ಬುಲ್ಲಿರಾಜು ಕಾಮಿಡಿ ಹವಾ; ಈ ಬಾಲನಟನ ಸಂಭಾವನೆ ಕೇಳಿ ಟಾಲಿವುಡ್ ಸುಸ್ತು
ಬಾಲ ಕಲಾವಿದರು ಕೆಲವೊಮ್ಮೆ ಪ್ರೇಕ್ಷಕರ ಗಮನ ಸೆಳೆದುಬಿಡ್ತಾರೆ. ಪ್ಯಾನ್ ಇಂಡಿಯಾ, ಮಾಸ್ ಕಮರ್ಷಿಯಲ್ ಸಿನಿಮಾಗಳ ನಡುವೆ ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ ಸಿನಿಮಾಗಳ ಸಂಖ್ಯೆ ಕಮ್ಮಿ ಆಗ್ತಿದೆ. ಇಂತಹ ಸಿನಿಮಾಗಳಲ್ಲಿ ಸಾಕಷ್ಟು ಜನರಿಗೆ ಅವಕಾಶ ಸಿಗುತ್ತದೆ. ಫ್ಯಾಮಿಲಿ ಸಿನಿಮಾ ಅಂದ್ರೆ, ಪುಟ್ಟ ಮಕ್ಕಳ ಪಾತ್ರಗಳು ಇರುತ್ತವೆ. ಹೀಗೆ ತೆಲುಗಿನಲ್ಲಿ ತಮ್ಮ ಕಾಮಿಡಿ ಟೈಮಿಂಗ್‌ನಿಂದ ಬಾಲನಟ ರೇವಂತ್ ಕಮಾಲ್ ಮಾಡುತ್ತಿದ್ದಾರೆ
ಕಳೆದ ವರ್ಷ ಸುಗ್ಗಿ ಸಂಭ್ರಮದಲ್ಲಿ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ಬಿಡುಗಡೆ ಆಗಿತ್ತು. ಅನಿಲ್ ರಾವಿಪುಡಿ ನಿರ್ದೇಶನದ ಚಿತ್ರದಲ್ಲಿ ವಿಕ್ಟರಿ ವೆಂಕಟೇಶ್ ಜೊತೆ ಐಶ್ವರ್ಯ ರಾಜೇಶ್ ಹಾಗೂ ಮೀನಾಕ್ಷಿ ಚೌಧರಿ ನಾಯಕಿಯರಾಗಿ ಮಿಂಚಿದ್ದರು. ಲಾಜಿಕ್ ಪಕ್ಕಕ್ಕಿಟ್ಟು ನಗಿಸೋಕೆ ಅಂತ್ಲೇ ಮಾಡಿದ್ದ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಇದು. 300 ಕೋಟಿ ರೂ. ಕಲೆಕ್ಷನ್ ಮಾಡಿ ಸಿನಿಮಾ ಸದ್ದು ಮಾಡಿತ್ತು. ಚಿತ್ರದಲ್ಲಿ ಬುಲ್ಲಿರಾಜು ಪಾತ್ರದಲ್ಲಿ ಬಾಲನಟ ರೇವಂತ್ ಹೈಲೆಟ್ ಆಗಿಬಿಟ್ಟಿದ್ದ. ಬಳಿಕ ಆತನಿಗೆ ಅವಕಾಶಗಳ ಸುರಿಮಳೆ ಆಗ್ತಿದೆ. ಅದಕ್ಕೆ ತಕ್ಕಂತೆ ಸಂಭಾವನೆ ಕೂಡ ಜೇಬಿಗಿಳಿಸುತ್ತಿದ್ದಾನೆ.

ಬುಲ್ಲಿರಾಜು ಅಲಿಯಾಸ್ ರೇವಂತ್ ಈಗ ದಿನಕ್ಕೆ 1 ಲಕ್ಷ ರೂ. ಸಂಭಾವನೆ ಕೇಳುತ್ತಿದ್ದಾನೆ ಎಂದು ಟಾಲಿವುಡ್ ಅಂಗಳದಲ್ಲಿ ಚರ್ಚೆ ನಡೀತಿದೆ. ಇದನ್ನು ಕೇಳಿ ಕೆಲವರು ಶಾಕ್ ಆಗಿದ್ದಾರೆ. 'ಗಾಳಿ ಬಂದಾಗ ತೂರಿಕೋ' ಎನ್ನುವ ಗಾದೆ ಮಾತಿನಂತೆ ಡಿಮ್ಯಾಂಡ್ ಇದ್ದಾಗಲೇ ಬಂದಷ್ಟು ದುಡಿದುಕೊಳ್ಳಬೇಕು. ಅದೇ ಕೆಲಸ ರೇವಂತ್ ಮಾಡುತ್ತಿದ್ದಾನೆ ಎನ್ನುವವರು ಇದ್ದಾರೆ. 'ಸಂಕ್ರಾಂತಿಕಿ ವಸ್ತುನ್ನಾಂ' ಬಳಿಕ ಈ ವರ್ಷ ಸುಗ್ಗಿ ಸಂಭ್ರಮದಲ್ಲಿ ಬಂದಿದ್ದ 'ಮನ ಶಂಕರವರಪ್ರಸಾದ್‌ಗಾರು' ಚಿತ್ರದಲ್ಲಿ ಕೂಡ ಬುಲ್ಲಿರಾಜು ಕಾಮಿಡಿ ಕಿಕ್ ಇತ್ತು. ಅದು ಕ್ಲಿಕ್ ಕೂಡ ಆಗಿತ್ತು. ಅದೇ ಕಾರಣಕ್ಕೆ ಆತನಿಗೆ ಈಗ ಡಿಮ್ಯಾಂಡ್ ಶುರುವಾಗಿದೆ.
