Exclusive: 'ಸಲಾರ್' ತಂಡ ಸೇರಿಕೊಂಡ ವಸಿಷ್ಠ ಸಿಂಹ: ಪ್ರಭಾಸ್ 'ಸಿಂಹ' ಘರ್ಜನೆ ಹೇಗಿರುತ್ತೆ ಗೊತ್ತಾ?
ಪ್ರಶಾಂತ್ ನೀಲ್ ನಿರ್ದೇಶನದ ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ 'ಸಲಾರ್' ರಿಲೀಸ್ ಡೇಟ್ ಹತ್ತಿರವಾಗುತ್ತಿದೆ. ಪ್ರಭಾಸ್ ಆರ್ಭಟ ಕಣ್ತುಂಬಿಕೊಳ್ಳುವುದಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹೊಂಬಾಳೆ ಸಂಸ್ಥೆ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಿಸಿದ್ದು ಡಿಸೆಂಬರ್ 22ಕ್ಕೆ 'ಸಲಾರ್' ದರ್ಬಾರ್ ಶುರುವಾಗಲಿದೆ.
ಎರಡು ಭಾಗಗಳಾಗಿ 'ಸಲಾರ್' ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಸೆಪ್ಟೆಂಬರ್ 28ಕ್ಕೆ ರಿಲೀಸ್ ಆಗಬೇಕಿದ್ದ ಸಿನಿಮಾ 3 ತಿಂಗಳು ತಡವಾಗಿ ಬರ್ತಿದೆ. ಇನ್ನು 'ಸಲಾರ್' ಎದುರು ಶಾರುಖ್ ಖಾನ್ ನಟನೆಯ 'ಡಂಕಿ' ಸಿನಿಮಾ ಕೂಡ ರಿಲೀಸ್ ಆಗ್ತಿದೆ. ಹಾಗಾಗಿ ಕ್ರಿಸ್‌ಮಸ್ ಸಂಭ್ರಮದಲ್ಲಿ 2 ಸಿನಿಮಾಗಳ ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಡುತ್ತಿದೆ. ಈ ಎರಡೂ ಸಿನಿಮಾಗಳ ಜೊತೆ ಹಾಲಿವುಡ್‌ನ 'ಅಕ್ವಾಮನ್' ಸಿನಿಮಾ ಕೂಡ ತೆರೆಗಪ್ಪಳಿಸುತ್ತಿದೆ.

ಸದ್ಯ ಚಿಕಿತ್ಸೆಗಾಗಿ ನಟ ಪ್ರಭಾಸ್ ವಿದೇಶಕ್ಕೆ ತೆರಳಿದ್ದಾರೆ. ಶೀಘ್ರದಲ್ಲೇ ಭಾರತಕ್ಕೆ ವಾಪಸ್ ಆಗಿ 'ಸಲಾರ್' ಸಿನಿಮಾ ಪ್ರಚಾರದಲ್ಲಿ ಭಾಗಿ ಆಗಲಿದ್ದಾರೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ವರ್ಕ್ ಭರದಿಂದ ಸಾಗುತ್ತಿದೆ. ಚಿತ್ರದ ಗ್ರಾಫಿಕ್ಸ್ ವರ್ಕ್ ಸರಿಯಾಗಿ ಬಂದಿಲ್ಲ ಎನ್ನುವ ಕಾರಣಕ್ಕೆ ರೀ ವರ್ಕ್ ಮಾಡಲಾಗುತ್ತಿದೆ. ಅದೇ ಕಾರಣಕ್ಕೆ ಸಿನಿಮಾ ರಿಲೀಸ್ ಪೋಸ್ಟ್ ಪೋನ್ ಆಯಿತು ಎನ್ನುವ ಮಾತುಗಳು ಕೇಳಿಬಂದಿತ್ತು. ಇನ್ನು 'KGF' ಚಿತ್ರಕ್ಕೆ ಕೆಲಸ ಮಾಡಿದ ತಂತ್ರಜ್ಞರು 'ಸಲಾರ್' ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.
ಶ್ರುತಿ ಹಾಸನ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ದೇವರಾಜ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿ. 'ಉಗ್ರಂ' ರೀಮೆಕ್ 'ಸಲಾರ್' ಎನ್ನುವ ಊಹಾಪೋಹ ಕೂಡ ಇದೆ. ಆದರೆ ಸಿನಿಮಾ ಕತೆ ಬಗ್ಗೆ ಯಾವುದೇ ಸುಳಿವು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಏಕಕಾಲಕಕ್ಕೆ ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ 'ಸಲಾರ್' ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಕನ್ನಡದಲ್ಲಿ ಪ್ರಭಾಸ್ ಪಾತ್ರಕ್ಕೆ ನಟ ವಸಿಷ್ಠ ಸಿಂಹ ಡಬ್ ಮಾಡುತ್ತಿದ್ದಾರೆ.
ಹೌದು ನಟ ವಸಿಷ್ಠ ಸಿಂಹ 'ಸಲಾರ್' ಚಿತ್ರತಂಡ ಸೇರಿಕೊಂಡಿದ್ದಾರೆ. ಚಿತ್ರದಲ್ಲಿ 'ಸಲಾರ್' ಪ್ರಭಾಸ್ ಪಾತ್ರಕ್ಕೆ ಕಂಚಿನ ಕಂಠದ ನಟ ವಾಯ್ಸ್ ಕೊಡುತ್ತಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ದೊಡ್ಡ ಸಿನಿಮಾಗಳನ್ನು ಡಬ್ ಮಾಡುವಾಗ ಬಹಳ ಮುತುವರ್ಜಿ ವಹಿಸಲಾಗುತ್ತಿದೆ. ಈ ಹಿಂದೆ 'KGF' ಸರಣಿ ಡಬ್ ವರ್ಷನ್‌ಗಳು ಪರಭಾಷಿಕರಿಗೆ ಇಷ್ಟವಾಗಿತ್ತು. ಅಷ್ಟರಮಟ್ಟಿಗೆ ಡಬ್ಬಿಂಗ್ ಚೆನ್ನಾಗಿ ಬರುವಂತೆ ನೋಡಿಕೊಳ್ಳಲಾಗಿತ್ತು. ಇದೀಗ 'ಸಲಾರ್' ವಿಚಾರದಲ್ಲೂ ಅದೇ ಪ್ರಯತ್ನ ನಡೀತಿದೆ.

