ಮದ್ವೆ ಆದ 4 ತಿಂಗಳಿಗೆ ಪ್ರಭು - ಖುಷ್ಬೂ ಡಿವೋರ್ಸ್.. ಗಾಢವಾಗಿ ಪ್ರೀತಿಸಿದ್ದ ಜೋಡಿ ದೂರಾಗಿದ್ದೇಕೆ?
ಬಹುಭಾಷಾ ನಟಿ ಖುಷ್ಬು ಕನ್ನಡ ಸಿನಿರಸಿಕರಿಗೂ ಚಿರಪರಿಚಿತ. ತೆಲುಗು ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ಮುಂದೆ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಬಿಜೆಪಿ ಪಕ್ಷದಲ್ಲೂ ಗುರ್ತಿಸಿಕೊಂಡಿರುವ ನಟಿ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳುಬೀಳು ಕಂಡಿದ್ದಾರೆ. ತಮಿಳು ನಟ ಪ್ರಭು ಹಾಗೂ ನಟಿ ಖುಷ್ಬು ಲವ್‌ಸ್ಟೋರಿ ಬಗ್ಗೆ ತೆಲುಗಿನ ಹಿರಿಯ ನಟಿ ಕಾಕಿನಾಡ ಶ್ಯಾಮಲಾ ಮಾತನಾಡಿದ್ದಾರೆ.
1991ರಲ್ಲಿ ಪ್ರಭು ಹಾಗೂ ಖುಷ್ಬು ನಟಿಸಿದ 'ಚಿನ್ನ ತಂಬಿ' ಸಿನಿಮಾ ಹಿಟ್ ಆಗಿತ್ತು. ಇದೇ ಚಿತ್ರವನ್ನು ಕನ್ನಡದಲ್ಲಿ ರವಿಚಂದ್ರನ್ 'ರಾಮಾಚಾರಿ' ಹೆಸರಿನಲ್ಲಿ ರೀಮೆಕ್ ಮಾಡಿದ್ದರು. ಪಿ. ವಾಸು ನಿರ್ದೇಶನದ 'ಚಿನ್ನ ತಂಬಿ' ಸಿನಿಮಾ ಇದೀಗ 32 ವರ್ಷ ಪೂರೈಸಿದ್ದು ಈ ಸಂಭ್ರಮವನ್ನು ಖುಷ್ಬು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೆಲ್ಲದರ ನಡುವೆ ಕಾಕಿನಾಡ ಶ್ಯಾಮಲಾ ಹೇಳಿಕೆ ಕೂಡ ವೈರಲ್ ಆಗಿದೆ.

