ ಪ್ರಸಾದದ ಬಗ್ಗೆ ತಮಾಷೆ ಮಾಡಿ ವಿವಾದ ಸೃಷ್ಟಿಸಿಕೊಂಡಿದ್ದಾರೆ.
ತಿರುಪತಿಯಲ್ಲಿ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಸರತಿ ಸಾಲಿನಲ್ಲಿ ಗಂಟೆಗಳ ಕಾಲ ನಿಂತು ದರ್ಶನ ಮಾಡುವಂತಾಗಿದೆ. 10000 ರೂ. ಕೊಟ್ಟು ವಿಐಪಿ ಟಿಕೆಟ್ ತೆಗೆದುಕೊಂಡರೂ ದರ್ಶನ ತಡವಾಗುತ್ತಿದೆ. ಇನ್ನು ಕ್ಯೂನಲ್ಲಿ ನಿಂತವರಿಗೆ ಪ್ರಸಾದದ ರೀತಿ ತಿಂಡಿ, ಊಟ ಇದ್ದಲ್ಲಿಗೆ ತಂದು ಕೊಡುವ ವ್ಯವಸ್ಥೆ ಟಿಟಿಡಿ ಮಾಡಿದೆ. ಹೀಗೆ ತಂದುಕೊಟ್ಟ ಪ್ರಸಾದದ ಬಗ್ಗೆ ತೆಲುಗು ನಿರೂಪಕಿ ಶಿವಜ್ಯೋತಿ ವ್ಯಂಗ್ಯ ಮಾಡಿ ವೀಡಿಯೋ ಮಾಡಿದ್ದರು. ಇದು ವಿವಾದಕ್ಕೀಡಾಗಿತ್ತು.

ಇತ್ತೀಚೆಗೆ ಪತಿ ಹಾಗೂ ಸ್ನೇಹಿತರ ಜೊತೆ ಶಿವಜ್ಯೋತಿ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಆಕೆ ವೀಡಿಯೋಗಳನ್ನು ಮಾಡಿ ಪೋಸ್ಟ್ ಮಾಡುತ್ತಾರೆ. ಅದೇ ರೀತಿ ತಿರುಪತಿ ದರ್ಶನದ ವ್ಲಾಗ್ ವೀಡಿಯೋ ಹಾಕಿದ್ದರು. ಅದರಲ್ಲಿ ಪ್ರಸಾದ ಬಗ್ಗೆ ತಮಾಷೆ ಮಾಡಿದ್ದರು. ಇದು ತಿಮ್ಮಪ್ಪನ ಭಕ್ತರನ್ನು ಕೆರಳಿಸಿತ್ತು. ಬೇಕಿದ್ದರೆ ತಗೊಂಡು ತಿನ್ನಬೇಕು, ಇಲ್ಲದಿದ್ದರೆ ಸುಮ್ಮನಿರಬೇಕು. ಈ ರೀತಿ ಕೊಂಕು ಮಾತನಾಡಬಾರದು ಎಂದು ಕ್ಲಾಸ್ ತಗೊಂಡಿದ್ದರು.
ತಪ್ಪಿನ ಅರಿವಾಗಿ ನಿರೂಪಕಿ ಶಿವಜ್ಯೋತಿ ಆ ವೀಡಿಯೋ ಡಿಲೀಟ್ ಮಾಡಿದ್ದರು. ಕ್ಷಮೆ ಕೂಡ ಕೇಳಿದ್ದರು. ಆದರೆ ಟಿಟಿಡಿ ಆಕೆಯ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ ಎನ್ನಲಾಗ್ತಿದೆ. ಈ ಬಗ್ಗೆ ತೆಲುಗು ಮಾಧ್ಯಮಗಳಲ್ಲಿ ವರದಿಯಾಗಿದೆ. ಶಿವಜ್ಯೋತಿ ಆಧಾರ್ ಕಾರ್ಡ್ ಅನ್ನು ಟಿಟಿಡಿ ಅಧಿಕಾರಿಗಳು ಬ್ಲಾಕ್ ಮಾಡಿದ್ದು ಇನ್ನು ಮುಂದೆ ಆಕೆಗೆ ತಿಮ್ಮಪ್ಪನ ದರ್ಶನ ಮಾಡಲು ಅವಕಾಶ ಸಿಗುವುದಿಲ್ಲ ಎನ್ನಲಾಗ್ತಿದೆ. ಜೀವನಪರ್ಯಂತ ತಿರುಪತಿಯಿಂದ ಬ್ಯಾನ್ ಮಾಡಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.
