"ನನ್ನ ಚಿತ್ರಕ್ಕೆ ನೆಗೆಟಿವ್ ರಿವ್ಯೂ ಕೊಟ್ಟವರಿಗೆಲ್ಲಾ ಥ್ಯಾಂಕ್ಸ್"; ವಸಿಷ್ಠ ಸಿಂಹ
ಕನ್ನಡ ನಟ ವಸಿಷ್ಠ ಸಿಂಹ ಪರಭಾಷಾ ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಕಂಚಿನ ಕಂಠದ ನಟನಿಗೆ ತೆಲುಗು, ತಮಿಳಿನಲ್ಲಿ ಕೂಡ ಬೇಡಿಕೆಯಿದೆ. ಸದ್ಯ ವಸಿಷ್ಠ ನೆಗೆಟಿವ್ ರೋಲ್‌ನಲ್ಲಿ ನಟಿಸಿರುವ 'ಓದೆಲಾ-2' ಸಿನಿಮಾ ತೆರೆಗೆ ಬಂದಿದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ.
3 ದಿನಕ್ಕೆ ಸಿನಿಮಾ 6.25 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಘೋಷಿಸಿದೆ. ಸಕ್ಸಸ್ ಮೀಟ್ ಕೂಡ ಮಾಡಿ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದೆ. ಜೊತೆಗೆ ತಮ್ಮ ಸಿನಿಮಾಗೆ ನೆಗೆಟಿವ್ ರಿವ್ಯೂ ಕೊಟ್ಟು ಕೆಲವರು ಪೆಟ್ಟು ಕೊಟ್ಟರು ಎಂದು ಚಿತ್ರತಂಡ ಬೇಸರ ಹೊರಹಾಕಿದೆ. ಇದೇ ಮಾತನ್ನು ವಸಿಷ್ಠ ಸಿಂಹ ಕೂಡ ವೇದಿಕೆಯಲ್ಲಿ ಹೇಳಿದ್ದಾರೆ.

ತಮನ್ನಾ ಹಾಗೂ ವಸಿಷ್ಠ ಸಿಂಹ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಓದೆಲಾ-2' ಸಿನಿಮಾ ಏಪ್ರಿಲ್ 17ಕ್ಕೆ ತೆರೆಗೆ ಬಂದಿತ್ತು. ಸೀ ಸೂಪರ್ ನ್ಯಾಚುರಲ್ ಚಿತ್ರದಲ್ಲಿ ತಮನ್ನಾ ಶಿವಶಕ್ತಿಯ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಆಕೆಗೆ ಸವಾಲು ಹಾಕುವ ದುಷ್ಟನ ಪಾತ್ರದಲ್ಲಿ ವಸಿಷ್ಠ ಸಿಂಹ ಮಿಂಚಿದ್ದಾರೆ. ವಸಿಷ್ಠ ಅಬ್ಬರದ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮಿಶ್ರಪ್ರತಿಕ್ರಿಯೆ ಸಿಕ್ಕ ಕಾರಣ 'ಓದೆಲಾ-2' ಸಿನಿಮಾ ಕಲೆಕ್ಷನ್ ಡಲ್ ಆಗಿದೆ. ಸಂಪತ್ ನಂದಿ ಚಿತ್ರಕ್ಕೆ ಕಥೆ ಬರೆದು ನಿರ್ಮಾಣ ಮಾಡಿದ್ದರು. ಅಶೋಕ್ ತೇಜಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಈ ಹಿಂದೆ 'ಓದೆಲಾ ರೈಲ್ವೆ ಸ್ಟೇಷನ್' ಎಂಬ ಸಿನಿಮಾ ತೆರೆಗೆ ಬಂದು ಗೆದ್ದಿತ್ತು. ಅದೇ ಕತೆಯನ್ನು ಈ ಚಿತ್ರದಲ್ಲಿ ಮುಂದುವರೆಸಲಾಗಿದೆ.
'ಅರುಂಧತಿ' ಸಿನಿಮಾ ನೋಡಿ 'ಓದೆಲಾ-2' ಸಿನಿಮಾ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಓದೆಲಾ ಎಂಬ ಊರಿನಲ್ಲಿ ಕಾಲ್ಪನಿಕ ಕಥೆಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಅದನ್ನು ಚಿತ್ರತಂಡ ಪಾಸಿಟಿವ್ ಆಗಿಯೇ ತೆಗೆದುಕೊಳ್ಳುತ್ತಿದೆ. ಇನ್ನು ಚಿತ್ರದ ಓಟಿಟಿ ರೈಟ್ಸ್ ಭರ್ಜರಿ ದರಕ್ಕೆ ಮಾರಾಟವಾಗಿರುವುದರಿಂದ ಚಿತ್ರತಂಡ ಸೇಫ್ ಆಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ.
