ಜೀವ ಬಲಿ ಪಡೆಯಿತು ಮಾರಣಾಂತಿಕ ಕಾಯಿಲೆ, ಚಿಕಿತ್ಸೆಗೆ ಹಣ ಇಲ್ಲದೇ ದುರಂತ ಅಂತ್ಯ ಕಂಡ ನಟಿ
ಬಣ್ಣದ ಲೋಕ ಅನೇಕರ ಆಕರ್ಷಣೆಯ ಕ್ಷೇತ್ರ. ಕಿರುತೆರೆ ಇರಲಿ.. ಬೆಳ್ಳಿತೆರೆ ಇರಲಿ .. ಕನಸೆಂಬ ಕುದುರೆಯನ್ನೇರಿದ ಅನೇಕರು ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳಲು ಈ ಕಡೆ ಬರುತ್ತಾರೆ. ಕೆಲವರು ಗೆಲ್ಲುತ್ತಾರೆ. ಕೆಲವರು ಸೋಲುತ್ತಾರೆ. ಜನಸಾಮಾನ್ಯರ ದೃಷ್ಟಿಯಲ್ಲಿ ಸಿನಿಮಾರಂಗ ಅಂದ ತಕ್ಷಣ ಕಣ್ತುಂಬ ಬಣ್ಣಗಳೇ ತುಂಬಿಕೊಳ್ಳುತ್ತವೆ. ಆದರೆ, ಹಾಗೆ ನೋಡಿದರೆ ಬೇರೆಲ್ಲ ಉದ್ಯಮಕ್ಕಿಂತಾ ಅನಿಶ್ಚಿತತೆ, ಅಭದ್ರತೆ ಇಲ್ಲಿ ಸ್ವಲ್ಪ ಹೆಚ್ಚೇ ಇದೆ.
ಸಾಧನೆಯ ಶಿಖರಕ್ಕೇರಲೇಬೇಕೆಂಬ ಶಪಥ ಮಾಡಿ ಹಗಲಿರುಳು ಪ್ರಯತ್ನ ಮಾಡಿದರೂ ಕೂಡ ಕೆಲ ಒಮ್ಮೆ ಈ ಪ್ರಯಾಣದಲ್ಲಿ ಅಗ್ನಿ ಪರೀಕ್ಷೆಗಳು ಎದುರಾಗುತ್ತಾವೆ. ಇನ್ನೂ ಕೆಲ ಒಮ್ಮೆ ಎಲ್ಲವೂ ಕೂಡಿ ಬಂದಾಗ, ಬದುಕು ಒಂದು ಹಂತಕ್ಕೆ ರೂಪಗೊಳ್ಳುತ್ತಿರುವಾಗ. ವಿಧಿಯ ಆಟ ಬೇರೆಯದ್ದೇ ಆಗಿರುತ್ತೆ. ಇದಕ್ಕೆ ತೆಲುಗಿನ ಖ್ಯಾತ ನಟಿ ವಾಹಿನಿ ಅವರ ದುರಂತ ಅಂತ್ಯ ಮತ್ತೊಂದು ಉದಾಹರಣೆ.

ಹೌದು ವಾಹಿನಿ ತೆಲುಗು ಕಿರುತೆರೆಯ ಪ್ರಖ್ಯಾತ ಹೆಸರು. ಜಯ ವಾಹಿನಿ ಎಂದೇ ಇವರು ಚಿರಪರಿಚಿತ. ಕೆಲವರು ಇವರನ್ನು ಪದ್ಮಕ್ಕ ಎಂದು ಕೂಡ ಕರೆಯುತ್ತಾರೆ. ಹತ್ ಹತ್ರ 25 ವರ್ಷಗಳಿಂದ ಕಲಾ ಸೇವೆ ಮಾಡಿಕೊಂಡು ಬಂದಿದ್ದ ವಾಹಿನಿ 2004ರಲ್ಲಿ ತೆರೆಗೆ ಬಂದಿದ್ದ ಸೌಂದರ್ಯ ಅಭಿನಯದ "ಶ್ವೇತನಾಗು" ಚಿತ್ರದಲ್ಲಿ ವಾಸುಕಿ ಪಾತ್ರ ನಿರ್ವಹಿಸಿದ್ದರು. ಈ ಪಾತ್ರ ಇವರಿಗೆ ಅಪಾರವಾದ ಜನಪ್ರಿಯತೆಯನ್ನು ಕೂಡ ನೀಡಿತ್ತು. ತೀರಾ ಇತ್ತೀಚೆಗಷ್ಟೇ ''ಬಹಿರ್ಭೂಮಿ'' ಚಿತ್ರದಲ್ಲೂ ಅಭಿನಯಿಸಿದ್ದರು ವಾಹಿನಿ.
ಇಂಥಾ ವಾಹಿನಿ ಕಳೆದ ಕೆಲ ದಿನಗಳಿಂದ ಸಾವು ಬದುಕಿನ ಹೋರಾಟ ಮಾಡುತ್ತಿದ್ದರು. ಸ್ತನ ಕ್ಯಾನ್ಸರ್ ದಿಂದ ಹೈರಾಣಾಗಿದ್ದರು. ಚಿಕಿತ್ಸೆ ಪಡೆಯುತ್ತಿದ್ದರು.
