ತನ್ನ ಬಾಳ ಸಂಗಾತಿಯಲ್ಲಿ ಬಯಸುವ ಗುಣಗಳು ರಶ್ಮಿಕಾ ಅವರಲ್ಲಿದ್ಯಾ? ವಿಜಯ್ ಏನಂದ್ರು?
ಚಿತ್ರರಂಗದಲ್ಲಿ ನಟ-ನಟಿಯರು ಪ್ರೀತಿಸಿ ಮದುವೆ ಆಗುವುದು ಹೊಸದೇನು ಅಲ್ಲ. ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸಿದವರು, ಅಥವಾ ನಿರ್ದೇಶಕ-ನಾಯಕಿ, ನಿರ್ಮಾಪಕಿ-ನಾಯಕಿ ಆಗಿ ಕೆಲಸ ಮಾಡಿದವರು ಕೂಡ ಪ್ರೀತಿಸಿ ಮದುವೆ ಆಗಿರುವ ಸಾಕಷ್ಟು ಉದಾಹರಣೆಗಳಿವೆ. ಇನ್ನು ನಟ-ನಟಿಯರ ಡೇಟಿಂಗ್ ವದಂತಿ ಆಗಾಗ್ಗೆ ಕೇಳಿಬರುತ್ತದೆ.
ಮದುವೆ ಆಗದೇ ಇರುವ ನಟ-ನಟಿಯರು ಒಟ್ಟಿಗೆ ನಟಿಸಿದರೆ, ಇಬ್ಬರ ಕೆಮೆಸ್ಟ್ರಿ ಚೆನ್ನಾಗಿದ್ದು ಹೊರಗಡೆ ಒಟ್ಟೊಟ್ಟಿಗೆ ಸುತ್ತಾಡಿದರೆ ಸಹಜವಾಗಿಯೇ ಅನುಮಾನ ಮೂಡುತ್ತದೆ. ಕಾರಣ ಇದು ಅಂತಿಮವಾಗಿ ಪ್ರೀತಿ, ಮದುವೆಗೆ ಹೋಗಿ ನಿಲ್ಲುತ್ತದೆ. ತೆಲುಗು ನಟ ವಿಜಯ್ ದೇವರಕೊಂಡ ಹಾಗೂ ಕನ್ನಡ ನಟಿ ರಶ್ಮಿಕಾ ಮಂದಣ್ಣ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಸುದ್ದಿ ಆಗಾಗ್ಗೆ ಕೇಳಿಬರುತ್ತಿರುತ್ತದೆ.

ಇಬ್ಬರೂ ಒಟ್ಟೊಟ್ಟಿಗೆ ಸುತ್ತಾಡುವುದು, ಪ್ರವಾಸ ಕೈಗೊಳ್ಳುವುದು ಎಲ್ಲವೂ ಇದಕ್ಕೆ ಪುಷ್ಠಿ ಕೊಡುತ್ತಾ ಬರುತ್ತಿದೆ. ಇಬ್ಬರೂ ಆತ್ಮೀಯ ಸ್ನೇಹಿತರು. 'ಗೀತಾಗೋವಿಂದಂ' ಹಾಗೂ 'ಡಿಯರ್ ಕಾಮ್ರೆಡ್' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಇಬ್ಬರ ಕೆಮೆಸ್ಟ್ರಿ ವರ್ಕ್ ಆಗಿತ್ತು. ಅಭಿಮಾನಿಗಳು ಪದೇ ಪದೆ ಜೋಡಿಯನ್ನು ತೆರೆಮೇಲೆ ನೋಡಲು ಬಯಸುತ್ತಿರುತ್ತಾರೆ. ಇನ್ನು ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಮಾತುಗಳು ಪದೇ ಪದೆ ಕೇಳಿಬರುತ್ತಲೇ ಇದೆ.
