'ರಾಕಿ ಭಾಯ್' ಅನ್ನು ನಾಯಿಗೆ ಹೋಲಿಸಿ ಬೈದ ನಿರ್ದೇಶಕ ವೆಂಕಟೇಶ್ ಚಿತ್ರಗಳು ಹೇಗಿವೆ? ಹಿಟ್ಟಾ ಫ್ಲಾಪಾ?
ಸಕ್ಸಸ್ ಆದ ಸಿನಿಮಾಗಳನ್ನು ಕಂಡು ತಮ್ಮ ಕೈನಲ್ಲಿ ಇಂತಹ ಚಿತ್ರವನ್ನು ಮಾಡಲಾಗಲಿಲ್ಲವಲ್ಲ ಎಂದು ಅಸೂಯೆಯಿಂದ ಕಾಮೆಂಟ್ ಮಾಡುವ ಕಲಾವಿದರು ಕೆಲವರಿದ್ದಾರೆ. ಚಿತ್ರ ಹಿಡಿಸದವರು ಚಿತ್ರದಲ್ಲಿ ಆ ಅಂಶ ಇಷ್ಟವಾಗಲಿಲ್ಲ ಎಂದು ನೇರವಾಗಿ ಹೇಳಿಬಿಡುತ್ತಾರೆ, ಆದರೆ ಚಿತ್ರದ ಯಶಸ್ಸನ್ನು ಅರಗಿಸಿಕೊಳ್ಳದವರು ಮಾತ್ರ ಆ ಚಿತ್ರವನ್ನು ಕೆಟ್ಟ ಪದಗಳಿಂದ ಬೈದು ಟೀಕಿಸಲು ಮುಂದಾಗುತ್ತಾರೆ.
ಇದೇ ಸಾಲಿಗೆ ಸೇರುತ್ತಾರೆ ತೆಲುಗಿನ ನಿರ್ದೇಶಕ ವೆಂಕಟೇಶ್ ಮಹಾ. ಹೌದು, ಟಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕ ಎಂದು ಪರಿಚಯಿಸುವಷ್ಟು ದೊಡ್ಡ ಹೆಸರನ್ನು ಇನ್ನೂ ಮಾಡದಿರುವ ಈ ಪುಟ್ಟ ನಿರ್ದೇಶಕ ದೊಡ್ಡ ಚಿತ್ರ ಕೆಜಿಎಫ್ ಅನ್ನು ಮಾತ್ರ ಟೀಕಿಸಿದ್ದಾರೆ. ದೊಡ್ಡದಾಗಿ ಹೆಸರು ಮಾಡಿರುವ ಚಿತ್ರವನ್ನು ಟೀಕಿಸಿದರೆ ತೆರೆ ಮರೆಯಲ್ಲಿ ಮುಚ್ಚಿ ಹೋಗಿರುವ ತಾವು ವೈರಲ್ ಆಗಬಹುದು ಎಂಬುದು ಕೆಲವರ ಪ್ಲಾನ್. ಇಲ್ಲೂ ಸಹ ಅದೇ ಫಾರ್ಮ್ಯುಲ ಬಳಕೆ ಆಗಿದ್ದರೂ ಆಗಿರಬಹುದು.

ಪ್ರೇಮ ದ ಜರ್ನಲಿಸ್ಟ್ ಎಂಬ ಯುಟ್ಯೂಬ್ ಚಾನೆಲ್ ಒಂದರಲ್ಲಿ ನಡೆದ ನಿರ್ದೇಶಕರ ರೌಂಡ್ ಟೇಬಲ್ ಸಂದರ್ಶನಕ್ಕೆ ವೆಂಕಟೇಶ್ ಮಹಾ ಅವರನ್ನು ಸಹ ಆಹ್ವಾನಿಸಲಾಗಿತ್ತು. ಕಳೆದ ವರ್ಷ ಸ್ವಮೇಕ್ ಸಿನಿಮಾಗಳನ್ನು ಮಾಡಿ ಹೆಸರು ಮಾಡಿದ ಹಲವು ತೆಲುಗು ನಿರ್ದೇಶಕರು ಇರುವಾಗ ಈ ಸಂದರ್ಶನಕ್ಕೆ ತನ್ನ ಕೊನೆಯ ಚಿತ್ರವನ್ನು ರಿಮೇಕ್ ಮಾಡಿದ್ದ ಈ ಮಹಾ ವೆಂಕಟೇಶ್ ಅವರನ್ನು ಏತಕ್ಕಾಗಿ ಆಹ್ವಾನಿಸಿದ್ರೋ ಎಂಬುದು ಸಿನಿ ರಸಿಕರ ಪ್ರಶ್ನೆ.
