ವೀಡಿಯೋ ವೈರಲ್- ಮೈಮೇಲೆ ಮುಗಿಬಿದ್ದ ಫ್ಯಾನ್ಸ್; ನಟಿ ನಿಧಿ ಅಗರ್ವಾಲ್‌ಗೆ ಕಹಿ ಅನುಭವ
ಸೆಲೆಬ್ರೆಟಿಗಳು ನೋಡಲು ಅಭಿಮಾನಿಗಳು ಮುಗಿಬೀಳುವುದು ಸರ್ವೇಸಾಮಾನ್ಯ. ಆದರೆ ಅಭಿಮಾನಿಗಳು ಅತ್ಯುತ್ಸಾಹ ಕಲಾವಿದರಿಗೆ ಸಮಸ್ಯೆ ತಂದೊಡ್ಡುತ್ತದೆ. ಪ್ರಭಾಸ್ ನಟನೆಯ 'ದಿ ರಾಜಾಸಾಬ್' ಸಾಂಗ್ ರಿಲೀಸ್ ಕಾರ್ಯಕ್ರಮ ಇತ್ತೀಚೆಗೆ ನಡೀತಿದೆ. ಕಾರ್ಯಕ್ರಮಕ್ಕೆ ಆಗಮಿಸಿ ನಾಯಕಿ ನಿಧಿ ಅಗರ್ವಾಲ್ ವಾಪಸ್ ತೆರಳುವಾಗ ಕಹಿ ಅನುಭವ ಉಂಟಾಗಿದೆ.
'ದಿ ರಾಜಾ ಸಾಬ್' ಚಿತ್ರದ 2ನೇ ಹಾಡು 'ಸಹನಾ ಸಹನಾ' ಬುಧವಾರ(ಡಿಸೆಂಬರ್ 17) ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಯಿತು. ಹೈದರಾಬಾದ್‌ನ ಲುಲುಮಾಲ್‌ನಲ್ಲಿ ನಡೆದ ಈ ಸಮಾರಂಭದಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಈ ಮೆಲೋಡಿ ಹಾಡನ್ನು ಲೋಕಾರ್ಪಣೆ ಮಾಡಲಾಯಿತು. ಪ್ರಭಾಸ್ ಜೊತೆ ಈ ಚಿತ್ರದಲ್ಲಿ ನಿಧಿ ಅಗರ್ವಾಲ್, ಮಾಳವಿಕಾ ಮೋಹನನ್, ರಿದ್ಧಿ ಕುಮಾರ್ ನಾಯಕಿಯರಾಗಿ ನಟಿಸಿದ್ದಾರೆ. ಎಸ್. ತಮನ್ ಸಂಗೀತ ಈ ಹಾರರ್ ಕಾಮಿಡಿ ಚಿತ್ರಕ್ಕಿದೆ.

ಕಾರ್ಯಕ್ರಮ ಮುಗಿಸಿ ನಿಧಿ ಮಾಲ್ ಹೊರಗಡೆ ಬಂದರು. ಈ ವೇಳೆ ಒಮ್ಮೆ ಪ್ರಭಾಸ್ ಅಭಿಮಾನಿಗಳು ಮುತ್ತಿಕೊಂಡಿದ್ದಾರೆ. ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಕೆಲವರು ಆಕೆಯನ್ನು ಮುಟ್ಟುವ ಪ್ರಯತ್ನ ಮಾಡಿದ್ದಾರೆ. ಅಂತೂ ಇಂತೂ ಬಾಡಿಗಾರ್ಡ್ಸ್ ಆಕೆಯನ್ನು ಸುರಕ್ಷಿತವಾಗಿ ಕಾರ್ ಹತ್ತಿಸಿದ್ದಾರೆ. ಆದರೂ ಕೆಲ ಕ್ಷಣಗಳು ಪರಿಸ್ಥಿತಿ ಕೈ ಮೀರಿತ್ತು. ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಅದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಈ ಬಗ್ಗೆ ಕೆಲ ಸೆಲೆಬ್ರೆಟಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಒಂದು ಹಂತದಲ್ಲಿ ನಿಧಿ ಕಾರ್ ಹತ್ತುವುದೇ ಕಷ್ಟ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಕ್ಕಟ್ಟಾದ ಜಾಗದಲ್ಲಿ ಒಮ್ಮೆಲೇ ಅಭಿಮಾನಿಗಳು ಮುತ್ತಿಕೊಂಡಿದ್ದರಿಂದ ಪರಿಸ್ಥಿತಿ ಕೈ ಮೀರಿದಂತಾಗಿತ್ತು. ಕಾರ್ ಏರಿ ಕುಳಿತ ಬಳಿಕ ನಟಿ ನಿಧಿ ನಿಟ್ಟುಸಿರು ಬಿಟ್ಟಿದ್ದಾರೆ. ಅಭಿಮಾನಿಗಳ ಈ ನಡೆಗೆ ಅಸಹನೆ ವ್ಯಕ್ತಪಡಿಸಿದ್ದಾರೆ. ಕಾರ್ ಒಳಗೆ ಕೂತು ಕೂಗಾಡಿದ್ದಾರೆ. ಕಾರ್ಯಕ್ರಮಗಳನ್ನು ಆಯೋಜಿಸುವವರು ಈ ಬಗ್ಗೆ ಗಮನ ಹರಿಸಬೇಕು. ಇಲ್ಲಿದಿದ್ದರೆ ಇಂತಹ ಎಡವಟ್ಟುಗಳು ನಡೆಯುತ್ತವೆ. ಅಭಿಮಾನಿಗಳು ಕೂಡ ಜವಾಬ್ದಾರಿಯಿಂದ ವರ್ತಿಸಬೇಕು.