ವಿಜಯ್ ದೇವರಕೊಂಡ ಕುಟುಂಬದಲ್ಲಿ ರಶ್ಮಿಕಾ ಮಂದಣ್ಣ ಒಬ್ಬರಾಗಿಬಿಟ್ಟಿದ್ದಾರೆ. ತೆಲುಗು ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿಯಾಗಿರುವ ಕೊಡಗಿನ ಕುವರಿ ಹೈದರಾಬಾದ್‌ನಲ್ಲಿ ಉಳಿದುಕೊಂಡಿದ್ದಾರೆ. ಹಾಗಾಗಿ ಹಬ್ಬ ಹರಿದಿನಗಳನ್ನು ದೇವರಕೊಂಡ ಮನೆಯಲ್ಲೇ ಆಚರಿಸುತ್ತಾರೆ. ಇದೆಲ್ಲವೂ ಇಬ್ಬರ ನಡುವೆ ಸ್ನೇಹಕ್ಕಿಂತ ಹೆಚ್ಚಾಗಿ ಏನೋ ಇದೆ ಎಂದು ಮಾತನಾಡುವಂತಾಗಿದೆ. ಆದರೆ ವದಂತಿಗಳ ಬಗ್ಗೆ ಇಬ್ಬರೂ ಬಹಿರಂಗವಾಗಿ ಮಾತನಾಡಿಲ್ಲ.

ಇದೇ ಮೊದಲ ಬಾರಿಗೆ ಇಬ್ಬರ ರಿಲೇಷನ್‌ಶಿಪ್ ಬಗ್ಗೆ ಕೇಳಿದ ನೇರಾನೇರ ಪ್ರಶ್ನೆಗೆ ವಿಜಯ್ ದೇವರಕೊಂಡ ಪ್ರತಿಕ್ರಿಯಿಸಿದ್ದಾರೆ. ಫಿಲ್ಮ್‌ಫೇರ್ ಸಂದರ್ಶನದಲ್ಲಿ ಈ ಬಗ್ಗೆ ವಿಜಯ್ ಮಾತನಾಡಿದ್ದಾರೆ. ನಿಮ್ಮಬ್ಬರ ಹೆಸರುಗಳನ್ನು ಸೇರಿಸಿ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂದು ಇಂಡಸ್ಟ್ರಿ ಒಳಗೆ ಊಹಾಪೋಹ ಹಬ್ಬುತ್ತಿರುತ್ತದೆ ಎಲ್ಲವೇ? ಈ ಬಗ್ಗೆ ಏನು ಹೇಳ್ತೀರಾ ಎನ್ನುವ ಪ್ರಶ್ನೆಗೆ "ನೀವು ಹಾಗೆ ಸುದ್ದಿ ಹಬ್ಬಿಸುವವರನ್ನೇ ಕೇಳಬೇಕು" ಎಂದು ಪ್ರತಿಕ್ರಿಯಿಸಿದ್ದಾರೆ.
ಇದೇ ಸಂದರ್ಶನದಲ್ಲಿ ರಶ್ಮಿಕಾ ಜೊತೆಗಿನ ಕೆಮೆಸ್ಟ್ರಿ ಬಗ್ಗೆಯೂ ವಿಜಯ್ ಮಾತನಾಡಿದ್ದಾರೆ. "ನಾನು ರಶ್ಮಿಕಾ ಜೊತೆ ಹೆಚ್ಚು ಸಿನಿಮಾಗಳಲ್ಲಿ ನಟಿಸಿಲ್ಲ. ಇನ್ನಷ್ಟು ಸಿನಿಮಾಗಳಲ್ಲಿ ನಟಿಸಬೇಕಿದೆ. ಆಕೆ ಅದ್ಭುತ ನಟಿ. ಬಹಳ ಸುಂದರಿ. ಹಾಗಾಇ ಕೆಮೆಸ್ಟ್ರಿ ಚೆನ್ನಾಗಿಯೇ ಇರುತ್ತದೆ" ಎಂದು ಹೇಳಿದ್ದಾರೆ. ರಶ್ಮಿಕಾ ಬಗೆಗಿನ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳ ಬಗ್ಗೆ ವಿಜಯ್ ಹೇಳಿದ್ದಾರೆ.
