"ನಂಗೆ ಮದ್ವೆ ಮಾಡ್ಸೋಕೆ ನೋಡ್ತಿದ್ದಾರೆ", ರಶ್ಮಿಕಾ ಜೊತೆ ಮದ್ವೆ ವದಂತಿಗೆ ದೇವರಕೊಂಡ ಪ್ರತಿಕ್ರಿಯೆ
ತೆಲುಗು ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಡೇಟಿಂಗ್ ನಡೆಸುತ್ತಿದ್ದಾರೆ, ಶೀಘ್ರದಲ್ಲೇ ಮದುವೆ ಎನ್ನುವ ಗುಸುಗುಸು ಇತ್ತೀಚೆಗೆ ಹೆಚ್ಚಾಗಿದೆ. ಫೆಬ್ರವರಿಯಲ್ಲಿ ಎಂಗೇಜ್‌ಮೆಂಟ್, ಮದುವೆ ಅಂತೆಲ್ಲಾ ವದಂತಿ ಹರಿದಾಡ್ತಿದೆ. ಈ ಬಗ್ಗೆ ಸ್ವತಃ ವಿಜಯ್ ದೇವರಕೊಂಡ ಪ್ರತಿಕ್ರಿಯಿಸಿದ್ದಾರೆ.
'ಗೀತಾ ಗೋವಿಂದಂ' ಚಿತ್ರದಲ್ಲಿ ಮೊದಲಿಗೆ ವಿಜಯ್-ರಶ್ಮಿಕಾ ಒಟ್ಟಿಗೆ ನಟಿಸಿದ್ದರು. ಸಿನಿಮಾ ಸೂಪರ್ ಹಿಟ್ ಆಗಿತ್ತು. ಚಿತ್ರದಲ್ಲಿ ಅವರಿಬ್ಬರ ಲಿಪ್‌ಲಾಕ್ ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಇದೇ ಕಾರಣಕ್ಕೆ ರಕ್ಷಿತ್ ಶೆಟ್ಟಿ ಜೊತೆಗಿನ ರಶ್ಮಿಕಾ ಎಂಗೇಜ್‌ಮೆಂಟ್ ಮುರಿದು ಬಿತ್ತು ಎನ್ನುವ ಚರ್ಚೆ ನಡೆದಿತ್ತು. ಆ ಬಳಿಕ ಇಬ್ಬರೂ 'ಡಿಯರ್ ಕಾಮ್ರೆಡ್' ಚಿತ್ರದಲ್ಲಿ ಜೊತೆಯಾಗಿದ್ದರು.

ವಿಜಯ್- ರಶ್ಮಿಕಾ ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದಾರೆ. ವಿಜಯ್ ಫ್ರೆಂಡ್ಸ್ ಗ್ಯಾಂಗ್‌ಗೆ ರೋಶ್ ಸೇರಿಕೊಂಡಿದ್ದು ಪಾರ್ಟಿ, ಟ್ರಿಪ್ ಅಂತ ಪದೇ ಪದೇ ಸುತ್ತಾಡುತ್ತಿರುತ್ತಾರೆ. ಇನ್ನು ದೇವರಕೊಂಡ ಮನೆಯಲ್ಲಿ ಹಬ್ಬ ಹರಿದಿನಗಳಲ್ಲಿ ಕೊಡಗಿನ ಕುವರಿ ಭಾಗಿ ಆಗುತ್ತಾರೆ. ಇನ್ನು ಇಬ್ಬರು ಒಂದೇ ಮನೆಯಿಂದ ಇದ್ದಂತೆ, ಇಬ್ಬರು ಡೇಟಿಂಗ್ ನಡೆಸುತ್ತಿರೋದು ನಿಜ ಅಂತೆಲ್ಲಾ ನೆಟ್ಟಿಗರು ಆಗಾಗ್ಗೆ ಸಾಕ್ಷಿ ಹುಡುಕಿ ತರುತ್ತಾರೆ.
ಇಬ್ಬರು ಆತ್ಮೀಯ ಸ್ನೇಹಿತರು ಅನ್ನುವುದು ನಿಜ. ಆದರೆ ಡೇಟಿಂಗ್ ಬಗ್ಗೆ ಬರೀ ಗಾಸಿಪ್ ಹರಿದಾಡುತ್ತಿದೆ ಎನ್ನಲಾಗ್ತಿದೆ. ಮುಂದಿನ ತಿಂಗಳು ಇಬ್ಬರ ಮದುವೆ ಎನ್ನುವ ವದಂತಿ ಬಗ್ಗೆ ಸ್ವತಃ ವಿಜಯ್ ಸ್ಪಷ್ಟನೆ ನೀಡಿದ್ದಾರೆ. ಲೈಫ್‌ಸ್ಟೈಲ್ ಏಷಿಯಾ ಮ್ಯಾಗಜೀನ್ ಸಂದರ್ಶನದಲ್ಲಿ ಈ ಬಗ್ಗೆ ತೆಲುಗು ನಟ ಮಾತನಾಡಿದ್ದಾರೆ.

