ತಮ್ಮದೇ ಚಿತ್ರದ ಮುಹೂರ್ತಕ್ಕೆ ಗೈರಾದ ಪ್ರಭಾಸ್, ವಂಗಾ 'ಸ್ಪಿರಿಟ್'ಗೆ ಶುಭ ಕೋರಿದ ಮೆಗಾ ಸ್ಟಾರ್
ಕೇವಲ ದಕ್ಷಿಣದಲ್ಲಿ ಮಾತ್ರವಲ್ಲ ಉತ್ತರದಲ್ಲಿ ಕೂಡ ತಮ್ಮ ಚಾಪು ಮೂಡಿಸುವಲ್ಲಿ ಯಶಸ್ವಿಯಾದವರು ಪ್ರಭಾಸ್. ಸೌತ್ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಪ್ರಸಿದ್ಧಿಯನ್ನು ಪಡೆದು ದೇಶವ್ಯಾಪಿ ಅಸಂಖ್ಯಾತ ಅಗಣಿತ ಅಭಿಮಾನಿಗಳನ್ನು ಸಂಪಾದಿಸಿದ ಪ್ರಭಾಸ್ ತಾವು ಬಾಕ್ಸಾಫೀಸ್ ಕಿಂಗ್ ಕೂಡ ಹೌದು ಎನ್ನುವುದನ್ನು ಮೇಲಿಂದ ಮೇಲೆ ರುಜುವಾತು ಮಾಡುತ್ತಾನೇ ಬಂದವರು. ಹಲವು ದಾಖಲೆಗಳನ್ನು ಕೂಡ ಸೃಷ್ಟಿಸಿದವರು. ಇನ್ನೂ ''ಬಾಹುಬಲಿ'' ನಂತರ..
ಪ್ರಭಾಸ್ ಕೇವಲ ಸೌತ್ ಸ್ಟಾರ್ ಮಾತ್ರವಲ್ಲ ಬದಲಿಗೆ ನ್ಯಾಷನಲ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಕನ್ನಡದ ಸ್ಟಾರ್‌ಗಳಂತೆಯೇ ಸಿನಿಮಾ ಮಾಡಿದರೆ ಅದು ಕೇವಲ ಪ್ಯಾನ್ ಇಂಡಿಯಾಗೆ ಮಾತ್ರ ಎಂದುಕೊಂಡು ಚಿತ್ರಗಳನ್ನು ಒಪ್ಪಿಕೊಳ್ತಿದ್ದಾರೆ.

ಹೀಗೆ ಒಪ್ಪಿಕೊಂಡ ಎರಡು ಚಿತ್ರಗಳಾದ ''ರಾಜಾ ಸಾಬ್'' ಮತ್ತು ''ಫೌಜಿ''ಯ ಮೇಲೆ ಇವರ ಅಭಿಮಾನಿಗಳಲ್ಲಿ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗಕ್ಕೆ ನಿರೀಕ್ಷೆಗಳಿವೆ. ಈ ಎರಡು ಚಿತ್ರಗಳು ಪ್ರಭಾಸ್ ಅವರ ಸ್ಟಾರ್‌ಡಂನ ಮೆರಗನ್ನು ಹೆಚ್ಚಿಸಲಿವೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದರ ನಡುವೆ ಇದೀಗ ಪ್ರಭಾಸ್ ತಮ್ಮ ಸ್ಪಿರಿಟ್ ಚಿತ್ರವನ್ನು ಶುರು ಮಾಡಿದ್ದಾರೆ.
ಹೌದು, ಪ್ರಭಾಸ್ ಮತ್ತು ಸಂದೀಪ್ ರೆಡ್ಡಿ ವಂಗಾ ''ಸ್ಪಿರಿಟ್'' ಚಿತ್ರವನ್ನು ಮಾಡುತ್ತಿರುವುದು ಎಲ್ಲರಿಗೆ ಗೊತ್ತಿರುವಂತಹದ್ದೇ. ಯಾಕೆಂದರೆ ಕಳೆದ ಹಲವು ದಿನಗಳಿಂದ ವ್ಯಾಪಕವಾಗಿ ಸದ್ದು ಮಾಡುತ್ತಾ ಬಂದ ಸಿನಿಮಾ ಇದು. ತೀರಾ ಇತ್ತೀಚೆಗಷ್ಟೇ ಈ ಚಿತ್ರದ ಚಿಕ್ಕ ಆಡಿಯೋ ಟೀಸರ್ ಬಿಡುಗಡೆಯಾಗಿತ್ತು. ಅಭಿಮಾನಿಗಳ ಸಂಭ್ರಮ ಹೆಚ್ಚಿಸಿತ್ತು.
ಇನ್ನೂ ದೀಪಿಕಾ ಪಡುಕೋಣೆಯ ವಿಚಾರದಲ್ಲಿ ಈ ಸಿನಿಮಾ ಮಾಡಿದ ಸದ್ದು ಅಷ್ಟಿಷ್ಟಲ್ಲ. ಹೀಗೆ ಕಾಲ ಕಾಲಕ್ಕೆ ಸದ್ದು ಮಾಡುತ್ತಾ ಬಂದ ''ಸ್ಪಿರಿಟ್'' ಚಿತ್ರದ ಮುಹೂರ್ತ ಸಮಾರಂಭ ಸದ್ಯ ಸರಳವಾಗಿ ನೆರವೇರಿದೆ. ರೆಬಲ್ ಸ್ಟಾರ್‌ನ ಹೊಸ ಸಾಹಸಕ್ಕೆ ಶುಭ ಕೋರಲು ಮೆಗಾ ಸ್ಟಾರ್ ಚಿರಂಜೀವಿ ಮುಖ್ಯ ಅತಿಥಿಯಾಗಿ ಬಂದಿದ್ದು ಮುಹೂರ್ತ ಸಮಾರಂಭದ ವಿಶೇಷ.
ಆದರೆ.. ಪ್ರಭಾಸ್ ತಮ್ಮದೇ ಚಿತ್ರದ ಮುಹೂರ್ತ ಸಮಾರಂಭಕ್ಕೆ ಗೈರಾಗಿದ್ದರು. ಇದಕ್ಕೆ ಕಾರಣವೇನು..? ಎನ್ನುವುದು ಸದ್ಯ ಗೊತ್ತಿಲ್ಲವಾದರೂ ಅಭಿಮಾನಿಗಳು ಪ್ರಭಾಸ್ ಅವರನ್ನು ಫೋಟೊಗಳಲ್ಲಿ ಹುಡುಕುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಪ್ರಭಾಸ್ ಎಲ್ಲಿ..? ಎಂಬ ಪ್ರಶ್ನೆಯನ್ನು ಮಾಡುತ್ತಿದ್ದಾರೆ.

