ಕಂತ್ರಿ ನಾಯಿಯ ಕಥೆಯನ್ನು ಸಿನಿಮಾ ಮಾಡಿದ್ದಾರೆ; ಕೆಜಿಎಫ್ ಬಗ್ಗೆ ನಾಲಿಗೆ ಹರಿಬಿಟ್ಟ ತೆಲುಗು ನಿರ್ದೇಶಕ!
ಚಿತ್ರವೊಂದು ಬಿಡುಗಡೆಯಾಗಿ ಎಲ್ಲಾ ಚಿತ್ರಗಳನ್ನು ಹಿಂದಿಕ್ಕಿ ದೊಡ್ಡ ಮಟ್ಟದಲ್ಲಿ ಗೆದ್ದರೆ ಆ ಚಿತ್ರದ ವಿರುದ್ಧ ನೆಗೆಟಿವ್ ವಿಮರ್ಶೆಗಳನ್ನು ಹರಡುವ ಬ್ಯಾಚ್ ಹುಟ್ಟಿಕೊಳ್ಳುವುದು ಕಾಮನ್. ಅದರಲ್ಲಿಯೂ ತಮ್ಮ ಚಿತ್ರರಂಗದ ಚಿತ್ರಗಳನ್ನು ಬೇರೆ ಭಾಷೆಯ ಚಿತ್ರವೊಂದು ಹಿಂದಿಕ್ಕಿ ಸಾಧನೆ ಮಾಡಿದರೆ ಆ ಚಿತ್ರದ ವಿರುದ್ಧ ಮಸಲತ್ತು ಮಾಡುವವರ ಸಂಖ್ಯೆಗೇನೂ ಕಡಿಮೆ ಇಲ್ಲ.
ಹೌದು, ಚಿತ್ರರಂಗವೊಂದರ ಕೆಲ ಕಿಡಿಗೇಡಿಗಳು ಬೇರೆ ಭಾಷೆಯ ಚಿತ್ರಗಳು ತಮ್ಮ ಭಾಷೆಯ ಚಿತ್ರಗಳನ್ನು ಹಿಂದಿಕ್ಕಿದಾಗ ಆ ಚಿತ್ರದ ವಿರುದ್ಧ ಅಪಪ್ರಚಾರ ಮಾಡುವುದನ್ನು ನೋಡುತ್ತಾ ಬಂದಿದ್ದೇವೆ. ಕನ್ನಡದ ಕೆಜಿಎಫ್ ಚಾಪ್ಟರ್ 2 ಹಾಗೂ ಕಾಂತಾರ ಚಿತ್ರಗಳು ಬೇರೆ ರಾಜ್ಯಗಳಲ್ಲಿ ಭರ್ಜರಿ ಗಳಿಕೆ ಮಾಡಿದಾಗ ಅಲ್ಲಿನ ಕೆಲ ಕಿಡಿಗೇಡಿಗಳು ಈ ಚಿತ್ರಗಳಿಗೇಕೆ ಇಷ್ಟು ಬಿಲ್ಡಪ್, ಚಿತ್ರದಲ್ಲಿ ಏನೂ ಇಲ್ಲ ಎಂದು ಕಾಮೆಂಟ್ ಮಾಡಿದ್ದರು. ಚಿಕ್ಕ ಗುಂಪೊಂದು ಇಂತಹ ಕಾಮೆಂಟ್ ಮಾಡಿದರೆ, ಅದೇ ರಾಜ್ಯಗಳ ಸಿನಿ ರಸಿಕರು ದೊಡ್ಡ ಮಟ್ಟದಲ್ಲಿ ಈ ಚಿತ್ರಗಳನ್ನು ನೋಡಿ ಗೆಲ್ಲಿಸಿದ್ದಾರೆ.

