'ಮತ್ತೆ ಇಂತಹ ಸಿನಿಮಾ ಮಾಡಲ್ಲ, ಇದು ನನ್ನ ಕೊನೆಯ ಚಿತ್ರ': ವಿಜಯ್ ದೇವರಕೊಂಡ
'ಅರ್ಜುನ್ ರೆಡ್ಡಿ' ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡ ವಿಜಯ್ ದೇವರಕೊಂಡ ಈಗ ಟಾಲಿವುಡ್ನಲ್ಲಿ ಬೇಡಿಕೆಯ ನಟ. ಯುವ ಪ್ರೇಕ್ಷಕರ ಪಾಲಿಗೆ ಐಕಾನ್.
ಅರ್ಜುನ್ ರೆಡ್ಡಿ ಆದ್ಮೇಲೆ 'ಗೀತಾ ಗೋವಿಂದಂ' ಸಿನಿಮಾ ಮಾಡಿದರು. ಆ ಚಿತ್ರವೂ ದೊಡ್ಡ ಸಕ್ಸಸ್ ತಂದುಕೊಡ್ತು. ಟ್ಯಾಕ್ಸಿವಾಲಾ ಗೆಲ್ಲಲಿಲ್ಲ, ಡಿಯರ್ ಕಾಮ್ರೇಡ್ ಅಷ್ಟು ದೊಡ್ಡ ಸದ್ದು ಮಾಡಲಿಲ್ಲ. ಆದರೂ ಈ ಎಲ್ಲ ಚಿತ್ರಗಳಲ್ಲೂ ದೇವರಕೊಂಡ ಲವರ್ ಬಾಯ್ ಪಾತ್ರದಿಂದ ಹೊರಬಂದಿರಲಿಲ್ಲ.
ಈಗ 'ವರ್ಲ್ಡ್ ಫೇಮಸ್ ಲವರ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲೂ ಮತ್ತೆ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ ವಿಜಯ್ ದೇವರಕೊಂಡ. ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ನಿರೀಕ್ಷೆಯಂತೆ ಮೂಡಿಬಂದಿದೆ.

ಈ ಹಿಂದೆ ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ಕಾಣಿಸಿಕೊಂಡಂತಹ ಪಾತ್ರ ಇಲ್ಲಿಯೂ ಮುಂದುವರೆದಿದೆ. ಇದರ ಬಗ್ಗೆ ಅಭಿಮಾನಿಗಳಿಗೆ ಬೇಸರ ಇದೆ. ಲವರ್ ಬಾಯ್ ಇಮೇಜ್, ಅರ್ಜುನ್ ರೆಡ್ಡಿ ಕಾನ್ಸೆಪ್ಟ್ ನಿಂದ ದೇವರಕೊಂಡ ಹೊರಗೆ ಬರ್ತಿಲ್ಲ ಎಂದು ಟೀಕಿಸಿದವರು ಇದ್ದಾರೆ.
ಇಂತಹ ಸಂದರ್ಭದಲ್ಲಿ ಸ್ವತಃ ದೇವರಕೊಂಡ ಅವರೇ ಅಚ್ಚರಿ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ''ಇನ್ನು ಮುಂದೆ ಲವ್ ಸ್ಟೋರಿ ಮಾಡಲ್ಲ'' ಎಂದಿದ್ದಾರೆ. ''ನಾನು ಈ ಚಿತ್ರದ ಶೂಟಿಂಗ್ ಮಾಡುವ ವೇಳೆಯಲ್ಲಿ ನನಗೆ ಅನಿಸುತ್ತಿತ್ತು, ಇದು ನನ್ನ ಕೊನೆಯ ಲವ್ ಸ್ಟೋರಿ ಸಿನಿಮಾ ಆಗಬಹುದು'' ಎಂದು ಹೇಳಿಕೊಂಡಿದ್ದಾರೆ.
ಇದು ಟಾಲಿವುಡ್ನಲ್ಲಿ ಈಗ ಚರ್ಚೆಗೆ ಕಾರಣವಾಗಿದೆ. ನಿಜಕ್ಕೂ ದೇವರಕೊಂಡ ಈ ನಿರ್ಧಾರ ತೆಗೆದುಕೊಂಡಿದ್ದಾರಾ ಅಥವಾ ಸುಮ್ಮನೆ ಹೇಳ್ತಿದ್ದಾರಾ ಎಂಬುದು ಕುತೂಹಲ ಮೂಡಿಸಿದೆ. ಫೆಬ್ರವರಿ 14 ರಂದು 'ವರ್ಲ್ಡ್ ಫೇಮಸ್ ಲವರ್' ಸಿನಿಮಾ ತೆರೆಕಾಣುತ್ತಿದೆ.


Click it and Unblock the Notifications











