ಆತ ಹೇಳಿದ್ರೆ ನಾನೇಕೆ ಉತ್ತರಿಸಬೇಕು? ಆರ್. ಚಂದ್ರು 'ಓಜಿ' ಹೇಳಿಕೆ ಬಗ್ಗೆ ನಟ ಉಪೇಂದ್ರ ಪ್ರತಿಕ್ರಿಯೆ
ಒಂದು ಸಿನಿಮಾವನ್ನು ಮತ್ತೊಂದು ಸಿನಿಮಾ ಜೊತೆ ಹೋಲಿಸುವುದು ಹೊಸದೇನು ಅಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಹೆಚ್ಚು ಚರ್ಚೆ ಆಗ್ತಿದೆ. ಯಾವುದೇ ಸಿನಿಮಾ ಪೋಸ್ಟರ್, ಟೀಸರ್, ಸಾಂಗ್ ಬಂದರೂ ಅದನ್ನೇ ಹೋಲುವ ಬೇರೆ ಸಿನಿಮಾಗಳ ಸ್ಯಾಂಪಲ್ಸ್ ವೈರಲ್ ಆಗುತ್ತಿದೆ. ನಿರ್ದೇಶಕ ಆರ್. ಚಂದ್ರು ಇತ್ತೀಚೆಗೆ ತಮ್ಮ 'ಕಬ್ಜ' ಚಿತ್ರದಿಂದ ಪ್ರೇರಣೆಗೊಂಡು ತೆಲುಗಿನ 'OG' ಚಿತ್ರ ಮಾಡಿದ್ದಾರೆ ಎಂದಿದ್ದರು.
ಉಪೇಂದ್ರ ಹಾಗೂ ಸುದೀಪ್ ನಟಿಸಿದ 'ಕಬ್ಜ' ಸಿನಿಮಾ ಸೋಲು ಗೆಲುವಿನ ಚರ್ಚೆ ಮುಗಿಯದ ಕಥೆ. ಸಿನಿಮಾ ಗೆದ್ದಿದೆ ಎಂದು ಆರ್. ಚಂದ್ರು ಹೇಳ್ತಾ ಬರ್ತಿದ್ದಾರೆ. ಇತ್ತೀಚೆಗೆ 'ನ್ಯೂಸ್ ಹಂಟ್' ಯೂಟ್ಯೂಬ್ ವಾಹಿನಿ ಸಂದರ್ಶನದಲ್ಲಿ ಅವರು ಮಾತನಾಡಿದ್ದರು. "OG ಚಿತ್ರವನ್ನು ನೋಡಿದ್ರೆ ನನ್ನ ಒಂದೊಂದು ಶಾಟ್ ಅಲ್ಲಿದೆ. ಆ ಸಿನಿಮಾ ನನ್ನ 'ಕಬ್ಜ' ಚಿತ್ರದಿಂದ ಸ್ಫೂರ್ತಿ ಪಡೆದಿದ್ದು ಎಂದು ಯಾರಾದರೂ ಮಾತನಾಡಿದ್ದೀರಾ? ಎಂದಿದ್ದರು. ಇದೇ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ನಟ ಉಪೇಂದ್ರ ನಿರಾಕರಿಸಿದ್ದಾರೆ.

ಆರ್. ಚಂದ್ರು ಹೇಳಿಕೆ ಟಾಲಿವುಡ್‌ನಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿತ್ತು. ನಿಮ್ಮ 'ಕಬ್ಜ' ಸಿನಿಮಾ 'ಕೆಜಿಎಫ್' ಸ್ಫೂರ್ತಿಯಿಂದ ಆಗಿದ್ದು ಅಲ್ವಾ? ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಆದರೆ ಈ ಬಗ್ಗೆ ಕೇಳಿದ ಪ್ರಶ್ನೆಗೆ ನಾನು ಯಾಕೆ ಮಾತನಾಡಬೇಕು ಎಂದು ಉಪೇಂದ್ರ ಮರುಪ್ರಶ್ನೆ ಹಾಕಿದ್ದಾರೆ. ಉಪೇಂದ್ರ ನಟನೆಯ 'ಆಂಧ್ರ ಕಿಂಗ್ ತಾಲೂಕ' ತೆಲುಗು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಪ್ರಚಾರದ ಭಾಗವಾಗಿ ತೆಲುಗು ಸಂದರ್ಶನಗಳಲ್ಲಿ ಅವರು ಮಾತನಾಡಿದ್ದಾರೆ.
