ಆರ್‌ಜಿವಿ ನಿರ್ದೇಶನದ 'ಶಿವ' ಚಿತ್ರ ನೋಡಿ 'ಓಂ' ಕಥೆ ಬದಲಿಸಿದ್ದೇಕೆ ಉಪೇಂದ್ರ?
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಸಿನಿಮಾ ಸೆನ್ಸೇಷನಲ್ ಸಿನಿಮಾ 'ಓಂ'. ಕನ್ನಡ ಸಿನಿ ರಸಿಕರು ಇಂದಿಗೂ ಆ ಚಿತ್ರವನ್ನು ಮರೆತ್ತಿಲ್ಲ. ಅಭಿಮಾನಿಗಳಿಗಂತೂ ಪ್ರತಿದೃಶ್ಯ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ನಿಮಗೆ ಗೊತ್ತಾ ತೆಲುಗಿನಲ್ಲಿ ರಾಮ್‌ಗೋಪಾಲ್ ವರ್ಮಾ ನಿರ್ದೇಶನದ 'ಶಿವ' ಚಿತ್ರಕ್ಕೂ ಕನ್ನಡದ 'ಓಂ' ಚಿತ್ರಕ್ಕೂ ಕೊಂಚ ಸಾಮ್ಯತೆಯಿದೆ.
ಉಪ್ಪಿ ನಿರ್ದೇಶನದ 'ಓಂ' ಸಿನಿಮಾ ಬಳಿಕ ತೆಲುಗಿಗೂ ರೀಮೆಕ್ ಆಗಿತ್ತು. ಸ್ವತಃ ಉಪೇಂದ್ರ ಚಿತ್ರಕ್ಕೆ ಅಲ್ಲಿ ಆಕ್ಷನ್ ಕಟ್ ಹೇಳಿದ್ದರು. ತಮ್ಮ ವಿಭಿನ್ನ ಸ್ಕ್ರೀನ್‌ಪ್ಲೇ, ಮೇಕಿಂಗ್ ಸ್ಟೈಲ್‌ನಿಂದ ತೆಲುಗು ಚಿತ್ರರಂಗದಲ್ಲಿ ಕಮಾಲ್ ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ 'ಶಿವ' ಹಾಗೂ 'ಓಂ' ಚಿತ್ರಗಳ ನಡುವಿನ ಹೋಲಿಕೆ ಬಗ್ಗೆ ಆಗಾಗ್ಗೆ ಚರ್ಚೆ ನಡೆಯುತ್ತದೆ. ಈ ಬಗ್ಗೆ ಸ್ವತಃ ಉಪೇಂದ್ರ ಈಗ ಪ್ರತಿಕ್ರಿಯಿಸಿದ್ದಾರೆ.

'45' ಸಿನಿಮಾ ಪ್ರಚಾರದ ವೇಳೆ 'ಗಲಾಟ ಪ್ಲಸ್' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ಉಪೇಂದ್ರ ಮಾತನಾಡಿದ್ದಾರೆ. ನಾನು ಬೆಂಗಳೂರು ಅಂಡರ್‌ವರ್ಲ್ಡ್ ಬಗ್ಗೆ ಒಂದು ಸಿನಿಮಾ ಮಾಡಬೇಕು ಎಂದುಕೊಂಡಿದ್ದೆ. ಅದೇ ಸಮಯದಲ್ಲಿ 'ಶಿವ' ಸಿನಿಮಾ ಬಂದಿತ್ತು. ಹಾಗಾಗಿ ನಾನು 'ಓಂ' ಚಿತ್ರದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳುವಂತಾಯಿತು ಎಂದು ಉಪೇಂದ್ರ ನೆನಪು ಮಾಡಿಕೊಂಡಿದ್ದಾರೆ.
ಉಪ್ಪಿ ಮಾತನಾಡಿ "ನಾನು ಆಗ ರೌಡಿಸಂ, ಅಂಡರ್‌ವರ್ಲ್ಡ್, ಕಾಲೇಜು ಎಲೆಕ್ಷನ್ ಎಲ್ಲಾ ಸೇರಿಸಿ ಸಿನಿಮಾ ಮಾಡಬೇಕು ಎಂದುಕೊಂಡಿದ್ದೆ. ಬೆಂಗಳೂರಿನಲ್ಲಿ ಕೊತ್ವಾಲ್ ರಾಮಚಂದ್ರ, ಜಯರಾಜ್ ಹೆಸರು ದೊಡ್ಡದಾಗಿ ಕೇಳಿಬರ್ತಿತ್ತು. ನಮ್ಮ ಕಾಲೇಜು ಕೂಡ ಆ ಏರಿಯಾ ನಡುವೆ ಇತ್ತು. ಆ ರೌಡಿಗಳ ಆರ್ಭಟವನ್ನು ತೆರೆಮೇಲೆ ತೋರಿಸಬೇಕು ಎಂದುಕೊಂಡಿದ್ದೆ. ಅದೇ ಸಮಯದಲ್ಲಿ 'ಶಿವ' ಸಿನಿಮಾ ನೋಡ್ದೆ. ಅದ್ಭುತವಾಗಿತ್ತು. ಹಾಗಾಗಿ 2 ವರ್ಷ 'ಓಂ' ಸ್ಕ್ರಿಪ್ಟ್ ಪಕ್ಕಕ್ಕಿಟ್ಟುಬಿಟ್ಟೆ" ಎಂದಿದ್ದಾರೆ.
