Chandra Mohan: ಬರೋಬ್ಬರಿ 932 ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ನಟ ಚಂದ್ರಮೋಹನ್ (82) ವಿಧಿವಶ
Chandra Mohan death: ಕಳೆದ ವರ್ಷದಿಂದ ತೆಲುಗು ಚಿತ್ರರಂಗದಲ್ಲಿ ಸರಣಿ ದುರಂತ ಘಟನೆಗಳು ನಡೆಯುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಅಗಲಿದ್ದಾರೆ. ಈ ವರ್ಷದಲ್ಲಿ ನಟರಾದ ಕೃಷ್ಣಂರಾಜು, ಸೂಪರ್ ಸ್ಟಾರ್ ಕೃಷ್ಣ, ಸತ್ಯನಾರಾಯಣರಂತಹ ದಿಗ್ಗಜರನ್ನು ಚಿತ್ರರಂಗ ಕಳೆದುಕೊಂಡಿದೆ. ಹಿರಿಯರನ್ನು ಕಳೆದುಕೊಂಡು ಬಡವಾಗಿರುವ ಟಾಲಿವುಡ್‌ಗೆ ಈಗ ಮತ್ತೊಂದು ಆಘಾತ ಎದುರಾಗಿದೆ.
ಐದು ದಶಕಗಳಿಗೂ ಹೆಚ್ಚು ಕಾಲ ತೆಲುಗು ಚಿತ್ರೋದ್ಯಮದಲ್ಲಿ ನಟನಾಗಿ ಗುರುತಿಸಿಕೊಂಡಿದ್ದ ಹಿರಿಯ ಚಂದ್ರಮೋಹನ್ ಶನಿವಾರ (ನವೆಂಬರ್ 11) ರ ಬೆಳಗ್ಗೆ 9:45 ಕ್ಕೆ ಕೊನೆಯುಸಿರೆಳೆದಿದ್ದಾರೆ. ಹಿರಿಯ ನಟ ಚಂದ್ರ ಮೋಹನ್ ಅವರಿಗೆ 82 ವರ್ಷ ವಯಸ್ಸಾಗಿತ್ತು. ಅವರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದು, ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು . ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಹಿರಿಯ ನಟ ಚಂದ್ರಮೋಹನ್ ನಿಧನಕ್ಕೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಆಘಾತ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ರಾಜಕೀಯ ಕ್ಷೇತ್ರದ ಗಣ್ಯರು ಕೂಡ ಸಂತಾಪ ಸೂಚಿಸಿದ್ದಾರೆ. ಚಂದ್ರಮೋಹನ್ ತಮ್ಮ ಪತ್ನಿ ಜಲಂಧರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಸೋಮವಾರ ಹೈದರಾಬಾದ್‌ನಲ್ಲಿ ನಡೆಯಲಿದೆ.
