ದಿಢೀರ್ ದೆಹಲಿ ಹೈಕೋರ್ಟ್ ಕದ ತಟ್ಟಿದ ತೆಲುಗು ನಟ ಜ್ಯೂ. ಎನ್‌ಟಿಆರ್; ಅಷ್ಟಕ್ಕೂ ಏನಾಯ್ತು?
ತೆಲುಗು ನಟ ಜ್ಯೂ. ಎನ್‌ಟಿಆರ್(Jr NTR) ತಮ್ಮ ವೈಯಕ್ತಿಕ ಹಕ್ಕುಗಳ ರಕ್ಷಣೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇತ್ತೀಚೆಗೆ ಐಶ್ವರ್ಯಾ ರೈ ಬಚ್ಚನ್, ಅಭಿಷೇಕ್ ಬಚ್ಚನ್, ಜಯಾ ಬಚ್ಚನ್, ಹೃತಿಕ್ ರೋಷನ್, ಚಿರಂಜೀವಿ, ನಾಗಾರ್ಜುನ ಸೇರಿ ಹಲವರು ಇದೇ ರೀತಿ ಕೋರ್ಟ್ ಆಶ್ರಯಿಸಿದ್ದರು.
ಸದ್ಯ ತಾರಕ್ ಸಲ್ಲಿಸಿದ ಅರ್ಜಿ ನ್ಯಾಯಮೂರ್ತಿ ಮನ್‌ಮೀತ್ ಪ್ರೀತಂ ಸಿಂಗ್ ಅರೋರಾ ಅವರಿದ್ದ ಪೀಠದ ಮುಂದೆ ಬಂದಿದ್ದು, ನಟನ ದೂರಿನ ಆಧಾರದಲ್ಲಿ ಸಾಮಾಜಿಕ ಮಾಧ್ಯಮ ಹಾಗೂ ಇ-ಕಾಮರ್ಸ್ ವೇದಿಕೆಗಳು 'ಮಾಹಿತಿ ಮತ್ತು ತಂತ್ರಜ್ಞಾನ ನಿಯಮಗಳು, 2021' ರ ಅಡಿಯಲ್ಲಿ ಮೂರು ದಿನದೊಳಗೆ ಕ್ರಮ ಕೈಗೊಳ್ಳಲು ನ್ಯಾಯಾಲಯ ಆದೇಶಿಸಿದೆ. ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಇ-ಕಾಮರ್ಸ್ ಸೈಟ್‌ಗಳು ಅವರ ಅನುಮತಿಯಿಲ್ಲದೆ ಚಿತ್ರಗಳನ್ನು ಬಳಸುತ್ತಿರುವುದು ಮಾತ್ರವಲ್ಲ ತಮ್ಮ ಖ್ಯಾತಿಗೆ ಧಕ್ಕೆ ತರುವ AI ಹಾಗೂ ಮಾರ್ಪ್ ಫೋಟೊ, ವಿಡಿಯೊಗಳನ್ನು ಪ್ರಸಾರ ಮಾಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ನಟ ಜ್ಯೂ. ಎನ್‌ಟಿಆರ್ ಪರ ವಾದ ಮಂಡಿಸಿದ ವಕೀಲ ಜೆ ಸಾಯಿ ದೀಪಕ್, ಕಕ್ಷಿದಾರರ ಕುರಿತಾಗಿ ಸಾಮಾಜಿಕ ಮಾಧ್ಯಮ ಮತ್ತು ಇ-ಕಾಮರ್ಸ್ ತಾಣಗಳಲ್ಲಿ ಹಲವು ಆಕ್ಷೇಪಾರ್ಹ ವಿಷಯಗಳು ಹರಡಲಾಗುತ್ತಿದೆ.ಇದು ವೈಯಕ್ತಿಕ ಹಕ್ಕುಗಳ ಉಲ್ಲಂಘನೆ ಎಂದು ದೆಲಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಇತ್ತೀಚೆಗೆ ಸೆಲೆಬ್ರಿಟಿಗಳ ಫೋಟೋ, ಧ್ವನಿ ಮತ್ತು ವಿಡಿಯೋಗಳ ದುರುಪಯೋಗವು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಇದು ಕೆಲವರ ಆತಂಕಕ್ಕೆ ಕಾರಣವಾಗಿದೆ.