"ಆಕೆ ಬಹಳ ಹಾರ್ಡ್‌ವರ್ಕ್ ಮಾಡುತ್ತಾಳೆ.ತನ್ನ ದೃಢ ಸಂಕಲ್ಪ ಮತ್ತು ದೃಢನಿಶ್ಚಯದಿಂದ ಏನು ಬೇಕಾದರೂ ಸಾಧಿಸುತ್ತಾಳೆ. ಒಳ್ಳೆ ವ್ಯಕ್ತಿ. ಅವಳು ತನಗಿಂತ ಹೆಚ್ಚಾಗಿ ಎಲ್ಲರ ಸೌಕರ್ಯ ಮತ್ತು ಸಂತೋಷದ ಬಗ್ಗೆ ಕಾಳಜಿ ವಹಿಸುತ್ತಾಳೆ. "ಆದರೆ ಎಲ್ಲವನ್ನು ಬ್ಯಾಲೆನ್ಸ್ ಆಕೆ ಬ್ಯಾಲೆನ್ಸ್ ಮಾಡಬೇಕು" ಎಂದು ವಿಜಯ್ ದೇವರಕೊಂಡ ತಿಳಿಸಿದ್ದಾರೆ. ಮದುವೆ ಬಗ್ಗೆ ಕೇಳಿದ ಪ್ರಶ್ನೆಗೆ "ಕಂಡಿತ ಮದುವೆ ಆಗುತ್ತೇನೆ" ಎಂದಿದ್ದಾರೆ.
ಪತ್ನಿಯಲ್ಲಿ ಯಾವೆಲ್ಲಾ ಗುಣಗಳು ಇರಬೇಕು ಎಂದು ಬಯಸುತ್ತೀರಾ? ಎನ್ನುವ ಪ್ರಶ್ನೆಗೆ, "ಸದ್ಯಕ್ಕೆ ನಾನು ಪಾರ್ಟ್ನರ್ ಹುಡುಕುತ್ತಿಲ್ಲ" ಎಂದು ವಿಜಯ್ ಹೇಳಿದ್ದಾರೆ. ರಶ್ಮಿಕಾ ಸರಿಹೊಂದುತ್ತಾರೆಯೇ ಎಂದು ಕೇಳಿದಾಗ, "ಒಳ್ಳೆಯ ಹೃದಯ ಹೊಂದಿರುವ ಯಾವುದೇ ಒಳ್ಳೆಯ ಮಹಿಳೆ ಹೊಂದಿಕೆಯಾಗುತ್ತಾರೆ" ಎಂದು ಹೇಳಿ ವಿಜಯ್ ದೇವರಕೊಂಡ ಜಾರಿಕೊಂಡಿದ್ದಾರೆ.
'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದಿದ್ದ ರಶ್ಮಿಕಾ ಮಂದಣ್ಣ ಮೊದಲ ಪ್ರಯತ್ನದಲ್ಲೇ ಗೆದ್ದಿದ್ದರು. ಬಳಿಕ ಕೆಲ ಕನ್ನಡ ಸಿನಿಮಾಗಳಲ್ಲಿ ಮಿಂಚಿದ್ದರು. ಬಳಿಕ 'ಚಲೋ' ಚಿತ್ರದ ಮೂಲಕ ಟಾಲಿವುಡ್ ಪ್ರವೇಶಿಸಿದ್ದರು. ಒಂದು ಹಂತಕ್ಕೆ ಸಿನಿಮಾ ಗೆದ್ದಿತ್ತು. ಆ ನಂತರ 'ಗೀತಾಗೋವಿಂದಂ' ಚಿತ್ರದಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಒಟ್ಟಿಗೆ ಮೊದಲ ಬಾರಿ ನಟಿಸಿದ್ದರು.
