ದುರಂತ ನಾಯಕ ಉದಯ್ ಕಿರಣ್ ಸಿನಿಮಾ ರೀ ರಿಲೀಸ್ ; ಇಂದಿನಿಂದ ನುವ್ವು ನೇನು..!
'ಚಿತ್ರಮ್' ಚಿತ್ರದ ಮೂಲಕ 'ಚಿತ್ರರಂಗ'ಕ್ಕೆ ಬಂದು 'ಚಮತ್ಕಾರ'ವನ್ನ ಮಾಡಿದ್ದವರು 'ಉದಯ್ ಕಿರಣ್'. ಕೇವಲ ಅತ್ಯಲ್ಪ ಅವಧಿಯಲ್ಲಿಯೇ ಕೀರ್ತಿಯ ಶಿಖರವನ್ನೇರಿದ ಉದಯ್ ಕಿರಣ್ ಅವರಿಗೆ ಏಕಾಏಕಿ ಸಿಕ್ಕ ಸ್ಟಾರ್ ಡಂನ ಸಂಭಾಳಿಸಲು ಆಗಲಿಲ್ಲವಾ..? ಅಥವಾ ಆ ನಂತರ ಎದುರಾದ ಸೋಲನ್ನ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲವಾ..? ಗೊತ್ತಿಲ್ಲ. ಆದರೆ ಉದಯ್ ಕಿರಣ್ ಅವರ ಸಾವಿನ ಸುತ್ತ ಇವತ್ತು ಕೂಡ ತೆಲುಗು ಅಭಿಮಾನಿಗಳಲ್ಲಿ ಹಲವಾರು ಪ್ರಶ್ನೆಗಳು ಇದ್ದೇ ಇವೆ.
ತಮ್ಮ ಜೀವಿತಾವಧಿಯಲ್ಲಿ ನುವ್ವು ನೇನು, ಚಿತ್ರಮ್, ಮನಸಂತ ನುವ್ವೆ, ನೀ ಸ್ನೇಹಮ್, ಕಲುಸುಕೋವಾಲನಿ, ನೀಕು ನೇನು ನಾಕು ನುವ್ವು, ಹೀಗೆ ಅನೇಕ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟ ಹೆಗ್ಗಳಿಕೆ ಹೊಂದಿರುವ ಉದಯ್ ಕಿರಣ್, ಇವತ್ತು ದೈಹಿಕವಾಗಿ ಇಲ್ಲದೇ ಇದ್ದರೂ ಅವರ ನೆನಪು ಅವರ ಅಭಿಮಾನಿಗಳನ್ನ ಕಾಡ್ತಿದೆ. ಹೀಗಾಗಿಯೇ ಉದಯ್ ಕಿರಣ್ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ ನುವ್ವು ನೇನು ಚಿತ್ರಕ್ಕೆ ಹೊಸ ಸ್ಪರ್ಶವನ್ನ ನೀಡಲಾಗಿದೆ. ಇಂದು ಮರು ಬಿಡುಗಡೆ ಮಾಡಲಾಗಿದೆ.