ಆರಡಿ ಕಟೌಟ್ ಪ್ರಭಾಸ್ ವಾಯ್ಸ್ ಅಭಿಮಾನಿಗಳಿಗೆ ಬಹಳ ಇಷ್ಟ. ಮಾಸ್ ಪಾತ್ರಗಳಿಗೆ ಹೇಳಿ ಮಾಡಿಸಿದ ಬೇಸ್ ವಾಯ್ಸ್ ಪ್ರಭಾಸ್ ಅವರದ್ದು. ಆದರೆ ಕನ್ನಡದಲ್ಲಿ ಯಂಗ್ ರೆಬಲ್ ಸ್ಟಾರ್ ಡಬ್ ಮಾಡುವ ಸಾಹಸ ಮಾಡುತ್ತಿಲ್ಲ. ಹಾಗಾಗಿ ಆ ಪಾತ್ರಕ್ಕೆ ಒಳ್ಳೆ ವಾಯ್ಸ್ ಬೇಕು ಎಂದು ಚಿತ್ರತಂಡ ಅಂದುಕೊಂಡಾಗ ವಸಿಷ್ಠ ಸಿಂಹ ನೆನಪಾಗಿದೆ. ಈಗಾಗಲೇ ವಸಿಷ್ಠ ಡಬ್ಬಿಂಗ್ ಮುಗಿಸಿದ್ದಾರೆ. 'ಸಲಾರ್' ಸಿಂಹ ಘರ್ಜನೆಗಾಗಿ ಕನ್ನಡ ಪ್ರೇಕ್ಷಕರು ಕಾಯುವಂತಾಗಿದೆ.
ಇನ್ನುಳಿದಂತೆ ಶ್ರುತಿ ಹಾಸನ್ 5 ಭಾಷೆಗಳಲ್ಲಿ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದಾರೆ. ಬಹಳ ದೊಡ್ಡಮಟ್ಟದಲ್ಲಿ 'ಸಲಾರ್' ಪ್ರಮೋಷನ್, ರಿಲೀಸ್ ಪ್ಲ್ಯಾನ್ ನಡೀತಿದೆ. 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ ಸಿನಿಮಾ ತೆರೆಗೆ ತರಲಾಗುತ್ತಿದೆ. ಇನ್ನು 'ಸಲಾರ್' ಟ್ರೈಲರ್‌ಗಾಗಿ ಸಿನಿರಸಿಕರು ಕಾಯುತ್ತಿದ್ದಾರೆ. ದೀಪಾವಳಿ ಸಂಭ್ರಮದಲ್ಲಿ ಸಲ್ಮಾನ್ ಖಾನ್ ನಟನೆಯ 'ಟೈಗರ್-3' ಸಿನಿಮಾ ರಿಲೀಸ್ ಆಗಲಿದೆ. ಈ ಸಿನಿಮಾ ಜೊತೆಗೆ 'ಸಲಾರ್' ಟ್ರೈಲರ್ ರಿವೀಲ್ ಆಗುತ್ತದೆ ಎನ್ನುವ ಗುಸುಗುಸು ಕೂಡ ಕೇಳಿಬರ್ತಿದೆ.


Click it and Unblock the Notifications











