ವಿಕ್ಟರಿ ವೆಂಕಟೇಶ್ ಕಾಮಿಡಿ ಕಿಕ್; ಬಾಕ್ಸಾಫೀಸ್ ಶೇಕ್ ಮಾಡ್ತಿದೆ 'ಸಂಕ್ರಾಂತಿಕಿ ವಸ್ತುನ್ನಾಂ'
ಪ್ರೇಕ್ಷಕರನ್ನು ರಂಜಿಸಲು 200, 300 ಕೋಟಿ ರೂ. ಬಜೆಟ್ ಬೇಡ. ಪ್ಯಾನ್ ಇಂಡಿಯಾ ರಿಲೀಸ್ ಮಾಡುವುದು ಬೇಕಿಲ್ಲ. ಸ್ಟಾರ್ ನಟ- ಸ್ಟಾರ್ ನಿರ್ದೇಶಕನೇ ಕೈಜೋಡಿಸಬೇಕಿಲ್ಲ. ಬೇಕಿರುವುದು 2 ಗಂಟೆ ಮನರಂಜನೆ ಮಾತ್ರ. ತೆಲುಗಿನ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ಈ ಮಾತನ್ನು ಮತ್ತೊಮ್ಮೆ ಸಾಬೀತು ಮಾಡಿದೆ.
ಸುಗ್ಗಿ ಸಂಭ್ರಮದಲ್ಲಿ ತೆರೆಗೆ ಬಂದ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ಗೆಲುವಿನ ಓಟ ಮುಂದುವರೆಸಿದೆ. ಪ್ರೇಕ್ಷಕರು ಫ್ಯಾಮಿಲಿ ಸಮೇತ ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ನಕ್ಕು ನಕ್ಕು ಎಂಜಾಯ್ ಮಾಡುತ್ತಿದ್ದಾರೆ. ಪರಿಣಾಮ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. ವಿಕ್ಟರಿ ವೆಂಕಟೇಶ್ ಹಾಗು ಅನಿಲ್ ರಾವಿಪುಡಿ ಕಾಂಬಿನೇಷನ್ ಮತ್ತೊಮ್ಮೆ ಮ್ಯಾಜಿಕ್ ಮಾಡಿದೆ.

ಫ್ಯಾಮಿಲಿ ಕಾಮಿಡಿ ಎಂಟರ್‌ಟೈನರ್ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ಮಂಗಳವಾರ(ಜನವರಿ 14) ತೆರೆಗೆ ಬಂದಿತ್ತು. ಮೊದಲ ಪ್ರದರ್ಶನದಿಂದಲೇ ಪಾಸಿಟಿವ್ ಟಾಕ್ ಕೇಳಿಬಂದಿತ್ತು. ಕಳೆದ ವಾರ ಬಂದ 'ಗೇಮ್ ಚೇಂಜರ್' ಚಿತ್ರಕ್ಕಿಂತಲೂ ವೆಂಕಿ ಚಿತ್ರಕ್ಕೆ ರೆಸ್ಪಾನ್ಸ್ ಜೋರಾಗಿದೆ. ಗಂಭೀರ ಕಥೆ ಇಲ್ಲದೇ ತಮಾಷೆಯಾಗಿ ಸಿನಿಮಾ ಕಟ್ಟಿಕೊಟ್ಟು ನಿರ್ದೇಶಕರು ಗೆದ್ದಿದ್ದಾರೆ.
ಲಾಜಿಕ್ ಪಕ್ಕಕ್ಕಿಟ್ಟು ಪ್ರೇಕ್ಷಕರು ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಪತ್ನಿ ಹಾಗೂ ಮಾಜಿ ಪ್ರೇಯಸಿಯ ನಡುವೆ ಸಿಲುಕಿ ಒದ್ದಾಡುತ್ತಾ ಒಂದು ಕಿಡ್ನ್ಯಾಪ್ ಪ್ರಕರಣವನ್ನು ಭೇದಿಸುವ ನಾಯಕನಾಗಿ ವೆಂಕಟೇಶ್ ನಟಿಸಿದ್ದಾರೆ. ಐಶ್ವರ್ಯ ರಾಜೇಶ್ ಹಾಗೂ ಮೀನಾಕ್ಷಿ ಚೌಧರಿ ನಾಯಕಿಯರಾಗಿ ಮಿಂಚಿದ್ದಾರೆ. ಗಂಭೀರ ಸನ್ನಿವೇಶಗಳಲ್ಲಿ ಕೂಡ ಕಾಮಿಡಿ ಮುನ್ನಲೆಗೆ ಬಂದು ಪ್ರೇಕ್ಷಕರನ್ನು ರಂಜಿಸುತ್ತಿದೆ.
ದಿಲ್ ರಾಜು ಹಾಗೂ ಶಿರಿಷ್ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದೇ ದಿಲ್ ರಾಜು 'ಗೇಮ್ ಚೇಂಜರ್' ಚಿತ್ರವನ್ನು ನಿರ್ಮಿಸಿದ್ದರು. ಆ ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತ್ತು. 300 ಕೋಟಿ ರೂ. ಬಂಡವಾಳ ಹೂಡಿ ಕೈ ಸುಟ್ಟುಕೊಂಡಿದ್ದಾರೆ. ಆದರೆ ಅಂದಾಜು 50 ಕೋಟಿ ರೂ. ಬಜೆಟ್ಟಿನ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ಸಖತ್ ಸದ್ದು ಮಾಡ್ತಿದೆ.

