ಪತಿ ರಾಮ್‌ಚರಣ್ ಫೋನ್ ನಂಬರ್ ಅನ್ನು ಉಪಾಸನಾ ಏನೆಂದು ಸೇವ್ ಮಾಡ್ಕೊಂಡಿದ್ದಾರೆ ಗೊತ್ತಾ?
ಸೆಲೆಬ್ರೆಟಿಗಳ ಲೈಫ್ ಕೆಲವೊಮ್ಮೆ ಕಸಿವಿಸಿ ಎನಿಸಿಬಿಡುತ್ತದೆ. ನೆಮ್ಮದಿಯಾಗಿ ಯಾವುದೋ ರೆಸ್ಟೋರೆಂಟ್‌ನಲ್ಲಿ ಊಟ ಮಾಡೋಕೆ ಆಗೊಲ್ಲ. ಮನೆಯಿಂದ ಹೊರ ಬಂದರೆ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಕ್ಯಾಮರಾಗಳು ಹಿಂಬಾಲಿಸುತ್ತವೆ. ಅವರ ಪ್ರತಿ ನಡೆಯನ್ನು ಅಭಿಮಾನಿಗಳು ಫಾಲೋ ಮಾಡ್ತಿದ್ದಾರೆ. ಅಭಿಮಾನಿಗಳು ತೋರಿಸುವ ಅಭಿಮಾನ ಕೂಡ ಕೆಲವೊಮ್ಮೆ ಅತಿ ಎನಿಸಿಬಿಡುತ್ತದೆ.
ಸ್ಟಾರ್ ನಟ, ನಟಿಯರು ಪದೇ ಪದೆ ತಮ್ಮ ಫೋನ್ ನಂಬರ್ ಬದಲಿಸುತ್ತಾರೆ. ಸಾಧ್ಯವಾದಷ್ಟು ತಮ್ಮ ನಂಬರ್ ಅನ್ನು ಗೌಪ್ಯವಾಗಿ ಇಟ್ಟಿರುತ್ತಾರೆ. ಆ ನಂಬರ್ ಲೀಕ್ ಆಗಿ ಕಿರಿಕಿರಿ ಶುರುವಾಗುತ್ತಿದ್ದಂತೆ ಮತ್ತೊಂದು ಹೊಸ ನಂಬರ್ ಬಳಸಲು ಆರಂಭಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಫೋನ್ ಹಿಡಿದುಕೊಂಡು ಸುತ್ತಾಡಲು ಜೊತೆಗೆ ಆಪ್ತರನ್ನು ಇಟ್ಟುಕೊಂಡಿರುತ್ತಾರೆ. ಯಾರ ಕರೆ ಸ್ವೀಕರಿಸಬೇಕು ಬೇಡ ಎಂದು ಅಳೆದು ತೂಗಿ ಮಾತನಾಡುತ್ತಾರೆ.

ತೆಲುಗು ನಟ ರಾಮ್‌ಚರಣ್ ಭಾರತೀಯ ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರು. ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿದ್ದು ಗೊತ್ತೇಯಿದೆ. ಹಾಲಿವುಡ್ ಫಿಲ್ಮಿಮೇಕರ್ಸ್ ಕೂಡ ಅವರನ್ನು ಗುರ್ತಿಸುತ್ತಾರೆ. ಸದ್ಯ 'ಪೆದ್ದಿ' ಚಿತ್ರದಲ್ಲಿ ಚಿರು ಪುತ್ರ ನಟಿಸುತ್ತಿದ್ದಾರೆ. ಬುಚ್ಚಿಬಾಬು ನಿರ್ದೇಶನದ ಈ ಚಿತ್ರದಲ್ಲಿ ಕನ್ನಡ ನಟ ಶಿವರಾಜ್‌ಕುಮಾರ್ ಕೂಡ ಬಣ್ಣ ಹಚ್ಚಿದ್ದಾರೆ.
12 ವರ್ಷಗಳ ಹಿಂದೆ ರಾಮ್‌ಚರಣ್ ಉದ್ಯಮಿ ಉಪಾಸನಾ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಮದುವೆ ಆಗಿ 10 ವರ್ಷಗಳ ಬಳಿಕ ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಅಪೊಲೊ ಆಸ್ಪತ್ರೆಗಳ ಗ್ರೂಪ್ ಅಧ್ಯಕ್ಷರಾದ ಪ್ರತಾಪ್ ಸಿ. ರೆಡ್ಡಿ ಅವರ ಮೊಮ್ಮಗಳು ಉಪಾಸನಾ. ಅಪೊಲೊ ಫೌಂಡೇಶನ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಆಕೆ ಕೆಲಸ ಮಾಡುತ್ತಿದ್ದಾರೆ. Curly Tales ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಉಪಾಸನಾ ಭಾಗಿ ಆಗಿದ್ದರು. ಈ ವೇಳೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಸಂಗತಿ ಬಿಚ್ಚಿಟ್ಟಿದ್ದಾರೆ.