ಕಳೆದ ವಾರ ಶಿವಜ್ಯೋತಿ ತಿರುಪತಿಗೆ ಭೇಟಿ ನೀಡಿದ್ದರು. ಕ್ಯೂನಲ್ಲಿ ನಿಂತಿದ್ದಾಗ ಪತಿ, ಸ್ನೇಹಿತ ಹಾಗೂ ಆಕೆಗೆ ಪ್ರಸಾದ ಸಿಕ್ಕಿದೆ. ಅದನ್ನು ಸ್ವೀಕರಿಸಿ "ಜೀವನದಲ್ಲಿ ಯಾವತ್ತು ಭಿಕ್ಷೆ ಬೇಡಿಲ್ಲ, ಇವತ್ತು ಬೇಡಿದ್ದು. ಬಹಳ ಕಾಸ್ಟ್ಲಿ ಭಿಕ್ಷುಕರು ನಾವು. ನಾವೇ ಕುಬೇರರು" ಎಂದಿದ್ದರು. ಬಳಿಕ ಪತಿ ಗಂಗೂಲಿ ಅವರ ಬಳಿ ಹೋಗಿ "ತಿರುಪತಿಯ ಬಹಳ ಶ್ರೀಮಂತ ಭಿಕ್ಷುಕರು ನಾವು" ಎಂದು ಹೇಳಿ ಶಿವಜ್ಯೋತಿ ಗೇಲಿ ಮಾಡಿದ್ದರು. ವೀಡಿಯೋ ವೈರಲ್ ಆಗಿ ವಿವಾದ ಸೃಷ್ಟಿಯಾಗಿತ್ತು.
"ನನಗೆ ವೆಂಕಟೇಶ್ವರ ಅಂದ್ರೆ ಬಹಳ ಇಷ್ಟ. ಕೆಲ ದಿನಗಳಿಂದ ಶನಿವಾರ ವ್ರತ ಆಚರಿಸುತ್ತಿದ್ದೇನೆ. ದೇವರು ನನಗೆ ಮಗು ಕೊಟ್ಟು ನನ್ನ ಜೀವನ ಬದಲಿಸಿದ್ದಾನೆ. ನನ್ನ ಮಾತುಗಳಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮಿಸಿ. 10000 ರೂ. ಟಿಕೆಟ್ ಖರೀದಿಸಿ ದರ್ಶನಕ್ಕೆ ನಿಂತಿದ್ದೆವು. ಹಾಗಾಗಿ ಕಾಸ್ಟ್ಲಿ ಲೈನ್ ಎಂದು ಹೇಳಿದ್ದೆ ಅಷ್ಟೆ" ಎಂದು ಶಿವಜ್ಯೋತಿ ಕ್ಷಮೆ ಕೇಳಿ ಸ್ಪಷ್ಟನೆ ನೀಡಿದ್ದರು.
ಸಾವಿತ್ರಿ ಎನ್ನುವ ಮತ್ತೊಂದು ಹೆಸರು ಶಿವಜ್ಯೋತಿ ಅವರಿಗಿದೆ. ಬಿಗ್‌ಬಾಸ್ ತೆಲುಗು ಸೀಸನ್- 3ರಲ್ಲಿ ಸ್ಪರ್ಧಿಯಾಗಿ ಶಿವಜ್ಯೋತಿ ದೊಡ್ಮನೆ ಒಳಗೆ ಹೋಗಿದ್ದರು. ಮದುವೆ ಆಗಿ ವರ್ಷಗಳೇ ಕಳೆದರೂ ಸಂತಾನ ಭಾಗ್ಯ ಸಿಕ್ಕಿರಲಿಲ್ಲ. ಕೊನೆಗೆ ತಿಮ್ಮಪ್ಪನಲ್ಲಿ ಬೇಡಿಕೊಂಡು ವ್ರತ ಮಾಡಿದ್ದಕ್ಕೆ ನನಗೆ ಮಗು ಆಗುತ್ತಿದೆ ಎಂದು ಸ್ವತಃ ಶಿವಜ್ಯೋತಿ ಹೇಳಿದ್ದರು. ತುಂಬು ಗರ್ಭಿಣಿ ಆಗಿರುವ ಶಿವಜ್ಯೋತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.


Click it and Unblock the Notifications











