"ನಂಗೆ 55 ವರ್ಷ, ಆ ಐಟಂ ಸಾಂಗ್ ಎಂಜಾಯ್ ಮಾಡ್ದೆ.. ನಿಂಗೆ 25 ವರ್ಷ, ಆದ್ರೆ"; ಉಪ್ಪಿ ಹೇಳಿಕೆ ವೈರಲ್
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ 'ಯುಐ' ಸಿನಿಮಾ ಬಿಡುಗಡೆಗೆ ಇನ್ನೊಂದು ದಿನ ಬಾಕಿಯಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರ್ತಿದೆ. 2000 ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ವಿಶ್ವದಾದ್ಯಂತ ಸಿನಿಮಾ ರಿಲೀಸ್ ಆಗುತ್ತಿದೆ. ತೆಲಂಗಾಣ, ತಮಿಳುನಾಡಿನಲ್ಲಿ ಉಪ್ಪಿ ಪ್ರಚಾರ ಮಾಡುತ್ತಿದ್ದಾರೆ.
ಬಹಳ ದಿನಗಳ ಬಳಿಕ ಉಪೇಂದ್ರ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಈಗಾಗಲೇ 'ಯುಐ' ಚಿತ್ರದ ಟೀಸರ್, ಸಾಂಗ್ಸ್ ಹಿಟ್ ಆಗಿದೆ. ಹಾಗಾಗಿ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಉಪೇಂದ್ರ ನಿರ್ದೇಶನದ ಚಿತ್ರಗಳು ತೆಲುಗಿನಲ್ಲೂ ಸದ್ದು ಮಾಡಿವೆ. ಹಾಗಾಗಿ ಅಲ್ಲಿ ಕೂಡ ಉಪ್ಪಿಗೆ ಅಭಿಮಾನಿ ಬಳಗ ಇದೆ. 'ಯುಐ' ಚಿತ್ರದ ಬಗ್ಗೆ ಅಲ್ಲಿಯೂ ನಿರೀಕ್ಷೆ ಹೆಚ್ಚಿದೆ.

ಹೈದರಾಬಾದ್‌ನಲ್ಲಿ ಚಿತ್ರದ ಪ್ರಚಾರದ ವೇಳೆ ಸಾಕಷ್ಟು ಸಂದರ್ಶನಗಳಲ್ಲಿ ಉಪೇಂದ್ರ ಭಾಗಿ ಆಗಿದ್ದಾರೆ. ಈ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಹಿಂದಿನ ಚಿತ್ರಗಳ ಬಗ್ಗೆಯೂ ಉಪ್ಪಿ ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗೆ ಚಿತ್ರಗಳಿಗೆ ನೆಗೆಟಿವ್ ಟಾಕ್ ಬರುತ್ತಿರುವ ಬಗ್ಗೆಯೂ ರಿಯಲ್ ಸ್ಟಾರ್ ಮಾತನಾಡಿದ್ದಾರೆ.
ಉಪ್ಪಿ ಯಾವುದೇ ಪ್ರಶ್ನೆಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸುತ್ತಾರೆ. ಎಲ್ಲರಿಗೂ ಇಷ್ಟವಾದ ಸಿನಿಮಾ ನಿಮಗೆ ಇಷ್ಟವಾಗದೇ ಇರುವ ಉದಾಹರಣೆ ಇದ್ಯಾ? ಎನ್ನುವ ಪ್ರಶ್ನೆಗೆ ಇಲ್ಲ ಎಂದು ಉತ್ತರಿಸಿದ್ದಾರೆ. ನಾನು ಫಿಲ್ಮ್ ಮೇಕರ್ ಆಗಿ ಸಿನಿಮಾ ನೋಡಲ್ಲ, ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿಯೇ ಸಿನಿಮಾಗಳನ್ನು ನೋಡುತ್ತೇನೆ ಎಂದು ಉಪೇಂದ್ರ ತಿಳಿಸಿದ್ದಾರೆ.