ಹೇಗೋ ಸಂದರ್ಶನದಲ್ಲಿ ಭಾಗವಹಿಸಿದ್ದ ವೆಂಕಟೇಶ್ ಮಹಾ ಕೆಜಿಎಫ್ ಚಿತ್ರದ ಬಗ್ಗೆ ಕೇವಲವಾಗಿ ಮಾತನಾಡಿ ನಾಲಿಗೆ ಹರಿಬಿಟ್ಟಿದ್ದಾನೆ. ಚಿತ್ರ ಇಷ್ಟವಾಗಲಿಲ್ಲ ಎಂದರೆ ಅದನ್ನು ಹೇಳಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ, ಆದರೆ ಅದನ್ನು ಹೇಳಲು ಬಳಸುವ ಭಾಷೆ ತಪ್ಪು. ಕೆಜಿಎಫ್ ಹೇಗಿದೆ ಎಂದು ಚಿತ್ರ ಹಿಡಿಸದ ಸಾಮಾನ್ಯ ಪ್ರೇಕ್ಷಕನನ್ನು ಕೇಳಿದರೂ ಸಹ ಆತ ವೆಂಕಟೇಶ್ ಮಹಾ ಉಪಯೋಗಿಸಿದಂತಹ ಕೆಳಮಟ್ಟದ ಪದಗಳನ್ನು ಖಂಡಿತ ಉಪಯೋಗಿಸುವುದಿಲ್ಲ.
ಹೌದು, ಎಲ್ಲಿಯೂ ಕೆಜಿಎಫ್ ಎಂಬ ಹೆಸರನ್ನು ಹೇಳದೇ ಕೇವಲ ಚಿತ್ರದ ಕೆಲ ದೃಶ್ಯಗಳ ಬಗ್ಗೆ ಮಾತನಾಡಿದ ಮಹಾ ವೆಂಕಟೇಶ್ ಕೆಜಿಎಫ್ ಚಿತ್ರದಲ್ಲಿ ಬರುವ ತಾಯಿ ಪಾತ್ರವನ್ನು ಟ್ರೋಲ್ ಮಾಡಿದರು. ಇಡೀ ಪ್ರಪಂಚದಲ್ಲಿ ಯಾವ ತಾಯಿಯಾದರೂ ದೊಡ್ಡವನಾದ ಮೇಲೆ ಒಳ್ಳೆಯ ಹೆಸರು ಮಾಡು, ನಾಲ್ಕು ಜನರಿಗೆ ಅನ್ನ ಹಾಕು ಎಂದು ಮಗನಿಗೆ ಸಲಹೆ ನೀಡುತ್ತಾಳೆ, ಆದರೆ ಇಲ್ಲಿ ಈ ಮಹಾತಾಯಿ ದೊಡ್ಡ ಮಟ್ಟದಲ್ಲಿ ಚಿನ್ನ, ಹಣ ಸಂಪಾದಿಸು ಎಂದು ಹೇಳುತ್ತಾಳೆ ಎಂದು ಟೀಕಿಸಿದ್ದಾರೆ.

ಇನ್ನೂ ಮುಂದುವರಿದು ಮಾತನಾಡಿದ ವೆಂಕಟೇಶ್ ಮಹಾ ತಾಯಿ ಮಾತಿನಂತೆ ಆತ ಕೆಲಸಗಾರರ ಸಹಾಯ ಪಡೆದುಕೊಂಡು ಲೋಡ್‌ಗಟ್ಟಲೆ ಚಿನ್ನವನ್ನು ಹೊರತೆಗೆದು ಆ ಜನರಿಗೆ ಮನೆಗಳನ್ನು ನೀಡಿ, ಆ ಚಿನ್ನವನ್ನೆಲ್ಲಾ ತೆಗೆದುಕೊಂಡು ಹೋಗಿ ನೀರಿನಲ್ಲಿ ಮುಳುಗಿಸಿಬಿಡುತ್ತಾನೆ, ಎಂತಹ ಕಂತ್ರಿ ನಾಯಿ ಇರಬೇಡ ಆತ, ಇಂತಹ ಕಂತ್ರಿ ನಾಯಿಯ ಕಥೆಯನ್ನು ಸಿನಿಮಾ ಮಾಡಿದ್ದಾರೆ, ಅದನ್ನು ನೋಡಿ ನಾವು ಚಪ್ಪಾಳೆ ತಟ್ಟಿ ಗೆಲ್ಲಿಸುತ್ತೇವೆ ಎಂದಿದ್ದಾರೆ.
ಹೀಗೆ ತೆಲುಗಿನವರೇ ಮೇಲೆ ಬಿದ್ದು ಕೇಳಿದಷ್ಟು ಹಣ ಕೊಟ್ಟು ಕರೆದುಕೊಂಡು ಹೋಗಿರುವ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾವನ್ನು ಟ್ರೋಲ್ ಮಾಡಿರುವ ಈ ವೆಂಕಟೇಶ್ ಮಹಾ ನಿರ್ದೇಶನದ ಸಿನಿಮಾಗಳ ಕತೆ ಏನು ಎಂಬುದನ್ನು ಹುಡುಕ ಹೊರಟರೆ ನಿಮಗೆ ಹೆಚ್ಚೇನೂ ಓದುವುದಕ್ಕೆ ಸಿಗುವುದಿಲ್ಲ. ಏಕೆಂದರೆ 2018ರಲ್ಲಿಯೇ ನಿರ್ದೇಶಕನ ಜರ್ನಿ ಆರಂಭಿಸಿದ ಈತ ಇಲ್ಲಿಯವರೆಗೂ ಆಕ್ಷನ್ ಕಟ್ ಹೇಳುವ ಅವಕಾಶ ಪಡೆದಿರುವುದು ಎರಡು ಚಿತ್ರಗಳಿಗೆ ಮಾತ್ರ. ಅದರಲ್ಲಿಯೂ ಒಂದು ರಿಮೇಕ್ ಚಿತ್ರ!
