ಜಯಲಲಿತಾ ಕುರಿತಾದ 'ತಲೈವಿ' ಚಿತ್ರದ 'ವಿವಾದಾತ್ಮಕ' ಪಾತ್ರದಲ್ಲಿ ವಿಜಯ್ ದೇವರಕೊಂಡ.!
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ತಮಿಳು ಚಿತ್ರರಂಗದ ಅಂದಿನ ಲೇಡಿ ಸೂಪರ್ ಸ್ಟಾರ್ ಜಯಲಲಿತಾ ಜೀವನಚರಿತ್ರೆ ಇದೀಗ 'ತಲೈವಿ' ಸಿನಿಮಾ ಆಗುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ.
ಎ.ಎಲ್.ವಿಜಯ್ ನಿರ್ದೇಶನ ಮಾಡುತ್ತಿರುವ 'ತಲೈವಿ' ಚಿತ್ರದಲ್ಲಿ ಜಯಲಲತಾ ಆಗಿ ಕಂಗನಾ ರಣಾವತ್ ಕಾಣಿಸಿಕೊಳ್ಳಲಿದ್ದಾರೆ. ಜಯಲಲಿತಾ ಆಗಿ ಕಂಗನಾ ಹೇಗೆ ಕಾಣಿಸಿಕೊಳ್ಳಬಹುದು ಎಂಬ ಕುತೂಹಲಕ್ಕೆ ಈಗಾಗಲೇ ಬ್ರೇಕ್ ಬಿದ್ದಿದೆ. 'ತಲೈವಿ' ಚಿತ್ರದ ಫಸ್ಟ್ ಲುಕ್ ಔಟ್ ಆಗಿ, ಟ್ರೋಲ್ ಕೂಡ ಆಗಿದೆ.
ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಮೂಡಿಬರಲಿರುವ 'ತಲೈವಿ' ಚಿತ್ರಕ್ಕೆ ಸದ್ಯ ಟಾಲಿವುಡ್ ನ ಬಹು ಬೇಡಿಕೆಯ ನಟ ವಿಜಯ್ ದೇವರಕೊಂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಜಯಲಲಿತಾ ಜೀವನದ ಬಹುಮುಖ್ಯ ವ್ಯಕ್ತಿಯೊಬ್ಬರ ಪಾತ್ರದಲ್ಲಿ ವಿಜಯ್ ದೇವರಕೊಂಡ ಕಾಣಿಸಿಕೊಳ್ಳಲಿದ್ದಾರಂತೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ, ಓದಿರಿ...

ಶೋಭನ್ ಬಾಬು ಆಗಿ ವಿಜಯ್ ದೇವರಕೊಂಡ
ಕೆಲ ವರದಿಗಳ ಪ್ರಕಾರ, 'ತಲೈವಿ' ಚಿತ್ರದಲ್ಲಿ ವಿಜಯ್ ದೇವರಕೊಂಡ ನಟಿಸಲು ಒಪ್ಪಿಗೆ ಕೊಟ್ಟಿದ್ದಾರೆ. ನಟ ಶೋಭನ್ ಬಾಬು ಆಗಿ ತೆರೆ ಮೇಲೆ ವಿಜಯ್ ದೇವರಕೊಂಡ ಅಭಿನಯಿಸಲಿದ್ದಾರೆ. ನಟ ಶೋಭನ್ ಬಾಬು ತೆಲುಗು ಚಿತ್ರರಂಗದ ಖ್ಯಾತ ನಟ. ಹಲವಾರು ಹಿಟ್ ಸಿನಿಮಾಗಳನ್ನು ನೀಡಿರುವ ಶೋಭನ್ ಬಾಬು ತಮ್ಮ ಅತ್ಯುತ್ತಮ ನಟನೆಗಾಗಿ ಐದು ರಾಜ್ಯ (ನಂದಿ) ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡವರು.

