ಮದ್ವೆ, ಮಕ್ಕಳು ಮಾಡಿಕೊಳ್ಳೋಕೆ ಅರ್ಜೆಂಟ್ ಏನು? ರಾಮ್‌ಚರಣ್ ಪತ್ನಿ ಹೇಳಿಕೆಗೆ ಭಾರೀ ಆಕ್ರೋಶ
ತೆಲುಗು ನಟ ರಾಮ್‌ಚರಣ್ ಪತ್ನಿ ಉಪಾಸನಾ ಕೋನಿದೇಲ ಮತ್ತೊಮ್ಮೆ ಗರ್ಭಿಣಿ ಆಗಿದ್ದಾರೆ. ಇತ್ತೀಚೆಗೆ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಸಿಕ್ಕಿತ್ತು. 2 ವರ್ಷಗಳ ಹಿಂದೆ ಹೆಣ್ಣು ಮಗುವಿಗೆ ಆಕೆ ಜನ್ಮ ನೀಡಿದ್ದರು. ಮದುವೆಯಾಗಿ 10 ವರ್ಷಗಳ ಬಳಿಕ ಮೊದಲ ಮಗುವನ್ನು ಸ್ವಾಗತಿಸಿದ್ದರು. ತಮ್ಮ ರೀತಿಯಲ್ಲೇ ಇವತ್ತಿನ ಯುವಜನತೆ ಯೋಚಿಸಬೇಕು ಎಂದು ಉಪಾಸನಾ ಹೇಳಿದ್ದಾರೆ.
ಉಪಾಸನಾ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ರಾಮ್‌ಚರಣ್ ಪತ್ನಿ ಉದ್ಯಮ ಕ್ಷೇತ್ರದಲ್ಲಿ ಕೂಡ ಗುರ್ತಿಸಿಕೊಂಡಿದ್ದಾರೆ. ಅಪೋಲೊ ಫೌಂಡೇಷನ್ ವೈಸ್ ಚೇರ್ ಪರ್ಸನ್ ಆಗಿ ಗುರ್ತಿಸಿಕೊಂಡಿದ್ದಾರೆ. ನಾನು ಹಾಗೂ ರಾಮ್‌ಚರಣ್ ಕರಿಯರ್ ಕಡೆ ಹೆಚ್ಚು ಗಮನ ಹರಿಸಬೇಕು ಎನ್ನುವ ಕಾರಣಕ್ಕೆ ಮದುವೆಯಾಗಿ 10 ವರ್ಷ ಮಕ್ಕಳು ಮಾಡಿಕೊಳ್ಳಲಿಲ್ಲ ಎಂದು ಉಪಾಸನಾ ಹೇಳಿದ್ದರು. ಅಂಡಾಣು ಫ್ರೀಜ್ ಮಾಡಿದ್ದ ಬಗ್ಗೆಯೂ ಮಾತನಾಡಿದ್ದರು.

ಮದುವೆ, ಮಕ್ಕಳು ಎಂದು ಆತುರ ಪಡುವುದು ಬೇಡ ಮೊದಲು ಕರಿಯರ್ ಕಡೆ ಗಮನ ಹರಿಸಿ ಎಂದು ಯುವಜನತೆಗೆ ಉಪಾಸನಾ ಸಂದೇಶ ನೀಡಿದ್ದಾರೆ. ಹೈದರಾಬಾದ್ ಐಐಟಿ ವಿದ್ಯಾರ್ಥಿಗಳೊಂದಿಗೆ ಇತ್ತೀಚೆಗೆ ಆಕೆ ಮಾತನಾಡಿದ್ದರು. ಅವರನ್ನು ಉದ್ದೇಶಿಸಿ ಎಷ್ಟು ಜನಕ್ಕೆ ಮದುವೆ ಆಗಬೇಕು ಅನಿಸುತ್ತಿದೆ ಎಂದು ಪ್ರಶ್ನಿಸಿದೆ. ಅದಕ್ಕೆ ಬಂದ ಪ್ರತಿಕ್ರಿಯೆ ನೋಡಿ ಅಚ್ಚರಿ ಆಯಿತು. ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳು ಹೆಚ್ಚು ಮಂದಿ ಕೈ ಎತ್ತಿದ್ದರು. ಇದನ್ನು ನೋಡಿದರೆ ಮಹಿಳೆಯರೇ ಕರಿಯರ್ ಮೇಲೆ ಹೆಚ್ಚು ದೃಷ್ಟಿ ಹರಿಸಿದಂತೆ ಕಾಣಿಸುತ್ತಿತ್ತು. ಇದು ಹೊಸ - ಪ್ರಗತಿಶೀಲ ಭಾರತ ಎಂದು ಉಪಾಸನಾ ಟ್ವೀಟ್ ಮಾಡಿದ್ದಾರೆ.
