"ಪ್ಲೀಸ್ ನನಗೊಂದು ಸಿನ್ಮಾ ಮಾಡಿ ಸರ್"; ವೇದಿಕೆಯಲ್ಲಿ ಬಹಿರಂಗವಾಗಿ ತಾರಕ್ ಮನವಿ
ಸ್ಟಾರ್ ಡೈರೆಕ್ಟರ್ ಜೊತೆ ನಮ್ಮ ಫೇವರಿಟ್ ಹೀರೊ ಸಿನಿಮಾ ಮಾಡಬೇಕು ಎನ್ನುವ ಆಸೆ ಅಭಿಮಾನಿಗಳಿಗೆ ಇರುತ್ತದೆ. ಅದೇ ರೀತಿ ಬೇರೆ ನಿರ್ದೇಶಕರ ಕೆಲಸವನ್ನು ಮೆಚ್ಚಿಕೊಳ್ಳುವ ಕಲಾವಿದರು ಇರ್ತಾರೆ. ಅವರೊಟ್ಟಿಗೆ ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸುತ್ತಿರುತ್ತಾರೆ.
ಕೆಲ ನಟರು ಸಾಮಾನ್ಯವಾಗಿ ನನಗೆ ಅವರೊಟ್ಟಿಗೆ ಕೆಲಸ ಮಾಡುವ ಆಸೆ ಇದೆ ಎಂದು ಹೇಳುವುದಿಲ್ಲ. ಆದರೆ ತೆಲುಗು ನಟ ಜ್ಯೂ. ಎನ್‌ಟಿಆರ್ ಈ ವಿಚಾರದಲ್ಲಿ ಯಾವುದೇ ಮುಚ್ಚುಮರೆ ಇಲ್ಲದೇ ಮಾತನಾಡುತ್ತಾರೆ. ಯಾವುದೇ ಭಾಷೆಯಲ್ಲಿ ಯಾವುದೇ ಒಳ್ಳೆಯ ಸಿನಿಮಾ ಬಂದರೆ ಕೂಡಲೇ ಕರೆ ಮಾಡಿ ಚಿತ್ರತಂಡಕ್ಕೆ ಅಭಿನಂದನೆ ತಿಳಿಸುತ್ತಾರೆ.

ಕನ್ನಡದ 'ಕಾಂತಾರ' ಸಿನಿಮಾ ನೋಡಿ ತಾರಕ್ ಫಿದಾ ಆಗಿದ್ದರು. ಕೂಡಲೇ ರಿಷಬ್ ಶೆಟ್ಟಿಗೆ ಕರೆ ಮಾಡಿ ಅಭಿನಂದನೆ ತಿಳಿಸಿದ್ದರು. ನಿರ್ದೇಶನ, ನಟನೆ ಎಲ್ಲದರ ಬಗ್ಗೆಯೂ ಮೆಚ್ಚುಗೆ ಸೂಚಿಸಿದ್ದರು. ಅಲ್ಲಿಂದ ಮುಂದೆ ಇಬ್ಬರೂ ಆತ್ಮೀಯ ಸ್ನೇಹಿತರಾಗಿಬಿಟ್ಟರು. ಇತ್ತೀಚೆಗೆ ಸ್ನೇಹಿತನ ಜೊತೆ ಫ್ಯಾಮಿಲಿ ಸಮೇತ ಕರಾವಳಿಯ ದೇವಸ್ಥಾನಗಳಿಗೆ ತಾರಕ್ ಭೇಟಿ ನೀಡಿದ್ದರು.
ಈ ಕ್ಷಣಕ್ಕೂ 'ಕಾಂತಾರ' ಸಿನಿಮಾ ನೋಡಿ ಮಂತ್ರಮುಗ್ಧನಾಗಿರುವುದಾಗಿ ತಾರಕ್ ಹೇಳುತ್ತಿರುತ್ತಾರೆ. 'ಕಾಂತಾರ-1' ಚಿತ್ರದಲ್ಲಿ ರಿಷನ್ ಶೆಟ್ಟಿ ಅವಕಾಶ ಕೊಟ್ಟರೆ ನಟಿಸುತ್ತೇನೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ರಿಷಬ್ ಶೆಟ್ಟಿ ಮಾತ್ರವಲ್ಲ, 'KGF' ಸರಣಿ ಸಿನಿಮಾ ನೋಡಿದಾಗ ಪ್ರಶಾಂತ್ ನೀಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಥೆ ಮಾಡುವಂತೆ ಹೇಳಿ ಸಿನಿಮಾ ಮಾಡಲು ಮುಂದಾಗಿದ್ದಾರೆ.

