ಹಿಂದು ಧರ್ಮಕ್ಕೆ ಅಪಮಾನ ಆರೋಪ: ಚಿರಂಜೀವಿ ಸೊಸೆ ಮೇಲೆ ಮುಗಿಬಿದ್ದ ನೆಟ್ಟಿಗರು
ನಟ ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ಪತ್ನಿ ಉಪಾಸನಾ ಕಾಮಿನೇನಿ ಕೋನಿಡೇಲ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಒಂದನ್ನು ಹಂಚಿಕೊಂಡು ವಿವಾದಕ್ಕೆ ಈಡಾಗಿದ್ದಾರೆ.
ಗಣರಾಜ್ಯೋತ್ಸವದಂದು ದೇವಾಲಯದ ಗೋಪುರದ ಚಿತ್ರವೊಂದನ್ನು ಉಪಾಸನಾ ಹಂಚಿಕೊಂಡಿದ್ದರು. ಆದರೆ ಆ ಗೋಪುರದ ಮೇಲೆ ದೇವರುಗಳ ಬದಲಿಗೆ ಸಾಮಾನ್ಯ ಮನುಷ್ಯರಿದ್ದರು. ಈ ಫೋಟೊಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಳ್ಳೆಯ ಉದ್ದೇಶದಿಂದಲೇ ಹಂಚಿಕೊಂಡ ಫೋಟೊಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಹಿಂದು ಧರ್ಮಕ್ಕೆ ಮಾಡಿದ ಅಪಮಾನವೆಂದು ಕೆಲವರು ಖ್ಯಾತೆ ತೆಗೆದಿದ್ದಾರೆ.
ಫೇಸ್‌ಬುಕ್‌ನಲ್ಲಿ ಫೋಟೊ ಹಂಚಿಕೊಂಡಿದ್ದ ಉಪಾಸನಾ, ''ಈ ಅದ್ಭುತ ಚಿತ್ರಕ್ಕೆ ಕ್ಯಾಪ್ಷನ್ ನೀಡಿ. ಪ್ರಗತಿಶೀಲ ಹಾಗೂ ಹೆಚ್ಚು ಸಹಿಷ್ಣು ರಾಷ್ಟ್ರ ನಿರ್ಮಾಣ ಮಾಡಲು ಯಾವುದೇ ಗಡಿಗಳಿಲ್ಲದೆ ಎಲ್ಲರನ್ನೂ ತೊಡಗಿಸಿಕೊಳ್ಳೋಣ. ಎಲ್ಲರಿಗೂ ಗಣರಾಜ್ಯೋತ್ಸದ ಶುಭಾಶಯಗಳು'' ಎಂದಿದ್ದರು. ಮುಂದುವರೆದು, ''ಈ ಚಿತ್ರದಲ್ಲಿ ನಾನೂ ಹಾಗೂ ರಾಮ್ ಚರಣ್ ತೇಜ ಎಲ್ಲಿದ್ದೇವೆ ಗುರುತಿಸಿ'' ಎಂದು ಸವಾಲನ್ನೂ ಹಾಕಿದ್ದರು.
''ಶೋಭನಾ ಕಾಮಿನೇನಿ (ಉಪಾಸನಾರ ತಾಯಿ) ಈ ಅದ್ಭುತ ಚಿತ್ರವನ್ನು ನನಗೆ ಕಳುಹಿಸಿದರು. ನನಗೆ ಈ ಚಿತ್ರ ಬಹಳ ಇಷ್ಟವಾಯಿತು. ಈ ಚಿತ್ರ ರಚಿಸಿದ ಕಲೆಗಾರ ದಯವಿಟ್ಟು ನನಗೆ ಸಂದೇಶ ಕಳುಹಿಸಿ. ನಾನು ಆ ಕಲಾವಿದನನ್ನು ಅಭಿನಂದಿಸಲೇ ಬೇಕು'' ಎಂದಿದ್ದರು ಉಪಾಸನಾ ಕೋನಿಡೇಲ.

ಹಿಂದು ಧರ್ಮದ ಬಗ್ಗೆ ಗೌರವ ಇಲ್ಲವೆಂದು ಟೀಕೆ
ಉಪಾಸನಾ ಕೋನಿಡೇಲರ ಈ ಪೋಸ್ಟ್‌ಗೆ ಕಮೆಂಟ್ ಮಾಡಿರುವ ಹಲವರು ಚಿತ್ರವನ್ನು ಖಂಡಿಸಿದ್ದಾರೆ. ಇದು ಹಿಂದು ಧರ್ಮಕ್ಕೆ ಮಾಡಿದ ಅಪಮಾನ ಎಂದಿದ್ದಾರೆ. ಹಿಂದು ದೇವಾಲಯದ ಚಿತ್ರವನ್ನು ವಿರೂಪಗೊಳಿಸಿದ್ದೀರಿ ಎಂದು ಕೆಲವರು ಹೇಳಿದ್ದಾರೆ. ಮುಸ್ಲಿಂರ ಪವಿತ್ರ ಸ್ಥಳವನ್ನು ಹೀಗೆ ತಿರುಚಿದ ಚಿತ್ರವನ್ನು ಪ್ರಕಟಿಸಲು ಧೈರ್ಯವಿದೆಯೇ ಎಂದು ಸವಾಲು ಸಹ ಹಾಕಿದ್ದಾರೆ.