ಆಂಧ್ರದ ಗೋದಾವರಿ ಜಿಲ್ಲೆಯ ಗನಪವರಂ ಮೂಲದ ಪ್ರತಿಭೆ ರೇವಂತ್. ಸದ್ಯ 7ನೇ ತರಗತಿಯಲ್ಲಿ ಓದುತ್ತಿದ್ದಾನೆ. 'ಸಂಕ್ರಾಂತಿಕಿ ವಸ್ತುನ್ನಾಂ' ಚಿತ್ರದಲ್ಲಿ ನಟಿಸುವಾಗ 5ನೇ ತರಗತಿ ವಿದ್ಯಾರ್ಥಿ. ಪವನ್ ಕಲ್ಯಾಣ್ ಅಭಿಮಾನಿಯಾಗಿದ್ದ ರೇವಂತ್ ಗನಪವರಂನಲ್ಲಿ ಜನಸೇನಾ ಪಕ್ಷಕ್ಕೆ ಪ್ರಚಾರ ಮಾಡಿದ್ದ. ಜನಸೇನಾ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಎಂದು ಮನೆ ಮನೆಗೆ ಹೋಗಿ ಮನವಿ ಮಾಡಿದ್ದ. ಆ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಬಳಿಕ ನಿರ್ದೇಶಕ ಅನಿಲ್ ರಾವಿಪುಡಿ ಕಣ್ಣಿಗೆ ಬಿದ್ದು 'ಸಂಕ್ರಾಂತಿಕಿ ವಸ್ತುನ್ನಾಂ' ಚಿತ್ರಕ್ಕೆ ಆಡಿಷನ್ ಕೊಟ್ಟು ಆಯ್ಕೆ ಆಗಿದ್ದ. ಬಳಿಕ ಅದೃಷ್ಟ ಆತನ ಕೈಹಿಡಿಯಿತು.
ಗೋದಾವರಿ ಶೈಲಿಯ ಭಾಷೆ, ಕಾಮಿಡಿ ಟೈಮಿಂಗ್, ಉಡಾಫೆ ಮಾತುಗಳು ಬಲ್ಲಿರಾಜು ಪಾತ್ರಕ್ಕೆ ಹೊಂದಿಕೊಂಡಿತ್ತು. ಆತನಿಗಾಗಿಯೇ ಎರಡೆರಡು ಬಾರಿ ಸಿನಿಮಾ ನೋಡಿದವರು ಇದ್ದಾರೆ. 'ಅನಗನಗ ಒಕರೊಜು' ಎಂಬ ಮತ್ತೊಂದು ಚಿತ್ರದಲ್ಲೂ ಬಣ್ಣಹಚ್ಚಿದ್ದ. ಸದ್ಯ ಅನಿಲ್ ರಾವಿಪುಡಿ ನಿರ್ದೇಶನದ ಹೊಸ ಸಿನಿಮಾ ಶುರುವಾಗಿದೆ. ವೆಂಕಟೇಶ್ ಹಾಗೂ ಕಲ್ಯಾಣ್ ಇನ್ನು ಹೆಸರಿಡದ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ಕೀರ್ತಿ ಸುರೇಶ್ ಹಾಗೂ ಕೃತಿ ಶೆಟ್ಟಿ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಈ ಚಿತ್ರದಲ್ಲೂ ರೇವಂತ್ ಕಾಮಿಡಿ ಕಲರವ ಇರಲಿದೆ.
12 ವರ್ಷ ವಯಸ್ಸಿನ ಬಾಲನಟ ರೇವಂತ್ ಈಗ ತೆಲುಗು ಚಿತ್ರರಂಗದಲ್ಲಿ ಸಖತ್ ಡಿಮ್ಯಾಂಡ್ ಸೃಷ್ಟಿಸಿಕೊಂಡಿದ್ದಾನೆ. ಬುಲ್ಲಿರಾಜು ರೇವಂತ್ ಅಂತ್ಲೇ ಪ್ರೇಕ್ಷಕರಿಗೆ ಚಿರಪರಿಚಿತನಾಗಿದ್ದಾನೆ. ಆತನ ಕ್ರೇಜ್‌ಗೆ ತಕ್ಕಂತೆ ದಿನಕ್ಕೆ 1 ಲಕ್ಷ ರೂ. ಸಂಭಾವನೆ ಕೊಡುವುದರಲ್ಲಿ ತಪ್ಪೇನು ಇಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications