ಮತ್ತೆ ಮುನ್ನೆಲೆಗೆ ನಟ-ನಟಿಯರ ಡ್ರಗ್ಸ್ ಪ್ರಕರಣ: ಆಡಿಯೋ ದಾಖಲೆ ಕಾಣೆ!
ಸಿನಿಮಾ ರಂಗದ ಡ್ರಗ್ಸ್ ಕರ್ಮಕಾಂಡ ಜಗಜ್ಜಾಹೀರಾಗಿ ಎರಡು ವರ್ಷಗಳಾದವು. 2020 ರಲ್ಲಿ ಸುಶಾಂತ್ ಸಿಂಗ್ ನಿಧನದ ಬಳಿಕ ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನ ಡ್ರಗ್ಸ್ ಪ್ರಕರಣಗಳು ಹೊರಬಿದ್ದು ಖ್ಯಾತ ನಾಮರ ಬಂಧನಗಳಾದವು. ದೀಪಿಕಾ ಪಡುಕೋಣೆ ಸೇರಿದಂತೆ ಹಲವು 'ಎ' ಲಿಸ್ಟೆಡ್ ಸೆಲೆಬ್ರಿಟಿಗಳ ವಿಚಾರಣೆಗಳು ನಡೆದವು.
ಆದರೆ ಸಿನಿಮಾ ರಂಗದ ಡ್ರಗ್ಸ್ ಹಳವಂಡ ಹೊರಬಿದ್ದಿದ್ದು ಇದೇ ಮೊದಲೇನಲ್ಲ. ಬಹಳ ವರ್ಷಗಳ ಹಿಂದೆಯೇ ತೆಲುಗು ಚಿತ್ರರಂಗದವರ ಮಾದಕ ವ್ಯಸನ ಜಗಜ್ಜಾಹೀರಾಗಿ ಚಿತ್ರರಂಗದ ಮಾನ ಮುರಾಬಟ್ಟೆಯಾಗಿತ್ತು.
2017 ರಲ್ಲಿಯೇ ತೆಲುಗು ಚಿತ್ರರಂಗದ ಹಲವು ಪ್ರಮುಖರ ಮಾದಕ ವ್ಯಸನ ಬಯಲಾಗಿತ್ತು. 2017 ರ ಜೂನ್ ತಿಂಗಳಲ್ಲಿ ಹೈದರಾಬಾದ್‌ನ ಹಲವು ಪ್ರಮುಖ ಕಾಲೇಜು, ಶಾಲೆಗಳಲ್ಲಿ ಎಂಡಿಎಂಎ, ಎಲ್‌ಎಸ್‌ಡಿ ಇನ್ನಿತರೆ ಮಾದಕ ವಸ್ತುಗಳು ಸರಬರಾಜು ಆಗುತ್ತಿರುವುದಾಗಿ ಹೈದರಾಬಾದ್ ಪೊಲೀಸರು ಪತ್ತೆ ಹಚ್ಚಿದರು. ಮಾದಕ ವಸ್ತು ಸಾಗಾಟದಾರರ ವಿಚಾರಣೆ ನಡೆದಾಗ ಅವರು ಟಾಲಿವುಡ್‌ನ ಪ್ರಮುಖ ಸೆಲೆಬ್ರಿಟಿಗಳಿಗೂ ಮಾದಕ ವಸ್ತು ಸರಬರಾಜು ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದರು.
ತೆಲುಗು ಚಿತ್ರರಂಗದ ಪ್ರಮುಖರಾದ ರಾಣಾ ದಗ್ಗುಬಾಟಿ, ನಟ ರವಿ ತೇಜ, ನಿರ್ದೇಶಕ ಪುರಿ ಜಗನ್ನಾಥ್, ನಟ ನವದೀಪ್, ತನಿಶ್, ನಟಿ ಚಾರ್ಮಿ ಕೌರ್, ಮುಮೈತ್ ಖಾನ್ ಇನ್ನೂ ಹಲವರಿಗೆ ಸಮನ್ಸ್ ನೀಡಿ ವಿಚಾರಣೆ ನಡೆಸಿದರು. ಮುಮೈತ್ ಖಾನ್ ಕೆಲ ದಿನ ಜೈಲು ವಾಸವೂ ಅನುಭವಿಸಬೇಕಾಯಿತು. ಆದರೆ ಈ ಪ್ರಕರಣ ಕಾಲಾಂತರದಲ್ಲಿ ತಣ್ಣಗಾಗಿತ್ತು. ಆದರೆ ಈ ಪ್ರಕರಣದ ಮೇಲೆ ಕಳೆದ ವರ್ಷ ಇಡಿ (ಜಾರಿ ನಿರ್ದೇಶನಾಲಯ) ಕಣ್ಣು ಬಿದ್ದಿದ್ದರಿಂದ ಈ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ.

ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ
ಅಕ್ರಮ ಹಣ ವರ್ಗಾವಣೆ ಇನ್ನಿತರೆ ವಿಷಯಗಳ ತನಿಖೆ ನಡೆಸುವ ಇಡಿ, 2017 ರ ಟಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆಗಿದೆ ಎಂಬ ಗುಮಾನಿಯ ಮೇಲೆ ಪ್ರಕರಣದ ಆರೋಪಿಗಳಿಗೆ ಪುನಃ ನೊಟೀಸ್ ನೀಡಿ ವಿಚಾರಣೆ ನಡೆಸಿತ್ತು. ರಾಣಾ ದಗ್ಗುಬಾಟಿ, ಪುರಿ ಜಗನ್ನಾಥ್, ಚಾರ್ಮಿ, ನವದೀಪ್ ಸೇರಿ ಹಲವರು ವಿಚಾರಣೆ ಎದುರಿಸಿದ್ದರು. ಇದೀಗ ಈ ಪ್ರಕರಣದಲ್ಲಿ ಮಹತ್ವದ ಅಂಶವೊಂದು ಬೆಳಕಿಗೆ ಬಂದಿದೆ.

