'ಸಲಾರ್' ತಂಟೆಗೆ ಹೋದ ಇಬ್ಬರ ಬಂಧನ: ಖಡಕ್ ಎಚ್ಚರಿಕೆ ಕೊಟ್ಟ ಚಿತ್ರತಂಡ
ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಹೊಂಬಾಳೆ ಸಂಸ್ಥೆ ಬಹಳ ಅದ್ಧೂರಿಯಾಗಿ ಈ ಸಿನಿಮಾ ನಿರ್ಮಾಣ ಮಾಡಿದೆ. 2 ಭಾಗಗಳಾಗಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಪ್ರಭಾಸ್ ಆರ್ಭಟ ನೋಡೋಕೆ ಅಭಿಮಾನಿಗಳು ಉತ್ಸುಕರಾಗಿದ್ದಾರೆ.
ಡಿಸೆಂಬರ್ 1ಕ್ಕೆ 'ಸಲಾರ್' ಟ್ರೈಲರ್ ರಿಲೀಸ್ ಆಗಲಿದೆ. ಯಾವ ಭಾಗದಲ್ಲಿ ಯಾರು 'ಸಲಾರ್' ಚಿತ್ರವನ್ನು ವಿತರಣೆ ಮಾಡುತ್ತಾರೆ? ಎನ್ನುವ ಬಗ್ಗೆಯೂ ಚಿತ್ರತಂಡ ಮಾಹಿತಿ ಕೊಡುತ್ತಿದೆ. ಕರ್ನಾಟಕದಲ್ಲಿ ಹೊಂಬಾಳೆ ಸಂಸ್ಥೆಯ ಸಿನಿಮಾ ರಿಲೀಸ್ ಜವಾಬ್ದಾರಿ ವಹಿಸಿಕೊಂಡಿದೆ. ವಿಶ್ವದಾದ್ಯಂತ 5000 ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 'ಸಲಾರ್' ದರ್ಬಾರ್ ಶುರುವಾಗಲಿದೆ. ಸಿನಿಮಾ ಕತೆಯ ಬಗ್ಗೆ ಕುತೂಹಲ ಹೆಚ್ಚಾಗುತ್ತಲೇಯಿದೆ.

'KGF' ಸರಣಿಗೆ ಕೆಲಸ ಮಾಡಿದ ಬಹುತೇಕ ತಂಡ 'ಸಲಾರ್' ಸರಣಿಗೆ ಕೈ ಜೋಡಿಸಿದೆ. ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಈಶ್ವರಿ ರಾವ್ ಸೇರಿದಂತೆ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ. ಶ್ರುತಿ ಹಾಸನ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾ ಕತೆ ಬಗ್ಗೆ ಚಿತ್ರತಂಡ ಈವರೆಗೆ ಸುಳಿವು ಬಿಟ್ಟುಕೊಟ್ಟಿಲ್ಲ. ಇನ್ನು ಪೋಸ್ಟರ್‌ಗಳು, ಟೀಸರ್ ಬಿಟ್ಟರೆ ಸಿನಿಮಾ ಬಗ್ಗೆ ಹೆಚ್ಚಿನ ಕಂಟೆಂಟ್ ಕೂಡ ಹೊರ ಬಂದಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಲೀಕಾಸುರರ ಆರ್ಭಟ ಮುಂದುವರೆದಿದೆ.
'ಸಲಾರ್' ಮೇಕಿಂಗ್ ವಿಡಿಯೋಗಳು, ಫೋಟೊಗಳು ಆಗಿಂದಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 'ಸಲಾರ್' ಚಿತ್ರದ ಕಂಟೆಂಟ್ ಲೀಕ್ ಮಾಡಿದ್ದಕ್ಕಾಗಿ ಇಬ್ಬರನ್ನು ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ. ತಮ್ಮ ಅನುಮತಿ ಇಲ್ಲದೇ ಚಿತ್ರದ ಕಂಟೆಂಟ್‌ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಇಬ್ಬರನ್ನು ಚಿತ್ರತಂಡ ಪೊಲೀಸರಿಗೆ ಒಪ್ಪಿಸಿದೆಯಂತೆ. ಕಂಟೆಂಟ್ ವಿಚಾರಲ್ಲಿ ಈ ರೀತಿ ಮುಂದೆ ಏನಾದರೂ ತಪ್ಪಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿರುವುದಾಗಿಯೂ ಹೇಳಲಾಗ್ತಿದೆ.