3 ದಿನಕ್ಕೆ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ವಿಶ್ವದಾದ್ಯಂತ 106 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡವೇ ಘೋಷಿಸಿದೆ. ಇತ್ತೀಚೆಗೆ 'ಗೇಮ್ ಚೇಂಜರ್' ಸಿನಿಮಾ ಕಲೆಕ್ಷನ್ ಪೋಸ್ಟರ್ ರಿಲೀಸ್ ಮಾಡಿ ಚಿತ್ರತಂಡ ಟ್ರೋಲ್ ಆಗಿತ್ತು. ಮೊದಲ ದಿನವೇ 186 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು. ಆದರೆ ಅದನ್ನು ಯಾರು ನಂಬಲಿಲ್ಲ. ಆದರೆ 'ಸಂಕ್ರಾಂತಿಕಿ ವಸ್ತುನ್ನಾಂ' ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ಸ್ಪಷ್ಟವಾಗಿ ಗೊತ್ತಾಗುತ್ತಿದೆ.
ಈ ವರ್ಷದ ಸಂಕ್ರಾಂತಿ ವಿನ್ನರ್ 'ಸಂಕ್ರಾಂತಿಕಿ ವಸ್ತುನ್ನಾಂ' ಎಂದು ಕೆಲವರು ಹೇಳುತ್ತಿದ್ದಾರೆ. ವಿಕ್ಟರಿ ವೆಂಕಟೇಶ್ ಸಿನಿಮಾ ಎದುರು ಬಾಲಕೃಷ್ಣ ನಟನೆಯ 'ಡಾಕು ಮಹಾರಾಜ್' ಸಿನಿಮಾ ಕೂಡ ಡಲ್ ಆಗಿದೆ. ಕಳೆದ 24 ಗಂಟೆಗಳಲ್ಲಿ 'ಸಂಕ್ರಾಂತಿಕಿ ವಸ್ತುನ್ನಾಂ' ಚಿತ್ರಕ್ಕೆ 3 ಲಕ್ಕಕ್ಕೂ ಅಧಿಕ ಟಿಕೆಟ್ ಬುಕ್‌ಮೈ ಶೋನಲ್ಲಿ ಬುಕ್ ಆಗಿದೆ. ಚಿತ್ರದ ಕ್ರೇಜ್ ಹೇಗಿದೆ ಎನ್ನುವುದು ಇದರಲ್ಲೇ ಗೊತ್ತಾಗುತ್ತಿದೆ.
ನಟ ವೆಂಕಟೇಶ್, ನಿರ್ದೇಶಕ ಅನಿಲ್ ರಾವಿಪುಡಿ ಹಾಗೂ ನಿರ್ಮಾಪಕ ಶಿರಿಷ್ ಕಾಂಬಿನೇಷನ್‌ನಲ್ಲಿ ಬಂದ 3 ಚಿತ್ರಗಳು ಹಿಟ್ ಆಗಿದೆ. 'F2' ಹಾಗೂ 'F3' ಚಿತ್ರಗಳು ಕೂಡ ಬಾಕ್ಸಾಫೀಸ್ ಶೇಕ್ ಮಾಡಿದ್ದವು. ಇದೀಗ 'ಸಂಕ್ರಾಂತಿಕಿ ವಸ್ತುನ್ನಾಂ' ಮೂಲಕ ಹ್ಯಾಟ್ರಿಕ್ ಹಿಟ್ ಬಾರಿಸಿದಂತಾಗಿದೆ. ವಾರದ ದಿನಗಳಲ್ಲೇ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಇನ್ನು ವೀಕೆಂಡ್‌ನಲ್ಲಿ ಇದು ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ.
'ಗೇಮ್ ಚೇಂಜರ್' ಹಾಗೂ 'ಡಾಕು ಮಹಾರಾಜ್' ರೀತಿಯ ದೊಡ್ಡ ಸಿನಿಮಾಗಳು ಒಟ್ಟಿಗೆ ಬಂದಿದ್ದರಿಂದ 'ಸಂಕ್ರಾಂತಿಕಿ ವಸ್ತುನ್ನಾಂ' ಚಿತ್ರಕ್ಕೆ ಹೆಚ್ಚು ಸ್ಕ್ರೀನ್‌ಗಳು ಸಿಕ್ಕಿರಲಿಲ್ಲ. ಇದೀಗ ನಿಧಾನವಾಗಿ ರಾಮ್‌ಚರಣ್ ಚಿತ್ರದ ಸ್ಕ್ರೀನ್‌ಗಳನ್ನು ವೆಂಕಿ ಸಿನಿಮಾ ಆಕ್ರಮಿಸಿಕೊಳ್ತಿದೆ.


Click it and Unblock the Notifications