ವೈದ್ಯರ ಪ್ರಕಾರ.. ಕ್ಯಾನ್ಸರ್ ಕೊನೆಯ ಹಂತ ತಲುಪಿತ್ತು. ಬಹು-ಅಂಗಾಂಗ ವೈಫಲ್ಯದ ಲಕ್ಷಣಗಳು ಕೂಡ ಕಾಣಿಸಿಕೊಂಡಿದ್ದವು. ಇನ್ನು ಕಿಮೊಥೆರಪಿ ಮತ್ತು ಇನ್ನುಳಿದ ಶಸ್ತ್ರ ಚಿಕಿತ್ಸೆಗೆ ಕಡಿಮೆ ಅಂದರೂ 25 ರಿಂದ 35 ಲಕ್ಷದ ಅವಶ್ಯಕತೆ ಇತ್ತು.
ಆದರೆ ದುರಂತ ಅಂದರೆ ಕಲೆಯನ್ನೇ ಉಸಿರಾಗಿಸಿಕೊಂಡ ವಾಹಿನಿ ಬಳಿ ಈ ಹೋರಾಟದಲ್ಲಿ ಬದುಕುಳಿಯಲು ಹಣ ಇರಲಿಲ್ಲ. ಈ ಹಿನ್ನೆಲೆ ತೆಲುಗು "ಬಿಗ್ ಬಾಸ್" ಕಾರ್ಯಕ್ರಮದ ಮೂಲಕ ಆಂಧ್ರದೆಲ್ಲೆಡೆ ಫೈರ್ ಬ್ರ್ಯಾಂಡ್ ಎಂದೇ ಪ್ರಖ್ಯಾತರಾದ ಕರಾಟೆ ಕಲ್ಯಾಣಿ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದ್ದರು. ವಾಹಿನಿ ಅವರನ್ನು ಉಳಿಸಿ ಎಂದು ಅಂಗಲಾಚಿ ಬೇಡಿಕೊಂಡಿದ್ದರು.

ಕರಾಟೆ ಕಲ್ಯಾಣಿ ಅವರ ಈ ಮನವಿಗೆ ಹಲವಾರು ಜನ ಸ್ಪಂದಿಸಿದ್ದರು ಕೂಡ. ವಾಹಿನಿ ಅವರಿಗೆ ಹಲವರು ನೆರವಿನ ಹಸ್ತ ಚಾಚಿದ್ದರು. ಇನ್ನೂ ಕೆಲವರು ಮೆಗಾಸ್ಟಾರ್ ಚಿರಂಜೀವಿ ಅವರನ್ನೊಳಗೊಂಡು ತೆಲುಗು ಚಿತ್ರರಂಗದ ಹಲವು ಕಲಾವಿದರಲ್ಲಿ ವಾಹಿನಿ ಅವರಿಗೆ ಸಹಾಯ ಮಾಡುವಂತೆ ಮನವಿಯನ್ನು ಕೂಡ ಮಾಡಿಕೊಂಡಿದ್ದರು.
ಹಲವರು ಮಾಡುತ್ತಿದ್ದ ಸಹಾಯ ಮತ್ತು ಪ್ರಾರ್ಥನೆಯ ಫಲದಿಂದ ವಾಹಿನಿ ಬದುಕುಳಿಯುವ ಆಶಯ ಇತ್ತು. ಆದರೆ. ವಿಧಿಲಿಖಿತ.. ಈ ಹೋರಾಟದಲ್ಲಿ ವಾಹಿನಿ ಸೋತರು. 48ನೇ ವಯಸ್ಸಿನಲ್ಲಿ (ಬುಧವಾರ-ಫೆಬ್ರವರಿ 4) ಇಹಲೋಕ ತ್ಯಜಿಸಿದರು.
ಈ ಹಿನ್ನೆಲೆ ತಮ್ಮ ಸ್ನೇಹಿತೆಯನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದ ಕರಾಟೆ ಕಲ್ಯಾಣಿ, ವಾಹಿನಿ ಅವರ ಅಗಲಿಕೆಯ ಸುದ್ದಿಯನ್ನು ಹಂಚಿಕೊಂಡು ಭಾವುಕರಾಗಿದ್ದಾರೆ. 'ವಾಹಿನಿ (ಪದ್ಮಕ್ಕ) ಅಕ್ಕ, ನಿನ್ನನ್ನು ಉಳಿಸಿಕೊಳ್ಳಲು ನಾನು ತುಂಬಾ ಪ್ರಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ ಎಂದಿರುವ ಕಲ್ಯಾಣಿ ಸ್ವಲ್ಪ ಸಮಯದ ಹಿಂದೆ, ತನ್ನ ಜನ್ಮಸ್ಥಳವಾದ ವಿಜಯನಗರದಲ್ಲಿ ಅವರು ದೇವರ ಪಾದ ಸೇರಿದ್ದಾರೆ ಎಂದು ಹೇಳಿದ್ದಾರೆ. ವಾಹಿನಿ ಅವರ ಪವಿತ್ರ ಆತ್ಮಕ್ಕೆ ಶಾಂತಿ ಸಿಗಲಿ, ಓಂ ಶಾಂತಿ. ವಿ ಮಿಸ್ ಯು ಎಂದು ಹೇಳಿರುವ ಕರಾಟೆ ಕಲ್ಯಾಣಿ ಪದ್ಮಕ್ಕ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