'ಸಲಾರ್' ಸಿನಿಮಾ ರಿಲೀಸ್ ಡೇಟ್ ಹತ್ತಿರವಾಗುತ್ತಿದಂತೆ ಲೀಕ್ ವಿಚಾರದಲ್ಲಿ ಚಿತ್ರತಂಡ ಮತ್ತಷ್ಟು ಎಚ್ಚರಿಕೆ ವಹಿಸುತ್ತಿರುವುದು ಗೊತ್ತಾಗುತ್ತಿದೆ. ಸದ್ಯ ಇಬ್ಬರನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆಯನ್ನು ಮುಂದುವರೆಸಿದ್ದಾರೆ.
'ಬಾಹುಬಲಿ' ಸರಣಿ ಬಳಿಕ ದೊಡ್ಡಮಟ್ಟದ ಹಿಟ್ ಕೊಡುವಲ್ಲಿ ಪ್ರಭಾಸ್ ಎಡವುತ್ತಿದ್ದಾರೆ. 'ಸಲಾರ್' ಆಗಿ ಕಂಬ್ಯಾಕ್ ಮಾಡುವ ಭರವಸೆಯಲ್ಲಿದ್ದಾರೆ. ಇದು ಪಕ್ಕಾ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಆಗಿದ್ದು ಡಾರ್ಲಿಂಗ್ ಅಭಿಮಾನಿಗಳಿಗೆ ಬಾಡೂಟದಂತಹ ಸಿನಿಮಾ ಎನ್ನಲಾಗ್ತಿದೆ. ಈಗಾಗಲೇ ರಿಲೀಸ್ ಆಗಿರುವು ಟೀಸರ್ ಇನ್ನಿಲ್ಲದ ಕುತೂಹಲ ಮೂಡಿಸಿದೆ.
ಈಗಾಗಲೇ ಓವರ್‌ಸೀಸ್ ಮಾರ್ಕೆಟ್‌ನಲ್ಲಿ 'ಸಲಾರ್' ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಸೆಪ್ಟೆಂಬರ್ 28ಕ್ಕೆ 'ಸಲಾರ್' ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ 3 ತಿಂಗಳು ರಿಲೀಸ್ ಮುಂದೂಡಲಾಯಿತು. ತಿಂಗಳಿಗೂ ಮೊದ್ಲೆ ಹೊರ ದೇಶಗಳಲ್ಲಿ ಪ್ರೇಕ್ಷಕರು ಟಿಕೆಟ್ ಅಡ್ವಾನ್ಸ್ ಬುಕ್ಕಿಂಗ್ ಮಾಡಿಕೊಂಡಿದ್ದರು. ಬಳಿಕ ಟಿಕೆಟ್ ರದ್ದು ಮಾಡಿ ಹಣ ಮರಳಿಸಲಾಗಿತ್ತು. ಇದೀಗ ಮತ್ತೆ ಬುಕ್ಕಿಂಗ್ ಶುರುವಾಗಿದೆ.
'ಸಲಾರ್' ಜೊತೆಗೆ ಕ್ರಿಸ್‌ಮಸ್ ಸಂಭ್ರಮದಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಆಗಲಿವೆ. ಶಾರುಖ್ ಖಾನ್ ನಟನೆಯ 'ಡಂಕಿ' ಸಿನಿಮಾ ಕೂಡ ಅದೇ ದಿನ ತೆರೆಗಪ್ಪಳಿಸಲಿದೆ. ರಾಜ್ ಕುಮಾರ್ ಹಿರಾನಿ ನಿರ್ದೇಶನದ ಈ ಸಿನಿಮಾ ಕೂಡ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಇನ್ನು ಹಾಲಿವುಡ್‌ನ 'ಅಕ್ವಾಮನ್' ಸರಣಿ ಸಿನಿಮಾ ಕೂಡ ತೆರೆಗೆ ಬರ್ತಿದೆ. ಮಲಯಾಳಂನಲ್ಲಿ ಮೋಹನ್ ಲಾಲ್ ನಟನೆಯ 'ನೆರು' ಸೇರಿ 10ಕ್ಕೂ ಹೆಚ್ಚು ಸಿನಿಮಾಗಳು ಕ್ರಿಸ್‌ಮಸ್ ವೀಕೆಂಡ್ ಮೇಲೆ ಕಣ್ಣಿಟ್ಟಿವೆ.


Click it and Unblock the Notifications