ಹೌದು, ಸದ್ಯಕ್ಕೆ ದಕ್ಷಿಣದ ಎಲ್ಲ ಭಾಷೆಯಲ್ಲಿಯೂ ರೀ-ರಿಲೀಸ್ ಟ್ರೆಂಡ್ ನಡೆಯುತ್ತಿದೆ. ಕನ್ನಡದಲ್ಲಿ ಮೊನ್ನೆಯಷ್ಟೇ ಮರು ಬಿಡುಗಡೆಯಾದ ಜಾಕಿ ಐತಿಹಾಸಿಕ ದಾಖಲೆ ಬರೆದಿದೆ. ಇನ್ನೂ ತೆಲುಗಿನಲ್ಲಿ ಸಮರ ಸಿಂಹ ರೆಡ್ಡಿ ಸೇರಿ ಅನೇಕ ಚಿತ್ರಗಳು ಮರು ಬಿಡುಗಡೆ ಭಾಗ್ಯವನ್ನ ಕಂಡಿವೆ. ಆ ಸಾಲಿಗೀಗ ನುವ್ವು ನೇನು ಸಿನಿಮಾ ಕೂಡ ಸೇರಿಕೊಂಡಿದೆ.
ನುವ್ವು ನೇನು, ಉದಯ್ ಕಿರಣ್ ಅಭಿನಯಿಸಿದ್ದ ಎರಡನೇ ಸಿನಿಮಾ. 2001ರಲ್ಲಿ ತೆರೆಗೆ ಬಂದ ಈ ಚಿತ್ರಕ್ಕೆ ತೇಜಾ ನಿರ್ದೇಶನ ಇತ್ತು. ಆ ಕಾಲಕ್ಕೆ ವ್ಯಾಪಕವಾಗಿ ಸದ್ದು ಮಾಡಿದ್ದ ಈ ಸಿನಿಮಾವನ್ನ ಅಂದಿನ ಯುವಕ-ಯುವತಿಯರು ಮುಗಿ ಬಿದ್ದು ನೋಡಿದ್ದರು.

ಇನ್ನೂ ಉದಯ್ ಕಿರಣ್ ಜೊತೆ ಈ ಚಿತ್ರದಲ್ಲಿ ನಾಯಕಿಯಾಗಿ ಅನಿತಾ ಕಾಣಿಸಿಕೊಂಡಿದ್ದರು. ವಿಶೇಷ ಅಂದರೆ ನುವ್ವು ನೇನು ಉದಯ್ ಕಿರಣ್ ಅವರಿಗೂ ಎರಡನೇ ಸಿನಿಮಾ ಆಗಿದ್ದರೆ, ಅನಿತಾ ಅವರಿಗೂ ಎರಡನೇ ಸಿನಿಮಾ ಆಗಿತ್ತು. ಅನಿತಾ ಬದುಕು ಇಲ್ಲಿಂದಾಚೆ ಮತ್ತೊಂದು ಮಗ್ಗಲಿನತ್ತ ಹೊರಳಿತ್ತು. ಈ ಕಾರಣಕ್ಕೆ ನುವ್ವು ನೇನು ಸಿನಿಮಾ ಅನಿತಾ ಪಾಲಿಗೆ ಯಾವತ್ತು ವಿಶೇಷ. ಹೀಗಾಗಿಯೇ ಚಿತ್ರದ ಮರು ಬಿಡುಗಡೆಯನ್ನ ಸಂಭ್ರಮಿಸುತ್ತಿರುವ ಅನಿತಾ, ತಮ್ಮ ಹಾಗೂ ಉದಯ್ ಕಿರಣ್ ಅಭಿಮಾನಿಗಳಲ್ಲಿ ಚಿತ್ರ ನೋಡುವಂತೆ ಮನವಿಯನ್ನ ಮಾಡಿದ್ದಾರೆ. ವಿಡಿಯೋ ಹಂಚಿಕೊಂಡಿದ್ದಾರೆ.

ಎಲ್ಲರಿಗೂ ನಮಸ್ಕಾರ, ನನಗೆ ತುಂಬಾ ಸಂತೋಷವಾಗಿದೆ. ನುವ್ವು ನೇನು ಚಿತ್ರ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲಿದೆ. ನಾನು, ಉದಯ್ ಮತ್ತು ನಮ್ಮ ಚಿತ್ರತಂಡ ಈ ಚಿತ್ರಕ್ಕಾಗಿ ಆಗ ತುಂಬಾ ಶ್ರಮ ಹಾಕಿದ್ದೇವು. ಆ ಶ್ರಮಕ್ಕೆ ಮತ್ತೊಮ್ಮೆ ನೀವು ಚಿತ್ರ ನೋಡುವ ಮೂಲಕ ಬೆಲೆ ಕೊಡ್ತೀರಾ ಎಂದು ನಾನು ಭಾವಿಸುತ್ತೇನೆ ಎಂದಿರುವ ಅನಿತಾ We Miss You Udayಅಂದಿದ್ದಾರೆ


Click it and Unblock the Notifications