ಹೌದು, 2018ರಲ್ಲಿ ತೆರೆಕಂಡಿದ್ದ ಕೇರ್ ಆಫ್ ಕಾಂಚೆರಪಾಲೆಂ ಎಂಬ ಚಿತ್ರವನ್ನು ನಿರ್ದೇಶಿಸುವ ಮೂಲಕ ವೆಂಕಟೇಶ್ ಮಹಾ ಸಿನಿ ಜೀವನ ಆರಂಭಿಸಿದ್ದರು. ಈ ಚಿತ್ರ ನಿಜವಾಗಿಯೂ ನೋಡಲೇಬೇಕಾದಂತಹ ಚಿತ್ರವೇ. ಚಿತ್ರಮಂದಿರದಲ್ಲಿ ಗೆಲ್ಲದಿದ್ದರೂ ಓಟಿಟಿಗೆ ಬಂದ ನಂತರ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಸಿನಿಮಾವನ್ನು ಕನ್ನಡದ ಅದೆಷ್ಟೋ ಜನರು ಹೊಗಳಿದ್ದಾರೆ. ವೆಂಕಟೇಶ್ ಹೇಗೆ ಕೆಜಿಎಫ್ ಚಿತ್ರವನ್ನು ಟೀಕಿಸಿದ್ರೋ ಅದೇ ರೀತಿ ಕೇರ್ ಆಫ್ ಕಾಂಚೆರಪಾಲೆಂ ಚಿತ್ರವನ್ನೂ ಸಹ ಲಾಜಿಕ್ ಇಟ್ಟುಕೊಂಡು ಕನ್ನಡಿಗರು ಟೀಕಿಸಿದ್ರೆ ಕಾಮೆಂಟ್ ಹೇಗಿರುತ್ತಿತ್ತು?
ಓರ್ವ ವ್ಯಕ್ತಿ ತನ್ನ ಬಾಲ್ಯದಿಂದ ಮುದುಕನಾಗುವ ತನಕ ಬೇರೆ ಬೇರೆ ಧರ್ಮ, ವಿಭಿನ್ನ ಲುಕ್, ಅತಿ ವಿಭಿನ್ನ ನಡವಳಿಕೆ ಹೊಂದಲು ಹೇಗೆ ಸಾಧ್ಯ ಎಂದು ಇದೇ ರೀತಿಯ ಪದ ಬಳಕೆ ಮಾಡಿಬಿಟ್ಟಿದ್ದರೆ? ಅಂದಹಾಗೆ ಈ ಕೇರ್ ಆಫ್ ಕಾಂಚೆರಪಾಲೆಂ ಚಿತ್ರ ಕನ್ನಡಕ್ಕೆ ಮಾನ್ಸೂನ್ ರಾಗ ಆಗಿ ಬಿಡುಗಡೆಯಾಯಿತು. ಚಿತ್ರ ಮಕಾಡೆ ಮಲಗಿತು. ಮೊದಲ ಚಿತ್ರದ ಬಳಿಕ ಎರಡನೇ ಚಿತ್ರಕ್ಕೆ ಮಲಯಾಳಂನ 'ಮಹೇಶಿಂಟೆ ಪ್ರತೀಕಾರಂ' ಚಿತ್ರವನ್ನು ರಿಮೇಕ್ ಮಾಡಿದ ವೆಂಕಟೇಶ್ ಮಹಾ ಬಳಿಕ ಮಾಡರ್ನ್ ಲವ್ ಹೈದರಾಬಾದ್ ಎಂಬ ವೆಬ್ ಸಿರೀಸ್‌ನ ಒಂದು ಎಪಿಸೋಡ್ ಅನ್ನೂ ಸಹ ನಿರ್ದೇಶಿಸಿದರು. ಆದರೆ ಈ ಎರಡೂ ಸಹ ಸದ್ದು ಮಾಡಲಿಲ್ಲ. ಇದು ಕೆಜಿಎಫ್ ಬಗ್ಗೆ ಹೀನಾಯ ಕಾಮೆಂಟ್ ಮಾಡಿದ ನಿರ್ದೇಶಕನ ಟ್ರ್ಯಾಕ್ ರೆಕಾರ್ಡ್.


Click it and Unblock the Notifications











