ಟಾಲಿವುಡ್‌ನಲ್ಲಿ ಕನ್ನಡದ ಸಿಂಹ: 'ಒಡೆಲಾ ರೈಲ್ವೇ ಸ್ಟೇಷನ್'ನಲ್ಲಿ ಕಾಣಿಸಿಕೊಂಡ ವಸಿಷ್ಠ
ಸ್ಯಾಂಡಲ್ ವುಡ್ ನ ನಟ ವಸಿಷ್ಠ ಸಿಂಹ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ವಸಿಷ್ಠ ತೆಲುಗು ಸಿನಿಮಾ ಮಾಡುತ್ತಾರೆ ಎಂದು ತಿಂಗಳ ಹಿಂದೆಯೇ ಹೇಳಲಾಗಿತ್ತು. ಇದೀಗ, ವಸಿಷ್ಠ ಆಧಿಕೃತವಾಗಿ ಟಾಲಿವುಡ್ ಪ್ರವೇಶಿಸಿದ್ದಾರೆ. ಕನ್ನಡ ಸಿನಿಮಾರಂಗದಲ್ಲಿ ಹೆಚ್ಚು ಬೇಡಿಕೆ ಹೊಂದಿರುವ ನಟ ಈಗ ತೆಲುಗಿನಲ್ಲಿಯೂ ಬ್ಯುಸಿಯಾಗಿದ್ದಾರೆ.
ವಿಶೇಷ ಅಂದರೆ ಈ ಚಿತ್ರಕ್ಕೆ 'ಒಡೆಲಾ ರೈಲ್ವೇ ಸ್ಟೇಷನ್' ಎಂದು ಹೆಸರಿಡಲಾಗಿದೆ. ಅಲ್ಲದೆ ವಸಿಷ್ಠ ಅಭಿನಯದ ಮೊದಲ ತೆಲುಗು ಸಿನಿಮಾದ ಟೈಟಲ್ ಪೋಸ್ಟರ್ ಸಹ ರಿಲೀಸ್ ಆಗಿದೆ. ಚಿತ್ರದ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
ಅಂದ್ಹಾಗೆ 'ಒಡೆಲಾ ರೈಲ್ವೆ ಸ್ಟೇಷನ್' ನೈಜ ಘಟನೆ ಆಧರಿತ ಸಿನಿಮಾವಂತೆ. ಖರೀಮ್ ನಗರದಲ್ಲಿ ನಡೆದ ಒಂದು ಘಟನೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆಯಂತೆ. ಕಥೆ ಕೇಳಿ ಇಂಪ್ರೆಸ್ ಆದ ವಸಿಷ್ಠ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಚಿತ್ರದಲ್ಲಿ ಇಬ್ಬರು ನಾಯಕಿಯರು ಕಾಣಿಸಿಕೊಳ್ಳುತ್ತಿದ್ದಾರೆ. ಹೆಬಾ ಪಟೇಲ್ ಮತ್ತು ಪೂಜಿತಾ ಪೊನ್ನಡ. ಹೆಬಾ ಪಟೇಲ್ ಈಗಾಗಲೇ ಕನ್ನಡದ ಅಧ್ಯಕ್ಷ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನೂ ಚಿತ್ರಕ್ಕೆ ಯುವ ನಿರ್ದೇಶಕ ಅಶೋಕ್ ತೇಜ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಇನ್ನು ವಸಿಷ್ಠ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಲನ್ ಆಗಿ ಅಬ್ಬರಿಸುವ ಜೊತೆಗೆ ನಾಯಕನಾಗಿಯೂ ಮಿಂಚುತ್ತಿದ್ದಾರೆ. ಕೊನೆಯದಾಗಿ ಪವರ್ ಸ್ಟಾರ್ ಪುನೀತ್ ರಾಜ್ ನಿರ್ಮಾಣದ ಮಾಯಾಬಜಾರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಕಾಲಚಕ್ರ, ಪಂತ, ಯುವರತ್ನ ಸೇರಿದಂತೆ ಸಾಕಷ್ಟು ಸಿನಿಮಾಗಳು ವಸಿಷ್ಠ ಕೈಯಲ್ಲಿವೆ. ಇದೀಗ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟಿರುವ ವಸಿಷ್ಠರನ್ನು ತೆಲುಗು ಅಭಿಮಾನಿಗಳು ಹೇಗೆ ಸ್ವೀಕರಿಸಲಿದ್ದಾರೆ ಎಂದು ಕಾದು ನೋಡಬೇಕು.


Click it and Unblock the Notifications