ಇಷ್ಟು ದಿನಗಳವರೆಗೆ ಕೇವಲ ಪ್ರೇಕ್ಷಕರ ಪುಟ್ಟ ಗುಂಪೊಂದು ಚಿತ್ರದ ಯಶಸ್ಸನ್ನು ಸಹಿಸಲಾಗದೇ ಆ ಚಿತ್ರೆದ ಬಗ್ಗೆ ಕೇವಲವಾಗಿ ಮಾತನಾಡಿ ತಮ್ಮ ಒಳಗಿನ ನೋವನ್ನು ಹೊರಹಾಕಿದ್ದರು. ಆದರೆ ಇದೀಗ ತೆಲುಗಿನ ನಿರ್ದೇಶಕನೊಬ್ಬ ಕೆಜಿಎಫ್ ಚಿತ್ರದ ಬಗ್ಗೆ ತೀರ ಕೆಳಮಟ್ಟದ ಭಾಷೆಯನ್ನು ಬಳಸಿ ಕಾಮೆಂಟ್ ಮಾಡಿ ಸುದ್ದಿಗೀಡಾಗಿದ್ದಾರೆ.
ಹೌದು, ತೆಲುಗಿನ ನಟ ವೆಂಕಟೇಶ್ ಮಹಾ ಎಂಬ ನಿರ್ದೇಶಕ ಕೆಜಿಎಫ್ ಚಾಪ್ಟರ್ 2 ಚಿತ್ರದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ. ಈತ ಕೆಜಿಎಫ್ ಚಿತ್ರದ ಬಗ್ಗೆ ಆಡಿರುವ ಮಾತುಗಳನ್ನು ಕೇಳಿದ ಸಿನಿ ರಸಿಕರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಈತನ ಮಾತುಗಳನ್ನು ಕೇಳಿದ ಹಲವಾರು ಮಂದಿಗೆ ಮೊದಲು ತಲೆ ಬಂದದ್ದೇ ಅರೇ.. ವೆಂಕಟೇಶ್ ಮಹಾ ಎಂಬ ಹೆಸರಿನ ತೆಲುಗು ನಿರ್ದೇಶಕರಿದ್ದಾರಾ ಎಂಬ ಪ್ರಶ್ನೆ.

ಹೀಗೆ ಹೆಚ್ಚೇನೂ ಫೇಮಸ್ ಅಲ್ಲದ, ಪಕ್ಕದ ರಾಜ್ಯದವರಿಗೆ ತಾನು ಯಾರೆಂಬುದೇ ತಿಳಿಯದಂತಹ ಪ್ರೊಫೈಲ್ ಹೊಂದಿರುವ ನಿರ್ದೇಶಕ ವೆಂಕಟೇಶ್ ಮಹಾ ಇಡೀ ದೇಶವನ್ನೇ ಗೆದ್ದ ಕೆಜಿಎಫ್ ಚಾಪ್ಟರ್ 2 ಚಿತ್ರ ಲಾಜಿಕ್ ಇಲ್ಲದ ಕತೆ ಎಂದು ಹೀಯಾಳಿಸಿ ಆ ಚಿತ್ರದಲ್ಲಿ ಬರುವ ನಾಯಕ ರಾಕಿ ಭಾಯ್ ಅನ್ನು ನಾಯಿಗೆ ಹೋಲಿಸಿದ್ದಾರೆ.
ಪ್ರೇಮ ದ ಜರ್ನಿಲಿಸ್ಟ್ ಎಂಬ ಯುಟ್ಯೂಬ್ ಚಾನೆಲ್ ನಡೆಸಿದ ರೌಂಡ್ ಟೇಬಲ್ ಚರ್ಚೆಯಲ್ಲಿ ಮಾತನಾಡಿರುವ ಮಹಾ ವೆಂಕಟೇಶ್ ಎಲ್ಲಿಯೂ ಕೆಜಿಎಫ್ ಎಂಬ ಹೆಸರನ್ನು ತೆಗೆದುಕೊಳ್ಳದೇ ಚಿತ್ರದ ಕಥೆಯನ್ನು ಮಾತ್ರ ಹೇಳಿ ಕಾಲೆಳೆದಿದ್ದಾರೆ. ಮೊದಲಿಗೆ ಕೆಜಿಎಫ್ ಚಿತ್ರದಲ್ಲಿ ಬರುವ ತಾಯಿ ಪಾತ್ರವನ್ನು ಟ್ರೋಲ್ ಮಾಡಿದ ಈತ ಇಡೀ ಪ್ರಪಂಚದಲ್ಲಿ ಯಾವ ತಾಯಿಯಾದರೂ ದೊಡ್ಡವನಾದ ಮೇಲೆ ಒಳ್ಳೆಯ ಹೆಸರು ಮಾಡು, ನಾಲ್ಕು ಜನರಿಗೆ ಅನ್ನ ಹಾಕು ಎಂದು ಹೇಳುತ್ತಾಳೆ, ಆದರೆ ಇಲ್ಲಿ ಈ ಮಹಾತಾಯಿ ದೊಡ್ಡ ಮಟ್ಟದಲ್ಲಿ ಚಿನ್ನ, ಹಣ ಸಂಪಾದಿಸು ಎಂದು ಹೇಳುತ್ತಾಳೆ ಎಂದು ಟೀಕಿಸಿದ್ದಾರೆ.
