ಡ್ರಗ್ಸ್ ಪ್ರಕರಣ: ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದ ನಟಿ ಮುಮೈತ್ ಖಾನ್
ನಾಲ್ಕು ವರ್ಷಗಳ ಹಳೆಯ ಡ್ರಗ್ಸ್ ಪ್ರಕರಣ ಸಂಬಂಧ ನಟಿ ಮುಮೈತ್ ಇಂದು (ಸೆಪ್ಟಂಬರ್ 15) ವಿಚಾರಣೆಗೆ ಹಾಜರಾಗಿದ್ದಾರೆ. ಇಂದು ಬೆಳಗ್ಗೆ ಹೈದರಾಬಾದ್ ನ ಇಡಿ (ಜಾರಿ ನಿರ್ದೇಶನಾಲಯ) ಕಚೇರಿಗೆ ಆಗಮಿಸಿದ ಮುಮೈತ್ ಖಾನ್ ಅಧಿಕಾರಿಗಳ ಪ್ರಶ್ನೆಗಳ ಪ್ರಶ್ನೆ ಎದುರಿಸಿದ್ದಾರೆ. ಸೆಪ್ಟಂಬರ್ 09ರಂದು ತೆಲುಗು ಸ್ಟಾರ್ ನಟ ರವಿತೇಜ ಇಡಿ ವಿಚಾರಣೆಗೆ ಹಾಜರಾಗಿದ್ದರು.
2017ರ ಡ್ರಗ್ಸ್ ಪ್ರಕರಣ ಸಂಬಂಧ ಈಗಾಗಲೇ ತೆಲುಗಿನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್, ನಟಿಯರಾದ ಚಾರ್ಮಿಕೌರ್, ರಕುಲ್ ಪ್ರೀತ್ ಸಿಂಗ್, ರಾಣಾ ದಗ್ಗುಬಾಟಿ ಮತ್ತು ರವಿತೇಜ ವಿಚಾರಣೆ ಎದುರಿಸಿದ್ದಾರೆ. ಇಂದು ಮುಮೈತ್ ಖಾನ್ ಸರದಿಯಾಗಿದ್ದು ಈಗಾಗಲೇ ಇಡಿ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.
2017ರ ಡ್ರಗ್ಸ್ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ತೆಲುಗಿನ ಕೆಲವು ಸೆಲೆಬ್ರಿಟಿಗಳಿಗೆ ಸಮನ್ಸ್ ಜಾರಿ ಮಾಡಲಾಗಿತ್ತು. ಅದರಂತೆ ಸೆಲೆಬ್ರಿಟಿಗಳು ತಮಗೆ ನೀಡಿದ ದಿನಾಂಕದಂದು ವಿಚಾರಣೆಗೆ ಎದುರಿಸುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆ 2017ರಲ್ಲಿ ದಕ್ಷಿಣ ಭಾರತೀಯ ಸಿನಿಮಾರಂಗವನ್ನು ತಲ್ಲಣಗೊಳಿಸಿದ್ದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಟಾಲಿವುಡ್ ಕೆಲವು ಸೆಲೆಬ್ರಿಟಿಗಳಿಗೆ ಸಮನ್ಸ್ ನೀಡಿತ್ತು. ಖ್ಯಾತ ನಟಿ ರಕುಲ್ ಪ್ರೀತ್ ಸಿಂಗ್, ರಾಣಾ ದಗ್ಗುಬಾಟಿ, ಪುರಿ ಜಗನ್ನಾಥ್, ಚಾರ್ಮಿ ಕೌರ್, ಮುಮೈತ್ ಖಾನ್ ಸೇರಿದಂತೆ ಒಟ್ಟು 13 ಜನರಿಗೆ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿ ಸಮನ್ಸ್ ಜಾರಿ ಮಾಡಿತ್ತು.