'ಗೀತಾಗೋವಿಂದಂ' ಸಿನಿಮಾ ಚಿತ್ರೀಕರಣದ ವೇಳೆಗೆ ಇಬ್ಬರ ಪರಿಚಯ, ಸ್ನೇಹ ಶುರುವಾಗಿತ್ತು. ಚಿತ್ರದಲ್ಲಿದ್ದ ಲಿಪ್‌ಲಾಕ್ ದೃಶ್ಯ ವೈರಲ್ ಆಗಿ ಭಾರೀ ಚರ್ಚೆ ಹುಟ್ಟುಹಾಕಿತ್ತು. ಅಷ್ಟರಲ್ಲಾಗಲೇ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಪ್ರೀತಿಸಿ ಮದುವೆ ಆಗಲು ನಿರ್ಧರಿಸಿದ್ದರು. ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಕೂಡ ಆಗಿತ್ತು. 'ಗೀತಾಗೋವಿಂದಂ' ಬ್ಲಾಕ್‌ಬಸ್ಟರ್ ಹಿಟ್ ಬಳಿಕ ತೆಲುಗಿನಲ್ಲಿ ಸಾಲು ಸಾಲು ಚಿತ್ರಗಳಲ್ಲಿ ರಶ್ಮಿಕಾ ನಟಿಸೋಕೆ ಆರಂಭಿಸಿದ್ದರು. ಅಷ್ಟರಲ್ಲೇ ಆಕೆಯ ಎಂಗೇಜ್‌ಮೆಂಟ್ ಮುರಿದುಬಿದ್ದಿತ್ತು.
ಕೆಲ ಭಿನ್ನಾಭಿಪ್ರಾಯಗಳಿಂದ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಮದುವೆ ಆಗದಿರಲು ನಿರ್ಧರಿಸಿದ್ದರು. ಇದಕ್ಕೆ ವಿಜಯ್ ದೇವರಕೊಂಡ ಕಾರಣ ಎನ್ನುವ ಅರ್ಥದಲ್ಲಿ ಭಾರೀ ಚರ್ಚೆ ನಡೀತು. 'ಗೀತಾಗೋವಿಂದಂ' ಚಿತ್ರದ ಲಿಪ್‌ಲಾಕ್ ಸೀನ್ ಕೂಡ ಒಂದು ಕಾರಣ ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಆ ಬಳಿಕ ರಶ್ಮಿಕಾ ಮಂದಣ್ಣ ಬಾಲಿವುಡ್ ಅಂಗಳಕ್ಕೂ ಜಿಗಿದ್ದರು. ಅಲ್ಲಿ ಕೂಡ ಸಕ್ಸಸ್ ಸಿಕ್ಕಿತ್ತು.
'ಪೊಗರು' ಬಳಿಕ ಕನ್ನಡದಲ್ಲಿ ಯಾವುದೇ ಚಿತ್ರದಲ್ಲಿ ಕೂಡ ರಶ್ಮಿಕಾ ಮಂದಣ್ಣ ನಟಿಸಲಿಲ್ಲ. ಇನ್ನು 'ಗೀತಾಗೋವಿಂದಂ' ಬಳಿಕ 'ಡಿಯರ್ ಕಾಮ್ರೆಡ್' ಚಿತ್ರದಲ್ಲಿ ವಿಜಯ್- ರಶ್ಮಿಕಾ ಬಣ್ಣ ಹಚ್ಚಿದ್ದರು. ಅಲ್ಲಿ ಕೂಡ ಒಂದು ಲಿಪ್‌ಲಾಕ್ ಸನ್ನಿವೇಶ ಇತ್ತು. ಅದು ವೈರಲ್ ಆಗಿತ್ತು. ಅಷ್ಟರಲ್ಲಾಗಲೇ ಇಬ್ಬರೂ ಆತ್ಮೀಯ ಸ್ನೇಹಿತರಾಗಿಬಿಟ್ಟಿದ್ದರು. ಇದನ್ನೆಲ್ಲಾ ನೋಡಿ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗಿತು.