ಹಲವು ಡಿಜಿಟಲ್ ಫೈಲ್‌ಗಳು ಕಾಣೆ
2017 ರಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದ್ದಾಗ ಸಂಗ್ರಹಿಸಲಾಗಿದ್ದ ಕೆಲವು ನಟರ ಹೇಳಿಕೆಗಳು ಈಗ ಕಾಣೆಯಾಗಿವೆ. ಹೇಳಿಕೆ ದಾಖಲಸಿದ್ದ ಆಡಿಯೋ ಫೈಲ್‌ಗಳು ಹಾಗೂ ವಿಡಿಯೋಗಳು ನಾಪತ್ತೆಯಾಗಿವೆ ಎಂದು ಇಡಿ ಕಳವಳ ವ್ಯಕ್ತಪಡಿಸಿದೆ. ಅಷ್ಟೆ ಅಲ್ಲ ಆ ಪ್ರಕರಣದ ಕಿಂಗ್ ಪಿನ್ ಎಂದೇ ಹೇಳಲಾಗಿದ್ದ ಕೆಲ್ವಿನ್ ಮಸ್ಕೆರ್ಹಾನಸ್‌ನ ಸಿಡಿಆರ್ (ಕಾಲ್ ಡಾಟಾ ರೆಕಾರ್ಡ್ಸ್) ಸಹ ಕಾಣೆಯಾಗಿವೆ ಎಂದು ಇಡಿ ಆರೋಪಿಸಿದೆ. ಕೆಲ್ವಿನ್ ಮಸ್ಕೆರ್ಹಾನಸ್‌ನಿಗೆ ರವಿತೇಜ ಹಾಗೂ ಇತರ ಸೆಲೆಬ್ರಿಟಿಗಳು ಕರೆ ಮಾಡಿ ಮಾತನಾಡಿದ್ದ ದಾಖಲೆಗಳು ಕಾಣೆಯಾಗಿವೆ.

ದಾಖಲೆಗಳು ಇವೆ ಎಂದಿದ್ದ ಅಬಕಾರಿ ಇಲಾಖೆ
ಪ್ರಕರಣವನ್ನು ಅಬಕಾರಿ ಇಲಾಖೆ ತನಿಖೆ ನಡೆಸಿತ್ತು. 2021ರ ಆಗಸ್ಟ್‌ನಲ್ಲಿ ಹೇಳಿಕೆ ನೀಡಿದ್ದ ಅಬಕಾರಿ ಇಲಾಖೆ ಎಸ್‌ಪಿ ಆರೋಪಿಗಳ ಹೇಳಿಕೆಯ ಆಡಿಯೋ ಹಾಗೂ ವಿಡಿಯೋ ರೆಕಾರ್ಡ್ ಮಾಡಿಕೊಂಡಿರುವುದಾಗಿ ಹೇಳಿದ್ದರು. ಆದರೆ ಆ ದಾಖಲೆಗಳನ್ನು ಇಡಿಗೆ ಹಸ್ತಾಂತರ ಮಾಡಿಲ್ಲ. ಈ ಡಿಜಿಟಲ್ ಸಾಕ್ಷಿಗಳನ್ನು ನ್ಯಾಯಾಲಯಕ್ಕೂ ಸಲ್ಲಿಕೆ ಮಾಡಿಲ್ಲ. ಈಗ ಪ್ರಕರಣದ ತನಿಖೆ ನಡೆಸುತ್ತಿರುವ ಇಡಿಗೆ ಸಹ ನೀಡಲಾಗಿಲ್ಲ.

ಮಾಹಿತಿ ಕೇಳಿರುವ ಇಡಿ
ತಮಗೆ ಸಾಕ್ಷ್ಯಗಳ ಹಸ್ತಾಂತರ ಮಾಡದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಇಡಿ, 'ಹಣ ವರ್ಗಾವಣೆ ಕಾಯ್ದೆಯ ಸೆಕ್ಷನ್ 50, 54 ರ ಪ್ರಕಾರ ತಾವು ತನಿಖಾ ಸಂಸ್ಥೆಯಾಗಿದ್ದು ತನಿಖೆಗೆ ಅವಶ್ಯಕವಿರುವ ಸಕಲ ಸಾಕ್ಷ್ಯಗಳನ್ನೂ ನೀಡಬೇಕೆಂದು ಇಡಿಯು ಅಬಕಾರಿ ಇಲಾಖೆಗೆ ಪತ್ರ ಬರೆದಿದೆ. ಆರೋಪಿಗಳ ಹೇಳಿಕೆಯ ರೆಕಾರ್ಡ್‌ಗಳು, ವಶಪಡಿಸಿಕೊಳ್ಳಲಾಗಿದ್ದ ಮೊಬೈಲ್, ಲ್ಯಾಪ್‌ಟಾಪ್‌ಗಳು, ಆರೋಪಿಗಳ ಮೊಬೈಲ್ ಕಾಲ್ ಮಾಹಿತಿ (ಸಿಡಿಆರ್) ಇತರೆ ಕೆಲವು ಮಾಹಿತಿಯನ್ನು ಇಡಿ ಕೇಳಿದೆ.


Click it and Unblock the Notifications











