ಹಣವಿಲ್ಲದ್ದಕ್ಕೆ ಚಿಕಿತ್ಸೆ ನೀಡಲು ನಿರಾಕರಿಸಿದ ವೈದ್ಯರು ; ರಸ್ತೆ ಬದಿ ದಯನೀಯ ಸ್ಥಿತಿಯಲ್ಲಿ ಪತ್ತೆಯಾದ ಖ್ಯಾತ ಹಿರಿಯ ನಟಿ

ಕಾಲು ಸೋತ ಕಲಾವಿದರನ್ನು ಕಸಕ್ಕಿಂತಲೂ ಕಡೆಯಾಗಿ ಕಾಣುವುದು ಬಣ್ಣದ ಲೋಕದ ಹಳೆ ಚಾಳಿ. ಆ ಭಾಷೆ ಈ ಭಾಷೆ ಅಂತಲ್ಲ. ಎಲ್ಲ ಭಾಷೆಯಲ್ಲಿ ಈ ದುರ್ಬುದ್ದಿ ಇದ್ದೇ ಇದೆ. ಇನ್ನು ಕಲಾವಿದರ ನೆರವಿಗೆ ಎಂದು ಸ್ಥಾಪನೆಯಾದ ಕಲಾವಿದರ ಸಂಘಗಳು ಅದೇನು ಕೆಲಸ ಮಾಡುತ್ತಿವೆಯೋ ಗೊತ್ತಿಲ್ಲ. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಕಲೆಯನ್ನೇ ನೆಚ್ಚಿಕೊಂಡಿದ್ದ ಹಿರಿಯ ಜೀವವೊಂದು ಪಕ್ಕದ ಹೈದ್ರಾಬಾದ್‌ನಲ್ಲಿ ನರಳುತ್ತಿದೆ. ಅವರ ಹೆಸರು ಪಾವಲಾ ಶ್ಯಾಮಲಾ.

ಹೌದು, ಪಾವಲಾ ಶ್ಯಾಮಲಾ.. ಅಂದಕಾಲತ್ತಿಲ್‌ನ ಬಿಡುವಿರದ ನಟಿ. ಆ ಕಾಲಕ್ಕೆ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರನ್ನ ಮಾಡಿದವರು ಇವರು. ಸಾಕ್ಷಾತ್ತು ಮೆಗಾ ಸ್ಟಾರ್ ಚಿರಂಜೀವಿ, ಬಾಲಕೃಷ್ಣ, ವೆಂಕಟೇಶ್ ಸಿನಿಮಾಗಳಲ್ಲಿ ಇವರು ಖಾಯಂ ನಟಿಯಾಗಿದ್ದರು. ಕೇವಲ ಆ ಕಾಲ ಮಾತ್ರ ಅಲ್ಲ ಈ ಕಾಲದಲ್ಲಿಯೂ ಜ್ಯೂ.ಎನ್.ಟಿ.ಆರ್, ನಾನಿ, ಗೋಪಿಚಂದ್, ರವಿತೇಜಾ ಅವರ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದರು.

tollywood-veteran-pavala-shyamala-found-critical-on-hyderabad-footpath-after-hospital-denial

ಆದರೆ ಈಗ ಪಾವಲಾ ಶ್ಯಾಮಲಾ ತಮ್ಮ ಬದುಕಿನ ಸಂಧ್ಯಾಕಾಲದಲ್ಲಿದ್ದಾರೆ. ದುರಂತ ಅಂದರೆ 300ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿರುವ ಇವರಿಗೆ ಒಂದು ಸೂರು ಇಲ್ಲ. ನೋಡಿಕೊಳ್ಳೋರು ದಿಕ್ಕು ಇಲ್ಲ. ಚಿತ್ರರಂಗಕ್ಕೂ ಕೂಡ ಇವರು ನೆನಪಿಲ್ಲ.

ಇದಕ್ಕೆ ಕೈಗನ್ನಡಿ ಎಂಬಂತೆ ಹಲವಾರು ವರ್ಷಗಳಿಂದ ವೃದ್ದಾಶ್ರಮದಲ್ಲಿ ಪಾವಲಾ ಶ್ಯಾಮಲಾ ಇದ್ದಾರೆ. ಆರ್ಥಿಕ ಸಮಸ್ಯೆಯ ಜೊತೆ ದೈಹಿಕ ಸಮಸ್ಯೆಯಿಂದ ಹೈರಾಣಾಗಿದ್ದಾರೆ. ಅನೇಕ ಬಾರಿ ಯಾರಾದರೂ ಸಹಾಯ ಮಾಡಿ ಎಂದು ಅಂಗಲಾಚಿದ್ದಾರೆ.