"ನಾನು ಫೆಬ್ರವರಿಯಲ್ಲಿ ಮದುವೆಯಾಗುತ್ತಿಲ್ಲ, ಅಥವಾ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿಲ್ಲ. ನನಗೆ ಪ್ರತಿ 2 ವರ್ಷಕೊಮ್ಮೆ ಮದುವೆ ಮಾಡಬೇಕೆಂದು ಈ ಮೀಡಿಯಾ ನೋಡುತ್ತಿರುತ್ತದೆ. ನಾನು ಪದೇ ಪದೆ ಇಂತಹ ವದಂತಿಗಳನ್ನು ಕೇಳುತ್ತಲೇ ಇರುತ್ತೇನೆ. ಸಿಕ್ಕರೆ ಮದುವೆ ಮಾಡಬೇಕು ಎಂದು ನೋಡುತ್ತಿರುತ್ತಾರೆ" ಎಂದು ವ್ಯಂಗ್ಯವಾಗಿ ವಿಜಯ್ ದೇವರಕೊಂಡ ಹೇಳಿದ್ದಾರೆ. ಆ ಕಾಮೆಂಟ್ಸ್ ವೈರಲ್ ಆಗುತ್ತಿವೆ. ಈ ಮೂಲಕ ಮದುವೆ ವದಂತಿಗೆ ಸ್ಪಷ್ಟನೆ ನೀಡಲು ಯತ್ನಿಸಿದ್ದಾರೆ.
ಪ್ಯಾನ್ ಇಂಡಿಯಾ ಸ್ಟಾರ್ ಆಗೋಕೆ ಹೊರಟ್ಟಿದ್ದ ವಿಜಯ್ ದೇವರಕೊಂಡ 'ಲೈಗರ್' ಸಿನಿಮಾ ಮಾಡಿ ಸೋತಿದ್ದರು. ಈ ಬಗ್ಗೆ ಕೂಡ ಮಾತನಾಡಿದ್ದಾರೆ. "ಲೈಗರ್ ರೀತಿಯ ಡಿಸಾಸ್ಟರ್ ಬಳಿಕ ಸ್ಕ್ರಿಪ್ಟ್ ಆಯ್ಕೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಏಕಂದರೆ ಆ ಚಿತ್ರದ ಕಥೆಯನ್ನು ಕೂಡ ಇಷ್ಟಪಟ್ಟು ನಟಿಸಿದ್ದೆ. ಅದಕ್ಕಾಗಿ ಬಹಳ ಕಷ್ಟಪಟ್ಟಿದ್ದೆ. ಸರ್ವಸ್ವ ಧಾರೆ ಎರೆದಿದ್ದೆ. ನನ್ನಲ್ಲಿ ಬದಲಾವಣೆಯಾಗಿದೆ. ಆದರೆ ಬದಲಾಗಬೇಕು ಎಂದು ನಾನು ಆಲೋಚಿಸಿಲ್ಲ. ನಡೆದಿದ್ದು ನಡೆದು ಹೋಯಿತು, ಮುಂದಿನ ನಡೆ ಬಗ್ಗೆ ನನ್ನ ಗಮನ ಇರತ್ತದೆ. ಜೀವನ ಸಾಗುತ್ತಿರುತ್ತದೆ. ನಾವು ಅದರೊಟ್ಟಿಗೆ ಸಾಗಬೇಕು" ಎಂದು ವಿವರಿಸಿದ್ದಾರೆ.
ಸದ್ಯ ವಿಜಯ್ 'ಫ್ಯಾಮಿಲಿ ಸ್ಟಾರ್' ಎನ್ನುವ ಚಿತ್ರದಲ್ಲಿ ನಟಿಸಿದ್ದಾರೆ. ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ. ಇನ್ನು ಹೆಸರಿಡದ ಮತ್ತೊಂದು ಚಿತ್ರದಲ್ಲೂ ನಟಿಸುತ್ತಿದ್ದಾರೆ. ಶ್ರೀಲೀಲಾ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಸದ್ಯ ಆಕೆ ಚಿತ್ರದಿಂದ ಹೊರ ಬಂದಿದ್ದು ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಾರೆ ಎನ್ನಲಾಗ್ತಿದೆ. ಅದೇ ನಿಜವಾದ್ರೆ ಇದು ಅವರಿಬ್ಬರ ಹ್ಯಾಟ್ರಿಕ್ ಸಿನಿಮಾ ಆಗಲಿದೆ.
ಮತ್ತೊಂದು ಕಡೆ ರಶ್ಮಿಕಾ ಮಂದಣ್ಣ 'ಅನಿಮಲ್' ಸಕ್ಸಸ್ ಸಂಭ್ರಮದಲ್ಲಿದ್ದಾರೆ. ಅಲ್ಲು ಅರ್ಜುನ್ ಜೊತೆ 'ಪುಷ್ಪ'-2 ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. 'ರೈನ್‌ಬೋ' ಹಾಗೂ 'ಗರ್ಲ್‌ಫ್ರೆಂಡ್' ಎನ್ನುವ ಮಹಿಳಾ ಪ್ರಧಾನ ಸಿನಿಮಾಗಳು ಕೈಯಲ್ಲಿವೆ. ಇನ್ನು ಧನುಷ್ ಜೊತೆ ತಮಿಳಿನ ಚಿತ್ರವೊಂದರಲ್ಲಿ ಕೂಡ ರೋಶ್ ಬಣ್ಣ ಹಚ್ಚಲಿದ್ದಾರೆ.


Click it and Unblock the Notifications