ಕೆಲವೊಮ್ಮೆ ಸಿನಿಮಾ ಚೆನ್ನಾಗಿಲ್ಲ, ಕೆಟ್ಟದಾಗಿಯೇ ಎನ್ನುವ ಟಾಕ್ ಬಂದಿರುವುದು. ನಾನು ಅಪ್ಪಿ ತಪ್ಪಿ ಅದೇ ಸಿನಿಮಾ ನೋಡಿದಾಗ, ಅರೇ ಎಷ್ಟು ಚೆನ್ನಾಗಿದೆ ಎಂದು ಫೀಲ್ ಆಗಿದ್ದೇನೆ. ಬಳಿಕ ಆ ಸಿನಿಮಾ ಸೂಪರ್ ಹಿಟ್ ಆಗಿರುತ್ತದೆ. ಕೆಲ ಚಿತ್ರಗಳಿಗೆ ಚೆನ್ನಾಗಿಲ್ಲ ಎನ್ನುವ ಟಾಕ್ ಬರುತ್ತದೆ ಅದ್ಯಾಕೋ ಗೊತ್ತಿಲ್ಲ ಎಂದು ಉಪೇಂದ್ರ ಹೇಳಿದ್ದಾರೆ.
"ಯಾವುದೋ ಒಂದು ಚಿತ್ರದಲ್ಲಿ ಒಳ್ಳೆ ಐಟಂ ಸಾಂಗ್ ಇದೆ. ಅದನ್ನು ನೋಡಿ ಬಂದು ಒಬ್ಬ 25ರ ಯುವಕ ಹೇಳ್ತಾನೆ, ಅಯ್ಯೋ ಅದೇನೋ ಐಟಂ ಸಾಂಗ್ ಮಾಡಿದ್ದಾರೆ, ಚೆನ್ನಾಗಿಲ್ಲ ಅಂದ. ಆಗ ನಾನು ಅಯ್ಯೋ ನನ್ನ ವಯಸ್ಸು 55 ವರ್ಷ, ನಾನೇ ಆ ಸಾಂಗ್ ಎಂಜಾಯ್ ಮಾಡ್ದೆ. ನೀನು 25ರ ಯುವಕ, 5 ನಿಮಿಷ ಅಂದವಾದ ನಟಿಯನ್ನು ನೋಡೋಕೆ ಕಷ್ಟ ಅಂತೀಯಲ್ಲೊ ಎಂದು ಹೇಳಿದ್ದಾಗಿ" ಉಪೇಂದ್ರ ನಕ್ಕಿದ್ದಾರೆ.
ಇತ್ತೀಚಿಗೆ ಪ್ರೇಕ್ಷಕರ ಮನಸ್ಥಿತಿ ಹೇಗೆ ಬದಲಾಗಿದೆ ಎಂದು ಉಪೇಂದ್ರ ಹೇಳಿದ್ದಾರೆ. ಯಾವುದನ್ನು ಚೆನ್ನಾಗಿಲ್ಲ ಅಂತಾರೆ, ಆದರೆ ಕೆಲ ಸಿನಿಮಾಗಳನ್ನು ಹಿಟ್ ಆಗಿಬಿಡುತ್ತವೆ ಎಂದು ಪರೋಕ್ಷವಾಗಿ ವಿವರಿಸಿದ್ದಾರೆ. ಇನ್ನು 'ಯುಐ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ದೇಶ- ವಿದೇಶಗಳಲ್ಲಿ ಏಕಕಾಲಕ್ಕೆ ತೆರೆಗಪ್ಪಳಿಸಲಿದೆ. ಈಗಾಗಲೇ ಕೆಲ ಚಿತ್ರಮಂದಿರಗಳಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ.
ಕೆ. ಪಿ ಶ್ರೀಕಾಂತ್ ಹಾಗೂ ಜಿ. ಮನೋಹರ್ 'ಯುಐ' ಚಿತ್ರಕ್ಕೆ ಹಣ ಹೂಡಿದ್ದಾರೆ. ಉಪ್ಪಿ ಜೊತೆಗೆ ರೀಷ್ಮಾ ನಾಣಯ್ಯ ನಾಯಕಿಯಾಗಿ ಮಿಂಚಿದ್ದಾರೆ. ಇನ್ನುಳಿದಂತೆ ನಿಧಿ ಸುಬ್ಬಯ್ಯ, ಸಾಧು ಕೋಕಿಲ, ಸನ್ನಿ ಲಿಯೋನ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಅಜನೀಶ್ ಲೋಕನಾಥ್ ಸಂಗೀತ ಹಾಗೂ ವೇಣು ಛಾಯಾಗ್ರಹಣ ಚಿತ್ರಕ್ಕಿದೆ.


Click it and Unblock the Notifications