ಗಾಯಕಿ ಚಿನ್ಮಯಿ ಶ್ರೀಪಾದ ಕೂಡ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಇವರೆಲ್ಲಾ ಮನುಷ್ಯರಲ್ಲ ಮೃಗಗಳು" ಎಂದು ಟ್ವೀಟ್ ಮಾಡಿದ್ದಾರೆ. "ಕತ್ತೆಕಿರುಬಗಳಿಗಿಂತ ಕೆಟ್ಟದಾಗಿ ವರ್ತಿಸುವ ಪುರುಷರ ಗುಂಪು ಇದು. ಪಾಪ ಕತ್ತೆಕಿರುಬಗಳನ್ನು ಏಕೆ ಅವಮಾನಿಸಬೇಕು. 'ಸಮಾನ ಮನಸ್ಸಿನ' ಪುರುಷರು ಒಂದಾಗಿ ಮಹಿಳೆಯನ್ನು ಈ ರೀತಿ ಕಿರುಕುಳ ನೀಡುತ್ತಾರೆ. ಯಾವುದೋ ದೇವರು ಅವರೆಲ್ಲರನ್ನೂ ಏಕೆ ಕರೆದುಕೊಂಡು ಹೋಗಿ ಬೇರೆ ಗ್ರಹದಲ್ಲಿ ಹಾಕುವುದಿಲ್ಲ?" ಎಂದು ವ್ಯಂಗ್ಯವಾಡಿದ್ದಾರೆ.
ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ 'ದಿ ರಾಜಾಸಾಬ್' ಸಿನಿಮಾ ನಿರ್ಮಾಣವಾಗಿದೆ. ಸಂಜಯ್ ದತ್, ಬೋಮನ್ ಇರಾನಿ ಮುಂತಾದವರು ಚಿತ್ರದಲ್ಲಿದ್ದಾರೆ. ಕಾರ್ತಿಕ್ ಪಳನಿ ಅವರ ಛಾಯಾಗ್ರಹಣ, ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನ, ಮಾರುತಿ ನಿರ್ದೇಶನ ಚಿತ್ರಕ್ಕಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ ಸೇರಿ 5 ಭಾಷೆಗಳಲ್ಲಿ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬರಲಿದೆ. ಜನವರಿ 9 ರಂದು ಸಿನಿಮಾ ಬಿಡುಗಡಗೆ ಮುಹೂರ್ತ ಫಿಕ್ಸ್ ಆಗಿದೆ.
ಹೈದರಾಬಾದ್ ಬೆಡಗಿ ನಿಧಿ ಅಗರ್ವಾಲ್‌ಗೆ ದೊಡ್ಡ ಅಭಿಮಾನಿ ಬಳಗವಿದೆ. ಸೋಶಿಯಲ್ ಮೀಡಿಯಾದಲ್ಲಿ ಭಾರೀ ಫ್ಯಾನ್ ಫಾಲೋಯಿಂಗ್ ಇದೆ. ಅಭಿಮಾನಿಯೊಬ್ಬರು ಆಕೆಯ ಮೂರ್ತಿಗೆ ಹಾಲಿನ ಅಭಿಷೇಕ ಮಾಡಿದ್ದ ವೀಡಿಯೋವೊಂದು ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು.
'ಮುನ್ನ ಮೈಕೆಲ್' ಚಿತ್ರದ ಮೂಲಕ ನಿಧಿ ಚಿತ್ರರಂಗಕ್ಕೆ ಬಂದಿದ್ದರು. ಮಿ. ಮಜ್ನು, ಇಸ್ಮಾರ್ಟ್ ಶಂಕರ್, ಹೀರೊ, ಹರಿಹರ ವೀರಮಲ್ಲು ಸೇರಿ ಒಂದಷ್ಟು ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ. ಆದರೆ ಈವರೆಗೆ ದೊಡ್ಡ ಬ್ರೇಕ್ ಮಾತ್ರ ಸಿಕ್ಕಿಲ್ಲ.


Click it and Unblock the Notifications