ಪ್ರಶಾಂತ್ ನೀಲ್ ಹಾಗೂ ತಾರಕ್ ಕಾಂಬಿನೇಷನ್ ಸಿನಿಮಾ ಈಗಾಗಲೇ ಸೆಟ್ಟೇರಿದೆ. 2026ರಲ್ಲಿ ಸಿನಿಮಾ ತೆರೆಗೆ ಬರಲಿದೆ. ಇದೀಗ ತಮಿಳು ನಿರ್ದೇಶಕನ ಚಿತ್ರದಲ್ಲಿ ನಟಿಸುವ ಬಯಕೆಯನ್ನು ತಾರಕ್ ಹೇಳಿಕೊಂಡಿದ್ದಾರೆ. 'ದೇವರ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚೆನ್ನೈನಲ್ಲಿ ಸಿನಿಮಾ ಸುದ್ದಿಗೋಷ್ಠಿ ನಡೆದಿದೆ. ವೇದಿಕೆಯಲ್ಲೇ ಸ್ಟ್ರೈಟ್ ತಮಿಳು ಸಿನಿಮಾ ಮಾಡುವ ಆಸೆ ಬಿಚ್ಚಿಟ್ಟಿದ್ದಾರೆ.
'ಪೊಲ್ಲಾದವನ್', 'ವಿಸಾರಣೈ', 'ವಡ ಚೆನ್ನೈ', 'ಅಸುರನ್' ರೀತಿಯ ಸೆನ್ಸೇಷನಲ್ ಹಿಟ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ವೆಟ್ರಿಮಾರನ್. ಸದ್ಯ 'ವಿಡುಥಲೈ-2' ಚಿತ್ರದಲ್ಲಿ ಅವರು ಬ್ಯುಸಿಯಾಗಿದ್ದಾರೆ. ಜ್ಯೂ. ಎನ್‌ಟಿಆರ್ ನೆಚ್ಚಿನ ನಿರ್ದೇಶಕರಲ್ಲಿ ವೆಟ್ರಿಮಾರನ್ ಸಹ ಒಬ್ಬರು. ಅವರ ಚಿತ್ರಗಳನ್ನು ನೋಡಿ ಮೆಚ್ಚಿರುವ ತಾರಕ್ ಅವರೊಟ್ಟಿಗೆ ಕೆಲಸ ಮಾಡುವ ಲೆಕ್ಕಾಚಾರದಲ್ಲಿದ್ದಾರೆ.
2 ವರ್ಷಗಳ ಹಿಂದೆ ಇಬ್ಬರೂ ಭೇಟಿ ಆಗಿ ಸಿನಿಮಾ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದರು. ಆದರೆ ಪ್ರತಿ ಚಿತ್ರಕ್ಕೂ ವೆಟ್ರಿಮಾರನ್ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಹಾಗಾಗಿ ಸದ್ಯಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಸ್ವತಃ ನಿರ್ದೇಶಕರೇ ಹೇಳಿದ್ದರು. ಇದೀಗ ಮತ್ತೊಮ್ಮೆ ಬಹಿರಂಗವಾಗಿ ವೆಟ್ರಿಮಾರನ್ ನಿರ್ದೇಶನದಲ್ಲಿ ನಟಿಸುವ ಬಗ್ಗೆ ಜ್ಯೂ. ಎನ್‌ಟಿಆರ್ ಮಾತನಾಡಿದ್ದಾರೆ.
ನನ್ನ ನೆಚ್ಚಿನ ನಿರ್ದೇಶಕ ವೆಟ್ರಿಮಾರನ್ ಸರ್ ಪ್ಲೀಸ್ ನನ್ನೊಟ್ಟಿಗೆ ಒಂದು ಸಿನಿಮಾ ಮಾಡಿ. ಒಂದು ಸ್ಟ್ರೈಟ್ ತಮಿಳು ಸಿನಿಮಾ ಮಾಡೋಣ. ಅದನ್ನು ತೆಲುಗಿಗೆ ಡಬ್ ಮಾಡೋಣ ಸರ್ ಎಂದು ಕೇಳಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಇಬ್ಬರು ಕಾಂಬಿನೇಷನ್ ಸೆಟ್ ಆದರೆ ಹಬ್ಬವೇ ಸರಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಕೊರಟಾಲ ಶಿವ ನಿರ್ದೇಶನದ 'ದೇವರ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಸೆಪ್ಟೆಂಬರ್ 27ಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ. ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ಮಿಂಚಿದ್ದಾರೆ. ಸೈಫ್ ಅಲಿಖಾನ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ದ್ವಿಪಾತ್ರದಲ್ಲಿ ತಾರಕ್ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.


Click it and Unblock the Notifications