ಹಿಂದೆ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ನಟಿ ಖುಷ್ಬು, ಪ್ರಭು ಜೊತೆಗಿನ ರಿಲೇಷನ್‌ಶಿಪ್ ಬಗ್ಗೆ ಮಾತನಾಡಿದ್ದರು. "ಪ್ರಭು ಜೊತೆ ನಾನು 4 ವರ್ಷ ರಿಲೇಷನ್‌ಶಿಪ್‌ನಲ್ಲಿ ಇದ್ದೆ. 1993ರಲ್ಲಿ ಚೆನ್ನೈನ ಪೋಯೆಸ್ ಗಾರ್ಡನ್‌ನಲ್ಲಿರುವ ಅವರ ಮನೆಯಲ್ಲೇ ನಮ್ಮ ಮದುವೆ ನಡೆದಿತ್ತು. ಅದಾಗಲೇ ಪ್ರಭುಗೆ ಒಂದು ಮದುವೆ ಆಗಿದ್ದರಿಂದ ಅವರ ಅಪ್ಪ ಶಿವಾಜಿ ಗಣೇಶನ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಮೊದಲ ಪತ್ನಿ ಜೊತೆಗೂ ಸಂಘರ್ಷ ಏರ್ಪಟ್ಟು 4 ತಿಂಗಳಿಗೆ ದೂರಾದೆವು" ಎಂದಿದ್ದರು.
ಖುಷ್ಬು- ಪ್ರಭು ಲವ್ ಬಗ್ಗೆ ಕಾಕಿನಾಡ ಶ್ಯಾಮಲಾ ಮಾತನಾಡಿದ್ದಾರೆ.
"ಖುಷ್ಬೂ ತುಂಬಾ ಒಳ್ಳೆಯ ಹುಡುಗಿ. ಪ್ರಭುನ ಬಹಳ ಗಾಢವಾಗಿ ಪ್ರೀತಿಸಿದ್ದಳು. ಒಬ್ಬರು ಅಂದ್ರೆ ಇನ್ನೊಬ್ಬರಿಗೆ ಪ್ರಾಣ ಎನ್ನುವಂತೆ ಇದ್ದರು. ಅದೇ ಕಾರಣಕ್ಕೆ ಅದಾಗಲೇ ಪ್ರಭುಗೆ ಮದುವೆ ಆಗಿದ್ದರೂ ಕೂಡ ಖುಷ್ಬು 2ನೇ ಮದುವೆ ಆಗಿದ್ದಳು. ಆದರೆ ಪ್ರಭು ಮನೆಯಲ್ಲಿ ಗಲಾಟೆ ಆಗಿ ಇಬ್ಬರು ದೂರಾಗುವಂತಾಯಿತು" ಎಂದು ಆಕೆ ಹೇಳಿದ್ದಾರೆ.
ಖುಷ್ಬೂ ಎರಡನೇ ಮದುವೆ ನಿರ್ದೇಶಕ ನಟ ಸಿ. ಸುಂದರ್ ಜೊತೆ ನಡೆಯಿತು. 2000ರಲ್ಲಿಇವರ ಮದುವೆ ನಡೆಯಿತು. ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ನಟಿ ಖುಷ್ಬೂ ಇತ್ತೀಚೆಗೆ ತಮ್ಮ ತಂದೆಯ ಮೇಲೆ ಆರೋಪಗಳನ್ನು ಮಾಡಿದರು. ಆಕೆಯ ಹೇಳಿಕೆ ಸಂಚಲನ ಸೃಷ್ಟಿಸಿತ್ತು. ರಾಜಕೀಯರಂಗದಲ್ಲೂ ಗುರ್ತಿಸಿಕೊಂಡಿರುವ ನಟಿ ಸಿನಿಮಾಗಳಲ್ಲೂ ನಟಿಸ್ತಾ ಬರ್ತಿದ್ದಾರೆ. ಮೊದಲು ಕಾಂಗ್ರೆಸ್ ಪಕ್ಷ ಸೇರಿದ್ದ ನಟಿ ನಂತರ ಬಿಜೆಪಿ ಕೈ ಹಿಡಿದರು. ಸದ್ಯ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ಕೆಲಸ ಮಾಡ್ತಿದ್ದಾರೆ.

ಕಳೆದ ವರ್ಷ 'ಆಡುವಾರ್ಲು ಮೀಕು ಜೋಹಾರ್ಲು' ಸಿನಿಮಾದಲ್ಲಿ ನಟಿಸಿದ್ದರು. ತೆಲುಗು ಕಿರುತೆರೆಯ 'ಜಬರ್ದಸ್ತ್' ಕಾಮಿಡಿ ಶೋ ಜಡ್ಜ್ ಆಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. 32 ವರ್ಷಗಳ ನಂತರ ಮತ್ತೆ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಖುಷ್ಬು ನಟಿಸ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಗುರುರಾಜ್ ಕುಲಕರ್ಣಿ ನಿರ್ದೇಶನದ ಥ್ರಿಲ್ಲರ್ ಚಿತ್ರಕ್ಕಾಗಿ ಖುಷ್ಬು ಜೊತೆ ಚರ್ಚಿಸಲಾಗಿದೆ. ಆಕೆ ಕೂಡ ನಟಿಸಲು ಆಸಕ್ತಿ ತೋರಿಸಿದ್ದಾರಂತೆ.
ರವಿಚಂದ್ರನ್ ನಿರ್ದೇಶಿಸಿ ನಟಿಸಿದ 'ರಣಧೀರ' ಸಿನಿಮಾ ಮೂಲಕ ಖುಷ್ಬೂ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದರು. ನಂತರ 'ಅಂಜದ ಗಂಡು', 'ಯುಗಪುರುಷ' ಸಿನಿಮಾಗಳಲ್ಲಿ ಕ್ರೇಜಿಸ್ಟಾರ್ ಜೊತೆ ಮಿಂಚಿದ್ದರು. ರವಿಚಂದ್ರನ್ ನಿರ್ದೇಶನದ 'ಶಾಂತಿ ಕ್ರಾಂತಿ' ಚಿತ್ರದಲ್ಲಿ ಆಕೆ ನಟಿಸಿದ್ದರು. ಆದರೆ ರಮೇಶ್ ಅರವಿಂದ್‌ಗೆ ಜೋಡಿಯಾಗಿದ್ದರು. ಇದೀಗ 32 ವರ್ಷಗಳ ನಂತರ ರವಿಚಂದ್ರನ್- ಖುಷ್ಬು ಮತ್ತೆ ಒಟ್ಟಿಗೆ ನಟಿಸುವ ಸುಳಿವು ಸಿಕ್ತಿದೆ.


Click it and Unblock the Notifications