ಆದರೂ ಕೂಡ ಯಾರು ಕ್ಯಾರೇ ಎನ್ನಲಿಲ್ಲ. ಅಲ್ಲೊಬ್ಬರು.. ಇಲ್ಲೊಬ್ಬರು.. ಚೂರು ಪಾರು ಆರ್ಥಿಕ ನೆರವು ನೀಡಿದ್ದು ಬಿಟ್ಟರೆ ಬೇರೆ ಯಾರು ಸಹಾಯದ ಹಸ್ತವನ್ನು ಕೂಡ ಚಾಚಲಿಲ್ಲ.

ಇಂಥಾ ಪಾವಲಾ ಶ್ಯಾಮಲಾ ಸದ್ಯ ಹೈದರಾಬಾದ್ ನ ಜನನಿಬಿಡ ಪ್ರದೇಶದಲ್ಲಿ ನರಳಾಡಿದ್ದಾರೆ. ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹೌದು. ಹೃದಯ ಸಂಬಂಧಿ ಕಾಯಿಲೆಯಿಂದ ನಿನ್ನೆ (ಮೇ 15) ಪಾವಲಾ ಶ್ಯಾಮಲಾ ತೀವೃ ಅಸ್ವಸ್ಥರಾಗಿದ್ದರು.

tollywood-veteran-pavala-shyamala-found-critical-on-hyderabad-footpath-after-hospital-denial

ಈ ಹಿನ್ನೆಲೆ ಚಿಕಿತ್ಸೆ ಪಡೆಯಲು ಕೂಕಟ್‌ಪಲ್ಲಿಯ ಖಾಸಗಿ ಆಸ್ಪತ್ರೆಗೆ ಹೋಗಿದ್ದರು. ಆದರೆ ಅಲ್ಲಿ ನಡೆದದ್ದು ಮಾತ್ರ ಮಾನವೀಯತೆಯನ್ನೇ ನಾಚಿಸುವಂತಹ ಘಟನೆ. ತುರ್ತು ಚಿಕಿತ್ಸೆಗೆ ಅಗತ್ಯವಿರುವ ಹಣವನ್ನು ತಕ್ಷಣವೇ ಪಾವತಿಸಲು ಪಾವಲಾ ಶ್ಯಾಮಲಾ ಅವರ ಬಳಿ ಆರ್ಥಿಕ ಶಕ್ತಿ ಇರದ ಕಾರಣ ಆಸ್ಪತ್ರೆಯವರು ಇವರನ್ನು ದಾಖಲಿಸಿಕೊಳ್ಳಲಿಲ್ಲ. ಚಿಕಿತ್ಸೆಯನ್ನು ನೀಡಲಿಲ್ಲ.

ಹಾಗಂಥ ನರಕಯಾತನೆ ಇಲ್ಲಿಗೆ ಮುಗಿಯಲಿಲ್ಲ. ಪಾವಲಾ ಶ್ಯಾಮಲಾ ಅವರನ್ನು ಕರೆ ತಂದಿದ್ದ ಕ್ಯಾಬ್ ಚಾಲಕ್ ನಿರ್ದಯವಾಗಿ ಇವರನ್ನು ಕೂಕಟ್ ಪಲ್ಲಿಯ ವೈ ಜಂಕ್ಷನ್‌ನಲ್ಲಿ ರಸ್ತೆ ಬದಿ ಇಳಿಸಿ ಹೋಗಿದ್ದಾನೆ. ನಡುರಾತ್ರಿ ಫುಟ್‌ಪಾತ್‌ನಲ್ಲಿ ನರಳುತ್ತಿದ್ದ ಪಾವಲಾ ಶ್ಯಾಮಲಾ ಅವರ ದಯನೀಯ ಸ್ಥಿತಿ ಕಂಡು ಅಲ್ಲಿದ್ದ ಸ್ಥಳಿಯರು ಕೂಡಲೇ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಅದೃಷ್ಟವಶಾತ್ ಸ್ಥಳಕ್ಕೆ ಬಂದ ಪೊಲೀಸರಲ್ಲಿ ಮಾನವೀಯತೆ ಇತ್ತು. ಕೂಡಲೇ ಆರ್ ಕೆ ಫೌಂಡೇಶನ್ ನೆರವಿನೊಂದಿಗೆ ಸನತ್ ನಗರದ ಖಾಸಗಿ ಆಸ್ಪತ್ರೆಗೆ ಪಾವಲಾ ಶ್ಯಾಮಲಾರನ್ನು ದಾಖಲಿಸಿದರು. ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು. ಸದ್ಯ ಪಾವಲಾ ಶ್ಯಾಮಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಕುರಿತು ''ಸಿಯಾಸತ್.ಕಾಮ್''ಗೆ ಪ್ರತಿಕ್ರಿಯೆ ನೀಡಿರುವ ಆರ್.ಕೆ ಫೌಂಡೇಶನ್ ಮುಖ್ಯಸ್ಥ ಡಾ. ರಾಮಕೃಷ್ಣ, ಪಾವಲಾ ಶ್ಯಾಮಲಾ ಅವರಿಗೆ ನಮ್ಮ ಫೌಂಡೇಶನ್‌ ವತಿಯಿಂದ ಕಳೆದ ಕಳೆದ ಎರಡು-ಮೂರು ವರ್ಷಗಳಿಂದ ಉಚಿತ ಚಿಕಿತ್ಸೆಯನ್ನು ನಾವು ಕೊಡ್ತಾ ಇದ್ದೇವೆ ಎಂದು ಹೇಳಿದ್ದಾರೆ. ನಮ್ಮ ಹತ್ರ ಹಾರ್ಟ್ ಸ್ಪೆಷಲಿಸ್ಟ್‌ಗಳು ಇಲ್ಲದ ಕಾರಣ ಅವರು ಹೊರಗಡೆ ಹೋಗಬೇಕಾಗಿ ಬಂತು ಎಂದು ಹೇಳಿರುವ ಡಾ.ರಾಮಕೃಷ್ಣ ಸದ್ಯಕ್ಕೆ ಅವರು ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿತಾ ಇದ್ದಾರೆ, ನಾಳೆ (ಮೇ 17) ವಾಪಸ್ ನಮ್ಮ ಫೌಂಡೇಶನ್‌ಗೇ ಬರ್ತಾರೆ ಎಂದಿದ್ದಾರೆ.