ಪರಿಸರ ಉಳಿಸಿ ಅಭಿಯಾನದಲ್ಲಿ ಭಾಗಿ
ಉಪಾಸನಾ ಕಾಮಿನೇನಿ ಪರಿಸರ ಪ್ರೇಮಿಯಾಗಿ, ಪ್ರಾಣಿ ಪ್ರೇಮಿಯಾಗಿ ಗುರುತಿಸಿಕೊಂಡಿದ್ದಾರೆ. ಪರಿಸರ ಉಳಿಸುವ ನಿಟ್ಟಿನಲ್ಲಿ ಹಲವು ಅಭಿಯಾನಗಳಲ್ಲಿ ಭಾಗಿಯಾಗಿದ್ದಾರೆ. ಈ ಹಿಂದೆ ಬಳಸಿಕ ಕಾಂಡೋಮ್‌ಗಳಿಂದ ಮಾಡಿದ ಉಡುಪನ್ನು ಧರಿಸಿ ಪರಿಸರ ರಕ್ಷಣೆಯ ಸಂದೇಶ ನೀಡಿದ್ದರು. ತಮ್ಮ ಫೇಸ್‌ಬುಕ್ ಖಾತೆಗೆ ಅದೇ ಚಿತ್ರವನ್ನು ಡಿಪಿಯಾಗಿ ಈಗಲೂ ಹೊಂದಿದ್ದಾರೆ ಉಪಾಸನಾ.

ಅಪೋಲೋ ಸಂಸ್ಥೆಯ ಮಾಲೀಕರ ಮಗಳು ಉಪಾಸನಾ
ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿರುವ ಅಪೋಲೊ ಆಸ್ಪತ್ರೆ ಮತ್ತು ಮೆಡಿಕಲ್ ಶಾಪ್‌ನ ಸಂಸ್ಥಾಪಕರಾದ ಪ್ರತಾಪ್ ಸಿ ರೆಡ್ಡಿ ಅವರ ಮಗಳು ಉಪಾಸನಾ. ಚಿರಂಜೀವಿ ಪುತ್ರ ರಾಮ್ ಚರಣ್ ಹಾಗೂ ಉಪಾಸನಾ ಒಂಬತ್ತನೇ ತರಗತಿಯಿಂದಲೂ ಜೊತೆಗೆ ಓದಿದವರು. ಇಬ್ಬರೂ ಬಾಲ್ಯದ ಗೆಳೆಯರು. ಇಬ್ಬರು 2012ರಂದು ವಿವಾಹವಾದರು.

ಆರೋಗ್ಯ ಜೀವನ ಶೈಲಿಯ ಬಗ್ಗೆ ಪ್ರಚಾರ
ಉಪಾಸನಾ ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯವಾಗಿರುತ್ತಾರೆ. ಅಪೋಲೊ ಚಾರಿಟೇಬಲ್ ಟ್ರಸ್ಟ್ ನೋಡಿಕೊಳ್ಳುವ ಉಪಾಸನಾ ಅದರ ಜೊತೆಗೆ ಬಿ ಪಾಸಿಟಿವ್ ಮ್ಯಾಗಜೀನ್ ನಡೆಸುತ್ತಾರೆ. ಜೊತೆಗೆ ಯೂಟ್ಯೂಬ್ ಚಾನೆಲ್ ಒಂದನ್ನು ಸಹ ನಿರ್ವಹಿಸುತ್ತಿದ್ದಾರೆ. ಯೂಟ್ಯೂಬ್ ಚಾನೆಲ್ ಮೂಲಕ ಆರೋಗ್ಯವಂತ ಆಹಾರ, ಆರೋಗ್ಯವಂತ ಜೀವನ ಶೈಲಿಯ ಬಗ್ಗೆ ಪ್ರಚಾರ ಮಾಡುತ್ತಾರೆ. ಉಪಾಸನಾರ ಯೂಟ್ಯೂಬ್ ಚಾನೆಲ್‌ಗೆ ಸಮಂತಾ, ರಶ್ಮಿಕಾ ಮಂದಣ್ಣ ಸೇರಿದಂತೆ ಹಲವರು ಅತಿಥಿಗಳಾಗಿ ಭಾಗವಹಿಸಿದ್ದಾರೆ.


Click it and Unblock the Notifications