ಡಿಸೆಂಬರ್ 22ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದ್ದು, ಆ ಸಂದರ್ಭದಲ್ಲಿ ಔಪಚಾರಿಕ ಆದೇಶ ಹೊರಡಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ. ಇಂತಹ ಅರ್ಜಿಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ AI ಏನೆಲ್ಲಾ ಸಮಸ್ಯೆ ತಂದೊಡ್ಡಬಹುದು ಎನ್ನುವುದಕ್ಕೆ ಇದು ಸಣ್ಣ ಉದಾಹರಣೆಯಾಗಿದೆ. ಮುಂದೆ ಇದು ಮತ್ತಷ್ಟು ಹೆಚ್ಚಾಗಿ ಸಮಾಜದಲ್ಲಿ ನಾನಾ ಬದಲಾವಣೆ ತರುವ ಸಾಧ್ಯತೆಯಿದೆ.

ಸಿನಿಮಾಗಳ ವಿಚಾರಕ್ಕೆ ಬಂದರೆ ಸದ್ಯ ಪ್ರಶಾಂತ್ ನೀಲ್ ನಿರ್ದೇಶನದ 'ಡ್ರ್ಯಾಗನ್' ಚಿತ್ರದಲ್ಲಿ ತಾರಕ್ ನಟಿಸುತ್ತಿದ್ದಾರೆ. ಕಾರಣಾಂತರಗಳಿಂದ ಈ ಸಿನಿಮಾ ಚಿತ್ರೀಕರಣ ತಡವಾಗುತ್ತಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ತೆರೆಗೆ ಬರಲಿದೆ. 'ದೇವರ' ಹಾಗೂ 'ವಾರ್- 2' ಸಿನಿಮಾ ಸೋಲಿನ ಬಳಿಕ ತಾರಕ್ ಕಂಬ್ಯಾಕ್ ಮಾಡಲು ಕಾಯುತ್ತಿದ್ದಾರೆ. 'ಡ್ರ್ಯಾಗನ್' ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಎಂದಿನಂತೆ ಪ್ರಶಾಂತ್ ನೀಲ್ ತಂಡವೇ ಈ ಚಿತ್ರಕ್ಕೂ ಕೆಲಸ ಮಾಡ್ತಿದೆ. ಎನ್‌ಟಿಆರ್ ಆರ್ಟ್ಸ್ ಹಾಗೂ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಗಳು ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡುತ್ತಿವೆ. ಮುಂದಿನ ವರ್ಷ ಜೂನ್ 25ಕ್ಕೆ ಸಿನಿಮಾ ಬಿಡುಗಡೆ ಆಗಬೇಕಿದೆ.
'ದೇವರ'-2 ಸಿನಿಮಾ ನಿಂತೇ ಹೋಯ್ತು ಎನ್ನುವ ಊಹಾಪೋಹ ಕೂಡ ಇದೆ. ಕೊರಟಾಲ ಶಿವ ನಿರ್ದೇಶನದ 'ದೇವರ' ಸಿನಿಮಾ ಕಳೆದ ವರ್ಷ ತೆರೆಕಂಡು ಮಿಶ್ರಪ್ರತಿಕ್ರಿಯೆ ಪಡೆದಿತ್ತು. ಕೆಲವರು ಹಿಟ್ ಎಂದು ಹೇಳಿದರೂ ನಿರ್ಮಾಪಕರು, ವಿತರಕರು ನಷ್ಟ ಅನುಭವಿಸಿದ್ದರು. ತಾರಕ್ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಆಗಿರುವುದರಿಂದ 'ದೇವರ'-2 ಬಿಟ್ಟು ಬೇರೆ ಸಿನಿಮಾಗಳ ಕಡೆ ನಿರ್ದೇಶಕ ಕೊರಟಾಲ ಶಿವ ಮುಖ ಮಾಡಿದ್ದಾರೆ ಎನ್ನಲಾಗ್ತಿದೆ. ಹಾಗಾಗಿ ಸೀಕ್ವೆಲ್ ಅನುಮಾನ ಎನ್ನುವಂತಾಗಿದೆ.


Click it and Unblock the Notifications