ಬರೋಬ್ಬರಿ 932 ಚಲನಚಿತ್ರಗಳಲ್ಲಿ ನಟಿಸಿರುವ ಚಂದ್ರಮೋಹನ್
ಚಂದ್ರಮೋಹನ್ ಅವರು ಮಲ್ಲಂಪಲ್ಲಿ ಚಂದ್ರಶೇಖರ ರಾವ್ ಆಗಿ 23 ಮೇ 1943 ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪಮಿಡಿಮುಕ್ಕಲ ಗ್ರಾಮದಲ್ಲಿ ಜನಿಸಿದರು. ಚಂದ್ರಮೋಹನ್ 1966 ರಲ್ಲಿ ರಂಗುಲ ರತ್ನಂ ಚಿತ್ರದ ಮೂಲಕ ತೆಲುಗು ಚಲನಚಿತ್ರೋದ್ಯಮಕ್ಕೆ ಕಾಲಿಟ್ಟರು. ಬರೋಬ್ಬರಿ 932 ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
1968 ರಲ್ಲಿ ಅವರು ವಾಣಿಶ್ರೀ ಅವರ ಸುಖ ದುಃಖಲು ಚಿತ್ರದಲ್ಲಿ ಸಹೋದರನಾಗಿ ಕಾಣಿಸಿಕೊಂಡು ಖ್ಯಾತಿ ಗಳಿಸಿದ ಅವರು, ನಟನೆಗಾಗಿ ಪ್ರಶಸ್ತಿಯನ್ನು ಮುಡುಗೇರಿಸಿಕೊಂಡಿದ್ದರು.ಆ ನಂತರ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳು, ಹೀರೋ, ವಿಲನ್ ಆಗಿ ನಟಿಸಿದ್ದಾರೆ. ಅವರು ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಒಟ್ಟು 932 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ನಾಯಕನಾಗಿ 175 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ
ಚಂದ್ರಮೋಹನ್ ಅವರು ಪೋಷಕ ಪಾತ್ರಗಳ ಜೊತೆ ಜೊತೆಗೆ ನಾಯಕನಾಗಿ 175 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ಮುಖ್ಯವಾಗಿ ಹಾಸ್ಯ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಚಿತ್ರರಂಗದಲ್ಲಿ ತಮ್ಮ ಅಭಿನಯದಿಂದ ಛಾಪು ಮೂಡಿಸಿದ್ದ ಅವರು ಎರಡು ಫಿಲಂಫೇರ್ ಮತ್ತು ಆರು ನಂದಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಸಂತಾಪ ಸೂಚಿಸಿದ ನಟರು
ಚಂದ್ರ ಮೋಹನ್ ಅವರ ನಿಧನಕ್ಕೆ ಹಲವು ನಟ, ನಟಿಯರು ಸಂತಾಪ ಸೂಚಿಸಿದ್ದಾರೆ. ಬಹುತೇಕ ಎಲ್ಲಾ ಕಲಾವಿದರ ಜೊತೆಯಲ್ಲಿಯೂ ಅವರು ನಟಿಸಿದ್ದಾರೆ. "ಅವರ ಸ್ಮರಣೀಯ ನಟನೆ ಮತ್ತು ಪಾತ್ರಗಳ ಮೂಲಕ ನಮ್ಮನ್ನು ನೆನಪಿನ ಹಾದಿಯಲ್ಲಿ ಕೊಂಡೊಯ್ಯುವ ಮತ್ತು ಪ್ರತಿ ಬಾರಿಯೂ ನಮ್ಮ ಮುಖದಲ್ಲಿ ನಗು ಮೂಡಿಸುವ ಮುಖ ಅವರದು. ಚಂದ್ರಮೋಹನ್ ಸರ್ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ" ಎಂದು ನಟ ಸಾಯಿ ಧರಂ ತೇಜ್ ಟ್ವೀಟ್ ಮಾಡಿದ್ದಾರೆ.
"ಶ್ರೀ ಚಂದ್ರಮೋಹನ್ ಅವರ ಸುದ್ದಿ ಕೇಳಿ ನಿಜಕ್ಕೂ ಬೇಸರವಾಯಿತು. ಅವರು ಅದ್ಭುತ ನಟರಾಗಿದ್ದರು ಮತ್ತು ನಾನು ಅವರ ಚಲನಚಿತ್ರಗಳನ್ನು ನೋಡುತ್ತಾ ಬೆಳೆದೆ. 'ಢಿ' ಚಿತ್ರದಲ್ಲಿ ಅವರೊಂದಿಗೆ ನಟಿಸುವ ಅದೃಷ್ಟ ನನ್ನದಾಗಿತ್ತು. ಅದ್ಭುತ ವ್ಯಕ್ತಿ. ನಾವೆಲ್ಲರೂ ಅವರನ್ನು ಮಿಸ್ ಮಾಡಿಕೊಳ್ಳುತ್ತೇವೆ" ಎಂದು ನಟ ವಿಷ್ಣು ಮಂಚು ಬರೆದುಕೊಂಡಿದ್ದಾರೆ.


Click it and Unblock the Notifications