ಒಮ್ಮೆ ವಿಜಯ್ ದೇವರಕೊಂಡ ಸ್ನೇಹಿತರ ಜೊತೆ ರಶ್ಮಿಕಾ ಕೂಡ ವಿದೇಶದಲ್ಲಿ ಹೊಸ ವರ್ಷವನ್ನು ಸ್ವಾಗತಿಸಿದ್ದರು. ವಿಜಯ್ ಫ್ಯಾಮಿಲಿ ಜೊತೆ ದುಬೈ ಪ್ರವಾಸ ಕೈಗೊಂಡಿದ್ದರು. ಇತ್ತೀಚೆಗೆ ಇಬ್ಬರೂ ಮುಂಬೈ ರೆಸ್ಟೋರೆಂಟ್‌ವೊಂದಕ್ಕೆ ತೆರಳಿ ಊಟ ಮಾಡಿ ಬಂದಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋ ವೈರಲ್ ಆಗಿತ್ತು.
ವಿಜಯ್-ರಶ್ಮಿಕಾ ಮತ್ತೆ ಒಟ್ಟಿಗೆ ನಟಿಸುತ್ತಾರೆ ಎನ್ನುವ ಮಾತುಗಳು ಪದೇ ಪದೆ ಕೇಳಿಬರ್ತಿದೆ. ಆದರೆ ಯಾವುದೇ ಸಿನಿಮಾ ಇನ್ನು ಘೋಷಣೆ ಆಗಿಲ್ಲ. ಸಿನಿಮಾಗಳ ವಿಚಾರಕ್ಕೆ ಬಂದರೆ ಸದ್ಯ ವಿಜಯ್ ದೇವರಕೊಂಡ ಸೋಲಿನ ಸುಳಿಗೆ ಸಿಲುಕಿದ್ದಾರೆ. 'ಲೈಗರ್' ಸಿನಿಮಾ ಸೋಲು ದೊಡ್ಡ ಪೆಟ್ಟು ಕೊಟ್ಟುಬಿಟ್ಟಿದೆ. ಪ್ಯಾನ್ ಇಂಡಿಯಾ ಸ್ಟಾರ್ ಆಗುವ ಕನಸಿಗೆ ಕೊಳ್ಳಿ ಇಟ್ಟಿತ್ತು. ಸದ್ಯ 'ಕಿಂಗ್‌ಡಮ್' ಎಂಬ ಚಿತ್ರದಲ್ಲಿ ವಿಜಯ್ ನಟಿಸಿದ್ದು ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ.
ಮತ್ತೊಂದು ಕಡೆ ರಶ್ಮಿಕಾ ಮಂದಣ್ಣ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಸಲ್ಮಾನ್ ಖಾನ್ ಜೊತೆ ನಟಿಸಿದ 'ಸಿಕಂದರ್' ಸಿನಿಮಾ ಸೋತಿದ್ದರೂ ಅದಕ್ಕೂ ಮುನ್ನ ಬಂದಿದ್ದ 'ಛಾವ' ಹಾಗೂ 'ಪುಷ್ಪ'-2 ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಇನ್ನು ರಣ್‌ಬೀರ್ ಕಪೂರ್ ಜೋಡಿಯಾಗಿ ನಟಿಸಿದ 'ಅನಿಮಲ್' ಸಕ್ಸಸ್ ಬಗ್ಗೆ ಬಿಡಿಸಿ ಹೇಳುವುದು ಬೇಕಿಲ್ಲ.
ತಮಿಳಿನ 'ಕುಬೇರ' ಚಿತ್ರದಲ್ಲಿ ಧನುಷ್ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. 'ದಿ ಗರ್ಲ್ಡ್ ಫ್ರೆಂಡ್' ಎಂಬ ಒಂದು ಮಹಿಳಾ ಪ್ರಧಾನ ಸಿನಿಮಾ ಕೈಯಲ್ಲಿದೆ. 'ತಮ' ಎಂಬ ಮತ್ತೊಂದು ಬಾಲಿವುಡ್ ಸಿನಿಮಾದಲ್ಲಿ ಕೂಡ ನಟಿಸುತ್ತಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳಿಗೆ ರಶ್ಮಿಕಾ ಮಂದಣ್ಣ ಹೆಸರು ಕೇಳಿಬರ್ತಿದೆ.


Click it and Unblock the Notifications