ಮಹಿಳೆಯರ ಬಗ್ಗೆ ಮಾತನಾಡಿ ಉಪಾಸನಾ ಒಂದು ವೀಡಿಯೋ ಸಹ ಹಂಚಿಕೊಂಡಿದ್ದಾರೆ. ಮೊದಲು ನಿಮ್ಮ ಕಾಲಮೇಲೆ ನೀವು ನಿಲ್ಲಬೇಕು, ಆ ಬಳಿಕ ಮಕ್ಕಳನ್ನು ಹೆರುವ ಬಗ್ಗೆ ಚಿಂತೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಅಲ್ಲಿಯವರೆಗೆ ನಿಮ್ಮ ಅಂಡಾಣು ಫ್ರೀಜ್(ಅಂಡಾಣು ಮೊಟ್ಟೆ ಶೇಖರಣೆ) ಮಾಡಿಸಿ ಎಂದು ಉಪಾಸನಾ ಹೇಳಿದ್ದಾರೆ. ಅದಕ್ಕೆ ತಮ್ಮದೇ ಉದಾಹರಣೆ ಕೊಟ್ಟಿದ್ದಾರೆ. ಆದರೆ ಆಕೆಯ ಹೇಳಿಕೆ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿದೆ. ಕೆಲ ವೈದ್ಯರು ಪ್ರತಿಕ್ರಿಯಿಸಿ ಟೀಸಿಸುತ್ತಿದ್ದಾರೆ.
ಉಪಾಸನಾ ಮಾತನಾಡಿ "ನಾನು ಇವತ್ತು ಸ್ವತಂತ್ರವಾಗಿ ನನ್ನ ಕಾಲಿನ ಮೇಲೆ ನಾನು ನಿಂತಿದ್ದೀನಿ. ನನ್ನ ಸಂಪಾದನೆಯಿಂದ ಆರ್ಥಿಕವಾಗಿ ಬೆಳೆದಿದ್ದೇನೆ. ಇದು ನನ್ನ ಆತ್ಮವಿಶ್ವಾಸ ಹೆಚ್ಚಿಸಿದೆ. ಯಾವುದೇ ನಿರ್ಣಯ ತೆಗೆದುಕೊಳ್ಳಲು ಧೈರ್ಯ ತುಂಬಿದೆ. ನಿಮ್ಮ ಜೀವನದಲ್ಲಿ 30 ವರ್ಷದ ವೇಳೆಗೆ ನಿಮ್ಮ ಗುರಿ ಏನೆಂದು ಸ್ಪಷ್ಟವಾಗಿ ತಿಳಿದುಕೊಳ್ಳಿ. ಬಳಿಕ ನಿಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಉಪಾಸನಾ ಹೇಳಿದ್ದಾರೆ.