ಸದ್ಯ ರಸ್ತೆಯಲ್ಲಿ ಅಸಹಾಯಕರಾಗಿ ಪಾವಲಾ ಶ್ಯಾಮಲಾ ನರಳಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲವರ ಆಕ್ರೋಶಕ್ಕೆ ತೆಲುಗು ಚಿತ್ರರಂಗ ಈ ಮೂಲಕ ಗುರಿಯಾಗಿದೆ.

ಜೀವನದೂದ್ದಕ್ಕೂ ಕಲಾಸೇವೆಯನ್ನು ಮಾಡಿದ ಕಲಾವಿದೆಯನ್ನು ಈ ಮಟ್ಟಕ್ಕೆ ಕಡೆಗಣಿಸಲು ಹೇಗೆ ಸಾಧ್ಯ? ಎಂಬ ಪ್ರಶ್ನೆಯನ್ನು ಕೇಳುತ್ತಿರುವ ಹಲವರು ಹಣ ಇಲ್ಲದಕ್ಕೆ ಚಿಕಿತ್ಸೆ ನೀಡಲು ನಿರಾಕರಿಸಿದ ಆಸ್ಪತ್ರೆಯ ವೈದ್ಯರ ವಿರುದ್ದ ಕೂಡ ಕಿಡಿ ಕಾರುತ್ತಿದ್ಧಾರೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ.

ಇದು ಕೇವಲ ಪಾವಲಾ ಶ್ಯಾಮಲಾ ಅವರ ವೈಯಕ್ತಿಕ ಸಮಸ್ಯೆಯಲ್ಲ, ಬದಲಿಗೆ ಚಿತ್ರರಂಗದ ಹಿರಿಯ ಕಲಾವಿದರ ಭವಿಷ್ಯದ ಭದ್ರತೆ ಕುರಿತ ಪ್ರಶ್ನೆ. ವೃದ್ಧಾಪ್ಯದಲ್ಲಿ ನಟ-ನಟಿಯರಿಗೆ ಸೂಕ್ತ ನೆರವು ಸಿಗದಿರುವುದು ಆತಂಕಕಾರಿ ವಿಚಾರ ಎನ್ನುತ್ತಿರುವ ಹಲವರು, ''ಮಾ'' (ಮೂವಿ ಆರ್ಟಿಸ್ಟ್ ಅಸೋಸಿಯೇಶನ್) ಮತ್ತು ಸರ್ಕಾರ ಸ್ಪಂದಿಸಿ, ಶ್ಯಾಮಲಾ ಅವರಂತಹ ಹಿರಿಯ ಕಲಾವಿದರಿಗೆ ಶಾಶ್ವತ ವೈದ್ಯಕೀಯ ಮತ್ತು ಆರ್ಥಿಕ ಭದ್ರತೆ ಒದಗಿಸಬೇಕೆಂದು ಕೂಡ ಹಲವರು ಆಗ್ರಹಿಸಿದ್ದಾರೆ.

English summary
Shocker in Hyderabad: Acclaimed actress Pavala Shyamala found critical on the road after facing a severe medical and financial crisis. Full story inside.
Read more about: tollywood hospital
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X