ವಸಿಷ್ಠ ಸಿಂಹ ಮಾತನಾಡಿ "ದೈವಶಕ್ತಿ ಬಗ್ಗೆ ಗೊತ್ತಾಗಲು ದುಷ್ಠಶಕ್ತಿ ಇರಬೇಕಲ್ವಾ, ಅದೇ ರೀತಿ ಈ ನೆಗೆಟಿವಿಟಿ. ದುಷ್ಠಶಕ್ತಿ ಇದ್ದರೆ ದೈವಶಕ್ತಿಗೆ ಬೆಲೆ" ಎಂದು ವ್ಯಂಗ್ಯವಾಡಿದ್ದಾರೆ. ದುಷ್ಠಶಕ್ತಿ ನಮಗೆ ಕಷ್ಟ ಕೊಟ್ಟಾಗಲೇ ದೇವರು ಬರ್ತಾನೆ, ನಮ್ಮನ್ನು ಕಾಪಾಡುತ್ತಾನೆ. ಅದೇ ರೀತಿ ಈ ನೆಗೆಟಿವ್ ರಿವ್ಯೂ ಹಾಕುತ್ತಿರುವವರು, ನೆಗೆಟಿವಿಟಿ ಹಬ್ಬಿಸುತ್ತಿರುವರಿಗೆ ಧನ್ಯವಾದ. ನಿಮ್ಮಿಂದ ನಮ್ಮ ಸಿನಿಮಾ ಬಹಳ ಜನಕ್ಕೆ ತಲುಪಿದೆ. ಪಾಸಿಟಿವ್, ನೆಗೆಟಿವ್ ಯಾವುದೇ ಪಬ್ಲಿಸಿಟಿ ಒಳ್ಳೆ ಪಬ್ಲಿಸಿಟಿ. ಸಾಧ್ಯವಾದರೆ ಒಳ್ಳೆಯದನ್ನು ಹಂಚಿ, ಕೆಟ್ಟದ್ದನ್ನಲ್ಲ ಎಂದು ವಸಿಷ್ಠ ಸಿಂಹ ಹೇಳಿದ್ದಾರೆ.
ಓದೆಲ್ಲಾ ಎಂಬ ಊರಿನಲ್ಲಿ ಕಾಮಾಂಧ ತಿರುಪತಿ(ವಸಿಷ್ಠ ಸಿಂಹ) ನಾನಾ ಅನಾಚಾರ ಮಾಡಿ ಕೊನೆಗೆ ಸಾಯುವಂತಾಗುತ್ತದೆ. ತಿರುಪತಿ ಸತ್ತ ಎಂದು ಊರಿನ ಜನ ನಿಟ್ಟುಸಿರು ಬಿಡುವ ವೇಳೆಗೆ ಪ್ರೇತಾತ್ಮವಾಗಿ ತಿರುಪತಿ ಪುನಃ ಬರ್ತಾನೆ. ಊರಿನ ಜನರ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾನೆ. ಮೊದಲಿಗಿಂತಲೂ ಹೆಚ್ಚು ದುಷ್ಟನಾಗಿ ಕಾಟ ಕೊಡುತ್ತಾನೆ. ಆತನನ್ನು ಎದುರಿಸಲು ಶಿವಶಕ್ತಿ ಭೈರವಿ(ತಮನ್ನಾ) ಆಗಮನವಾಗುತ್ತದೆ. ಮುಂದೇನು? ಎನ್ನುವುದು ಇನ್ನುಳಿದ ಕಥೆ.
ಅಮೇಜಾನ್ ಪ್ರೈಂ ಸಂಸ್ಥೆ 18 ಕೋಟಿ ರೂ. ಕೊಟ್ಟು ಚಿತ್ರದ ಓಟಿಟಿ ಡೀಲ್ ಕುದುರಿಸಿಕೊಂಡಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. 20 ಕೋಟಿ ಬಜೆಟ್ ಚಿತ್ರ ಬರೀ ಓಟಿಟಿಯಲ್ಲೇ ಬಹುತೇಹ ಗೆಲುವಿನ ದಡ ಸೇರಿದೆ ಎನ್ನುವ ಚರ್ಚೆ ಟಾಲಿವುಡ್‌ನಲ್ಲಿ ನಡೆದಿತ್ತು. ಮೇ ಅಂತ್ಯದ ವೇಳೆಗೆ ಸಿನಿಮಾ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ.


Click it and Unblock the Notifications