ಉಪಾಸನಾ ಟ್ವೀಟ್ ಸಖತ್ ವೈರಲ್ ಆಗ್ತಿದೆ. ಸಾಕಷ್ಟು ಜನ ಆಕೆಯ ಮಾತನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ಬಹುತೇಕರು ತಿರುಗೇಟು ನೀಡುತ್ತಿದ್ದಾರೆ. ಇಷ್ಟೆಲ್ಲಾ ಮಾತನಾಡುವ ಉಪಾಸನಾ ತನ್ನ 22ನೇ ವಯಸ್ಸಿನಲ್ಲೇ ಮದುವೆ ಆಗಿದ್ದರು. ಶ್ರೀಮಂತ ಮನೆತನದ ಹುಡುಗಿ. ಆಕೆ ಯಾವುದೇ ನಿರ್ಧಾರ ಕೈಗೊಳ್ಳಬಹುದು. ಯಾರೂ ಕೇಳಲ್ಲ. ಆದರೆ ಜನಸಾಮಾನ್ಯರ ವಿಚಾರದಲ್ಲಿ ಇದು ಅಷ್ಟು ಸುಲಭ ಅಲ್ಲ. ಅಂಡಾಣು ಶೇಖರಿಸಿ ಮುಂದೆ ಐವಿಎಫ್ ಚಿಕಿತ್ಸೆಯಿಂದ ಮಕ್ಕಳು ಆಗದಿದ್ದರೆ ಆ ನೋವು ಹೇಳುವುದಕ್ಕೆ ಸಾಧ್ಯವಿಲ್ಲ. ಉತ್ತಮ ರೀತಿಯಲ್ಲಿ ಅಂಡಾಣು ಶೇಖರಣೆ ಹಾಗೂ ಐವಿಎಫ್ ಚಿಕಿತ್ಸೆ ದುಬಾರಿಯಾಗಿರುತ್ತದೆ. ಹಾಗಾಗಿ ಉಪಾಸನಾ ತಮ್ಮ ಉದಾಹರಣೆಯನ್ನು ಎಲ್ಲರಿಗೂ ಕೊಡುವುದು ಸರಿಯಲ್ಲ ಎಂದು ಟೀಕಿಸುತ್ತಿದ್ದಾರೆ.
ನಿಮ್ಮ ಲಾಭಕ್ಕಾಗಿ ಇಂತಹ ಸಲಹೆ ಯಾರಿಗೂ ಕೊಡಬೇಡಿ. ನಿಮ್ಮ ಮಾತು ಕೇಳಿ ಯುವ ಜನತೆ ದಾರಿ ತಪ್ಪುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಅಪೋಲೊ ಫರ್ಟಿಲಿಟಿ ಸೆಂಟರ್ ಪ್ರಚಾರಕ್ಕಾಗಿ ಈ ಈ ರೀತಿ ಮಾತನಾಡಬೇಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಹೈದರಾಬಾದ್ ಮೂಲದ ವೈದ್ಯೆ ಸುನಿತಾ ಸಯ್ಯಮ್ಮಗಾರು ಈ ಬಗ್ಗೆ ಸುದೀರ್ಘ ಟ್ವೀಟ್ ಮಾಡಿದ್ದಾರೆ. ಉಪಾಸನಾ ಹೇಳಿಕೆನನ್ನು ನಾನು ಒಪ್ಪಲ್ಲ ಎಂದು ಬರೆದುಕೊಂಡಿದ್ದಾರೆ.
ಉಪಾಸನಾ ಮದುವೆ ಆದಾಗ ಆಕೆಗೆ 23 ವರ್ಷ, ರಾಮ್‌ಚರಣ್ 27 ವರ್ಷ. ಈಕೆ ಹೇಳುವಂಥೆ ಹೆಣ್ಣು ಮಗಳು ಕರಿಯರ್ ಎಂದು ಮದುವೆ ತಡ ಮಾಡಿದ್ದರೆ ವಯಸ್ಸಾದ ಗಂಡ ಸಿಗುತ್ತಾನೆ. ಅಂಡಾಣು ಫ್ರೀಜ್ ಮಾಡಿಸುವುದು ಮಹಿಳೆಯರಿಗೆ ವಿಮೆಯಲ್ಲ. ಮಹಿಳೆ ತನ್ನ ಅಂಡಾಣುಗಳನ್ನು ಫ್ರೀಜ್ ಮಾಡಿದರೂ ಸಹ, ಇದು ಯಶಸ್ವಿ ಭ್ರೂಣ ವರ್ಗಾವಣೆ ಮತ್ತು ಯಶಸ್ವಿ ಗರ್ಭಧಾರಣೆಯಾಗಿ ಪರಿಣಮಿಸುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ ಎಂದು ಸುನಿತಾ ಸಯ್ಯಮ್ಮಗಾರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮದುವೆ ಮತ್ತು ವೃತ್ತಿಜೀವನ ಎರಡನ್ನೂ ಏಕೆ ಒಟ್ಟಿಗೆ ನಿಭಾಯಿಸಬಾರದು ಎಂದು ಪ್ರಶ್ನಿಸಿದ್ದಾರೆ.


Click it and Unblock the Notifications