ಆಗಸ್ಟ್ 31ರಿಂದ ವಿಚಾರಣೆ ಪ್ರಾರಂಭವಾಗಿದ್ದು, ಆಗಸ್ಟ್ 31ಕ್ಕೆ ಪುರಿ ಜಗನ್ನಾಥ್ ವಿಚಾರಣೆಗೆ ಹಾಜರಾಗಿದ್ದರು. ಸುಮಾರು ಹತ್ತು ಗಂಟೆಗಳ ಕಾಲ ಇಡಿ ಅಧಿಕಾರಿಗಳಿಂದ ಪ್ರಶ್ನೆಗಳನ್ನು ಎದುರಿಸಿದರು. ಸೆಪ್ಟಂಬರ್ 2ರಂದು ನಟಿ, ನಿರ್ಮಾಪಕಿ ಚಾರ್ಮಿ ಕೌರ್ ಇಡಿ ಅಧಿಕಾರಿಗಳ ಮುಂದಿ ಹಾಜರಾಗಿದ್ದರು. ಸತತ ನಾಲ್ಕು ಗಂಟೆಗಳ ಕಾಲ ಚಾರ್ಮಿ ವಿಚಾರಣೆ ಎದುರಿಸಿದರು. ಬಳಿಕ ಸೆಪ್ಟಂಬರ್ 3ರಂದು ರಕುಲ್ ಪ್ರೀತ್ ಸಿಂಗ್ ವಿಚಾರಣೆಗೆ ಹಾಜರಾಗಿದ್ದರು. ಸೆಪ್ಟಂಬರ್ 8ರಂದು ರಾಣಾ ದಗ್ಗುಬಾಟಿ ಇಡಿ ಅಧಿಕಾರಿಗಳ ಮುಂದೆ ಹಾಜರಾಗಿದ್ದರು. ಇನ್ನು ಕೆಲವರ ವಿಚಾರಣೆ ಬಾಕಿ ಇದ್ದು, ಒಬ್ಬರೆ ಇಡಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.
2017ರ ಡ್ರಗ್ಸ್ ಪ್ರಕರಣ ಸಂಬಂಧ ಹೈದರಾಬಾದ್ ಅಬಕಾರಿ ಇಲಾಖೆಯ ವಿಶೇಷ ತನಿಖಾ ತಂಡ (ಎಸ್‌ಐಟಿ) ಟಾಲಿವುಡ್‌ನ 12 ಸೆಲೆಬ್ರಿಟಿಗಳನ್ನು ವಿಚಾರಣೆಗೆ ಒಳಪಡಿಸಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಇಲಾಖೆಯೂ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿಕೊಂಡಿತ್ತು. ಮನಿ ಲಾಂಡರಿಂಗ್ ಸಂಬಂಧಿಸಿದಂತೆ ಈಗ 13 ಸೆಲೆಬ್ರಿಟಿಗಳನ್ನು ಪ್ರಶ್ನೆ ಮಾಡಲಾಗುತ್ತಿದೆ.
ವಿಚಾರಣೆಗೆ ಹಾಜರಾದ ಸೆಲೆಬ್ರಿಟಿಗಳಲ್ಲಿ ಮುಮೈತ್ ಖಾನ್ ಎಂಟನೆಯವರಾಗಿದ್ದಾರೆ. ನಟಿ ಮುಮೈತ್ ಖಾನ್ ಡ್ರಗ್ಸ್ ಆರೋಪಿ ಕೆಲ್ವಿನ್ ಅವರಿಂದ ಡ್ರಗ್ಸ್ ಕೊಂಡುಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಕೆಲ್ವಿನ್ ಖಾತೆಯಿಂದ ಮುಮೈತ್ ಖಾನ್ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿದೆ ಎನ್ನುವ ಆರೋಪವು ಇದೆ.
ನಟಿ ಮುಮೈತ್ ಖಾನ್ ಸದ್ಯ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. 2016ರ ಬಳಿಕ ಮುಮೈತ್ ಖಾನ್ ಮತ್ತೆ ಬಣ್ಣದ ಲೋಕದಲ್ಲಿ ಮಿಂಚಿಲ್ಲ. ನಟನೆ ಮತ್ತು ಅದ್ಭುತ ಡಾನ್ಸ್ ಮೂಲಕ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದ ಮುಮೈತ್ ಖಾನ್ ಮತ್ತೆ ಯಾವಾಗ ತೆರೆಮೇಲೆ ಮಿಂಚುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.


Click it and Unblock the Notifications