ಜಯಲಲಿತಾ-ಶೋಭನ್ ಬಾಬು ನಡುವಿನ ಸಂಬಂಧ
ನಟ ಶೋಭನ್ ಬಾಬು ಮತ್ತು ತಮಿಳುನಾಡಿನ ಮಾಜಿ ಸಿ.ಎಂ ಜಯಲಲಿತಾ ನಡುವಿನ ಸಂಬಂಧ ಆಗಾಗ ಸುದ್ದಿ ಆಗುತ್ತಿತ್ತು. ಇಬ್ಬರಿಗೂ ಮದುವೆಯಾಗಿ ಒಂದು ಗಂಡು ಮಗು ಮತ್ತು ಒಂದು ಹೆಣ್ಣು ಮಗು ಇದೆ ಎಂದೆಲ್ಲ ಸುದ್ದಿ ಹಬ್ಬಿತ್ತು. ಜಯಲಲಿತಾ ಇಹಲೋಕ ತ್ಯಜಿಸಿದಾಗ, ಜಯಲಲಿತಾ-ಶೋಭನ್ ಬಾಬು ಮದುವೆ ನೋಂದಣಿ ಪತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಶೋಭನ್ ಬಾಬು- ಜಯಲಲಿತಾ ಮದುವೆ, ದತ್ತು ನೋಂದಣಿ ಪತ್ರ ಬಹಿರಂಗ

ನೈಜ ಅಂಶಗಳು ತೆರೆ ಮೇಲೆ ಇರುತ್ತಾ.?
ಶೋಭನ್ ಬಾಬು-ಜಯಲಲಿತಾ ಮದುವೆ ಆಗಿದ್ದು, ತಮ್ಮ ಮಕ್ಕಳನ್ನು ದತ್ತು ನೀಡಿದ್ದ ಅಂಶಗಳು 'ತಲೈವಿ' ಚಿತ್ರದಲ್ಲಿ ಇರುತ್ತಾ ಎಂಬ ಕುತೂಹಲ ಸಿನಿ ಪ್ರಿಯರಲ್ಲಿ ಮೂಡಿದೆ. ಆದರೆ 'ತಲೈವಿ' ಚಿತ್ರದಲ್ಲಿ ವಿವಾದಾತ್ಮಕ ಅಂಶಗಳಿಗೆ ಆಸ್ಪದ ಇಲ್ಲವಂತೆ. ಶೋಭನ್ ಬಾಬು ಪಾತ್ರವನ್ನೂ ಕಾಂಟ್ರವರ್ಷಿಯಲ್ ಆಗಿ ತೋರಿಸುವುದಿಲ್ಲವಂತೆ. ಹೀಗಾಗಿ, ವಿಜಯ್ ದೇವರಕೊಂಡ ಕೂಡ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಯಾವ್ಯಾವ ಪಾತ್ರಕ್ಕೆ ಯಾರ್ಯಾರು.?
ಕೆ.ವಿ.ವಿಜಯೇಂದ್ರ ಪ್ರಸಾದ್ ಚಿತ್ರಕಥೆ ಬರೆಯುತ್ತಿರುವ 'ತಲೈವಿ' ಚಿತ್ರದಲ್ಲಿ ಜಯಲಲಿತಾ ಆಗಿ ಕಂಗನಾ ಆಕ್ಟ್ ಮಾಡುತ್ತಿದ್ದರೆ, ನಟ, ರಾಜಕಾರಣಿ ಎಂ.ಜಿ.ರಾಮಚಂದ್ರನ್ ಪಾತ್ರದಲ್ಲಿ ಅರವಿಂದ್ ಸ್ವಾಮಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಶಶಿಕಲಾ ಪಾತ್ರಕ್ಕೆ ಪ್ರಿಯಾಮಣಿ ಜೀವ ತುಂಬಲಿದ್ದಾರೆ. ಈ ತಂಡಕ್ಕೆ ಸದ್ಯ ವಿಜಯ್ ದೇವರಕೊಂಡ ಸೇರಿಕೊಂಡಿದ್ದಾರೆ. ಮುಂದಿನ ವರ್ಷ 'ತಲೈವಿ' ಬಿಡುಗಡೆ ಆಗಲಿದೆ.


Click it and Unblock the Notifications