ಇನ್ನೂ ಮುಂದುವರಿದು ಮಾತನಾಡಿದ ವೆಂಕಟೇಶ್ ಮಹಾ ತಾಯಿ ಮಾತಿನಂತೆ ಆತ ಕೆಲಸಗಾರರ ಸಹಾಯ ಪಡೆದುಕೊಂಡು ಲೋಡ್‌ಗಟ್ಟಲೆ ಚಿನ್ನವನ್ನು ಹೊರತೆಗೆದು ಆ ಜನರಿಗೆ ಮನೆಗಳನ್ನು ನೀಡಿ, ಆ ಚಿನ್ನವನ್ನೆಲ್ಲಾ ತೆಗೆದುಕೊಂಡು ಹೋಗಿ ನೀರಿನಲ್ಲಿ ಮುಳುಗಿಸಿಬಿಡುತ್ತಾನೆ, ಎಂತಹ ಕಂತ್ರಿ ನಾಯಿ ಇರಬೇಡ ಆತ, ಇಂತಹ ಕಂತ್ರಿ ನಾಯಿಯ ಕಥೆಯನ್ನು ಸಿನಿಮಾ ಮಾಡಿದ್ದಾರೆ, ಅದನ್ನು ನೋಡಿ ನಾವು ಚಪ್ಪಾಳೆ ತಟ್ಟಿ ಗೆಲ್ಲಿಸುತ್ತೇವೆ ಎಂದಿದ್ದಾರೆ.
ಹೀಗೆ ಎಲ್ಲಿಯೂ ಹೆಸರು ಹೇಳದೆಯೇ ಕೆಜಿಎಫ್ ಚಿತ್ರವನ್ನು ವೆಂಕಟೇಶ್ ಮಹಾ ಟ್ರೋಲ್ ಮಾಡಿದ್ದಾರೆ. ಇಲ್ಲಿ ಕೆಜಿಎಫ್ ಚಿತ್ರ ತನಗೆ ಇಷ್ಟವಾಗಲಿಲ್ಲ ಎಂಬುದನ್ನು ಈ ನಿರ್ದೇಶಕ ಹೇಳಿಕೊಂಡಿರುವುದು ತಪ್ಪಲ್ಲ, ಆದರೆ ಅದನ್ನು ಹೇಳಲು ಬಳಸಿರುವ ಪದಗಳು ತಪ್ಪು. ಹೀಗಾಗಿಯೇ ಈತ ನೀಡಿರುವ ಹೇಳಿಕೆ ವಿರುದ್ಧ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಮಾಡಿರುವ ಎರಡು ಸಿನಿಮಾಗಳಿಗೆ ಇಷ್ಟೆಲ್ಲಾ ಹಾರಾಟ ಬೇಕಾ, ತಾಕತ್ತಿದ್ದರೆ ಕೆಜಿಎಫ್ ರೀತಿಯ ಒಂದು ಸಿನಿಮಾ ಮಾಡಿ ತೋರಿಸು ಎಂದು ತೆಲುಗಿನವರೇ ವೆಂಕಟೇಶ್ ಮಹಾಗೆ ಚಳಿ ಬಿಡಿಸಿದ್ದಾರೆ.


Click it and Unblock the Notifications