"ರಾಮ್‌ಚರಣ್ ಹೆಸರನ್ನು ನಾನು ನನ್ನ ಫೋನ್‌ನಲ್ಲಿ ರಾಮ್‌ಚರಣ್ 200 ಎಂದು ಸೇವ್ ಮಾಡಿಕೊಂಡಿದ್ದೀನಿ. ಕಾರಣ ಅಷ್ಟು ಬಾರಿ ಅವರು ತಮ್ಮ ಫೋನ್ ನಂಬರ್ ಬದಲಿಸಿದ್ದಾರೆ" ಎಂದು ಉಪಾಸನಾ ಹೇಳಿರುವುದು ವೈರಲ್ ಆಗುತ್ತಿದೆ. ಐದು ಬಾರಿ ಹತ್ತು ಬಾರಿ ಫೋನ್ ನಂಬರ್ ಬದಲಿಸಿರುವವರನ್ನು ನೋಡಿದ್ದೇವೆ. 200 ಬಾರಿ ನಂಬರ್ ಬದಲಿಸುವಂಥದ್ದು ಏನಾಯ್ತು? ಎಂದು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಸ್ಟಾರ್ ನಟ, ನಟಿಯರು ಹೋದಲ್ಲಿ ಬಂದಲ್ಲಿ ಫೋಟೋ, ಆಟೋಗ್ರಾಫ್ ಎಂದು ಅಭಿಮಾನಿಗಳು ಮುಗಿಬೀಳುತ್ತಾರೆ. ನೀವು ಪತಿ ಜೊತೆ ಓಡಾಡುವಾಗ ಇದೆಲ್ಲಾ ಕಿರಿಕಿರಿ ಅನ್ನಿಸುವುದಿಲ್ಲವೇ? ನಿಮ್ಮ ಪ್ರೈವೆಸಿಗೆ ಅಡೆತಡೆ ಅನ್ನಿಸಲ್ವೇ? ಎನ್ನುವ ಪ್ರಶ್ನೆಗೆ ಉಪಾಸನಾ ಪ್ರತಿಕ್ರಿಯಿಸಿದ್ದಾರೆ. "ಅದು ಅವ್ರು ಆಯ್ಕೆ ಮಾಡಿಕೊಂಡಿರುವ ವೃತ್ತಿ. ಅಭಿಮಾನಿಗಳ ಪ್ರೀತಿಯನ್ನು ಬೇಡ ಎನ್ನಲು ಸಾಧ್ಯವಿಲ್ಲ" ಎಂದು ತಿಳಿಸಿದ್ದಾರೆ. ರಾಮ್ ಚರಣ್ ಪದೇ ಪದೆ ತಮ್ಮ ಫೋನ್ ಎಲ್ಲಾದರೂ ಇಟ್ಟು ಮರೆತುಬಿಡ್ತಾರೆ ಎಂದಿದ್ದಾರೆ.
ಜೂನ್ 14, 2012 ರಂದು ರಾಮ್‌ಚರಣ್ ಹಾಗೂ ಉಪಾಸನಾ ಮದುವೆ ನಡೆದಿತ್ತು. ಪರಸ್ಪರ ಪ್ರೀತಿಸಿ ಬಳಿಕ ಪೋಷಕರ ಒಪ್ಪಿಗೆ ಪಡೆದು ಮದುವೆ ಆಗಿದ್ದರು. ಮಗಳಿಗೆ ಕ್ಲಿಂಕಾರ ಎಂದು ಹೆಸರಿಟ್ಟಿದ್ದಾರೆ. ಮಗಳ ಲಾಲನೆ ಪಾಲನೆ ಜೊತೆ ಜೊತೆಗೆ ಇಬ್ಬರು ತಮ್ಮ ತಮ್ಮ ಕೆಲಸಗಳಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ರಾಮ್‌ಚರಣ್ ನಟಿಸಿದ ಎಲ್ಲಾ ಸಿನಿಮಾಗಳು ನನಗಿಷ್ಟ. 'RRR', 'ಮಗಧೀರ', 'ರಂಗಸ್ಥಳಂ' ಎಲ್ಲಾ ಚಿತ್ರಗಳಲ್ಲಿ ಅವರು ಚೆನ್ನಾಗಿ ನಟಿಸಿದ್ದಾರೆ. ಆದರೆ 'ನಾಯಕ್' ಸಿನಿಮಾ ಮನಸ್ಸಿಗೆ ಹತ್ತಿರ. ಕಾರಣ ನಾವು ಮದುವೆಯಾದ ಬಳಿಕ ಒಪ್ಪಿಕೊಂಡಿದ್ದ ಮೊದಲ ಸಿನಿಮಾ ಅದು ಎಂದು ಉಪಾಸನಾ ತಿಳಿಸಿದ್ದಾರೆ.


Click it and Unblock the Notifications