ಅಂದ್ಹಾಗೇ ''ಸ್ಪಿರಿಟ್'' ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಪ್ರಭಾಸ್ ತಂದೆ ಪಾತ್ರದಲ್ಲಿ ನಟಿಸುತ್ತಾರೆ ಎನ್ನುವ ಮಾತು ಈ ಹಿಂದೆ ಕೇಳಿ ಬಂದಿತ್ತು. ಈ ಸುದ್ದಿಯನ್ನು ಸಂದೀಪ್ ರೆಡ್ಡಿ ವಂಗಾ ತಳ್ಳಿ ಹಾಕಿದ್ದರು. ಅಂತಹ ಯಾವುದೇ ಚರ್ಚೆ ನಾವು ನಡೆಸಿಲ್ಲ. ಒಂದು ವೇಳೆ ಚಿರು ಸರ್ ಜೊತೆ ಸಿನಿಮಾ ಮಾಡುವಂತಿದ್ದರೆ ಅವರನ್ನೇ ಹೀರೊ ಮಾಡಿ ಸಿನಿಮಾ ಮಾಡ್ತೀನಿ. ಸಹ ನಟನಾಗಿ ಆಯ್ಕೆ ಮಾಡಿಕೊಳ್ಳಲ್ಲ ಎಂದು ಹೇಳಿದ್ದರು.
ಆದರೂ ತೆಲುಗು ಚಿತ್ರಪ್ರಿಯರಿಗೆ ಸಂದೀಪ್ ರೆಡ್ಡಿ ವಂಗಾ ಅವರ ಮಾತುಗಳ ಮೇಲೆ ನಂಬಿಕೆ ಇಲ್ಲ. ಹೀಗಿರುವಾಗ ಇದೀಗ ಮುಹೂರ್ತ ಸಮಾರಂಭಕ್ಕೆ ಚಿರಂಜೀವಿ ಅವರೇ ಬಂದಿದ್ದಾರೆ. ಹೀಗಾಗಿ ಈ ''ಸ್ಪಿರಿಟ್''ನಲ್ಲಿ ಚಿರಂಜೀವಿ ನಿಜಕ್ಕೂ ಇದ್ದಾರಾ ಎನ್ನುವ ಚರ್ಚೆ ಈಗ ಇನ್ನೊಮ್ಮೆ ಮುನ್ನೆಲೆಗೆ ಬಂದಿದೆ.
ಇನ್ನು ದೀಪಿಕಾ ಪಡುಕೋಣೆಯ ಜಾಗಕ್ಕೆ ತೃಪ್ತಿ ದಿಮ್ರಿ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮುಹೂರ್ತ ಸಮಾರಂಭದಲ್ಲಿ ಖುಷಿ ಖುಷಿಯಾಗಿ ಭಾಗಿಯಾಗಿದ್ದಾರೆ.
ಬಾಲಿವುಡ್‌ನ ನಿರ್ಮಾಪಕ ಟಿ ಸೀರಿಸ್‌ನ ಭೂಷಣ್ ಕುಮಾರ್, ಈ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಭದ್ರಕಾಳಿ ಪಿಕ್ಚರ್ಸ್ ನಿರ್ಮಾಣದಲ್ಲಿ ಇವರಿಗೆ ಕೈ ಜೋಡಿಸುತ್ತಿದೆ. ವಿವೇಕ್ ಓಬೆರಾಯ್ ಮತ್ತು ಪ್ರಕಾಶ್ ರಾಜ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.
ಸದ್ಯ ''ಸ್ಪಿರಿಟ್'' ಚಿತ್ರದ ಮುಹೂರ್ತ ಸಮಾರಂಭ ನಡೆದಿದ್ದು, ಮುಂದಿನ ವರ್ಷ ಪ್ಯಾನ್ ಇಂಡಿಯಾ ಲೆವಲ್‌ನಲ್ಲಿ ಚಿತ್ರ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.


Click it and Unblock the Notifications