ಲವ್ ಸ್ಟೋರಿ ಇಟ್ಟುಕೊಂಡು ಕಂಪ್ಲೀಟ್ 'ಓಂ' ಸಿನಿಮಾ ಸ್ಕ್ರೀನ್‌ಪ್ಲೇ ಬದಲಿಸಿದ್ದಾಗಿ ಉಪೇಂದ್ರ ಹೇಳಿದ್ದಾರೆ. "ಓಂ ಚಿತ್ರದಲ್ಲಿ ಲವ್ ಸ್ಟೋರಿ ಸೊಗಸಾಗಿತ್ತು. ಆಗ ಸ್ಕ್ರೀನ್‌ಪ್ಲೇ ಬದಲಿಸಿದೆ. ಹೀರೋ ದೊಡ್ಡ ರೌಡಿ. ಆತ ಒಬ್ಬ ಹುಡುಗಿಯ ಪ್ರೀತಿಯಲ್ಲಿ ಬಿದ್ರೆ, ಆ ಹುಡುಗಿಯನ್ನು ಪೀಡಿಸಿದರೆ ಹೇಗಿರುತ್ತೆ ಎಂದು ತೋರಿಸಿ. ಬಳಿಕ ಆತನ ಹಿನ್ನೆಲೆ ತೋರಿಸುವಂತೆ ಮಾಡಿದೆವು. ಹಾಗಾಗಿ 'ಓಂ' ಸಿನಿಮಾ ಆ ರೂಪ ಪಡೆಯಲು ಆರ್‌ಜಿವಿಗೆ ಥ್ಯಾಂಕ್ಸ್ ಹೇಳಬೇಕು" ಎಂದು ಉಪ್ಪಿ ವಿವರಿಸಿದ್ದಾರೆ.
ರಾಮ್‌ಗೋಪಾಲ್ ವರ್ಮಾ ನಿರ್ದೇಶನದ 'ಶಿವ' ಸಿನಿಮಾ 1989ರಲ್ಲಿ ತೆರೆಗೆ ಬಂದಿತ್ತು. ನಾಗಾರ್ಜುನ ಹೀರೊ ಆಗಿ ನಟಿಸಿ ಗೆದ್ದಿದ್ದರು. ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಇತ್ತೀಚೆಗೆ ಸಿನಿಮಾ ರೀ-ರಿಲೀಸ್ ಆಗಿ ಸದ್ದು ಮಾಡಿದ್ದು ಗೊತ್ತೇಯಿದೆ. ನಾಗಾರ್ಜುನಗೆ ದೊಡ್ಡ ಬ್ರೇಕ್ ಕೊಟ್ಟಿದ್ದ ಸಿನಿಮಾ ಅದು. ಅಮಲಾ ನಾಯಕಿಯಾಗಿ ನಟಿಸಿ ಗೆದ್ದಿದ್ದರು. ರಘುವರನ್ ಪ್ರಮುಖ ಪಾತ್ರದಲ್ಲಿ ಅಬ್ಬರಿಸಿದ್ದರು. ಮುಂದೆ ಹಿಂದಿಗೂ ಸಿನಿಮಾ ರೀಮೆಕ್ ಆಗಿತ್ತು.
ಕನ್ನಡದಲ್ಲಿ ಶಿವರಾಜ್‌ಕುಮಾರ್ ಜೋಡಿಯಾಗಿ ಪ್ರೇಮಾ ನಟಿಸಿದ್ದರು. ಸೆನ್ಸಾರ್ ಸಮಸ್ಯೆ ಎದುರಿಸಿದ್ದ 'ಓಂ' ಅಂತೂ ಇಂತೂ ಬಿಡುಗಡೆಯಾಗಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಚಿತ್ರದಲ್ಲಿ ಆ ಕಾಲದ ನಿಜವಾದ ರೌಡಿಗಳು ನಟಿಸಿದ್ದರು. ಹಾಗಾಗಿ ಸಿನಿಮಾ ಸಂಚಲನ ಸೃಷ್ಟಿಸಿತ್ತು. ಸ್ವತಃ ಪಾರ್ವತಮ್ಮ ನಿರ್ಮಾಣ ಮಾಡಿದ್ದ ಸಿನಿಮಾ ದಾಖಲೆ ಪ್ರದರ್ಶನ ಕಂಡಿತ್ತು.


Click it and Unblock the Notifications