ರಾಮ್ ಪೋತಿನೇನಿ ನಟನೆಯ 'ಆಂಧ್ರ ಕಿಂಗ್ ತಾಲೂಕ' ಚಿತ್ರದಲ್ಲಿ ಉಪೇಂದ್ರ ಪ್ರಮುಖವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಚಿತ್ರದ ನಿಜವಾದ ಹೀರೊ ರಿಯಲ್ ಸ್ಟಾರ್ ಎನ್ನಬಹುದು. ABN ಚಿತ್ರಜ್ಯೋತಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಈ ನಡುವೆ 'OG' ಚಿತ್ರದ ಬಗ್ಗೆ ಆರ್. ಚಂದ್ರು ಹೇಳಿಕೆ ಬಗ್ಗೆ ಪ್ರಶ್ನೆ ಎದುರಾಗಿದೆ.
ಉಪೇಂದ್ರ ಮಾತನಾಡಿ "ಆ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ಇಲ್ಲಿ 'ಆಂಧ್ರ ಕಿಂಗ್ ತಾಲೂಕ' ಚಿತ್ರದ ಬಗ್ಗೆ ಮಾತನಾಡಲು ಬಂದಿದ್ದೀನಿ. ಅವನು ಏನ್ ಹೇಳ್ದ, ಇವನು ಏನು ಹೇಳ್ದ ಅದಕ್ಕೆಲ್ಲಾ ಉತ್ತರಿಸೋಕೆ ಅಲ್ಲ. ನಾನು ಆ ಚಿತ್ರದ ಭಾಗವಾಗಿರಬಹುದು, ಆದರೆ ಆರ್. ಚಂದ್ರು ಜೀವನದ ಭಾಗವಾಗಿಲ್ಲ. ಆತ ಮಾತನಾಡಿದ್ದರ ಬಗ್ಗೆ ನಾನ್ಯಾಕೆ ಉತ್ತರಿಸಲಿ? ಅದು ನನಗೆ ಸಂಬಂಧಿಸಿದ್ದಲ್ಲ. ಆತ ಬಂದಾಗ ಕೇಳಿ, ಯಾಕೆ ಹೀಗೆ ಮಾತನಾಡಿದ್ರಿ ಅಂತ. ನಾವೆಲ್ಲಾ ಒಂದೇ ಫ್ಯಾಮಿಲಿ ಅನ್ನೋದು ಸಿನಿಮಾ ಮಾಡುವಾಗ ಮಾತ್ರ" ಎಂದಿದ್ದಾರೆ.
ಸದ್ಯ ಉಪೇಂದ್ರ ಮಾತುಗಳು ವೈರಲ್ ಆಗ್ತಿದೆ. ಅವರು ಹೇಳಿದ್ದರಲ್ಲಿ ತಪ್ಪೇನಿಲ್ಲ. ಆರ್. ಚಂದ್ರು ಹೇಳಿಕೆಗೆ ಅವ್ರೇ ಉತ್ತರಿಸಬೇಕು. ಉಪೇಂದ್ರ ಅಲ್ಲ ಎಂದು ಸಾಕಷ್ಟು ಜನ ಕಾಮೆಂಟ್ ಮಾಡುತ್ತಿದ್ದಾರೆ. ಎರಡು ವರ್ಷಗಳ ಹಿಂದೆ 'ಕಬ್ಜ' ಸಿನಿಮಾ ತೆರೆಗೆ ಬಂದಿತ್ತು. ಕಿಚ್ಚ ಸುದೀಪ್ ಕೂಡ ಚಿತ್ರದಲ್ಲಿ ಮಿಂಚಿದ್ದರು. ಕ್ಲೈಮ್ಯಾಕ್ಸ್‌ನಲ್ಲಿ ಶಿವಣ್ಣ ಎಂಟ್ರಿ ಕೊಟ್ಟು ಹುಬ್ಬೇರಿಸಿದ್ದರು. ಪಾರ್ಟ್-2 ಮಾಡುವುದಾಗಿಯೂ ಘೋಷಿಸಿದ್ದಾರೆ.
ಪವನ್ ಕಲ್ಯಾಣ್ ನಟನೆಯ ಗ್ಯಾಂಗ್‌ಸ್ಟರ್ ಸಿನಿಮಾ 'OG' ಇದೇ ವರ್ಷ ತೆರೆಗೆ ಬಂದಿತ್ತು. ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡರೂ ಬಳಿಕ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಬಹಳ ದಿನಗಳ ಬಳಿಕ ತೆರೆಮೇಲೆ ಪವರ್ ಸ್ಟಾರ್ ಆರ್ಭಟ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು.


Click it and Unblock the Notifications











